Homeಲೇಖನಲೇಖನ : ಮ್ಯಾಜಿಕ್ ಮೂಲಕ ಶಿಕ್ಷಣ ರಂಗದಲ್ಲಿ ಮೌನಕ್ರಾಂತಿ

ಲೇಖನ : ಮ್ಯಾಜಿಕ್ ಮೂಲಕ ಶಿಕ್ಷಣ ರಂಗದಲ್ಲಿ ಮೌನಕ್ರಾಂತಿ

ಅಂತಾರಾಷ್ಟ್ರೀಯ ಜಾದೂಗಾರ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ ದಿಟ್ಟಹೆಜ್ಜೆ

ಜಾದೂ ಅಥವಾ ಮ್ಯಾಜಿಕ್ ಯಾರಿಗೆ ಇಷ್ಟ ಇಲ್ಲ ಹೇಳಿ!, ಮಗುವಿನಿಂದ ಹಿರಿಯರ ವರೆಗೂ ಎಲ್ಲಾ ಸ್ತರದವರಿಗೂ ಜಾದೂ ಎಂದರೆ ಪಂಚಪ್ರಾಣ… ಶ್ರೀ ಕೃಷ್ಣ ಪರಮಾತ್ಮನ ಗಾರುಡಿಗೆ ಮನಸೋಲದವರಿಲ್ಲ. ಪುರಾಣದಲ್ಲಿ ಶ್ರೀ ಕೃಷ್ಣ ಗಾರುಡಿ ಎಂದೇ ಪ್ರಖ್ಯಾತಿ ಹೊಂದಿದೆ. ಜಾದೂಗಾರರ ಅದ್ಭುತ ಕೈಚಳಕ, ಅವರು ಮಾಡುವ ಕಲೆಗಳು, ಮೋಡಿ ,ಅವರು ಮಾಯಾ ಜಾಲಗಳು ಎಲ್ಲರಲ್ಲೂ ಆಸಕ್ತಿ ಹುಟ್ಟಿಸಿ ಸಂತೋಷವನ್ನುಂಟು ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದ ವಿಶ್ವವಿಖ್ಯಾತ ಜಾದೂಗಾರ ಗಣೇಶ್ ಅವರ ಪ್ರದರ್ಶನವು ನಡೆಯುತ್ತಿದ್ದು ಎಲ್ಲಡೆ ಜಾದೂವಿನ ಸಂಭ್ರಮದ ವಾತಾವರಣ. ಹಲವಾರು ಪ್ರದರ್ಶನಗಳು ಕಲಬುರಗಿಯಲ್ಲಿ ನಡೆಯುತ್ತಿದ್ದು, ವಿಶೇಷವಾಗಿ ಶಿಕ್ಷಣಕ್ಕಾಗಿ ಜಾದೂ ಕಾರ್ಯಕ್ರಮಗಳು ಅನೇಕ ಶಾಲೆಗಳಲ್ಲಿ ನಡೆದಿವೆ ಹಾಗೂ ನಡೆಯುತ್ತಿವೆ.

ಜಾದೂ ವೀಕ್ಷಿಸಿದ ವಿದ್ಯಾರ್ಥಿಗಳ ಸಂಭ್ರಮ         ಹೇಳತೀರದು. ಕೆಲವು ವಿದ್ಯಾರ್ಥಿಗಳಲ್ಲಿ ಜಾದೂವಿನ ಬಗ್ಗೆ ಕೇಳಿದಾಗ ಅನೇಕ ವಿಸ್ಮಯಕಾರಿ ಜಾದೂ ಗಳ ಬಗ್ಗೆ ಕುತೂಹಲ ಹಾಗೂ ವಿಸ್ಮಯದ ಅನುಭವ ಹೇಳಿದರು. ಅದರಲ್ಲೂ ನಮ್ಮ ಕಲಬುರಗಿಯ ಶಾಲೆಗಳಲ್ಲಿ ಜಾದೂ ಮಾಡುತ್ತಿರುವಾಗ ಅನೇಕ ಮಕ್ಕಳು ನಿಬ್ಬೆರಗಾಗಿ ಜಾದೂವನ್ನು ತನ್ಮಯತೆಯಿಂದ ನೋಡುತ್ತಿರುವಾಗ ಅನೇಕ ಮಕ್ಕಳು ಬೆಕ್ಕಸ ಬೆರಗಾಗಿದ್ದಾರೆ. ಮಕ್ಕಳ ಆನಂದ ಹಾಗೂ ಆಶ್ಚರ್ಯ ಚಕಿತರಾಗಿರುವುದನ್ನು ನೋಡಿ, ಹೊಟ್ಟೆ ಹುಣ್ಣು ಆಗುವ ಹಾಗೆ ಎಲ್ಲರೂ ನಕ್ಕ ಪ್ರಸಂಗ ಕೂಡ ನಡೆದಿದೆ.

