ಬೆಂಗಳೂರು – ಯಾರೇ ಬಿತ್ತಿದರೂ ಯಾರೇ ತುಳಿದರೂ ಯಾವುದೇ ಭೇದವಿಲ್ಲದೆ ಸಮಾನ ಫಲವನ್ನು ನೀಡುವ ಭೂಮಿತಾಯಿಯಂತೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಸ್ತ ಭಾರತೀಯರಿಗೆ ಸಮಾನ ಸ್ಥಾನಮಾನ ಹಾಗೂ ಅವಕಾಶಗಳನ್ನು ಒದಗಿಸುವ ಭಾರತ ಸಂವಿಧಾನವನ್ನು ನೀಡಿದ್ದಾರೆ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಯುವ ವಿದ್ವಾಂಸ ಹಾಗೂ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಭಿಪ್ರಾಯಪಟ್ಟರು.
ಕೋಲಾರದ ವಕ್ಕಲೇರಿ ಸಮೀಪದ ಹಿಜುವನಹಳ್ಳಿ ಗ್ರಾಮದಲ್ಲಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಮೃದ್ಧಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ಅಂಬೇಡ್ಕರ್ ಹಬ್ಬ-೨೦೨೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನ ಶಿಲ್ಪಿ ಎಂದು ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಕೊಂಡಾಡುವ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಜಾತಿಕಣ್ಣಿನಿಂದ ಸಂಕುಚಿತವಾಗಿ ನೋಡದೆ, ವಿಶಾಲ ಮನಸಿನಿಂದ ಅರ್ಥಮಾಡಿಕೊಂಡಾಗ ಮಾತ್ರ ನಾವೂ ಮನುಷ್ಯರಾಗುತ್ತೇವೆ. ಇಲ್ಲವಾದರೆ ಜಾತಿಯನ್ನೇ ಜೀವಿಸುವ ವಿಷಜಂತುಗಳಾಗಿಬಿಡುತ್ತೇವೆ. ದಿನಬೆಳಗುವ ಸೂರ್ಯಚಂದ್ರರಾಗಲೀ, ಕಣ್ಣಿಗೆ ಅಗೋಚರವಾಗಿದ್ದರೂ ಜೀವರಾಶಿಯ ಉಸಿರಾಗಿರುವ ವಾಯುವಾಗಲೀ, ಸರ್ವಜೀವಗಳ ಜೀವಧಾತುವಾಗಿರುವ ಜಲಧಾರೆಯಾಗಲೀ ಭೂಮಿಯ ಮೇಲಿನ ಯಾವ ಜೀವಕ್ಕೂ ಭೇದವನ್ನು ತೋರಿಲ್ಲ. ಹಾಗೆಯೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ಕಾರಣಕ್ಕೆ ಅನೇಕ ನೋವು, ಅವಮಾನಗಳನ್ನು ಅನುಭವಿಸಿದರೂ ಯಾವ ಜನಸಮುದಾಯಕ್ಕೂ ಅನ್ಯಾಯವಾಗದಂತೆ ದುಡಿದರು. ಆದರೆ ಇಂದು ಅಂಬೇಡ್ಕರ್ ಆಶಯಗಳ ಉಸಿರು ನಿಲ್ಲಿಸಲು ಯತ್ನಿಸುವ ಹಾಗೂ ಅಂಬೇಡ್ಕರ್ ಉಸಿರೆತ್ತದಂತೆ ಜಾಣಮೌನ ವಹಿಸುವ ದುರಂತ ಪ್ರಯತ್ನ ಮಾಡಲಾಗುತ್ತಿದೆ. ಹಾಗೆ ಪ್ರಯತ್ನಿಸುವವರನ್ನೂ ಒಳಗೊಂಡಂತೆ ಸರ್ವಜನಾಂಗದ ಜೀವದುಸಿರಾಗಿರುವುದು ಭಾರತ ಸಂವಿಧಾನ ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಸಮೂಹ ಹಾಗೂ ಯುವಸಮುದಾಯವು ಓದುವುದಾದರೆ, ಬರೆಯುವುದಾದರೆ ಹಾಗೂ ದುಡಿಯುವುದಾದರೆ ಅಂಬೇಡ್ಕರ್ ಅವರಂತೆ ಓದಿ ಬರೆದು ದುಡಿಯಬೇಕು. ಯಾಕೆಂದರೆ ನಿಸ್ವಾರ್ಥಪೂರ್ಣವಾದ ಅಂಬೇಡ್ಕರ್ ಅವರಂಥ ಮಹಾನಾಯಕರ ಓದು-ಬರೆಹ-ದುಡಿಮೆಗಳೇ ಭಾರತವನ್ನು ಸೀಮಾತೀತವಾಗಿ ಹಾಗೂ ಕಾಲಾತೀತವಾಗಿ ಬೆಳಗುತ್ತಿರುವುದು. ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಜನಪರವಾದ ಪ್ರಭಾವಿ ನಾಯಕ ಹಾಗೂ ಚಿಂತಕರಾಗಿ ಹೊರಹೊಮ್ಮಿದ ವಿಶ್ವಜ್ಞಾನಿ ಅಂಬೇಡ್ಕರ್. ಯಾರು ನೆನೆದರೂ ನೆನೆಯದಿದ್ದರೂ ಸಾಮಾಜಿಕ ನ್ಯಾಯದ ಜೀವನದಿಯಾಗಿ ಈ ನೆಲದಲ್ಲಿ ಜನಮನದಲ್ಲಿ ಹರಿಯುವವರು ಅಂಬೇಡ್ಕರ್ ಎಂದರು.
