ಬೆ ಳ್ಳಂಬೆಳಗಿನ ಸಕ್ಕರೆಯ ಸವಿ ನಿದ್ದೆ ಸವಿಯುವುದನ್ನು ಬಿಟ್ಟು, ಹಾಸಿಗೆಯಿಂದ ಎದ್ದು, ಮಕ್ಕಳು ಮತ್ತಷ್ಟು ನಿದ್ದೆ ಸವಿಯಲೆಂದು, ಕನಸುಗಳ ಹೊದಿಕೆ ಮತ್ತಷ್ಟು ಸರಿಯಾಗಿ ಹೊದಿಸಿ, ಬೆಚ್ಚನೆ ಮಲಗಿಸಿದ ಜೀವವನು ನೆನೆಯುವದ ಮರೆಯುವುದಾದರೂ ಹೇಗೆ? ಬೆಳಗಾಗುವ ಮುಂಚೆ ಅಂಗಳದ ತುಂಬೆಲ್ಲ ನೀರ ತಳಿ ಹೊಡೆದು, ಬಣ್ಣ ಬಣ್ಣದ ಚಿತ್ತಾರದ ರಂಗೋಲಿಯ ಬಿಡಿಸಿ, ಹಿತ್ತಲಿನ ಗಿಡಗಳಿಗೆ ನೀರುಣಿಸಿ, ಕಸ ಗುಡಿಸಿ, ಒಲೆ ಹೊತ್ತಿಸಿ,ಏಳರ ಮುಂದೆ ಏಳುವ ಕೈಗಳಿಗೆ ಚಹ, ಕಾಫಿ ಕೊಡಲು ಅನುವಾಗಬೇಕು.. ತಿಂಡಿಗೆ ರೆಡಿ ಮಾಡಬೇಕು. ದಿನವೂ ಉಪ್ಪಿಟ್ಟು ಅವಲಕ್ಕಿ ಬೇಡವೆಂದು ರಚ್ಚೆ ಹಿಡಿಯುವ ಮಕ್ಕಳಿಗೆ ಇಡ್ಲಿ ದೋಸೆ ಪೂರಿ ಬಾಯಿ ಚಪ್ಪರಿಸುವಂತೆ ತಯಾರಿಸಬೇಕು. ದೈನಂದಿನ ರೊಟ್ಟಿಗೆ ಪಲ್ಲೆ ಜೋಡಿಸಬೇಕು ಬೆಳಗಿನಿಂದ ರಾತ್ರಿ ಹಾಸಿಗೆಗೆ ಹೋಗುವವರಿಗೆ ಗಾಣದೆತ್ತಿನಂತೆ ದುಡಿಯುವ ಅವ್ವನ ಬಗ್ಗೆ ಎನಿತು ಹೇಳಿದರೂ ಸಾಲದು.
ಅವ್ವನ ಕುರಿತು ಎರಡು ತೊದಲು ನುಡಿಗಳು . . . . . .
ದೇಹದ ಕಣ ಕಣದಿ ಉಸಿರಿಗೆ ಸಿರಿಯಾಗಿ, ನಮ್ಮುಸಿರಿಗೆ ಆಸರೆಯಾಗಿ, ಕಷ್ಟದಲ್ಲಿ ಎಲ್ಲರೂ ದೂರ ಸರಿದಾಗ ಬೆಂಬಲವಾಗಿ, ಬದುಕಿನ ಬವಣೆಗಳ ಕತ್ತಲೆಯನ್ನು ಸೀಳಿ ಇಬ್ಬಾಗಿಸಿ ಬೆಳಕು ಚೆಲ್ಲುವ ಜೀವ ಒಂದೇ ಒಂದು ಅದೇ ತಾಯಿ. ನಮ್ಮೊಂದಿಗೆ ಅನವರತ ನಿಲ್ಲುವ ನಮ್ಮ ಒಳಿತಿಗಾಗಿ ಸದಾ ಚಿಂತಿಸುವ ವಿಶಾಲ ಹೃದಯಿ. ಎಲ್ಲವನ್ನೂ ನಗುನಗುತ್ತ ಎದುರಿಸುವ ಜೀವಿ. ಬದುಕನ್ನು ಇದ್ದಂತೆ ಸ್ವೀಕರಿಸುವ ಮಕ್ಕಳ ಮುನ್ನೆಡೆಸುವ ಜೀವ. ಬದುಕಿಗಾಗಿ ಬದುಕು ಸವೆಸುವ ತ್ಯಾಗಮೂರ್ತಿ. ಅವಳೆದೆಯ ಪ್ರೀತಿಯ ಆಳಗಲಗಳ ನಾವೆಲ್ಲ ಎತ್ತ ಬಲ್ಲೆವು? ಆಕೆಯ ಪಾಲಿಗೆ ನಾವೇ ಚಿನ್ನ, ರನ್ನ, ಮುದ್ದು, ಸೋನು, ಬಂಗಾರ. ತನ್ನೊಡಲ ಸವೆಸಿ ಹಸಿದೊಡಲ ತುಂಬಿಸಿ ನಮ್ಮೊಡಲ ಬೆಳಸುವ ಅನ್ನಪೂರ್ಣೆ.