ಜಾದೂ ಎಂದರೆ ಕಲೆ , ಜಾದೂ ಎಂದರೆ ಕೈಚಳಕ, ಜಾದೂ ಎಂದರೆ ಮೂಡಿ ಜಾದೂ ಎಂದರೆ, ಮಾಯಾಜಾಲ.
ಪ್ರೀತಿ ಜಾದೂ, ಹಣದ ಜಾದೂ, ಉಡುಗೆ ತೊಡಿಗೆಯ ಜಾದೂ, ಸಿನಿಮಾ ಜಾದೂ, ಹಾಡಿನ ಜಾದೂ ಹೀಗೆ ವೈವಿಧ್ಯ ….ಆದರೆ ಜಾದೂ ಎಂದರೆ ಕಣ್ಣು ಕಟ್ಟು ಅಲ್ಲ ಅದು ವೈಜ್ಞಾನಿಕ ಸತ್ಯವನ್ನು ಒಳಗೊಂಡು ಜಾನಪದ ಸ್ಪರ್ಶ ಹಾಗೂ ರಂಗ ರೂಪಾತ್ಮಕತೆಯ ಪರಿಪೂರ್ಣತೆ ಜೊತೆಗೆ ನಟನೆಯನ್ನು ಒಲಿಸಿಕೊಂಡು ಪ್ರದರ್ಶಿಸುವ ಪೂರ್ವಕಲೆ. ವೈಜ್ಞಾನಿಕ ಕಲೆಯನ್ನು ರಂಗದ ಮೇಲೆ ಪ್ರದರ್ಶನ ಮಾಡಿದಾಗ ಭ್ರಮೆಯ ಪ್ರಪಂಚವನ್ನು ಕ್ಷಣಮಾತ್ರದಲ್ಲಿ ಜನರ ಮನಸ್ಸಿನಲ್ಲಿ ಮೂಡಿಸುವ ವಿಸ್ಮಯವು ಅಚ್ಚರಿಯ ಸಂಗತಿಯಾಗಿ ಬಿಡುತ್ತದೆ. ಮನಸ್ಸಿನ ಆಳಕ್ಕಿಳಿದು ಉಂಟು ಮಾಡುವ ವಿಸ್ಮಯವು ಭಾವ ಪ್ರಕಟ ಮಾಡುವುದು ಮ್ಯಾಜಿಕ್ ನ ಒಳಮರ್ಮ ಎಂದುವಿಶ್ವವಿಖ್ಯಾತ ನಮ್ಮ ಕರ್ನಾಟಕದ ಹೆಮ್ಮೆಯ ಜಾದೂಗಾರ ಕುದ್ರೋಳಿ ಗಣೇಶ್ ಹೇಳುತ್ತಾರೆ.

