ಹಾಯ್ ಬಾಸ್ ಹ್ಯಾಗಿದೀರಿ?? ಐ ಹೋಪ್ ಆಲ್ ಈಜ್ ವೆಲ್…
ಅರೇ, ಇವತ್ತು ನಿಮ್ ಬರ್ತಡೆ ಅಲ್ವಾ?? ಮರೆತೆ ಬಿಟ್ಟಿದ್ದೆ ಅನ್ನಿಸಿದ ತಕ್ಷಣ ನೀವಿಲ್ಲದ ನಾನು ಅದೆಷ್ಟು ಅಬ್ಬೇಪಾರಿಯಾಗಿ ಬದುಕಿನ ಅಜಾಗರೂಕತೆಗೆ ಜಾರಿದ್ದೇನೆ ಅನ್ನಿಸಿದ್ದು ಇವತ್ತಷ್ಟೇ..
ನನ್ನ ಬದುಕಿನ ಮೂವತ್ತೊಂಭತ್ತು ಚಿಲ್ಲರೆ ವರ್ಷಗಳಲ್ಲಿ ನನಗೆ ತಿಳಿವಳಿಕೆ ಅನ್ನುವದು ಆರಂಭ ಆದಾಗಿನಿಂದ ಇಲ್ಲಿಯವರೆಗೆ ಮೆಚ್ಚಿಕೊಂಡ ಮತ್ತು ದುಡ್ಡು ಕಾಸು ಅಂತ ಕೈಯ್ಯಲ್ಲಿ ಇದ್ದಾಗೆಲ್ಲ ಓದಿಕೊಂಡ ಕನ್ನಡದ ಲೇಖಕರಲ್ಲಿ ಓದುಗರನ್ನೇ ಪ್ರೀತಿಯಿಂದ ಓದುಗ ದೊರೆಯೇ ಅಂತ ಗೌರವಿಸಿದ್ದು ನೀವಷ್ಟೇ…
ನಿಮ್ಮ ಬದುಕಿನ ವೈಯುಕ್ತಿಕ ಅನ್ನಿಸಿದ ವಿಷಯಗಳನ್ನೇ ಅತಿ ಹೆಚ್ಚು ಚರ್ಚೆ ಮಾಡಿದ ಈ ಸಮಾಜದಲ್ಲಿ ಮತ್ತು ನಿಮ್ಮನ್ನು ಯಾವುದ್ಯಾವದೋ ನೆಪ ಇಟ್ಟುಕೊಂಡು ಹೀಯಾಳಿಸಿದವರ ನಡುವೆಯೇ ನಿಮ್ಮನ್ನು ಅಗಾಧವಾಗಿ ಮೆಚ್ಚಿಕೊಂಡ ಪರಮ ಪಾಪಿಗಳಲ್ಲಿ ನಾನೂ ಕೂಡ ಒಬ್ಬ.
ನನ್ನ ಬದುಕಿನಲ್ಲಿ ಕಂಡು,ಉಂಡ ನೋವು,ಅವಮಾನಗಳ ಜೊತೆಗೆ ಆದ ಕೆಲವಷ್ಟು ಸನ್ಮಾನಗಳ ಬಗ್ಗೆ ಇಂದಿಗೂ ನಿಮ್ಮದೇ ಶೈಲಿಯಲ್ಲಿ ಬರೆಯುವ ನನಗೆ ನಿಮ್ಮ ಹಾಯ್ ಬೆಂಗಳೂರು, ಓ ಮನಸೇ ಸೇರಿದಂತೆ ಖಾಸ್ ಬಾತ್, ಬಾಟಮ್ ಐಟಮ್, ನೀನಾ ಪಾಕಿಸ್ತಾನ, ಹೇಳಿ ಹೋಗು ಕಾರಣ, ಹಿಮಾಗ್ನಿ , ರೇಶಿಮೆ ರುಮಾಲು, ಹಿಮಾಲಯನ್ ಬ್ಲಂಡರ್, ಪಾಪಿಗಳ ಲೋಕದಲ್ಲಿ, ಡಯಾನಾ, ಮಾಟಗಾತಿ, ಕಂಪೆನಿ ಆಪ್ ವಿಮೆನ್ ಹೀಗೆ ಹತ್ತಾರು ಪುಸ್ತಕಗಳನ್ನು ಓದಿಕೊಂಡ ಪರಿಣಾಮವಾಗಿ ನೀವು ನಿಮ್ಮ ಬರವಣಿಗೆಯಲ್ಲಿ ಬಳಸುತ್ತಿದ್ದ ಶಬ್ದಗಳು ಅನಾಮತ್ತಾಗಿ ಈಗಲೂ ನನ್ನ ಬರವಣಿಗೆಯಲ್ಲಿ ನುಸುಳಿಕೊಂಡು ಬಿಡುತ್ತವೆ.
