spot_img
spot_img

ಹೊಸಪುಸ್ತಕ ಓದು: ಸಾಹಿತ್ಯ ಚರಿತ್ರೆಯಲ್ಲೊಂದು ವಿನೂತನ ಪ್ರಯತ್ನ

Must Read

- Advertisement -

ಪುಸ್ತಕದ ಹೆಸರು: ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆ

ಲೇಖಕರು: ಡಾ. ಡಿ. ಎನ್. ಯೋಗೀಶ್ವರಪ್ಪ

ಪ್ರಕಾಶಕರು: ಪ್ರಿಯದರ್ಶಿನಿ ಪ್ರಕಾಶನ, ಬೆಂಗಳೂರು, ೨೦೨೩

- Advertisement -

ಪುಟ: ೬೩೨ ಬೆಲೆ : ರೂ. ೬೦೦

ಲೇಖಕರ ಸಂಪರ್ಕವಾಣಿ: ೯೪೪೮೬ ೮೦೯೨೦


ಡಾ. ಡಿ. ಎನ್. ಯೋಗೀಶ್ವರಪ್ಪ ಸಾಹಿತ್ಯ ಸಂಶೋಧನಾ ಕ್ಷೇತ್ರದಲ್ಲಿ ಏನೇ ಮಾಡಿದರೂ ಹೊಸದನ್ನೇ ಮಾಡುವವರು. ಈವರೆಗೆ ಗುರುತಿಸಲ್ಪಡದ, ನೇಪಥ್ಯಕ್ಕೆ ಸರಿದ, ಉಪೇಕ್ಷಿತ ನೆಲೆಗಳ ಮೇಲೆ ಅಧ್ಯಯನ ಮಾಡಿ, ಹೊಸದೃಷ್ಟಿಕೋನದಿಂದ ವಿಶ್ಲೇಷಿಸಿ, ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸುತ್ತ ಬಂದಿದ್ದಾರೆ. ಈ ಹಿಂದೆ ‘ಹಾಗಲವಾಡಿ ನಾಯಕರು’ ಎಂಬ ವಿಷಯ ಕುರಿತು ಮೊಟ್ಟ ಮೊದಲ ಬಾರಿಗೆ ಸಂಶೋಧನೆ ಮಾಡಿ, ಪಾಳೇಯಗಾರರ ಅಧ್ಯಯನಕ್ಕೆ ಹೊಸ ಬಾಗಿಲೊಂದನ್ನು ತೆರೆದು ತೋರಿಸಿದ್ದರು. ಇವರ ಸಂಶೋಧನೆಯ ಮಾದರಿಯನ್ನು ಇಟ್ಟುಕೊಂಡು ಅನೇಕರು ಕರ್ನಾಟಕದ ಪಾಳೇಗಾರರ ಮೇಲೆ ಸಂಶೋಧನೆಯನ್ನು ಮಾಡಿದ್ದು ಗಮನಿಸುವ ಅಂಶ. ಶಾಸನ-ಪ್ರಾಚೀನ ಕಾವ್ಯ, ಸಂಸ್ಥಾನಗಳ ಮೇಲೆ ಅಧಿಕೃತ ಸಂಶೋಧನೆ ಮಾಡಿ, ಅವುಗಳ ಬಗ್ಗೆ ನಿಖರವಾಗಿ ಹೇಳುವ ಅಪರೂಪದ ಸಂಶೋಧಕರು ಡಾ. ಯೋಗೀಶ್ವರಪ್ಪ ಅವರು. ಈಗ ಮತ್ತೊಂದು ತಮ್ಮ ಹೊಸ ಕೃತಿಯ ಮೂಲಕ ಕನ್ನಡ ಸಾಹಿತ್ಯ ಅಧ್ಯಯನಕ್ಕೆ ಹೊಸ ಮಾರ್ಗ ತೋರಿದ್ದಾರೆ. ‘ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆ’ ಕೃತಿಯ ಮೂಲಕ ಒಂದು ಜಿಲ್ಲೆಯ ಪ್ರಾಚೀನ-ಆರ್ವಾಚೀನ ಸಾಹಿತ್ಯ ಪರಂಪರೆಯನ್ನು ತಲಸ್ಪರ್ಶಿಯಾಗಿ ಶೋಧಿಸಿ ಕೊಟ್ಟಿದ್ದಾರೆ. ಕರ್ನಾಟಕದ ಇತರ ಜಿಲ್ಲೆಗಳ ಸಾಹಿತ್ಯ ಚರಿತ್ರೆಗಳು ಇದೇ ಮಾದರಿಯಲ್ಲಿ ಬರಬೇಕೆಂಬ ಸದಾಶಯಕ್ಕೆ ಮುನ್ನುಡಿ ಹಾಡಿದ್ದಾರೆ. 

- Advertisement -

‘ಸಾಹಿತ್ಯ’ ಮತ್ತು ‘ಚರಿತ್ರೆ’ ಎಂಬ ಪ್ರತ್ಯೇಕ ಜ್ಞಾನಶಿಸ್ತುಗಳನ್ನು ಒಂದೇ ಪರಿಪ್ರೇಕ್ಷ್ಯದಲ್ಲಿ ತೂಗಿ ನೋಡಿದಾಗ ‘ಸಾಹಿತ್ಯ ಚರಿತ್ರೆ’ ಎಂಬ ನವನೀತ ಹುಟ್ಟುತ್ತದೆ. ಸಾಹಿತ್ಯ ಚರಿತ್ರೆಯ ಪರಿಕಲ್ಪನೆ ಬ್ರಿಟಿಷರ ಆಡಳಿತ ಕಾಲದಲ್ಲಿಯೇ ಕನ್ನಡದಲ್ಲಿ ಒಡಮೂಡಿತು. ಕಿಟೆಲ್ ಅವರು ಕನ್ನಡ ಸಾಹಿತ್ಯವನ್ನು ಧರ್ಮಾಧಾರಿತವಾಗಿ ವಿಭಜಿಸಿ ಅಧ್ಯಯನ ಮಾಡಬಹುದೆಂದು ದಾರಿ ತೋರಿದರು. ಆರ್. ನರಸಿಂಹಾಚಾರ್ಯರು ಕವಿ ಚರಿತೆಯ ಮೂರು ಸಂಪುಟಗಳನ್ನು ಪ್ರಕಟಿಸುವ ಮೂಲಕ ಈ ಸಾಹಿತ್ಯ ಚರಿತ್ರೆಗೊಂದು ರೂಪುರೇಷೆ ಒದಗಿಸಿದರು. ತದನಂತರ ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯಗಳು ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳನ್ನು ಪ್ರಕಟಿಸಿದವು. ಏಕವ್ಯಕ್ತಿ ನೆಲೆಯಲ್ಲಿ ತ.ಸು.ಶಾಮರಾಯ, ಮರಿಯಪ್ಪ ಭಟ್ಟ, ರಂ. ಶ್ರೀ. ಮುಗಳಿ ಮೊದಲಾದವರು ಕನ್ನಡ ಸಾಹಿತ್ಯ ಚರಿತ್ರೆಗಳನ್ನು ಬರೆದರು. ಡಾ. ಎಸ್. ವಿದ್ಯಾಶಂಕರ ಅವರು ಏಕಾಂಗ ವೀರರಾಗಿ ‘ವೀರಶೈವ ಸಾಹಿತ್ಯ ಚರಿತ್ರೆ’ಯ ಆರು ಸಂಪುಟಗಳನ್ನು ಬರೆದು ಪ್ರಕಟಿಸಿದ್ದು ಸಾಹಸದ ಕೆಲಸವೆಂದೇ ಹೇಳಬೇಕು. ಧರ್ಮಾನುಗುಣವಾಗಿ, ಕಾಲಾನುಕ್ರಮವಾಗಿ, ವಿಷಯಾಧಾರಿತವಾಗಿ ಮೂರು ಬಗೆಯ ಸಾಹಿತ್ಯ ಚರಿತ್ರೆಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಈ ಎಲ್ಲ ಪ್ರಯತ್ನಗಳಿಗೆ ಭಿನ್ನವಾಗಿ ಡಾ. ಯೋಗೀಶ್ವರಪ್ಪ ಅವರು ‘ತುಮಕೂರು ಜಿಲ್ಲೆ ಸಾಹಿತ್ಯ ಚರಿತ್ರೆ’ ಬೃಹತ್ ಸಂಪುಟವನ್ನು ರಚಿಸುವ ಮೂಲಕ ಆಯಾ ಜಿಲ್ಲೆಗಳ ಸಾಹಿತ್ಯ ಚರಿತ್ರೆಗಳ ಪ್ರಕಟಣೆಗೆ ನಾಂದಿ ಹಾಡಿದ್ದಾರೆ.