ಕುದ್ರೊಳಿ ಗಣೇಶ್ ಇವರು ಕರ್ನಾಟಕ ಅಷ್ಟೇ ಅಲ್ಲ ದೇಶ, ದೇಶಗಳಲ್ಲೂ ತಮ್ಮ ಜಾದುವಿನ ಛಾಪು ಮೂಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುದ್ರೋಳಿ ಯಲ್ಲಿ ಏಪ್ರಿಲ್ 1. 1972 ರಂದು ವಿಶ್ವೇಶ್ವರಯ್ಯ ಹಾಗೂ ಲೀಲಾವತಿ ದಂಪತಿಗಳ ಮಗನಾಗಿ ಹುಟ್ಟಿದರು. ಕುದ್ರೋಳಿ ಯವರಿಗೆ ಒಬ್ಬ ಸಹೋದರ ಹಾಗೂ ಗಾಯತ್ರಿ ಸಹೋದರಿ ಇದ್ದಾರೆ. ರಂಜಿತಾ ಗಣೇಶ್ ಇವರ ಧರ್ಮಪತ್ನಿ  ಇವರಿಗೆ ಯುವ ಹಾಗೂ ಸಂಭ್ರಮ ಎಂಬ ಎರಡು ಮುದ್ದಾದ ಮಕ್ಕಳಿದ್ದಾರೆ. ಇವರ ತಂದೆ ತಾಯಿ ಹೋಟೆಲ್ ಉದ್ಯಮಿಗಳು. ಕುದ್ರೋಳಿ ದಂಪತಿಗಳು ಬಾಲಕ ಗಣೇಶನಿಗೆ ತುಂಬು ಪ್ರೋತ್ಸಾಹ ನೀಡಿದರು.

ವಿಸ್ಮಯ ಜಾದೂ ತನ್ನ ವೃತ್ತಿ ಹಾಗೂ ಪ್ರವೃತ್ತಿಯನ್ನಾಗಿಸಿಕೊಂಡ ಕುದ್ರಳ್ಳಿ ಅವರಿಗೆ ರಂಜಿತಾ ಅವರ ಬೆಂಬಲ ಕೂಡ ಅಷ್ಟೇ ಇದೆ ಹಾಗೂ ಅಪ್ಪನ ಜಾದುವಿನ ಬಗ್ಗೆ ಮಕ್ಕಳಿಗೆ ತುಂಬಾ ಹೆಮ್ಮೆ ಇದೆ. ಯುವ ಹಾಗೂ ಸಂಭ್ರಮ ಕೂಡ ಅಪ್ಪನಿಂದ ಅನೇಕ ಜಾದುವಿನ ಕಲೆಗಳ ಅಭ್ಯಾಸ ಮಾಡುತ್ತಿರುವುದು ಕೂಡ ವಿಶೇಷವಾಗಿದೆ.

ಕುದ್ರೋಳಿ ಗಣೇಶ್ ಅವರು ಮೂವತ್ತಕ್ಕೂ ಅಧಿಕ ವರ್ಷಗಳಿಂದ ಜಾದೂ ರಂಗದಲ್ಲಿದ್ದು, ದೇಶದಾದ್ಯಂತ ಹಾಗೂ ವಿದೇಶದ 15 ರಾಷ್ಟ್ರಗಳಲ್ಲಿ 2,300 ಕ್ಕೂ ಹೆಚ್ಚು ಜಾದೂ ಪ್ರದರ್ಶನ ನೀಡಿದ್ದಾರೆ. ವಿವಿಧ ಜಾದೂ ಸ್ಪರ್ಧೆಗಳಲ್ಲಿ ಭಾಗವಹಿಸಿ 11 ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜಾದೂ, ಜಾನಪದ, ರಂಗಭೂಮಿ, ಸಂಗೀತಗಳ ಸಮ್ಮಿಳನದ ನವರಸಪೂರ್ಣ ಜಾದೂ ಶೈಲಿಯನ್ನು ಹುಟ್ಟುಹಾಕಿದ್ದಾರೆ. ತುಳುನಾಡು ಜಾದೂ, ತುಳುನಾಡು ತುಡರ್ ಚೆಂಡು, ಹರಿಕಥೆ ಜಾದೂ, ನವದುರ್ಗಾ ವಿಸ್ಮಯ, ಸ್ವಚ್ಛತೆಗಾಗಿ ಜಾದೂ, ಶಿಕ್ಷಣಕ್ಕಾಗಿ ಜಾದೂ, ಮೈಂಡ್ ಮ್ಯಾಜಿಕ್ ಮುಂತಾದ ನವನವೀನ ಜಾದೂ ಪ್ರಯೋಗಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ.

