ಮೂಡಲಗಿ -ಪಟ್ಟಣದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಕ್ರಮವನ್ನು ಕೇಂದ್ರದ ನಾಯಕರು ಮರು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿ, ತಾಲೂಕಿನ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮೂಲಕ ಕಲ್ಲೇಶ್ವರ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಬಸನಗೌಡ ಪಾಟೀಲ ಯತ್ನಾಳರ ಅವರ ಉಚ್ಚಾಟನೆಗೆ ಕಾರಣವಾದ ಯಡಿಯೂರಪ್ಪ ಕುಟುಂಬಕ್ಕೆ ದಿಕ್ಕಾರ ಕೂಗುವ ಮೂಲಕ ಬಿ ಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮುಖಂಡ ನಿಂಗಪ್ಪ ಫಿರೋಜಿ ಮಾತನಾಡಿ, ಶಾಸಕ ಯತ್ನಾಳ ಅವರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿಲ್ಲ. ಅವರನ್ನು ಉಚ್ಚಾಟನೆ ಮಾಡಿರುವುದು ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಕೂಡಲೇ ವರಿಷ್ಠರು ಉಚ್ಚಾಟನೆ ಆದೇಶ ಹಿಂಪಡೆಯಬೇಕು ಎಂದರು.
ಬಿಜೆಪಿ ಕೇಂದ್ರದ ಶಿಸ್ತು ಸಮಿತಿಯ ಯತ್ನಾಳರನ್ನು 6 ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಸಾಕಷ್ಟು ಕಾರ್ಯಕರ್ತರು ನೊಂದಿದ್ದಾರೆ. ಇಡೀ ರಾಜ್ಯದಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಯಾರು ಕುತಂತ್ರ ಮಾಡಿರುವ ವ್ಯಕ್ತಿಗಳು ಸೂಟ್ ಕೇಸ್ ರಾಜಕೀಯ ಮಾಡುತ್ತಿದ್ದಾರೆ ಆದರೆ ಶಾಸಕ ಯತ್ನಾಳ ಅವರಿಗೆ ಹಿಂದೂಗಳು ಸೇರಿ 100 ಕೋಟಿ ಹಣ ನೀಡಿ ಬೆಂಬಲ ನೀಡುವಂತ ಹೃದಯವಂತಿಗೆ ಇದೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಬಸು ಹಂದಿಗುಂದ, ಬಸವರಾಜ ಕಾಪಸಿ, ಬಸಲಿಂಗ ನಿಂಗನೂರ, ರವಿ ಮಹಾಲಿಂಗಪೂರ ಮಾತನಾಡಿ, ಕೇಂದ್ರದ ವರಿಷ್ಠರು ತೆಗೆದುಕೊಂಡ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು. ನೇರ ನಿಷ್ಠುರವಾದಿ, ಒಬ್ಬ ಹಿರಿಯ ನಾಯಕರನ್ನು ಕಳೆದುಕೊಂಡರೆ ಪಕ್ಷಕ್ಕೆ ನಷ್ಟವಾಗಲಿದೆ. ಅದರಲ್ಲೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಉಚ್ಚಾಟನೆಯಿಂದ ಪಕ್ಷಕ್ಕೆ ನಷ್ಟ ಉಂಟಾಗಲಿದ್ದು, ಎಲ್ಲಾ ಕೋನಗಳಿಂದಲೂ ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವೆಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಸಂಗಮೇಶ ಕೌಜಲಗಿ, ಸುಭಾಷ್ ಢವಳೇಶ್ವರ, ಪ್ರಶಾಂತ ನಿಡಗುಂದಿ, ಈರಪ್ಪ ಬನ್ನೂರ, ಮೌನೇಶ ಪತ್ತಾರ, ಕೃಷ್ಣ ನಾಶಿ, ಶಿವಲಿಂಗಪ್ಪ ಗೋಕಾಕ, ಸಿ ಎನ್ ಮುಗಳಖೋಡ, ರಾಮಣ್ಣ ಹಂದಿಗುಂದ, ಜಯಾನಂದ ಪಾಟೀಲ, ಕೆ ಎಚ್ ನಾಗರಾಳ, ಶಿವನಗೌಡ ಪಾಟೀಲ, ಬಸವರಾಜ ರಂಗಾಪೂರ, ಈರಪ್ಪ ಢವಳೇಶ್ವರ, ಶಂಕರ ಗೌಡಿಗೌಡರ, ಚನ್ನಪ್ಪ ಪಾಟೀಲ, ಚೇತನ್ ನಿಶಾನಿಮಠ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿದ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.