spot_img
spot_img

ಬಾಳು ಬಂಗಾರವಾಗಿಸುವ ಹಬ್ಬ ಅಕ್ಷಯ ತೃತೀಯ

Must Read

- Advertisement -

 

ಮೊದಲಿನಿಂದಲೂ ಭಾರತೀಯ ಮಹಿಳೆಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ವ್ಯಾಮೋಹ. ಎಷ್ಟೇ ಬಡವರಾದರೂ ಬಂಗಾರದ ಆಭರಣಗಳನ್ನು ಹಾಕಿಕೊಂಡು ಖುಷಿಪಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ತಾವು ಬೆವರು ಸುರಿಸಿ ದುಡಿದ ಹಣವನ್ನು ಸ್ವಲ್ಪ ಸ್ವಲ್ಪ ಕೂಡಿಟ್ಟು ಕೊನೆಗೊಂದು ದಿನ ಸಣ್ಣ ಒಡವೆಯನ್ನು ಖರೀದಿಸಿದಾಗ ಸ್ವರ್ಗ ಮೂರೇ ಗೇಣು. ದುಬಾರಿ ಕಾಲದಲ್ಲಿ ತುತ್ತಿನಚೀಲ ತುಂಬಿಸಿಕೊಳ್ಳುವುದರಲ್ಲೇ ಕಣ್ಣೀರು ಕಪಾಳಕ್ಕೆ ಬರುತ್ತದೆ. ಅಂಥದ್ದರಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿ ಮಗ ತಾಯಿಗೆ, ಗಂಡ ಹೆಂಡತಿಗೆ ಅಣ್ಣ ತಂಗಿಗೆ ಚಿನ್ನದ ಒಡವೆಗಳನ್ನು ಖರೀದಿಸಿ ಕೊಟ್ಟಾಗ ಆನಂದಕ್ಕೆ ಪಾರವೇ ಇರುವುದಿಲ್ಲ. ಆ ಭಾವನೆಯನ್ನು ವ್ಯಕ್ತ ಪಡಿಸಲು ಪದಗಳು ಸಾಲವು. ಬಂಗಾರ ಬಂಧನವನ್ನು ಇನ್ನಷ್ಟು ಗಟ್ಟಿಗೊಳಿಸುವ ಶಕ್ತಿಯನ್ನು ಹೊಂದಿದೆ. ಉಳಿದೆಲ್ಲ ಹಬ್ಬಗಳು ಖರ್ಚಿನ ಮುಖದ್ದವು ಆದರೆ ಅಕ್ಷಯ ತೃತೀಯ ದುಡಿದಿದ್ದರಲ್ಲಿ ಉಳಿಕೆಯ ಬಳಕೆ ಅಂದರೆ ಆಪತ್ತಿನ ಕಾಲಕ್ಕೆ ಸಹಾಯವಾಗುವ ಉಳಿತಾಯದ ಮಹಿಮೆಯನ್ನು ಸಾರುತ್ತದೆ.

ಅಕ್ಷಯ ತೃತೀಯದಂದು ಬಂಗಾರವನ್ನು ಕೊಂಡರೆ ಒಳ್ಳೆಯದು ಅದೃಷ್ಟವನ್ನು ಶುಭವನ್ನು ಹೊತ್ತು ತರುತ್ತದೆ ಎಂಬ ನಂಬಿಕೆಯು ಬಲವಾಗಿದೆ. ಈ ಕಾರಣದಿಂದ ಆ ಶುಭದಿನದಂದು ಬಂಗಾರದ ಅಂಗಡಿಯ ಮುಂದೆ ಜನ ಸಾಲುಗಟ್ಟುವರು. ಕನಿಷ್ಟ ಒಂದು ಗ್ರಾಂ ಬಂಗಾರವನ್ನಾದರೂ ಖರೀದಿಸುವರು. ಈ ದಿನದಂದು ಮಾಡಿದ ದಾನಕ್ಕೆ ಲಭಿಸುವ ಪುಣ್ಯ ಅಕ್ಷಯವಾಗುವುದೆಂಬ ಅಚಲ ನಂಬಿಕೆ ಇರುವದರಿಂದ ಉಳ್ಳವರು ದಾನ ಮಾಡಿ ಪುನೀತ ಭಾವ ಹೊಂದುತ್ತಾರೆ.