ಪ್ರಸ್ತುತ ಸಂಪುಟದಲ್ಲಿ ಒಟ್ಟು ನಾಲ್ಕು ಅಧ್ಯಾಯಗಳಿವೆ. ಮೊದಲ ಅಧ್ಯಾಯದಲ್ಲಿ ‘ಸಾಹಿತ್ಯ ಪರಂಪರೆ’ ಕುರಿತು ವಿವರಿಸಿದ್ದಾರೆ, ಎರಡನೆಯ ಅಧ್ಯಾಯದಲ್ಲಿ ಜಿಲ್ಲೆಯ ಒಟ್ಟು ಗ್ರಂಥ ಸಾಹಿತ್ಯವನ್ನು ಸಮೀಕ್ಷೆ ಮಾಡಿದ್ದಾರೆ. ಮೂರನೆಯ ಅಧ್ಯಾಯದಲ್ಲಿ ಸಾಹಿತ್ಯದ ವೈಶಿಷ್ಟ್ಯ ಕುರಿತು ಬರೆದಿದ್ದಾರೆ. ನಾಲ್ಕನೆಯ ಅಧ್ಯಾಯದಲ್ಲಿ ಸಮಾರೋಪ, ತಮ್ಮ ಚರಿತ್ರೆಯ ಒಟ್ಟು ನೋಟವನ್ನು ಕಟ್ಟಿಕೊಟ್ಟಿದ್ದಾರೆ. ತುಮಕೂರು ಜಿಲ್ಲೆ ಹತ್ತು ತಾಲೂಕುಗಳನ್ನು ಒಳಗೊಂಡಿದೆ. ಗುಬ್ಬಿ, ತುಮಕೂರು, ತಿಪಟೂರು, ಕೊರಟಗೆರೆ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಸಿರಾ, ಕುಣಿಗಲ್, ತುರುವೇಕೆರೆ ಮತ್ತು ಪಾವಗಡ ಈ ಹತ್ತು ತಾಲೂಕುಗಳಲ್ಲಿ ಜನಿಸಿರುವ ಕವಿ-ಸಾಹಿತಿಗಳ ಸಮಗ್ರವಾದ ವಿವರಗಳನ್ನು, ಅವರ ಕೃತಿಗಳ ಸೋದಾಹರಣ ವಿಮರ್ಶೆಯನ್ನು ಮಾಡಿದ್ದಾರೆ. 

“ನಾನು ಈ ಕೃತಿಯನ್ನು ವಸಾಹತು ಪೂರ್ವ (೧೨ನೇ ಶತಮಾನದಿಂದ ೧೮೦೦ರವರೆಗೆ) ವಸಾಹತೋತ್ತರ (ಕ್ರಿ.ಶ. ೧೮೦೦ರಿಂದ ೧೯೪೭) ಕಾಲವೆಂದು ವಿಂಗಡಿಸಿ ಅಧ್ಯಯನ ಮಾಡಿದ್ದೇನೆ….ಈ ಕೃತಿಯನ್ನು ನಾನು ಕ್ರಿ.ಶ. ೧೯೪೭ಕ್ಕಿಂತ ಮುನ್ನ ಜನಿಸಿದವರನ್ನು ಮಾತ್ರ ಗಣನೆಗೆ ತೆಗೆದುಕೊಂಡು ರಚಿಸಿದ್ದೇನೆ. ಇದರಲ್ಲಿ ೧೯೦೦ರ ನಂತರ ಜನಿಸಿದವರು ಇಂದಿಗೂ ನಮ್ಮ ಮಧ್ಯದಲ್ಲಿದ್ದು ಕೃತಿ ರಚನೆ ಮಾಡುತ್ತಿರುವುದನ್ನು ಗಮನಿಸಬಹುದು” ಎಂದು ತಮ್ಮ ಕೃತಿ ರಚನೆಯ ಕಾಲಮಿತಿಯನ್ನು ಯೋಗೀಶ್ವರಪ್ಪ ಅವರು ಸ್ಪಷ್ಟವಾಗಿ ದಾಖಲಿಸಿದ್ದಾರೆ.

