ಅರೆ ಬೊಂಬೆ ನಾ! ಏನಿದು ಕೈಗೊಂಬೆ ಆಗೋದಂದ್ರೆ ಏನು ಅಂತ ಯೋಚಿಸ್ತಿದೀರಾ, ಅದು ಹಾಗೆ ಕೆಲವೊಮ್ಮೆ ಪರಿಸ್ಥಿತಿಯೂ ಕೂಡ ಅದಕ್ಕೆ ಸಾಥ್ ನೀಡಿಬಿಡುತ್ತೆ. ನಾವು ಅಂದುಕೊಂಡಂತೆ ಕೆಲವೊಮ್ಮೆ ಇರಲಿಕ್ಕೆ ಸಾಧ್ಯವೇ ಆಗದ ಸಂದಿಗ್ಧತೆಯು ಉಂಟಾಗಿಬಿಡತ್ತೆ. ಹೇಗೆ, ಏನು, ಯಾಕೆ, ಯಾವಾಗ ಈ ಎಲ್ಲ ಗೊಂದಲಗಳು ಒಂದಿಲ್ಲ ಒಂದು ರೀತಿಯಾಗಿ ಬಾಧಿಸುತ್ತವೆ. ಬದುಕೇ ಸಾಕು ಎಂಬಂತೆ ಕೈಚೆಲ್ಲಿ ಕೂರುವ ಎಷ್ಟೋ ಸನ್ನಿವೇಶಗಳು ಬಹುತೇಕರನ್ನು ಬಾಧಿಸುತ್ತವೆ. ಬದುಕು ಅನಿವಾರ್ಯವೇ ಎಂಬ ಹುಚ್ಚು ಪ್ರಶ್ನೆಗಳು ಕಾಡುತ್ತವೆ. ಕಷ್ಟಗಳು ಯಾರನ್ನು ಬಿಟ್ಟಿಲ್ಲ, ಯಾರನ್ನು ಬಿಡುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಷ್ಟಗಳು ಭಾದಿಸುತ್ತಿರುತ್ತವೆ. ಎಲ್ಲರಿಗೂ ತಮ್ಮ ಬದುಕನ್ನು ಹೀಗೆ ಬದುಕಬೇಕು ಎಂಬ ಕನಸು ಆಸೆಗಳು ಇದ್ದೇ ಇರುತ್ತೆ. ಆದರೆ ಎಲ್ಲರ ಬದುಕಿನಲ್ಲಿಯೂ ಅವು ಅಸ್ತು ಎಂದು ಅಂದುಕೊಂಡಂತೆ ಆಗುವುದು ಇಲ್ಲ ಬದಲಾಗಿ ಬೇರೆ ದಿಕ್ಕಿನೆಡೆಗೆ ಅವು ನಡೆಸುತ್ತವೆ. ಇನ್ನು ಕೆಲವರ ಬದುಕಿನಲ್ಲಿ ಮತ್ತೆ ಕೆಲವರು ಸೂಪರ್ ಗೈಡ್ಗಳಾಗಿ ಇರುತ್ತಾರೆ. ನಾನು ಹೇಳಿದಂತೆಯೇ ಇರಬೇಕು, ನನ್ನ ಮಾತು ನಡೆಯಬೇಕು, ನಿನ್ನದೇ ಬದುಕಾದರೂ ನನ್ನ ನಿರ್ದೇಶನದಂತೆ ಸಾಗಬೇಕು ಎಂಬಂತಹ ಕಟ್ಟು ಪಾಡುಗಳನ್ನ ಕೆಲವರ ಮೇಲೆ ಬಲವಂತವಾಗಿ ಹೇರಿರುತ್ತಾರೆ. ವಿಧಿ ಇಲ್ಲದೆ ಅದನ್ನು ಕೆಲವರು ಒಪ್ಪಿಕೊಂಡೂ ನಡೆಯುತ್ತಾರೆ.