- Advertisement -

ಅಕ್ಷಯವೆಂದರೆ?
ಅಕ್ಷಯವೆಂದರೆ ನಾಶವಾಗದಿರುವುದು ಎಂದರ್ಥ. ದೈವೀ ಶಕ್ತಿ ಸದಾ ಶಿಷ್ಟರ ರಕ್ಷಕ ದುಷ್ಟರ ಭಕ್ಷಕವೂ ಆಗಿದೆ. ಹಾಗೆಯೇ ನಾಶ ವಿರೋಧಿಯೂ ಆಗಿದೆ ಎನ್ನುವುದನ್ನು ಸಾಬೀತುಗೊಳಿಸಲು ಪರಶುರಾಮನ ಅವತಾರದಲ್ಲಿ ಸಂಪೂರ್ಣ ಕ್ಷತ್ರೀಯ ಕುಲವನ್ನು ನಾಶಗೊಳಿಸಿದ. ಪಂಚಾಂಗದ ಪ್ರಕಾರ ತೃತೀಯ ಎಂದೂ ಲೋಪವೂ ಆಗುವುದಿಲ್ಲ ಅಧಿಕವೂ ಆಗುವುದಿಲ್ಲ ಇದಕ್ಕಾಗಿ ಇದು ಅಕ್ಷಯ!

ಅಕ್ಷಯ ತೃತೀಯ ಪರ್ವ ಯಾವಾಗ?
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಜೀವನವನ್ನು ಸಮೃದ್ಧಗೊಳಿಸುವಲ್ಲಿ ಸಹಕಾರಿ.. ಎಂಥ ಕಷ್ಟದ ಹೊರೆ ಇರುವವರೂ ಅಂದು ಸಡಗರದಲ್ಲಿ ನಲಿಯುತ್ತಾರೆ. ಯುಗಾದಿ ಹೊಸ ವರ್ಷದಾರಂಭದ ಹಬ್ಬ. ಯುಗಾದಿಯ ನಂತರ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೆಯ ದಿನ (ತದಿಗೆ) ದಂದು ಬರುವ ಹಬ್ಬವೇ ಅಕ್ಷಯ ತೃತೀಯ.
ನಮ್ಮ ಸಂಪ್ರದಾಯದಲ್ಲಿ ಅಕ್ಷಯ ತೃತೀಯ ಪರ್ವ(ಅಕ್ಷಯ ತೀಜ್, ಅಖಾತೀಜ್ ಎಂದೂ ಪ್ರಸಿದ್ಧ) ಅನೇಕ ವೈಶಿಷ್ಟ್ಯಗಳಿಂದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಆ ದಿನ ರಾಹು ಕಾಲ ಗುಳಿಕಾಲ ಮತ್ತು ಅಶುಭ ಕಾಲಗಳಿಗೆ ಸ್ಥಾನವಿಲ್ಲ. ಅದೊಂದು ಪವಿತ್ರದ ದಿನ ಶುಭದಿನದಂದು ಸೂರ್ಯ ಚಂದ್ರರು ಉಚ್ಛ ಸ್ಥಾನದಲ್ಲಿರುತ್ತಾರೆ. ಹೀಗಾಗಿ ಇದು ಮಹತ್ವದ ದಿನ ಅಕ್ಷಯ! ಅದರಲ್ಲೂ ರೋಹಿಣಿ ನಕ್ಷತ್ರ ಜೊತೆಗಿದ್ದರೆ ಅದು ಪುಣ್ಯಕಾಲವೆಂದೇ ನಿರ್ಧರಿಸಲಾಗಿದೆ.

ಆಚರಣೆ
ಪ್ರಾತಃಕಾಲ ಬೇಗನೇ ಎದ್ದು ಸ್ನಾನಾದಿಗಳನ್ನು ಪೂರೈಸಿಕೊಂಡು, ಶ್ರೀ ಲಕ್ಷ್ಮೀ ನಾರಾಯಣನಿಗೆ ಪೂಜೆ ಸಲ್ಲಿಸಿ ತಾಮ್ರದ ಕಲಶದಲ್ಲಿ ಶುದ್ಧ ನೀರನ್ನು ತುಂಬಿ ಘಟ ಸ್ಥಾಪಿಸುತ್ತಾರೆ. ಜಪ ತಪಗಳಲ್ಲಿ ಮಗ್ನರಾಗುತ್ತಾರೆ. ಅಕ್ಷಯ ತೃತೀಯ ಮಹಿಮೆಯ ಕಥೆಯನ್ನು ಶ್ರವಣ ಮಾಡಿದರೆ ಅಧಿಕ ಶ್ರೇಯಸ್ಸು ದೊರೆಯುತ್ತದೆ ಎಂಬ ನಂಬಿಕೆಯಿರುವುದರಿಂದ ಕತೆ ಆಲಿಸುತ್ತಾರೆ. ಜವೆ ಗೋಧಿಯಿಂದ ಹೋಮ, ದಾನ ಹಾಗೂ ಭಕ್ಷಣ ಮಾಡುತ್ತಾರೆ. ಹೆಸರು ಬೇಳೆಯಿಂದ ಮಾಡಲ್ಪಟ್ಟ ಕೊಸಂಬರಿ ಅದರೊಂದಿಗೆ ತಂಪು ಪಾನಕ ನೈವೇದ್ಯ ಮಾಡಲಾಗುವುದು. ಇಂದು ಮಾಡಿದ ದಾನ ಶ್ರೇಷ್ಠ. ಅಕ್ಷಯವಾಗುತ್ತದೆ ಎಂಬ ನಂಬಿಕೆಯಿಂದ ಕಲಶ ವಸ್ತ್ರ ಬೆಲ್ಲ ಹಾಗೂ ಯಥಾ ಶಕ್ತಿ ದಾನ ಮಾಡುವರು. ಜೈನರ ಪ್ರಥಮ ತೀರ್ಥಂಕರ ವೃಷಭ ದೇವರು ಒಂದು ವರ್ಷದವರೆಗೆ ಮಾಡಿದ ಉಪವಾಸವನ್ನು ಮೊಮ್ಮಗ ಶ್ರೇಯಾಂಶ ನೀಡಿದ ಕಬ್ಬಿನ ರಸ ಕುಡಿದು ಉಪವಾಸವನ್ನು ಮುಗಿಸಿದ ದಿನ. ಈ ಕಾರಣಕ್ಕಾಗಿ ಜೈನ ಧರ್ಮೀಯರು ಈ ದಿನವೆಲ್ಲ ಉಪವಾಸವಿದ್ದು ಕಬ್ಬಿನ ರಸ ಸೇವನೆಯೊಂದಿಗೆ ವ್ರತವನ್ನು ಮುಗಿಸುತ್ತಾರೆ.