ಇಂದು ಪ್ರತಿಯೊಂದು ರಾಜಕೀಯ ಪಕ್ಷವು ಅಂಬೇಡ್ಕರ್ ಅವರನ್ನು ಹೈಜಾಕ್ ಮಾಡುವ ಪ್ರಯತ್ನವನ್ನು ಮಾಡುತ್ತಿವೆ. ತಮ್ಮ ಪಾಕ್ಷಿಕ ನೋಟಕ್ಕೆ ತಕ್ಕಂತೆ ಪಾರ್ಶ್ವಿಕ ನಾಯಕನನ್ನಾಗಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ಯುವಸಮುದಾಯ ಎಚ್ಚರಿಕೆ ವಹಿಸಬೇಕಿದೆ. ಅಂಬೇಡ್ಕರ್ ದೃಷ್ಟಿಕೋನವು ಯಾವತ್ತೂ ಏಕಮುಖವಾಗಿರಲಿಲ್ಲ; ಸರ್ವತೋಮುಖಿಯಾಗಿತ್ತು. ಇದಕ್ಕೆ ಅವರು ರಚಿಸಿದ ಭಾರತ ಸಂವಿಧಾನದಿಂದ ಹಿಡಿದು ಬುದ್ಧ ಧಮ್ಮದ ವರೆಗಿನ ರಚನೆಗಳೇ ಸಾಕ್ಷಿಯಾಗಿವೆ. ಅಂಬೇಡ್ಕರ್ ತಮ್ಮ ಜೀವನಪೂರ್ತಿ ಸಮಗ್ರ ದೃಷ್ಟಿಕೋನದಿಂದ ಮುನ್ನಡೆದ ಸರ್ವಜನಾಂಗದ ನಾಯಕರೇ ಆಗಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಭಾರತದ ಮಹಾನಾಯಕರಾಗಿ ಸಾರ್ವಕಾಲಿಕವಾಗಿ ಬೆಳಗಲು ಕಾರಣ ಅವರು ಗಳಿಸಿಕೊಂಡ ಅಗಾಧವಾದ ಜ್ಞಾನ ಹಾಗೂ ಉಳಿಸಿಕೊಂಡ ಚಾರಿತ್ರ್ಯ. ಅವರಿಗೆ ವಿಶ್ವದಾದ್ಯಂತ ಗೌರವ ಹಾಗೂ ಸ್ಥಾನಮಾನಗಳು ದೊರೆತದ್ದೇ ಜ್ಞಾನ ಮತ್ತು ಚಾರಿತ್ರ್ಯಗಳಿಂದ. ಆದರೆ ಇಂದಿನ ಬಹುಪಾಲು ನಾಯಕರಲ್ಲಿ ಈ ಗುಣಗಳ ತೀವ್ರ ಅಭಾವ ಎದ್ದು ಕಾಣುತ್ತಿದೆ. ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ಓದುವ ಹಾಗೂ ಅರ್ಥಮಾಡಿಕೊಳ್ಳುವ ಮೂಲಕ ನಾವು ಹೊಸಮನುಷ್ಯರಾಗಬೇಕಿದೆ. ಸಂವಿಧಾನದ ಆಶಯಗಳನ್ನು ಜೀವಿಸುತ್ತಾ ಸುಭದ್ರ ಭಾರತವನ್ನು ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೋಲಾರದ ಜಿಟಿಟಿಸಿಯ ಉಪನ್ಯಾಸಕರಾದ ಪ್ರವೀಣ್ ಮಟ್ನಹಳ್ಳಿ, ಮಾಲೂರಿನ ಊರುಗೋಲು ವೈಚಾರಿಕ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ ದೊಡ್ಡಮಲ್ಲೆ, ಹೊಸಕೋಟೆಯ ಶಿಕ್ಷಕರಾದ ಜನಾರ್ಧನ್, ಅಂಜನ್ ಬೌದ್ಧ್, ಅಮಿತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚಿಂತಕರಾದ ನಾರಾಯಣಸ್ವಾಮಿ ಪುರ, ಜೈ ಶ್ರೀನಿ ನಾಗಾಸ್, ಕಲಾವಿದರಾದ ಚಕ್ರವರ್ತಿ ಎಸ್.ಪಿ. ಸಾರಂಗ, ಉಪಸ್ಥಿತರಿದ್ದರು.
ತಲೆಮಾರು ಕಲಾತಂಡದ ಗೋಪಿ ದೊಡ್ಡಮಲ್ಲೆ ಹಾಗೂ ಸಂಗಡಿಗರು ಕ್ರಾಂತಿಗೀತೆಗಳನ್ನು ಪ್ರಸ್ತುತಪಡಿಸಿದರು. ಹಿಜುವನಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಸಮೃದ್ಧಿ ಯುವಕರ ಸಂಘದ ಲೋಕೇಶ್, ನಾಗರಾಜು, ಮುನಿಕೃಷ್ಣ,ಡಿ.ರಾಜಣ್ಣ, ಜಗದೀಶ್, ಶಂಕರ್, ಪ್ರದೀಪ್, ಅಖಿಲ್, ನಿತಿನ್, ನರೇಶ್, ಮತ್ತು ಇತರ 40 ಜನ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.