ಭಾರತೀಯ ಜಾದೂ ರಂಗದಲ್ಲಿ ವಿಶಿಷ್ಟವಾದ ಸ್ಥಾನ ಕುದ್ರೋಳಿ ಗಣೇಶ್ ರವರದ್ದು.ಜಾದೂ ಕಲೆಗೆ ನವರಸಪೂರ್ಣತೆಯನ್ನು ತುಂಬಿ ಭಾರತೀಯ ಜಾದೂವಿಗೆ ವಿಶ್ವಮಾನ್ಯತೆ ತಂದುಕೊಟ್ಟವರು ಇವರು.
ಭಾರತದ ಪ್ರಪ್ರಥಮ ” ಮೆಗಾ ಮ್ಯಾಜಿಕ್ ಪ್ರಶಸ್ತಿ” ಭಾರತದ ಪ್ರಪ್ರಥಮ ” ಇಲ್ಯೂಶನ್ ಜಾದೂ ಪ್ರಶಸ್ತಿ” ಸೇರಿದಂತೆ 11 ಪ್ರತಿಷ್ಟಿತ ರಾಷ್ಟ್ರೀಯ ಜಾದೂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

ಕುದ್ರೋಳಿ ಗಣೇಶ್ ದೇಶದ ವಿವಿಧೆಡೆ ಹಾಗೂ ಆಷ್ಟ್ರೇಲಿಯಾ, ಕೀನ್ಯ, ಗಲ್ಫ್ ರಾಷ್ಟ್ರಗಳು ಸೇರಿದಂತೆ ಹದಿನೈದು ಹೊರ ದೇಶಗಳಲ್ಲಿ 2300 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ಸಚಿವರನ್ನು ಮಾಯ ಮಾಡಿದ್ದು, ಸ್ಪೋಟಿಸುವ ಪೆಟ್ಟಿಗೆಯಿಂದ ಪಾರಾಗಿ ಸಮುದ್ರದ ಮಧ್ಯದಿಂದ ಎದ್ದು ಬಂದದ್ದು, ಕಣ್ಣಿಗೆ ಬಟ್ಟೆ ಕಟ್ಟಿ ಬೈಕ್ ಚಲಾಯಿಸುವುದು ಮುಂತಾದ ಜಾದೂ ಸಾಹಸಗಳನ್ನು ಮಾಡಿದ್ದಾರೆ. ಇವರು ಮುಂತಾದ ಹತ್ತು ಹಲವು ಸಾಮಾಜಿಕ ಕಾಳಜಿಯ ಕಾರ್ಯಕ್ರಮ ನಡೆಸಿದ್ದಾರೆ.