- Advertisement -

ಆಚರಣೆಯ ಹಿನ್ನೆಲೆ
ಪ್ರತಿಯೊಂದು ಪರ್ವದ ಆಚರಣೆಗೂ ಹಿನ್ನೆಲೆಗಳು ಇದ್ದೇ ಇವೆ ಹಾಗೆಯೇ ಅಕ್ಷಯ ತೃತೀಯ ಹಬ್ಬದ ಹಿನ್ನೆಲೆಗೆ ತಡಕಾಡಿದರೆ ರೋಚಕ ಕತೆ ದೊರೆಯುವುದು. ಶಾಕಲ ನಗರದಲ್ಲಿ ಧರ್ಮಪಾಲನೆಂಬ ಪ್ರಾಮಾಣಿಕ ಸತ್ಯವಂತ ಶ್ರದ್ಧೆ ಮತ್ತು ಭಕ್ತಿಯುಳ್ಳ ವೈಶ್ಯನೊಬ್ಬನಿದ್ದ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದೊಡ್ಡ ಸಂಸಾರವನ್ನು ಸಾಗಿಸುವುದು ದೊಡ್ಡ ಸವಾಲೇ ಆಗಿತ್ತು. ಅಂಥ ದುರ್ಭರ ಸಂದರ್ಭದಲ್ಲಿ ಅಕ್ಷಯ ತೃತೀಯ ಮಹಾತ್ಮೆಯ ಕತೆಯು ಆತನ ಕಿವಿಗೆ ಬಿತ್ತು.. ಶ್ರದ್ಧೆ ಭಕ್ತಿಯಿಂದ ವ್ರತವನ್ನು ಆಚರಿಸಿದನು.ಇದರ ಫಲವಾಗಿ ಆತನ ಮನೆಯ ಬಡತನವು ಪವಾಡ ಸದೃಶದಂತೆ ಮಾಯವಾಗಿ. ಮನೆಯಲ್ಲಿ ಸುಖ ಸಂತೋಷ ನೆಮ್ಮದಿ ನೆಲೆಸಿತು.ತನ್ನ ದೊಡ್ಡ ಸಂಸಾರ ನೀಗಿಸಿ ಉಳಿದದ್ದನ್ನು ದಾನ ಮಾಡಿದನು. ತತ್ಪರಿಣಾಮವಾಗಿ ಮುಂದಿನ ಜನ್ಮದಲ್ಲಿ ಶ್ರೀಮಂತ ಕ್ಷತ್ರೀಯ ಕುಲದಲ್ಲಿ ರಾಜನಾಗಿ ಜನಿಸಿದ. ಆತನ ರಾಜ್ಯದಲ್ಲಿ ಪ್ರಜೆಗಳ ನೆಮ್ಮದಿ ಸುಖ ಶಾಂತಿಗೆ ಕೊರತೆಯಾಗದೇ ಸುಖ ಸಮೃದ್ಧಿಯೆಲ್ಲ ಅಕ್ಷಯವಾಗುತ್ತಲೇ ಹೋಯಿತು. ಆಗಿನಿಂದ ಜನರು ಈ ವ್ರತವನ್ನು ಆಚರಿಸುತ್ತ ಬಂದಿದ್ದಾರೆ.