ಎಲ್ಲವನ್ನು ಪರಿಸ್ಥಿತಿಯ ಮೇಲೆ ಹೇರುವುದಾದರೆ ನಮ್ಮ ಪ್ರಯತ್ನವೇನು. ಸಂಬಂಧಗಳು ಅಥವಾ ಬಂಧಗಳು ಋಣಾನುಬಂಧದಿಂದ ಬೆಸೆದಿರಬೇಕೇ ಹೊರತು ಋಣಭಾರದಿಂದಲ್ಲ, ಅಂತಹ ಯಾವುದೇ ಸಂಬಂಧವು ಕೊನೆಯವರೆಗೂ ಉಳಿಯಲು ಸಾಧ್ಯವೇ ಇಲ್ಲ. ಕೆಲವು ಹಾಗೆ ಏನೇ ಮಾಡಬೇಕೆಂದರು ಮತ್ತೊಬ್ಬರ ಮೇಲೆ ಅವಲಂಬಿತರಾಗಿರುವುದು. ಅದು ಅವರ ಭಾವನೆಯ ಪ್ರಕಾರ ಒಳಿತನ್ನೆ ಬಯಸುತ್ತಾರೆ ಎನ್ನುವಂತಿದ್ದರೂ ಸಹ ಒಳಗೊಳಗೆ ಹಿಂಸಿಸುವ ಕೆಲವು ಸಂದರ್ಭಗಳು ಇರುತ್ತವೆ. ಕೆಲವರು ಅಂತಹ ಬಂಧದೊಳಗೆ ಸಿಲುಕಿ ಬಂದಿಯಾಗಿರುತ್ತಾರೆ ಅವರಿಗೆ ತಿಳಿಯದಂತೆ. ಸಾಕಷ್ಟು ಜನರು ಏನೋ ಒಂದು ಹೊಸತನಕ್ಕೆ ತುಡಿಯುತ್ತ, ಹೊಸ ಹೆಜ್ಜೆಯನ್ನು ಇರಿಸಬೇಕು ಎನ್ನುವಷ್ಟರಲ್ಲಿ ಅವರನ್ನು ನಿಧಾನವಾಗಿ ಹಿಂದಕ್ಕೆ ಎಳೆಯುವ ಕೈಗಳು ಇರುತ್ತವೆ. ಎಲ್ಲ ಬಂಧುಗಳು ಎಲ್ಲರನ್ನೂ ಬಂಧಿಸುವುದಿಲ್ಲ ಆದರೆ ಬಹುತೇಕ ಬಂಧಗಳು ತಮ್ಮ ತೆಕ್ಕೆಯಲ್ಲಿ ಕೆಲವರನ್ನ ಕೈಗೊಂಬೆಯಾಗಿರಿಸಿಕೊಂಡು ಆಡಿಸುವುದನ್ನು ಕಾಣಬಹುದು.
ಕೆಲವು ಕೈಗಳು ಕಾಣದಂತೆ ನಮ್ಮನ್ನ ನಿಯಂತ್ರಿಸುವ ಕೆಲಸ ಮಾಡುತ್ತಿರುತ್ತದೆ ಆದರೆ ಅದನ್ನು ಅರಿಯದೆ ಮುನ್ನಡೆದರೆ ಕೊನೆಯವರೆಗೂ ನಾವು ಬೆಳೆಯಲು ಸಾಧ್ಯವೇ ಇಲ್ಲ. ಬಹುತೇಕ ಒಳಿತು ಯಾವುದು ಕೆಡುಕು ಯಾವುದು ಎಂಬುದನ್ನು ತಿಳಿಯದಂತೆ ದಡ್ಡರೇನೂ ಬಹುತೇಕರು ಇಲ್ಲ. ಇರುವುದೊಂದೇ ಬದುಕು ಎಂದ ಮೇಲೆ ಇಷ್ಟ ಬಂದಂತೆ ಯಾರಿಗೂ ಕಷ್ಟ ಕೊಡದಂತೆ ಬದುಕಬೇಕು ಆದರೆ ಹಿಂಸೆ ಮಾಡಿಕೊಂಡು ಬದುಕುವುದರಲ್ಲಿ ಅರ್ಥವಿಲ್ಲ. ಕೆಲವು ಬಂಧಗಳು ಉಳಿಯಬೇಕು ಅವುಗಳನ್ನು ಕಾಪಾಡಿಕೊಳ್ಳಬೇಕು ಎಂದು ನೀವೆಷ್ಟೇ ಕಷ್ಟಪಟ್ಟರು ಅವುಗಳು ಅಲ್ಲಿಂದ ಕಾಲ್ ಕಿತ್ತುತ್ತಲೆ ಇರುತ್ತವೆ. ಯಾವುದೇ ಬಂದವಾಗಲಿ ಎರಡು ಕಡೆಯಿಂದಲೂ ಉಳಿಸಿಕೊಳ್ಳುವ ಮತ್ತು ಯಾವುದೇ ಕೆಲಸದಲ್ಲಾದರೂ ನಿನ್ನ ಬೆನ್ನ ಹಿಂದೆ ನಾನಿದ್ದೇನೆ ಎಂದು ಜೊತೆ ನಿಲ್ಲುವ ಮನಸ್ಥಿತಿಗಳು ಇದ್ದರೆ ಮಾತ್ರ ಅದಕ್ಕೊಂದು ಅರ್ಥ ಇಲ್ಲದ ಹೊರತು ಯಾವ ಬಂಧುಗಳ ಉಳಿಯುವುದಿಲ್ಲ. ಏನೋ ಸಾಧನೆ ಮಾಡ್ತೀನಿ, ಇನ್ನೇನೋ ಹೊಸದೊಂದು ಯೋಜನೆಯನ್ನು ರೂಪಿಸಿದ್ದೇನೆ, ನಾನು ಏನೋ ಒಂದು ಮಾಡೇ ಮಾಡ್ತೀನಿ ಎನ್ನುವಂತಹ ಧೈರ್ಯ, ಛಲ ಇರುವವರು ಸಹ ಒಂದೊಂದು ಬಾರಿ ಕೈಚಲ್ಲಿ ಕೂರುವುದುಂಟು, ಅದು ಕೇವಲ ನನ್ನಿಂದ ಆಗುವುದಿಲ್ಲ ಎನ್ನುವ ಭಾವವವಲ್ಲ ಅವರನ್ನು ಮತ್ಯಾರು ನಿಯಂತ್ರಿಸುವ ಒಂದು ಬಂಧಿ. ಬಹುತೇಕ ತಂದೆ ತಾಯಿಯ ಹೊರತು ನಿಮ್ಮನ್ನು ಸರಿಯಾಗಿ ನಿರ್ದೇಶನ ಮಾಡುವವರು ಕಡಿಮೆ ಜನ ಸಿಗುತ್ತಾರೆ, ಒಂದು ವೇಳೆ ತಂದೆ ತಾಯಿಯಂತೆಯೇ ನಿಮ್ಮ ಜೊತೆ ನಿಲ್ಲುವವರು ಇದ್ದರೆ ನೀವೇ ಪುಣ್ಯವಂತರು. ಅದರ ಹೊರತಾಗಿಯೂ ಮೇಲ್ನೋಟಕ್ಕೆ ನಿಮ್ಮ ಜೊತೆ ನಾನಿದ್ದೇನೆ ಎಂದು ನಿಮ್ಮನ್ನು ತಮ್ಮ ಬಂದಿದ್ದಾನೆ ಒಳಗೆ ನಿಯಂತ್ರಿಸುವ ಕೈಗಳಿಂದ ಸಾಧ್ಯವಾದಷ್ಟು ದೂರವಿರಿ. ಯಾರು ಯಾರ ಬದುಕನ್ನು ತೂಗಿಸುವುದಿಲ್ಲ, ಯಾರಿಂದಲೂ ಏನು ಜಾದು ಅಂತೂ ಆಗುವುದಿಲ್ಲ ಬದಲಾಗಿ ನಮ್ಮ ಬದುಕನ್ನ ನಾವೇ ಸುಂದರಗೊಳಿಸಿಕೊಳ್ಳಬೇಕು. ಯಾರದೋ ಹಿತ ಸಾಧನೆಗಾಗಿ ಯಾರೋ ತಮ್ಮನ್ನು ತಾವು ಗುರುತಿಸಿಕೊಳ್ಳಲು ನಿಮ್ಮನ್ನು ಮುಂದೆ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಮೊದಲು ಅವರ ಮನಸ್ಥಿತಿಯನ್ನ ಅರಿತುಕೊಳ್ಳಿ, ಅಂತವರಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಬೇಕು. ಬದುಕಿನಲ್ಲಿ ಕೆಲವೊಂದು ಘಟನೆಗಳು ಮತ್ತೆ ಮತ್ತೆ ತಿರುಗಿ ಬರುವುದಿಲ್ಲ, ಬಾಲ್ಯ, ಕಲಿಕಾ ಅಂತ, ಬದುಕು ರೂಪಿಸಿಕೊಳ್ಳುವ ಹಂತ ಇವೆಲ್ಲವುಗಳು ಒಂದೊಂದು ಸಮಯ, ಆಯಾ ಸಮಯದಲ್ಲಿ ಜಾಗೃತರಾಗಿರದೆ ಹೋದರೆ ನೀವು ಬೇರೆಯವರ ಕೈಗೊಂಬೆಗಳಾಗಿರಬೇಕಾಗುತ್ತದೆ. ಕೈಗೊಂಬೆ ಎಂದರೆ ಬೇರೇನು ಅಂತ ಬೇರೆಯವರು ನಿರ್ದೇಶಸಿದಂತೆ ನಾವು ನಟಿಸುವುದಷ್ಟೇ ಆದರೆ ಅದಕ್ಕೆ ನಟನೆ ಎಂದು ಕರೆಯುವುದಿಲ್ಲ ನಿಮಗೆ ಗೊತ್ತಿಲ್ಲದಂತೆ ನಿಮ್ಮನ್ನ ನಟನಾ ರೀತಿಯಲ್ಲಿ ನಡೆಸಿಕೊಳ್ಳುವವರು ಇರುತ್ತಾರೆ. ಯಾವುದೋ ಮಾತಿಗೋ, ಸಂಧರ್ಭಕ್ಕೋ ಕಟ್ಟುಬೀಳಬೇಡಿ, ಬದುಕು ಬಂದಂತೆ ಮುನ್ನಡೆಸಿ ಆದರೆ ಯಾರ ಅಧೀನದಲ್ಲೂ ಇರಬೇಡಿ ಅದು ನಿಮ್ಮನ್ನು ನಿಮ್ಮ ಏಳಿಗೆಯನ್ನು ನಾಶಪಡಿಸುತ್ತದೆ. ಹಣ, ಆಸ್ತಿ ಯಾವುದೂ ಶಾಶ್ವತವಲ್ಲ, ಅದನ್ನು ಗಳಿಸಲು ಅಡ್ಡದಾರಿಯಲ್ಲಿ ಸಾಗುವ ಬದುಕು ಕೂಡ ಬದುಕಲ್ಲ. ತಿಳುವಳಿಕೆ, ಒಳ್ಳೆಯ ನಡತೆ, ಒಳ್ಳೆಯ ಆಲೋಚನೆಗಳು ಇದ್ದರೆ ಬದುಕಿನಲ್ಲಿ ಯಾರನ್ನು ಅವಲಂಬಿಸುವ ಅವಶ್ಯಕತೆಯಿಲ್ಲ. ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಎಂಬ ಅರ್ಹತೆಗಳು ಜೊತೆಗಿದ್ದರೆ ಬದುಕನ್ನೇ ಜಯಿಸಿದಂತೆ. ಹೆಗಲಿಗೆ ಹೆಗಲಾಗಿ ನಿಲ್ಲುವ ಬಂಧುಗಳು ಈಗ ಕಾಣಸಿಗುವುದು ತುಂಬಾ ಕಡಿಮೆ. ಸಿಕ್ಕರೆ ಅಂತಹ ಅದೃಷ್ಟವಂತರು ಬೇರಾರು ಇಲ್ಲ. ಏಕೆಂದರೆ ಅಳಿ ತಪ್ಪಿಸಲೆಂದೆ ಕಾಯುವವರ ನಡುವೆ, ಕೆಲವರು ನಿಮ್ಮನ್ನು ನಿಯಂತ್ರಿಸಲು ಹೊಸೆದ ಮೂಗುದಾರದ ನಡುವೆ ಹಿಂದಕ್ಕೆಳೆದು ಎಳೆದು ನಿಮ್ಮನ್ನು ಇರುವ ಜಾಗದಿಂದ ಒಂದಿಂಚು ಮುಂದೆ ಹೋಗಲೂ ಬಿಡದ, ಅವರ ಅಧೀನದಲ್ಲೇ ನಿಮ್ಮನ್ನು ನಿಯಂತ್ರಿಸ ಹೊರಟವರಿಗೆ ದಿಕ್ಕಾರ ಹೇಳಿ ಆ ಬಲೆಯಿಂದ ಹೊರಗೆ ಬಂದು ನಿಮ್ಮನ್ನು ನೀವೇ ವಿಶೇಷವಾಗಿ ಕಾಣಲು ಪ್ರಾರಂಭಿಸಿ ಅದರಷ್ಟು ಸಂಭ್ರಮ ಬೇರೆಲ್ಲೂ ಇಲ್ಲ.