ಕುದ್ರೋಳಿ ಗಣೇಶ್ ರವರ ಜಾದೂ ಧಾರವಾಹಿಗಳು ಈ ಟಿವಿ, ಕಸ್ತೂರಿ ಚಾನೆಲ್, ಪಬ್ಲಿಕ್ ಟಿವಿಗಳಲ್ಲಿ ಪ್ರಸಾರವಾಗಿದೆ. ಕಲರ್ಸ್ ಹಿಂದಿ ಟಿವಿ ಚಾನೆಲ್ ನಡೆಸಿದ ” ಇಂಡಿಯಾಸ್ ಗಾಟ್ ಟ್ಯಾಲೆಂಟ್ ” ರಿಯಾಲಿಟಿ ಶೋನ ಸೀಸನ್ 3 ರ ಫೈನಲಿಸ್ಟ್ ಆಗಿ ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ. ಕನ್ನಡ ಬಿಗ್ ಬಾಸ್ ಸೀಸನ್ 7 ವಿಶೇಷ ಅತಿಥಿ ಕಲಾವಿದರಾಗಿ ಬಿಗ ಬಾಸ್ ಮನೆಯಲ್ಲಿ ಪ್ರದರ್ಶನ ನೀಡಿದ್ದಾರೆ. ಕುದ್ರೋಳಿ ಗಣೇಶ್ ರವರ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಮುಖ್ಯಮಂತ್ರಿಗಳಾಗಿದ್ದ  ಎಸ್ ಎಂ ಕೃಷ್ಣರವರು ಕುದ್ರೋಳಿ ಗಣೇಶ್ ರವರಿಗೆ ಮೆಗಾ ಮ್ಯಾಜಿಕ್ ಸ್ಟಾರ್ ಬಿರುದು ಪ್ರದಾನ ಮಾಡಿದರು. ದ.ಕ.ಜಿಲ್ಲಾ ಆಡಳಿತ ಹಾಗೂ ಸಾಹಿತ್ಯ ಪರಿಷತ್ ವತಿಯಿಂದ “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ”, ಅಮೆರಿಕಾದ ಸೊಸೈಟಿ ಆಫ್ ಮ್ಯಾಜಿಕ್ ವತಿಯಿಂದ ” ಮರ್ಲಿನ್ ಮೆಡಲ್” , ಆಂಧ್ರ ಪ್ರದೇಶನ ಇಂಡಿಯನ್ ಮ್ಯಾಜಿಕ್ ಸೊಸೈಟಿ ವತಿಯಿಂದ ಜೀವಿತಾವಧಿಯ ಸಾಧನೆಗಾಗಿ ” ಗೊಲ್ಡನ್ ಮ್ಯಾಜಿಶಿಯನ್ ” ಪ್ರಶಸ್ತಿ ಕುದ್ರೋಳಿ ಗಣೇಶ್ ರವರಿಗೆ ಸಂದಾಯವಾಗಿದೆ.

ಜಾದೂ ಕಲೆಯನ್ನು ಜನಪ್ರಿಯಗೊಳಿಸಲು ನಿರಂತರ ಹೊಸ ಪ್ರಯೋಗಗಳನ್ನು ಮಾಡುತ್ತಿರುವವರು ಕುದ್ರೋಳಿ ಗಣೇಶ್. ವಿಸ್ಮಯ ಜಾದೂ, ಮಸ್ತ್ ಮ್ಯಾಜಿಕ್, ತುಳುನಾಡು ತುಡರ್ ಚೆಂಡು, ಯಕ್ಷಗಾನ ಯಕ್ಷಿಣಿ, ಹರಿಕಥೆ ಜಾದೂ, ಮೈಂಡ್ ಮ್ಯಾಜಿಕ್, ನವದುರ್ಗಾ ವಿಸ್ಮಯ ಮುಂತಾದ ಹತ್ತು ಹಲವು ಪ್ರಸ್ತುತಿಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯರಾಗಿದ್ದಾರೆ.
ಇದೀಗ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಜಾದೂ – ಜಾನಪದ – ರಂಗಭೂಮಿ – ಸಂಗೀತಗಳ ಸಮ್ಮಿಲನದ “ವಿಸ್ಮಯ ಜಾದೂ ” ಅದ್ಭುತ – ಹಾಸ್ಯಮಯ – ವಿನೂತನ ಮ್ಯಾಜಿಕ್ ಪ್ರದರ್ಶನ ನೀಡುತ್ತಿದ್ದಾರೆ.

ಬಿಡುವಿಲ್ಲದ ಜೀವನ ಶೈಲಿ,ಹಣ, ಮೋಜು,ಮಸ್ತಿ ಅದರಲ್ಲಿ ಮೊಬೈಲ್ ಎಂಬ ಮಾಯಾಜಾಲದಲ್ಲಿ ಸಿಲುಕಿರುವ ಯುವ ಜನತೆಗೆ, ನೈತಿಕ ಹಾಗೂ ಶೈಕ್ಷಣಿಕ ಜಾದೂ ವಿನ ಅಗತ್ಯ ಇದೆ.