 ಕಾಲಮಾನದ ದೃಷ್ಟಿಯಿಂದ ಗಮನಿಸುವುದಾದರೆ ೧೨ನೇ ಶತಮಾನದಿಂದ ೧೮೦೦ ರವರೆಗೆ ಕೇವಲ ೪೬ ಕವಿಗಳು ಈ ಜಿಲ್ಲೆಯಲ್ಲಿ ಜನಿಸಿದವರಾಗಿದ್ದಾರೆ. ೧೮೦೦ ರಿಂದ ೧೯೪೭ರ ಕಾಲಾವಧಿಯಲ್ಲಿ ೧೦೯ಜನ ಲೇಖಕರ ಸಾಧನೆಯ ವಿವರಗಳನ್ನು ಇಲ್ಲಿ ದಾಖಲಿಸಲಾಗಿದೆ.  ಒಟ್ಟು ೧೫೫ ಜನ ಕವಿಗಳ ಸಮಗ್ರ ವಿವರ ಇಲ್ಲಿ ದೊರೆಯುತ್ತದೆ. ವಿಶೇಷವೆಂದರೆ ಕವಿಗಳ ವೈಯಕ್ತಿಕ ಜೀವನದ ಬಗೆಗೆ ಬಹಳಷ್ಟು ವಿವರಗಳನ್ನು ನೀಡದೆ, ಮುಖ್ಯವಾದುದನ್ನು ಮಾತ್ರ ಹೇಳಿ, ಆಯಾ ಕವಿ-ಸಾಹಿತಿಗಳ ಸಾಹಿತ್ಯದ ಎತ್ತರ ಬಿತ್ತರಗಳನ್ನು ಅಳೆದು ತೂಗಿ ಸಂಕ್ಷಿಪ್ತವಾಗಿಯಾದರೂ ಸಮಗ್ರವಾಗಿ ವಿವರಿಸುವ ಪ್ರಯತ್ನ ಮಾಡಿರುವುದು ಗಮನಿಸುವ ಅಂಶ.

ಇಡೀ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಪ್ರಭಾವಶಾಲಿಯಾದ ಸಾಹಿತ್ಯ ರಚನೆ ಮಾಡಿದ ತಾಲೂಕು ಗುಬ್ಬಿ. ೧೫ನೇ ಶತಮಾನದಲ್ಲಿಯೇ ಗುಬ್ಬಿಯ ಮಲ್ಲಣ್ಣ, ಗುಬ್ಬಿಯ ಮಲ್ಲಣಾರ್ಯ, ಶಾಂತೇಶ, ಚೇರಮಾಂಕ, ದೊಡ್ಡಣಾಂಕ, ಗುಬ್ಬಿಯ ಮಲುಹಣರಾಧ್ಯ, ನಂಜಕವಿ, ಇಮ್ಮಡಿ ತೋಂಟ ನರೇಂದ್ರ, ಮುದ್ವೀರಸ್ವಾಮಿ, ಗುಬ್ಬಿ ಕಿಡಿಗಣ್ಣಪ್ಪ, ಗುಬ್ಬಿ ವೀರಪ್ಪ ಶಾಸ್ತ್ರಿಗಳು, ಗುಬ್ಬಿ ಗುರುಸಿದ್ಧಪ್ಪ, ಗುಬ್ಬಿ ಮುರಿಗಾರಾಧ್ಯ, ಬಿ.ಎಂ.ಶ್ರೀ, ತೀ.ನಂ.ಶ್ರೀ, ಸಾ. ಶಿ. ಮರುಳಯ್ಯ, ಎಸ್. ಜಿ. ಸಿದ್ಧರಾಮಯ್ಯ, ದೊಡ್ಡರಂಗೇಗೌಡ  ಮೊದಲಾದವರು ಕೊಟ್ಟ ಕಾಣಿಕೆ ಅಪರೂಪ.