ಬದುಕಿದ್ದರೆ ಪತ್ರಕರ್ತನಾಗಿ ಬದುಕಬೇಕು ಅಂತ ನಿಮ್ಮನ್ನು ನೋಡಿಯೇ ಮಾಧ್ಯಮ ಲೋಕದತ್ತ ಹೆಜ್ಜೆ ಹಾಕಿದೆನಾದರೂ ನನ್ನದೇ ಆದ ಒಂದಷ್ಟು ತಿಕ್ಕಲುತನಗಳಿಂದಾಗಿ ನಿಮ್ಮ ಪಾದದ ಧೂಳಿನಷ್ಟೂ ಸಾಧಿಸುವದು ನನ್ನಿಂದ ಆಗಲೇ ಇಲ್ಲ.
ರವಿ ಬೆಳಗೆರೆ ಈ ಸಮಾಜಕ್ಕೆ ಏನು ಕೊಟ್ಟರು?? ಅಂತ ಯಾರಾದರೂ ನನ್ನನ್ನ ಕೇಳಿದರೆ ನೀವು ಇದ್ದ ಆ ಸಮಯದಲ್ಲಿ ಅಸಂಖ್ಯ ಓದುಗರನ್ನ ಮತ್ತೆ ಕನ್ನಡದತ್ತ ಹೊರಳುವಂತೆ ಮಾಡಿದ್ದು, ಓದಿನತ್ತ ಒಲಿಯುವಂತೆ ಮಾಡಿದ್ದರ ಜೊತೆಗೆ ಖುಷ್ವಂತ್ ಸಿಂಗ್, ಇಂದಿರೆಯ ಮಗ ಸಂಜಯ, ಡಯಾನಾ, ಪಾಪಿಗಳ ಲೋಕದಲ್ಲಿ, ಬಾಬಾ ಬೆಡ್ ರೂಮ್ ಹತ್ಯಾಕಾಂಡ, ಮೇಜರ್ ಸಂದೀಪ ಹತ್ಯೆ ಸೇರಿದಂತೆ ಹಲವು ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಕೆಲವರ ವಿಲಕ್ಷಣ ಗುಣಗಳನ್ನ ಯಾವ ಮುಲಾಜೂ ಇಲ್ಲದೆ ಬರೆದು ನಮಗೆ ಪರಿಚಯಿಸುವದರ ಜೊತೆಗೆ ಆ ಕಾಲಕ್ಕೆ ಸೋತು ಸುಣ್ಣವಾಗಿದ್ದ ನನ್ನಂತಹ ಎಷ್ಟೋ ಹುಡುಗ-ಹುಡುಗಿಯರಿಗೆ ಬೆಂಗಳೂರಿನ ಕಚೇರಿಯಲ್ಲೋ ದಾಂಡೇಲಿಯ ಕಾಡಿನಲ್ಲೋ ಕುಳಿತ ಒಬ್ಬ ಅಪರಿಚಿತ ಆತ್ಮಬಂಧುವಾಗಿ ಅಕ್ಷರಗಳ ಮೂಲಕವೇ ಸಮಾಧಾನಿಸಿ, ಸಂತೈಸಿದ್ದ ಅಕ್ಷರ ಸಂತ ಅಂತ ಈಗಲೂ ಸ್ಪಷ್ಟವಾಗಿ ಹೇಳ್ತಿನಿ.
ಹರೆಯಕ್ಕೆ ಬಂದ ಯುವಕ ಯುವತಿಯರಿಂದ ಹಿಡಿದು ಈಗಷ್ಟೇ ಮದುವೆಯಾದ ದಂಪತಿಗಳ ತನಕ ಅವಮಾನಗಳನ್ನು ಅವಡುಗಚ್ಚಿ ಸಹಿಸುವದನ್ನ, ಗೆಲುವಿನತ್ತ ಆನೆಯಂತೆ ನುಗ್ಗುವದನ್ನ ಮತ್ತು ಯಾವುದೋ ಒಂದು ಕೆಟ್ಟ ಘಳಿಗೆಯಲ್ಲಿ ಹತಾಶರಾಗಿ ಉಸಿರು ಚೆಲ್ಲದಂತೆ ಮತ್ತು ಫಾಸ್ಟ್ ಈಜ್ ಫಾಸ್ಟ್ ಡಿಯರ್ ಲೆಟ್ಸ್ ಚೀಯರ್ಸ ಅಂತ ಧೈರ್ಯವಾಗಿ ಬದುಕುತ್ತ, ಒಹ್ ! ಬದುಕೇ ಐ ಲವ್ ಯೂ ಅಂತ ಉತ್ಸುಕತೆಯಿಂದ ಇನ್ನಷ್ಟು ದಿನ ಉಳಿಯುವಂತೆ ಮಾಡಿದ್ದು ಒನ್ ಯಾಂಡ್ ಓನ್ಲೀ ನೀವಷ್ಟೇ..
ಇನ್ನುಳಿದಂತೆ ನಿಮ್ಮ ಪ್ರಾರ್ಥನಾ ಶಾಲೆ, ಎಂದೂ ಮರೆಯದ ಹಾಡು ಕಾರ್ಯಕ್ರಮ, ಕಾಫಿ ವಿಥ್ ಬೆಳಗೆರೆ, ಬೆಳ್ ಬೆಳಿಗ್ಗೆ ಬೆಳಗೆರೆ ಸೇರಿದಂತೆ ನಿಮ್ಮ ಬಗ್ಗೆ ನನಗೆ ತಿಳಿದಿರುವ ಹಲವು ವಿಷಯಗಳು ಸದಾಕಾಲ ನನ್ನ ನೆನಪಿನಲ್ಲಿ ಅಚ್ಚಳಿಯದೇ ಉಳಿಯುವಂತಹವು.
ಚಲಿಸುತ್ತಿದ್ದ ಕಾರಿನಿಂದ ವಿಸ್ಕಿಯ ಬಾಟಲ್ ಅನ್ನ ರಸ್ತೆಯಲ್ಲೇ ಎಸೆದುಬಿಟ್ಟೆ ಅಂತ ನಿಮ್ಮ ಪತ್ರಿಕೆಯಲ್ಲಿ ನೀವು ಬರೆದ ಬಳಿಕವೂ ಏ, ಅವನೊಬ್ಬ ದೊಡ್ಡ ಕುಡುಕ ಕಣ್ರೀ ಯಾವತ್ತೂ ಎಣ್ಣೆ ಮತ್ತಲ್ಲೇ ಇರ್ತಾನೆ, ಅದ ಏನಾದರೂ ಒಂದು ಗೀಚ್ತಾನೆ ಇರ್ತಾನೆ… ಅಂದವರಿಗೆ ನಿಮ್ಮ ಬರವಣಿಗೆಯ ಮೂಲಕವೇ ನೀವು ಚಾಟಿ ಬೀಸಿದ್ದು ಈಗ ಇತಿಹಾಸ ಅಷ್ಟೇ..
ಸದ್ಯದ ಮಟ್ಟಿಗೆ ನೀವು ಬದುಕಿದ್ದರೆ ಅರವತ್ತಾರರ ಚಿರಯುವಕನಾಗಿ ನಿಮ್ಮ ತಣ್ಣಗಿನ ಧ್ವನಿಯಲ್ಲಿ ಸಭ್ಯತೆಯ ಮುಖವಾಡ ಹೊತ್ತವರ ಹಲವರ ಬಗ್ಗೆ ಗದರುತ್ತ, ನಿಮ್ಮದೇ ಆದ ತೀಕ್ಷ್ಣವಾದ ಅಕ್ಷರಗಳಿಂದ ಆಗಾಗ ತಿವಿಯುತ್ತ, ಸಾಚಾತನದ ಮುಖವಾಡ ಹೊತ್ತ ಒಂದಷ್ಟು ರಾಜಕಾರಣಿಗಳ ಬೆವರಿಳಿಸುತ್ತ, ಇರುತ್ತಿದ್ದ ನೀವು ಈಗ ಇಲ್ಲ ಅನ್ನುವದನ್ನು ನನ್ನಂಥವರಿಗೆ ಅರಗಿಸಿಕೊಳ್ಳುವದು ಖಂಡಿತ ಸಾಧ್ಯವಿಲ್ಲ.