ಕುದ್ರೋಳಿ ಅವರ ಜಾದು ಕೇವಲ ವೃತ್ತಿಗಾಗಿ ಸೀಮಿತ ಇರದೆ, ಜಾದುವಿನ ಮೂಲಕ ಸಮಾಜಮುಖಿ ಹಾಗೂ ಪ್ರಗತಿಪರ ಚಿಂತನೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ವಿಶೇಷ. ಸ್ವತಃ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳು ಆದ ನರೇಂದ್ರ ಮೋದಿಜಿ ಯವರು,”ಸ್ವಚ್ಛ ಭಾರತ ಅಭಿಯಾನ” ಕಾರ್ಯಕ್ರಮದಲ್ಲಿ ಕೈ ಜೋಡಿಸಲು ಕರೆ ಮಾಡಿದ್ದು ಹೆಮ್ಮೆಯ ಸಂಗತಿ ಹಾಗೂ”ಮಂಗಳೂರು ಸ್ವಚ್ಛ ಭಾರತ ಅಭಿಯಾನ”ದಲ್ಲಿ ರಾಮಕೃಷ್ಣ ಆಶ್ರಮದ ಶ್ರೀ ಏಕಗಮ್ಯನಾಥ ಸ್ವಾಮಿಯವರೊಟ್ಟಿಗೆ 5 ವರ್ಷ ಪ್ರತಿದಿನ ಸ್ವಚ್ಛ ಭಾರತದ ಬಗ್ಗೆ ಮ್ಯಾಜಿಕ್ ಮೂಲಕ ಜಾಗೃತಿ ಮೂಡಿಸಿದ್ದು ದೊಡ್ಡ ಹೆಜ್ಜೆಯಾಗಿದೆ.ಒಟ್ಟು 15 ದಿನ 200 ಶಾಲೆಗಳ ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದು ದೊಡ್ಡ ಸಾಹಸವೆ.

ಜಾದೂ ಎಂದರೆ” ಕೈ ಚಳಕ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಅಪ್ಪಟ ಕಲೆ” ಎಂದು ಹೇಳುವ ಕುದ್ರೋಳಿ ಯವರು ಇದು ಮಾಯೆ ಅಥವಾ ಭಾನಾಮತಿ ಮಾಟಮಂತ್ರ ಅಲ್ಲವೆ ಅಲ್ಲ ಎನ್ನುವರು.

ಜಾದುವಿನ ಇನ್ನೊಂದು ಹೆಸರು ಇಂದ್ರಜಾಲ ಅಂದರೆ ಮಾಯವಿದ್ಯೆ ನಾಲ್ಕು ವೇದಗಳಲ್ಲಿ ಅಥರ್ವಣ 64 ಕಲೆಗಳ ಪಟ್ಟಿಯಲ್ಲಿ ಜಾದು 63 ನೆ ಕಲೆ.ಕಲೆ ಯಾರ ಸ್ವತ್ತು ಅಲ್ಲ ಇದು ಅದೃಷ್ಟವಂತರಿಗೆ ಮಾತ್ರ ಒಲಿಯುತ್ತದೆ. ತಲೆಗೆ ಕಳೆ ಬರಬೇಕಾದರೆ ಕಲಾವಿದರು ಸಂಪೂರ್ಣವಾಗಿ ಅದರ ಬಗ್ಗೆ ಅರ್ಥ ಮಾಡಿಕೊಂಡು ಸತತ ಅಭ್ಯಾಸ ಹಾಗೂ ಪ್ರಯೋಗಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾಗುತ್ತದೆ.

ಕುದ್ರಲ್ಲಿ ಅವರ ಜಾದು ತುಂಬಾ ವಿಸ್ಮಯತೆಯಿಂದ ಕೂಡಿದೆ, ಸಾವಿರಾರು ವೀಕ್ಷಕರ ಎದುರು ವೇದಿಕೆಯ ಮೇಲೆ ಒಬ್ಬಂಟಿಯಾಗಿ ಇವರು ಮಾಡುವ ಜಾದುಗಳನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿರುತ್ತಾರೆ, ಇವರು ಮಾತನಾಡುವ ಶೈಲಿ, ಇವರ ಹಾಡುಗಾರಿಕೆ, ಇವರು ಬಾರಿಸುವ ಸುಮಧುರ ಕೊಳಲ ನಾದ,ಸಂಗೀತ, ಜಾನಪದ ಹಾಡಿನ ರಂಗು, ಮೋಜು ಮಸ್ತಿ, ಮನೋರಂಜನೆಯೊಂದಿಗೆ ಮಾಡುವ ಒಂದೊಂದು ಜಾದೂ ಗಳು ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ.ಮೈಂಡ್ ರೀಡಿಂಗ್ ಮ್ಯಾಜಿಕ್ ತುಂಬಾ ಅದ್ಭುತವಾಗಿದೆ.