ಅದರಲ್ಲೂ ಗುಬ್ಬಿಯ ಮಲ್ಲಣ್ಣನ ಭಾವಚಿಂತಾರತ್ನ, ಗಣಭಾಷಿತ ರತ್ನಮಾಲೆ, ಮಲ್ಲಣಾರ್ಯರ ವೀರಶೈವಾಮೃತ ಮಹಾಪುರಾಣ, ಶಾಂತೇಶ ಕವಿಯ ಸಿದ್ಧೇಶ್ವರ ಪುರಾಣ, ಗುಬ್ಬಿ ಮುರಿಗಾರಾಧ್ಯರ ಶೃಂಗಾರಚಾತುರೋಲ್ಲಾಸಿನಿ ಮೊದಲಾದ ಕೃತಿಗಳು ಕನ್ನಡ ಸಾಹಿತ್ಯವನ್ನು ಸಿರಿವಂತಗೊಳಿಸಿದ ಅಮರ ಕೃತಿಗಳು. ಈ ಕೃತಿಗಳಿಗೆ ಸಮಾನವಾದ ಕೃತಿಗಳು ಮತ್ತೊಂದು ಹುಟ್ಟಿಲ್ಲವೆಂಬುದು ಹೆಮ್ಮೆ ಮತ್ತು ಅಭಿಮಾನದಿಂದ ಹೇಳಬೇಕು. ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಎಲ್ಲ ವಿಮರ್ಶಕರು, ಸಾಹಿತ್ಯ ಚರಿತ್ರೆಕಾರರು ೧೮೯೯ರಲ್ಲಿ ಪ್ರಕಟವಾದ ಇಂದಿರಾಬಾಯಿ ಮೊದಲ ಕಾದಂಬರಿ ಎಂದು ದಾಖಲಿಸುತ್ತ ಬಂದಿದ್ದಾರೆ. ಯೋಗೀಶ್ವರಪ್ಪ ಅವರ ಈ ಸಾಹಿತ್ಯ ಚರಿತ್ರೆಯ ಪ್ರಕಾರ, ಮುರಿಗಾರಾಧ್ಯ ಬರೆದ ಶೃಂಗಾರ ಚಾತುರೋಲ್ಲಾಸಿನಿ ಎಂಬ ಕಾದಂಬರಿ ೧೮೯೬ರಲ್ಲಿಯೇ ಪ್ರಕಟವಾಗಿರುವುದರಿಂದ, ಕನ್ನಡದ ಮೊದಲ ಕಾದಂಬರಿ ‘ಶೃಂಗಾರ ಚಾತುರೋಲ್ಲಾಸಿನಿ’ ಎಂಬುದನ್ನು ಸಾದಾರಪೂರ್ವಕವಾಗಿ ಇಲ್ಲಿ ದಾಖಲಿಸಿರುವುದು ಕೃತಿಯ ಹೆಚ್ಚುಗಾರಿಕೆ ಎಂದೇ ಹೇಳಬೇಕು. ಕನ್ನಡ ವೃತ್ತಿರಂಗಭೂಮಿಯಲ್ಲಿ ಸವ್ಯಸಾಚಿ ಎನಿಸಿದ ಗುಬ್ಬಿ ವೀರಣ್ಣ, ಖ್ಯಾತ ಚಲನಚಿತ್ರ ಸಾಹಿತಿ ಚಿ. ಉದಯಶಂಕರ, ನಟ-ಲೇಖಕ ಲೋಹಿತಾಶ್ವ ಮೊದಲಾದವರ ಸಾಹಿತ್ಯ ಕೃತಿಗಳ ನೆಲೆ-ಬೆಲೆಯನ್ನು ಇಲ್ಲಿ ವಸ್ತುನಿಷ್ಠವಾಗಿ ದಾಖಲಿಸಲಾಗಿದೆ. 

