ಮೂಡಲಗಿ: ಪಟ್ಟಣದ ಶ್ರೀನಿವಾಸ ಶಾಲೆಯಲ್ಲಿ ಜರುಗಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶ್ರೀನಿವಾಸ ಶಾಲೆಯಿಂದ 200ಕ್ಕೂ ಹೆಚ್ಚು ಅತ್ಯದ್ಭುತವಾದ ಸೃಜನಶೀಲ ಮಾದರಿಗಳು ಪ್ರದರ್ಶನದ ಕೇಂದ್ರ ಬಿಂದುಗಳಾಗಿದ್ದವು ಮತ್ತು ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಯಿಂದ 15ಕ್ಕೂ ಹೆಚ್ಚು ಶಾಲೆಗಳು ಭಾಗವಹಿಸಿ ಶಾಲೆಯಲ್ಲಿ ವಿಜ್ಞಾನ ಲೋಕವನ್ನು ಸೃಷ್ಟಿಸಿದರು.
ಈ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಪ್ರೌಢಶಾಲೆ ಅವರಾದಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಗಾಳಿಯ ಒತ್ತಡದಿಂದ ನೀರನ್ನು ಎತ್ತುವ ಮಾದರಿ ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನವನ್ನು ಸರ್ಕಾರಿ ಪ್ರೌಢಶಾಲೆ ಖಾನಟ್ಟಿ ವಿದ್ಯಾರ್ಥಿಗಳು ತಯಾರಿಸಿದ ಸ್ಮಾರ್ಟ್ ಬ್ರಿಡ್ಜ್ ಪಡೆದುಕೊಂಡಿತು. ತೃತೀಯ ಸ್ಥಾನವನ್ನು ಶ್ರೀ ಶ್ರೀನಿವಾಸ್ ಶಾಲೆಯ ಮಕ್ಕಳು ತಯಾರಿಸಿದ್ದ ಸ್ಮಾರ್ಟ್ ಡ್ರೈನೇಜ್ ಸಿಸ್ಟಮ್ ಪಡೆದುಕೊಂಡಿತು ಹಾಗೂ ನಾಲ್ಕನೆಯ ಸ್ಥಾನವನ್ನು ಡಪಲಾಪುರ್ ವಿದ್ಯಾ ವಿಹಾರ ಶಾಲೆಯ ಮಕ್ಕಳು ತಯಾರಿಸಿದ ನದಿ ಸ್ವಚ್ಛತಾ ಯಂತ್ರ ಗಿಟ್ಟಿಸಿಕೊಂಡಿತು.
ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸಿ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಮಕ್ಕಳು ಅಗಾಧವಾದ ಪ್ರತಿಭೆ ಹಾಗೂ ಸಾಮರ್ಥ್ಯ ನೈಸರ್ಗಿಕವಾಗಿ ಪಡೆದುಕೊಂಡಿರುತ್ತಾರೆ. ಇಂತಹ ಸಾಮರ್ಥ್ಯವನ್ನು ಹೊರಹಾಕಲು ಮೂಡಲಗಿ ಹಾಗೂ ಮೂಡಲಗಿಯ ಸುತ್ತಮುತ್ತಲಿನ ಶಾಲೆಗಳಿಗೆ ಅವಕಾಶ ಕಲ್ಪಿಸಿದ್ದ ಶ್ರೀನಿವಾಸ ಶಾಲೆಯ ಕಾರ್ಯ ಶ್ಲಾಘಿಸಿದ ಅವರು ಮಕ್ಕಳಲ್ಲಿರುವ ವಿವಿಧ ಕುತೂಹಲಗಳಿಗೆ ದಾರಿ ದೀಪವಾಗುವ ಶಿಕ್ಷಕರು ತಾವೆಲ್ಲರೂ ಆಗಬೇಕೆಂದು ಆಶಿಸಿದರು.
ಮುಖ್ಯ ಅತಿಥಿ ಡಾ.ಮೋಹನಕುಮಾರ್ ಪಿ ಮಾತನಾಡಿ, ಈಗಿರುವ ತಂತ್ರಜ್ಞಾನವು ನಮ್ಮ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿರುತ್ತದೆ ಅದನ್ನು ನಾವು ಉಪಯೋಗಿಸಿಕೊಳ್ಳಬೇಕು, ವಿದ್ಯಾರ್ಥಿಗಳು ತಮ್ಮ ಜೀವಿತದಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆಯನ್ನು ಕೊಡಬೇಕು ಎಂದ ಅವರು ತಂತ್ರಜ್ಞಾನ ಹಾಗೂ ಅದರ ಬಳಕೆಯ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ವೆಂಕಟೇಶ ಪಾಟೀಲ, ಪ್ರಾಚಾರ್ಯ ಎಸ್.ಬಿ.ಮಠಪತಿ, ಶಾಲಾ ಸಂಯೋಜಕ ಅನಿಲ್ ಐ ಸಿ, ವಿಜ್ಞಾನ ವಸ್ತು ಪ್ರದರ್ಶನದ ಬಹುಮಾನ ನೀಡಿದ ಸುಭಾಷ ತುಪ್ಪದ, ರಾಜು ಸೋನಾರ್, ಅಬ್ದುಲ್ ಭಗವಾನ್, ರಾಜಕುಮಾರ ವಾಲಿ, ಬಸವರಾಜ್ ಪಾಟೀಲ, ಶಿವಾನಂದ್ ಚಂಡಕಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.