ದಿನ ವಿಶೇಷ
ಕನ್ನಡಿಗರಿಗೆ ಈ ದಿನ ತುಂಬಾ ಶ್ರೇಷ್ಠವೆಂದೇ ಹೇಳಬೇಕು. ಜಗಕೆಲ್ಲ ಜ್ಞಾನ ನೀಡಿದ ಕ್ರಾಂತಿಕಾರಿ,ಜಗಜ್ಯೋತಿ ಅಣ್ಣ ಬಸವಣ್ಣ ಜನಿಸಿದ ದಿನ. ಬ್ರಹ್ಮ ದೇವ ಸೃಷ್ಟಿ ಕ್ರಿಯೆಯನ್ನು ಪ್ರಾರಂಭಿಸಿದ್ದು, ಶ್ರೀ ಅನ್ನ ಪೂಣೇಶ್ವರಿಯ ಜನಿಸಿದ್ದು ಈ ಶುಭದಿನದಂದು. ಭಾರತದ ಮಹಾಕಾವ್ಯಗಳಲ್ಲೊಂದಾದ ಮಹಾಭಾರತವನ್ನು ವೇದವ್ಯಾಸ ಮತ್ತು ವಿಘ್ನ ನಿವಾರಕ ವಿಘ್ನೇಶ ಇದೇ ದಿನದಂದು ಬರೆಯಲು ಆರಂಭಿಸಿದರಂತೆ. ಭಿಕ್ಷೆ ನೀಡಲು ಅಸಹಾಯಕರಾಗಿದ್ದ ದಂಪತಿಗಳಿಗೆ ಶಂಕರಾಚಾರ್ಯರು ಕನಕಧಾರಾ ಸ್ತೋತ್ರವನ್ನು ರಚಿಸಿದ್ದು ಈ ಒಳ್ಳೆಯ ದಿನದಂದೇ.ಇನ್ನೊಂದು ವಿಶೇಷವೆಂದರೆ ಶ್ರೀ ಕೃಷ್ಣನು ದ್ರೌಪದಿಗೆ ಅಕ್ಷಯಾಂಬರವನ್ನು ನೀಡಿದ್ದೂ ಈ ದಿನ. ಶ್ರೀ ಮಹಾಲಕ್ಷ್ಮೀಯಿಂದ ಕುಬೇರನು ಸಂಪತ್ತಿನ ನಿರ್ವಹಣೆ ಪಡೆದದ್ದು, ಧರ್ಮರಾಜನಿಗೆ ಸೂರ್ಯನಿಂದ ಅಕ್ಷಯ ಪಾತ್ರೆ ದೊರೆತದ್ದೂ ಇದೇ ದಿನವಂತೆ. ಕರತ ಯುಗದ ಆರಂಭವೂ ಈ ದಿನವೇ.ಪವಿತ್ರ ಗಂಗೆಯು ಜಹ್ನು ಋಷಿಯ ಕಿವಿಯಿಂದ ಜಾರಿ ಧರೆಗಿಳಿದಿದ್ದು, ಇಷ್ಟೇ ಅಲ್ಲ ಪರುಶುರಾಮನ ಜಯಂತಿಯೂ ಇಂದೇ. ಶ್ರೀ ಕೃಷ್ಣ ತನ್ನ ಸ್ನೇಹಿತ ಸುಧಾಮನಿಗೆ ಅಕ್ಷಯ ಸಂಪತ್ತನ್ನು ದಯಪಾಲಿಸಿದ ದಿನ.

ಇಷ್ಟೆಲ್ಲ ವಿಶೇಷಗಳನ್ನು ತನ್ನ ಮಡಿಲಲ್ಲಿರಿಸಿಕೊಂಡ ಅಕ್ಷಯ ತೃತೀಯ ಪರ್ವ, ಬಾಳು ಬಂಗಾರವಾಗಿಸುವ ಹಬ್ಬವೇ ಸರಿ. ಈ ಹಬ್ಬವನ್ನು ಆಚರಿಸುವುದರ ಮೂಲಕ ನಮ್ಮ ವರ್ತಮಾನ ಬದುಕನ್ನು ಬಂಗಾರವಾಗಿಸಬಹುದಲ್ಲವೇ? ಈ ಹಬ್ಬದ ಸೌಭಾಗ್ಯ ಮತ್ತು ಉದ್ದೇಶವೂ ಅದೇ ಆಗಿದೆ.

ಜಯಶ್ರೀ. ಜೆ. ಅಬ್ಬಿಗೇರಿ                                        ಇಂಗ್ಲೀಷ್ ಉಪನ್ಯಾಸಕರು   

ಬೆಳಗಾವಿ 9449234142

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group