ವಿದ್ಯೆ ಮಾತ್ರ ನಿಮ್ಮನ್ನು ಎಲ್ಲಿಯೂ ನಿಲ್ಲದೆ, ಯಾರ ಬಳಿಯೂ ತಲೆತಗ್ಗಿಸದೆ, ಯಾರ ಮೇಲೇಯೂ ಅವಲಂಭಿತ ಆಗದೆ ನಿಮ್ಮನ್ನು ಗೆಲುವಿನ ಹಾದಿಗೆ ತರಬಲ್ಲದು. ಯಾರದಾದರೂ ಕೈಗೊಂಬೆಯಾಗಲು, ಅವರು ಹೇಳಿದ್ದೆ ವೇದವಾಕ್ಯ ಎಂದು ಭಾವಿಸುವುದಾದರೆ ಪುಸ್ತಕಗಳನ್ನು ಭಾವಿಸಿ. ಅದರ ಮೇಲೆ ಅವಲಂಭಿತಾರಾಗಿ. ಬದುಕಿನುದ್ದಕ್ಕೂ ನಿಮ್ಮನ್ನು ಮುನ್ನಡೆಸುತ್ತದೆ ಅದರ ಹೊರತು ಬೇರಾರು ನಿಮ್ಮನ್ನು ಸರಿಯಾಗಿ ನಿರ್ದೇಶಿಸುವುದು ಸುಳ್ಳು. ಸಂಸ್ಕೃತ ಸುಭಾಷಿತ ನುಡಿಯೊಂದು ಆಗಾಗ ನೆನಪಾಗುತ್ತಲೇ ಇರುತ್ತದೆ. ಏನೆಂದರೆ “ಸುಂದರೋಪಿ ಸುಶೀಲೋಪಿ ಕುಲೀನೋಪಿ ಮಹಾಧನಃ ಶೋಭತೇ ನ ವಿನಾ ವಿದ್ಯಾಂ ವಿದ್ಯಾ ಸವಸ್ಯ ಭೂಷಣಂ” ಇದರರ್ಥ ಸುಂದರನಾಗಿದ್ದರೂ, ಶೀಲವಂತನಾಗಿದ್ದರೂ, ಒಳ್ಳೆಯ ವಂಶದಲ್ಲಿ ಜನಿಸಿದವನಾಗಿದ್ದರೂ, ಧನಿಕನಾಗಿದ್ದರೂ ವಿದ್ಯೆ ಇಲ್ಲದೆ ಹೋದರೆ ಪ್ರಕಾಶಿಸುವುದಿಲ್ಲ. ಯಾಕೆ ಈ ವಾಕ್ಯ ಪದೇ ಪದೇ ನೆನಪಾಗುತ್ತಲೇ ಇರುತ್ತದೆ ಎಂದರೆ ವಿದ್ಯಾವಂತರಾದವರು ಯಾರನ್ನು ಅವಲಂಭಿಸುವುದಿಲ್ಲ, ಯಾರದೋ ಕಟ್ಟುಮಾತುಗಳಿಗೆ ಕಿವಿಗೊಟ್ಟು ಅವರಂತೆ ನಡೆಯುವುದಿಲ್ಲ, ಒಳಿತು ಕೆಡುಕುಗಳನ್ನು ನಿರ್ಧರಿಸುವ, ಆಲೋಚಿಸುವ ಸ್ವಂತಿಕೆ ಇರುತ್ತದೆ. ಇರುವುದೊಂದೇ ಬದುಕು, ಏಳೇಳು ಜನ್ಮದ ಮೇಲೆ ಕೆಲವರಿಗೆ ನಂಬಿಕೆ ಇರಬಹುದು ಆದರೆ ಇರುವ ಈ ಜನ್ಮದಲ್ಲೇ ನಮ್ಮಂತೆ ನಮಗೆ ಖುಷಿಯಾಗಿ ಬದುಕಲು ಆಗಲಿಲ್ಲ ಅಂದಮೇಲೆ ಏಳು ಜನ್ಮಗಳನ್ನು ಜೀವಿಸುವುದು ದೂರದ ಮಾತಾಯಿತು. ಹಾಗಾಗಿ ಇರುವ ಈ ಜನ್ಮವನ್ನು ಅರ್ಥಪೂರ್ಣವಾಗಿ ನಮಗಾಗಿ ಜೀವಿಸಬೇಕು. ನಮ್ಮನ್ನು ಇಂತದ್ದೇ ಮಾಡು, ಹೀಗೆ ಇರು ಎಂದು ಹೇಳಲು ಅರ್ಹತೆ ಇರುವುದು ನಮಗೆ ಜೀವಕೊಟ್ಟ ತಂದೆ-ತಾಯಿ ಮತ್ತು ನಮ್ಮ ಕುಟುಂಬ ಮಾತ್ರ. ಅದರ ಹೊರತು ಹೊರಗಿನವರ ಕೈಗೊಂಬೆಯಾಗಲೇಬೇಡಿ.