ಅಕ್ಕ, ಅಣ್ಣ ಬೆಳೆದದ್ದು ಇವಳ ಮಡಿಲಲ್ಲಿಯೇ. ತುಂಟ ತಮ್ಮ ತಂಗಿಯರು ನಕ್ಕು ನಲಿದಿದ್ದು ಅಮ್ಮನ ಅಕ್ಕರೆಯಲ್ಲೆ. ಮಕ್ಕಳ ಆಟ ನಗುವಿನಲ್ಲೇ ಆಕೆಯ ಪ್ರಪಂಚ. ಮಕ್ಕಳಿಗೆ ಯಾವುದೋ ಕಾರಣಕ್ಕೆ ಬೇಸರವಾದರೆ ಮುಖದಲ್ಲಿ ನೋವಿನ ಗೆರೆಗಳು ಮೂಡುವುದು ಖಂಡಿತ. ಮಗುವಿನ ಸುಂದರ ಮೊಗವನ್ನು ಕಣ್ಮಿಟಕಿಸದೇ ಕ್ಷಣಕಾಲ ನೋಡಿ ಮೃದು ಮನಸ್ಸಿನ ವ್ಯಾಕುಲತೆ ಸೂಕ್ಷ್ಮತೆಯನು ಸೂಕ್ಷ್ಮ ವಾಗಿ ಗಮನಿಸುತ್ತಾಳೆ. ಮುದ್ದು ಮಾತುಗಳಿಂದ ರಮಿಸಿ ಬಾಡಿದ ಮುಖದ ಕಾರಣ ತಿಳಿಯಲೆತ್ನಿಸುತ್ತಾಳೆ. ಏಕೆ ಮಂಕಾಗಿರುವೆ ಮಗನೆ/ಳೆ ಎಂದು ಮೌನವ ಭೇದಿಸಲೆತ್ನಿಸುವಳು. ಭುಜದ ಮೇಲೆ ಕೈಯಿಟ್ಟು ಆರ್ದ್ರತೆ ತುಂಬಿದ ಧ್ವನಿಯಲ್ಲಿ ಪ್ರೀತಿಯ ಮಾತಲ್ಲೆ ಮನ ಕರಗಿಸಿ ಹೆದರಬೇಡ ಮಗು ನಾನಿದ್ದೇನೆ ಎಂದು ಹೇಳುವಾಗ ಸ್ವರ ಗಂಟಲಲ್ಲೇ ಉಳಿದು ಹೋಗುತ್ತದೆ. ದನಿಯಿರದ ಭಾವದಲ್ಲಿಯೇ ಅಮ್ಮ ನಿನಗೆ ಋಣಿಯಾಗಿರುವೆ ಎನ್ನುತ್ತದೆ ಜೀವ. ಜೀವನದ ಪ್ರತಿ ನಡಿಗೆಯಲ್ಲೂ ಹೆಗಲಾಗುವ ಆಕೆಯ ಗುಣಕ್ಕೆ ಸಾಟಿಯಿಲ್ಲ.