ತುಮಕೂರು ನಗರ ಕೇಂದ್ರವಾಗಿಟ್ಟುಕೊಂಡು ಇಡೀ ತಾಲೂಕಿನ ೪೨ ಜನ ಲೇಖಕರ ಸಾಹಿತ್ಯಿಕ ಸಾಧನೆಗಳನ್ನು ಯೋಗೀಶ್ವರಪ್ಪ ಅವರು ಕ್ಷೇತ್ರಕಾರ್ಯ ಮಾಡಿ ಮಾಹಿತಿಗಳನ್ನು ಸಂಗ್ರಹಿಸಿ ಕೊಟ್ಟಿರುವುದು ಅವರ ಸಾಹಿತ್ಯಪ್ರೀತಿಗೆ ಸಾಕ್ಷಿಯಾಗಿದೆ. ದಾಖಲೆಗಳನ್ನು ನಿಖರವಾಗಿ ಸ್ಪಷ್ಟವಾಗಿ ಹೇಳಬೇಕೆಂಬ ಪ್ರಾಮಾಣಿಕ ಪ್ರಯತ್ನವಿದೆ. ಹೀಗಾಗಿ ಈ ಕೃತಿ ಒಂದು ಅಧಿಕೃತ ಮಾಹಿತಿ ನೀಡುವ ಕಿರು ಕೋಶವಾಗಿದೆ. ತುಮಕೂರು ತಾಲೂಕಿನ ಗೂಳೂರು ಸಿದ್ಧವೀರಣ್ಣೊಡೆಯರ ‘ಶೂನ್ಯಸಂಪಾದನೆ’ ಇಡೀ ಕನ್ನಡ ಸಾಹಿತ್ಯದಲ್ಲಿಯೇ ಚಿರಕಾಲ ಉಳಿಯುವ ಮಹತ್ವದ ಕೃತಿ. ಗುರುದೇವ ರಾನಡೆ ಅವರು ಈ ಶೂನ್ಯಸಂಪಾದನೆ ಕೃತಿಯನ್ನು ಗ್ರೀಕ್ ದೇಶದ ಪ್ಲೇಟೋನ ಸಂವಾದ ಕೃತಿಗಳಿಗೆ ಸರಿದೊರೆಯಾಗಿ ನಿಲ್ಲಬಲ್ಲ ಸಾಮರ್ಥ್ಯವುಳ್ಳ ಇಡೀ ಭಾರತೀಯ ಸಾಹಿತ್ಯದಲ್ಲಿಯೇ ಏಕೈಕ ಕೃತಿಯೆಂದು ಅಭಿಮಾನದಿಂದ ಹೇಳಿದ್ದು, ಕನ್ನಡಿಗರ ಸಾಹಿತ್ಯ ಸಾಧನೆಗೆ ಹಿರಿಮೆ ಗರಿಮೆ ತರುವ ಕೆಲಸವೇ ಆಗಿದೆ. ಕೆಸ್ತೂರದೇವ, ಹೇರಂಬ ಕವಿ, ಬೆಳ್ಳಾವೆ ವೆಂಕಟನಾರಾಣಪ್ಪ, ಬೆಳ್ಳಾವೆ ನರಹರಿ ಶಾಸ್ತ್ರಿ ಬಿ. ಶಿವಮೂರ್ತಿ ಶಾಸ್ತ್ರಿ, ಟಿ. ಎನ್. ಮಹದೇವಯ್ಯ, ಜಿ. ಎಸ್. ಸಿದ್ಧಲಿಂಗಯ್ಯ, ಕಮಲಾ ಹಂಪನಾ, ಕವಿತಾಕೃಷ್ಣ, ಡಿ. ಸಿದ್ಧಗಂಗಯ್ಯ ಮೊದಲಾದ ಹಿರಿಯ ವಿದ್ವಾಂಸರು ತುಮಕೂರು ತಾಲೂಕಿಗೆ ಒಂದು ರಾಷ್ಟ್ರಮಟ್ಟದ ಕೀರ್ತಿಯನ್ನು ತಂದವರಾಗಿದ್ದಾರೆ. 