ಜಾದೂವಿನ ಕಲೆ ಶ್ರೀಮಂತವಾಗಬೇಕಾದರೆ ನಿರಂತರ ಪ್ರದರ್ಶನಗಳು ಹಾಗೂ ಸತತ ಅಭ್ಯಾಸದ ಅವಶ್ಯಕತೆ ಇದೆ ಎಂದು ಹೇಳುತ್ತಾರೆ.

ಜಾದೂವಿನ ಬಗ್ಗೆ ಪುಸ್ತಕಗಳಲ್ಲಿ,ಟಿವಿ ಗಳಲ್ಲಿ ನೋಡುತ್ತಿದ್ದೆವು. ನಮ್ಮ ಕಲಬುರಗಿಯಲ್ಲಿ ಇವರು ಮಾಡಿದ ಜಾದೂ ಪ್ರದರ್ಶನವನ್ನು ನೋಡಿದಾಗ ಎರಡು ಗಂಟೆಗಳ ಕಾಲ ಸಾವಿರಾರು ಪ್ರೇಕ್ಷಕರು ವೀಕ್ಷಿಸಿ ಖುಷಿಪಟ್ಟರು. ಇಂಥ ಅದ್ಭುತ ಜಾದೂ ಗಾರರು ನಮ್ಮ ಕರ್ನಾಟಕದವರು ಎನ್ನುವ ಹೆಮ್ಮೆ ಹಾಗೂ ಅಭಿಮಾನ ನಮಗಿದೆ.