ಉದಾ :ತೊಗಲುಗೊಂಬೆ ಬಗ್ಗೆ ನಾವೆಲ್ಲ ಕೇಳೇ ಕೇಳಿರ್ತೇವೆ. ತೊಗಲುಗೊಂಬೆಗಳು ತಾವಾಗೆ ಆಡುವುದಿಲ್ಲ, ಬದಲಿಗೆ ಅದನ್ನಾಡಿಸುವ ಕಲೆ ಕಲಿತಂತಹ ಸೂತ್ರದಾರ ತನಗೆ ಹೇಗೆ ಬೇಕೋ ಹಾಗೆ ಅವುಗಳನ್ನು ಆಡಿಸುತ್ತಾನೆ. ಅವನಾಟಕ್ಕೆ ತಕ್ಕಂತೆ ತೊಗಲುಗೊಂಬೆಗಳು ಆಡುತ್ತವೆ. ಹಾಗಾಗಿ ಅಂತಹ ಸೂತ್ರದಾರರು ಬದುಕಿನಲ್ಲೂ ಇರುತ್ತಾರೆ, ಬರುತ್ತಾರೆ ಅವರು ಹೊಸೆದ ಸೂತ್ರದಾರಕ್ಕೆ ಪಾತ್ರದಾರಿಗಳಾಗಬೇಡಿ. ನಿಮ್ಮನ್ನು ಬೊಂಬೆಯಂತೆ ಆಡಿಸುವವರ ಕೈಗೊಂಬೆಯಾಗದಿರಿ. ಯಾರ ಮಾತಿಗೂ ಕಟ್ಟುಬೀಳಬೇಡಿ. ನೇರ ನಡೆ ನುಡಿ ನೋಡುಗರಿಗೆ ಆತ್ಮರತಿ ಎನಿಸಿದರು ಪರವಾಗಿಲ್ಲ, ಬದುಕಬೇಕು ನಮ್ಮೊಳಗಿನ ಆತ್ಮ ಮೆಚ್ಚುವಂತೆ. ಏನೇ ಬರಲಿ ಬದುಕಿನಲ್ಲಿ ಎಂತದ್ದೇ ಸಂದರ್ಭವಿರಲಿ ಎಂದಿಗೂ ಯಾರ ಮುಂದೆಯೂ ತಲೆತಗ್ಗಿಸದೆ ನ್ಯಾಯಯುತವಾಗಿ ನಡೆದದ್ದಾದರೆ ಯಾರಿಗೂ ಹೆದರಬೇಕಿಲ್ಲ. ಅದರ ಹೊರತಾಗಿಯೂ ನಿಮ್ಮನ್ನು ದ್ವೇಶಿಸುವವರು, ದೂಷಿಸುವವರೂ ನಿಮ್ಮ ಜೊತೆಯಲ್ಲೇ, ಸುತ್ತಮುತ್ತಲೂ ಇದ್ದಾರೆ ಎಂದರೆ ನೀವು ಅವರನ್ನು ಬದಿಗೊತ್ತಿ ಮುಂದೆ ಸಾಗಿದ್ದೀರಿ ಎಂದರ್ಥ. ಅಂತವರನ್ನು ದೂರದಿಂದಲೇ ಅರಿತು ನಡೆಯಬೇಕು. ಯಾರ ಕೈಗೊಂಬೆಯಾಗಿಯೂ ಅವರಿವರು ಹೇಳಿದಂತೆಯೇ ಕೇಳುವ ಪರಿಸ್ಥಿತಿಯೂ ಬರುವುದಿಲ್ಲ. ನಮ್ಮ ಬದುಕಲ್ಲಿ ನಾವು ನಾವಾಗಿರಬೇಕು.
ಡಾ.ಮೇಘನ ಜಿ
ಸಮಾಜಶಾಸ್ತ್ರ ಸಂಶೋಧಕರು ಮತ್ತು ಉಪನ್ಯಾಸಕರು