ನಾವು ನೋಡಿರದ ಅಥವಾ ನೋಡಲಾಗದ ಪಾಕಿಸ್ತಾನ, ಉಜ್ಬೇಕಿಸ್ತಾನ, ಉಗಾಂಡಾ ಸೇರಿದಂತೆ ಹಲವು ದೇಶಗಳಲ್ಲಿ ಮನುಷ್ಯತ್ವ ಸಾಯುತ್ತಿರುವಾಗಲೇಮಾನವೀಯ ಕಳ-ಕಳಿಯಿಂದ ಅಲ್ಲೆಲ್ಲ ತಿರುಗಾಡಿ, ಕಾರ್ಗಿಲ್ ನಲ್ಲಿ ಹದಿನೇಳು ದಿನ ಅಂತ ಬರೆದಿದ್ದರಿಂದ ಹಿಡಿದು ಎಲ್ಲವನ್ನೂ ನಮ್ಮ ಕಣ್ಣ ಮುಂದೆಯೇ ಚಿತ್ರಿಸಿದಂತೆ ಬರೆಯುತ್ತಿದ್ದ ಈ ಕಾಲದ ದ್ರೋಣಾಚಾರ್ಯರಾದ ನೀವು ಹುಟ್ಟು ಬ್ರಾಹ್ಮಣ ನಾದರೂ ಕೂಡ ಯಾರನ್ನೂ ಕಡೆಗಣಿಸದೇ ಬಡವ-ಶ್ರೀಮಂತ ಅನ್ನುವ ಭೇದ-ಭಾವ ತೋರದೆ ಅದೆಷ್ಟು ಜನ ಏಕಲವ್ಯರನ್ನ ನನ್ನಂತೆಯೇ ತೆರೆಯ ಮರೆಯಲ್ಲಿ ಸೃಷ್ಟಿಸಿ ನಿಮ್ಮ ಗುರುಕಾಣಿಕೆಯನ್ನೇ ಪಡೆಯದೇ ಉಳಿದಿದ್ದಿರೋ ಬಲ್ಲವರಾರು??
ಅಕ್ಯೂ ಪಂಕ್ಚರ್ ಮಾಡಿಸಲು ಹೋಗಿ ಮತ್ತು ದೇಹದ ತೂಕ ಇಳಿಸಲು ಹೋಗಿ ಆದ ಒಂದು ಅವಘಡದಿಂದ ದಿನಗಳೆದಂತೆಲ್ಲ ನಿಮ್ಮ ಆರೋಗ್ಯ ಕ್ಷೀಣಿಸುತ್ತ ಹೋಗಿ ಕೊನೆಯ ಘಳಿಗೆಯಲ್ಲಿ ಕುಡಿತ ಬಿಟ್ಟರೂ ಸಿಗರೇಟು ಬಿಡಲಾಗದೆ ಪರದಾಡಿದ ನಿಮ್ಮ ಮೇಲೆ ಬೆರಳು ಮಾಡಿದ ಮತ್ತು ಆರೋಪ ಮಾಡಿದ ಎಷ್ಟೋ ಜನರ ಬದುಕಿನಲ್ಲಿ ಒಂದು ಕಾಲದಲ್ಲಿ ನೀವಷ್ಟೇ ಬೆಳಕು ಚೆಲ್ಲಿದ್ದೀರಿ ಅನ್ನುವದು ಯಾರಿಗೂ ತಿಳಿಯದ ಗುಪ್ತಗಾಮಿನಿ ಏನಲ್ಲ ಅನ್ನೋದು ನಿಮ್ಮ ಓದುಗರಿಗೆ ಖಂಡಿತ ಗೊತ್ತು.
ಅಂದಹಾಗೆ
ಆನೆ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಅಂತ ನಿಮ್ಮ ಮೇಲೆ ಆರೋಪಗಳ ಸುರಿಮಳೆಯನ್ನ ಮಾಡಿದವರಿಗೆ ನನ್ನದೊಂದು ಸಂತಾಪವನ್ನ ಸೂಚಿಸುತ್ತ ಬರೆದರೆ ಬೆಳಗೆರೆಯಂತೆ ಬರೆಯಬೇಕು ಮತ್ತು ಬದುಕಿದರೆ ಬೆಳಗೆರೆಯಂತೆಯೇ ತೆರೆದ ಪುಸ್ತಕವಾಗಿ ಬದುಕಬೇಕು ಅನ್ನುವ ಅಭಿಪ್ರಾಯದೊಂದಿಗೆ ನಿಮ್ಮ ಅನುಪಸ್ಥಿತಿಯಲ್ಲಿ ನಿನ್ನೆಯಷ್ಟೇ ಆಚರಿಸಿದ ನಿಮ್ಮ ಹುಟ್ಟುಹಬ್ಬದ ಶುಭಾಶಯಗಳನ್ನ ನಿಮಗೆ ತಿಳಿಸುತ್ತ ಇಂದಿಗೂ ನಿಮ್ಮ ಅಕ್ಷರಗಳ ಮೂಲಕ ಈ ಕ್ಷಣಕ್ಕೂ ನಮ್ಮ ನಡುವೆಯೇ ಬದುಕಿರುವ ಅಕ್ಷರ ರಾಕ್ಷಸನಿಗೆ ಕೋಟಿ ಕೋಟಿ ನಮಸ್ಕಾರಗಳು…
ದೀಪಕ್ ಶಿಂಧೆ
9483766018