ಶಿಕ್ಷಣ ರಂಗದಲ್ಲಿ ಮ್ಯಾಜಿಕ್ ಮೂಲಕ ಮೌನಕ್ರಾಂತಿ ಮಾಡುತ್ತಿರುವುದು ಇವರ ವಿಶೇಷತೆ. ಮಿದುಳು ಚುರುಕುತನ, ಸ್ಮರಣ ಶಕ್ತಿ ಹೆಚ್ಚಳ ಪ್ರಾಯೋಗಿಕ ಅಭ್ಯಾಸ ಮಕ್ಕಳಿಗೆ ಫುಲ್ ಖುಷ್ ನೀಡುವ ಕ್ರಿಯಾತ್ಮಕ ಚಟುವಟಿಕೆ. ಸಂತಸದ ಕಲಿಕೆ ಆಧರಿಸಿದ ನೆನಪಿನ ಶಕ್ತಿ ಹೆಚ್ಚಿಸುವ ಅಭ್ಯಾಸ ಆನ್ ಸ್ಪಾಟ್ ಮಾಡಿಸಿ ಸೈ ಎನಿಸಿಕೊಳ್ಳುತ್ತಿರುವುದು ಒಂದು ಅಪೂರ್ವ ಪ್ರಯೋಗ.
ಶಿಕ್ಷಣಕ್ಕಾಗಿ ಮ್ಯಾಜಿಕ್ ಪ್ರತಿ ಶಾಲೆಯ ಮಗುವಿಗೂ ಸಿಗಬೇಕು, ಪಾಲಕ, ಪೋಷಕರು ಒಮ್ಮೆಯಾದರೂ ಈ ಮ್ಯಾಜಿಕ್ ನಿಮ್ಮ ಮಕ್ಕಳಿಗೆ ತೋರಿಸಿ ಬುದ್ಧಿವಿಕಾದಕ್ಕೆ ಉತ್ತೇಜಿಸಬೇಕು, ನಮ್ಮ ಸರಕಾರ ಕೂಡ ಎಲ್ಲ ಶಾಲೆಯ ಮಕ್ಕಳಿಗೆ ಶಿಕ್ಷಣಕ್ಕಾಗಿ ಜಾ ದೂ ತಲುಪುವಂತೆ ಮಾಡುವುದು ಅತ್ಯಂತ ಅಗತ್ಯ ಜಪಾನ್ ಸೇರಿದಂತೆ ವಿದೇಶಗಳಲ್ಲಿ ಪ್ರತಿ ವಾರಕ್ಕೊಮ್ಮೆ ಜಾದೂ ಮೂಲಕ ಶಿಕ್ಷಣ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. “ಒಂದು ಸಲ ಜಿಮ್ ಗೆ ಹೋದರೆ ದೇಹದ ಸಿಕ್ಸ್ ಪ್ಯಾಕ್ ಆಗುವುದಿಲ್ಲ ಹಾಗೆ ಒಂದು ಮ್ಯಾಚ್ ಗೆದ್ದ ಎಲ್ಲವೂ ನಿರೀಕ್ಷಿಸಬಾರದು. ನಿರಂತರ ಕಲಿಕೆಯಿಂದ ಮಾತ್ರ ಶಿಕ್ಷಣದಲ್ಲಿ ಬುದ್ಧಿಮತ್ತೆಯನ್ನು ಹೆಚ್ಚಿಸಬಹುದು” ಎನ್ನುತ್ತಾರೆ ಕುದ್ರೋಳಿ ಗಣೇಶ್ .
ಕಲಿಕೆಯಲ್ಲಿ ಪರಿಶ್ರಮದ ಪ್ರಾಮುಖ್ಯತೆ
ಸ್ಮರಣ ಶಕ್ತಿ
ಏಕಾಗ್ರತೆ
ಆತ್ಮಸ್ಥೈರ್ಯ ಅಗತ್ಯ
ಗ್ರೇಡ್ ಗಾಗಿ ಶಿಕ್ಷಣವಲ್ಲ,ಬದುಕಿಗಾಗಿ ಶಿಕ್ಷಣ
ಪರಿಸರ,
ರಾಷ್ಟ್ರೀಯ ಭಾವೈಕ್ಯತೆ ಒಳಗೊಂಡ ಶಿಕ್ಷಣಕ್ಕಾಗಿ ಜಾದು ಇಂದು ಜನಪ್ರಿಯಗೊಳ್ಳುತ್ತಿದೆ.
ಹೀಗೆ ಶಿಕ್ಷಣದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಜಾದೂ ಮುಖ್ಯ ಪಾತ್ರ ವಹಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮನರಂಜನೆ ಹಾಗೂ ಶಿಕ್ಷಣದ ಮಹತ್ವವನ್ನು ತಿಳಿಸಿ ಕೊಡುತ್ತಿದ್ದಾರೆ.

ಮನೋವಿಕಾಸದ ವಿಚಾರಗಳನ್ನು ಜಾದೂ ತಂತ್ರಗಳ ಮೂಲಕವೇ ತಿಳಿಸುವ ವಿದ್ಯಾರ್ಥಿಗಳ ಮನಸ್ಸಿಗೆ ಪರಿಣಾಮಕಾರಿ ಹಾಗೂ.ವೈಶಿಷ್ಟ್ಯ ಪೂರ್ಣ ಪ್ರಯತ್ನದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಕಾಣಿರಿ ಹಾಗೂ ಜಗತ್ತಿನ ಮೂಲೆ ಮೂಲೆಯಲ್ಲೂ ನಮ್ಮ ನಾಡ ಹೆಸರು ಪಸರಿಸಲಿ. ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಪ್ರಯೋಗಗಳು ನಡೆಯಲಿ ಎಂದು ಶುಭ ಹಾರೈಸುವೆನು.


ನಂದಿನಿ ಸನಬಾಳ್ ಪಾಳಾ
ಕಲಬುರಗಿ

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group