ಆಕಸ್ಮಿಕವಾಗಿ ಘಟಿಸುವ ಅನಿರೀಕ್ಷಿತ ಸನ್ನಿವೇಶಗಳಿಗೆ ಮಗುವಿನ ಮನಸ್ಸನ್ನು ಮೃದವಾಗಿ ಹದಗೊಳಿಸುವಳು. ಕಾಲ ಕ್ರಮೇಣ ಎಲ್ಲ ಸರಿ ಹೋಗುತ್ತದೆ ಮೊದಲು ನಿನ್ನ ಮನಸ್ಸನ್ನು ಸರಿ ಮಾಡಿಕೊ ಕಣ್ಣು ಒರೆಸಿಕೊ ಎಂದು ತಿಳಿ ಹೇಳುವಳು. ಜೀವನದ ಎಷ್ಟೋ ಕಠಿಣ ಪರಿಸ್ಥಿತಿಗಳು ಆತಂಕ ಹೆಚ್ಚಿಸಿದರೂ ಆಕೆಯ ಸಹನೆ ಕೆಡುವುದಿಲ್ಲ. ಮೌನವಾಗಿ ಶಿಲೆಯಂತೆ ಕುಳಿತುಕೊಳ್ಳುವಂತೆ ಮಾಡುವುದಿಲ್ಲ. ಸದಾ ಸಕಾರಾತ್ಮಕ ಮಾತುಗಳನ್ನಾಡುತ್ತ ಬದುಕಿನ ಪ್ರತಿ ಪ್ರೀತಿ ತುಂಬುತ್ತಾಳೆ. ಕಷ್ಟ ಕಾರ್ಪಣ್ಯಗಳನ್ನು ಮುಚ್ಚಿಟ್ಟು ಮಕ್ಕಳ ಆಸೆಗಳಿಗೆ ನಿರಾಸೆ ಮೂಡಿಸದೆ, ಬದಲಾವಣೆಗೆ ಮಗುವಿನ ಮನದ ಭೂಮಿಯನ್ನು ಹದಗೊಳಿಸುತ್ತಾಳೆ. ಆಕೆ ಬೆವರ ಹನಿಯ ಹಿರಿಮೆಯಿದ್ದಂತೆ. ಮೌನ ಮಲ್ಲಿಗೆಯ ಹಾಡಿದ್ದಂತೆ
ಅವಳಿಗೇನಾದರೂ ಹೆಚ್ಚು ಕಮ್ಮಿಯಾದರೆ ಮಕ್ಕಳಿಗೆ ಕಣ್ಣು ಮಂಜಾಗಿ ಕತ್ತಲು ಆವರಿಸದಂತಾಗುವುದು ಸಹಜ. ಮಾತನಾಡಲು ಸಾಧ್ಯವಾಗದೇ ಗಂಟಲು ಉಬ್ಬಿ ಬರುವುದು. ಬಿಕ್ಕಳಿಸುತ್ತ ಸಣ್ಣದಾಗಿ ಅಳುವ ಧ್ವನಿ ಆ ನೀರವತೆಯಲ್ಲಿ ಸ್ಪಷ್ಟವಾಗಿ ಕೇಳಿ, ಅಳಬೇಡ ಕಂದ ನನಗೇನೂ ಆಗಲ್ಲ ಎಂದು ಮೆಲುದನಿಯಲ್ಲಿ ಪುಟ್ಟ ಮಗುವನ್ನು ಸಂತೈಸಿದಂತೆ ಸಂತೈಸುವಳು. ರೆಕ್ಕೆ ಬಲಿತ ಹಕ್ಕಿ (ಮಗ) ದುಡಿಮೆಯ ನೆಪದಲ್ಲಿ ಬೇರೆ ಊರಿಗೆ ಹಾರಿ ಹೋದಾಗ ಕಾಯುವ ಆಕೆಯ ಪರಿಯನ್ನು ನೋಡಿಯೇ ಅನುಭವಿಸಬೇಕು. ಏನೇ ಹೇಳಿ ಆಕೆಯ ಆಪ್ತತೆಯ ಚೆಲುವಿಗೆ ಮನವರಳಿಸುವ ಗೆಲುವಿಗೆ ಮರಳಾಗದೇ ಇರಲು ಆಗುವುದೇ ಇಲ್ಲ.
ಆಕೆಯಿಲ್ಲದೇ ಈ ಜೀವ ಈ ಜಗವ ಕಾಣುತ್ತಿರಲಿಲ್ಲ. ಜೀವ ಕೊಟ್ಟ ಜೀವವನ್ನು ಹಿಂಡುವ ಕೆಲಸಕ್ಕೆ ಕೆಲ ಮಕ್ಕಳು ಮುಂದಾಗಿದ್ದಾರೆ. ಅಮ್ಮನನ್ನು ತಮ್ಮಿಂದ ದೂರ ಮಾಡಿ ವೃದ್ಧಾಶ್ರಮದ ದಾರಿ ತೋರುತ್ತಿದ್ದಾರೆ. ಒಬ್ಬ ತಾಯಿ ಹತ್ತಾರು ಮಕ್ಕಳನ್ನು ಸಾಕಿ ಸಲುಹಬಲ್ಲಳು. ಆದರೆ ಹತ್ತಾರು ಮಕ್ಕಳು ಸೇರಿ ಒಬ್ಬ ತಾಯಿಯನ್ನು ನೋಡಿಕೊಳ್ಳಲಾರರು ಎಂಬುದು ನಿಜಕ್ಕೂ ಕಳವಳದ ಸಂಗತಿ. ಜೀವ ತುಂಬಬೇಕಿದೆ ಜೀವ ನೀಡಿದ ಜೀವಕೆ. ಜೀವ ನೀಡಿದ ಜೀವದ ಋಣ ತೀರಿಸುವುದು ಸುಲಭವಿಲ್ಲ. ಆಕೆಯ ವಯಸ್ಸಿಗೆ ವಸಂತನ ಬಣ್ಣ ಹಚ್ಚಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದರೆ ನಾವೇ ಧನ್ಯರು.
=======================================
ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