ತಿಪಟೂರು ತಾಲೂಕಿನ ಗೌರವಾಂಕ, ಕರಿವೃಷಭ ದೇಶಿಕೇಂದ್ರ ಸ್ವಾಮಿ, ಹೀ. ಚಿ. ಶಾಂತವೀರಯ್ಯ, ಆರ್. ಬಸವರಾಜು ಮೊದಲಾದವರು, ಕೊರಟಗೆರೆ ತಾಲೂಕಿನ ಕೆಂಪನಂಜುಂಡ, ವೆಂಕಾಮಾತ್ಯ, ಚಂದ್ರಸಾಗರವರ್ಣಿ, ಜಿ. ಬ್ರಹ್ಮಪ್ಪ, ಬಿ.ನಂ.ಚಂದ್ರಯ್ಯ, ಪ್ರಧಾನ ಗುರುದತ್, ಪಿ.ವಿ. ನಾರಾಯಣ ಮೊದಲಾದವರು, ಸಿರಾ ತಾಲೂಕಿನ ಶೇಷಗಿರಿ, ಸಣ್ಣಗುಡ್ಡಯ್ಯ, ಜಿ. ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ ಮೊದಲಾದವರು, ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗ ಯತಿಗಳು, ಶಾಂತವೀರ, ನೀಲತ್ತಳ್ಳಿ ಕಸ್ತೂರಿ, ವೈ.ಕೆ.ರಾಮಯ್ಯ, ಜಯಮ್ಮ ಕರಿಯಣ್ಣ  ಮೊದಲಾದವರು, ತುರುವೆಕೇರೆ ತಾಲೂಕಿನ ಯತಿ ಬಸವಲಿಂಗೇಶ, ಪರ್ವತ ಶಿವಯೋಗಿ, ಬಿ. ಎಂ. ಶ್ರೀಕಂಠಯ್ಯ ಮೊದಲಾದವರು, ಪಾವಗಡ ತಾಲೂಕಿನ ನಿಡುಗಲ್ ಚನ್ನಪ್ಪ, ಸ್ವಾಮಿ ಹರ್ಷಾನಂದ ಮೊದಲಾದವರು ಹೀಗೆ ೧೫೨ ಜನ ಲೇಖಕರ ಸಾಹಿತ್ಯಿಕ ಸಾಧನೆಯ ವಿವರಗಳ ಜೊತೆಗೆ ಅವುಗಳ ಸತ್ವ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಕೆಲಸವನ್ನು ಡಾ. ಯೋಗೀಶ್ವರಪ್ಪ ಅವರು ಮಾಡಿರುವುದು ಬಂಗಾರಕ್ಕೆ ಕುಂದಣವಿಟ್ಟಂತಾಗಿದೆ. 

ಸಾಹಿತ್ಯದ ವೈಶಿಷ್ಟ್ಯತೆ ಅಧ್ಯಾಯವಂತೂ ಡಾ. ಯೋಗೀಶ್ವರಪ್ಪ ಅವರ ಸಾಹಿತ್ಯ ವಿಮರ್ಶಾ ವಿಚಕ್ಷಣೆತೆಗೆ, ಪರಮ ವೈದುಷ್ಯಕ್ಕೆ ಉಜ್ವಲ ನಿದರ್ಶನವಾಗಿದೆ. ಸೋದಹರಣವಾದ ಸ್ಪಷ್ಟ ನಿಲುವಿನ ವಿಮರ್ಶೆ ಆಪ್ಯಾಯಮಾನವಾಗಿದೆ. ಗುಬ್ಬಿಯ ಮಲ್ಲಣ್ಣನ ಗಣಭಾಷ್ಯ ರತ್ನಮಾಲೆಯನ್ನು  ಕುರಿತು ಅವರು ಹೇಳುವ ಮಾತುಗಳು ಹೀಗಿವೆ : ‘ಲಿಂಗಾಯತ ಪುನರುಜ್ಜೀವನದ ಹಿನ್ನೆಲೆಯಲ್ಲಿ ನಡೆದ ಧಾರ್ಮಿಕ ಚಟುವಟಿಕೆಗಳಿಗೆ ಪೂರಕವಾಗಿ ಈ ಕೃತಿ ಜನ್ಮತಾಳಿದೆ. ಆ ಧರ್ಮಾನುಯಾಯಿಗಳಿಗೆ ತಾತ್ವಿಕ ಚೌಕಟ್ಟನ್ನು ಸ್ಪಷ್ಟಪಡಿಸುವುದರ ಜೊತೆಗೆ ಆ ಧರ್ಮದ ವಿಧಿ ವಿಧಾನಗಳನ್ನು ತಿಳಿಯಪಡಿಸುವ ಒಂದು ನಿರ್ದಿಷ್ಟ ಧ್ಯೇಯಬದ್ಧ ಮನಸ್ಸು ಈ ಸಂಕಲನ ಕೃತಿಯ ರಚನೆಯಲ್ಲಿ ಕ್ರಿಯಾತ್ಮಕವಾಗಿ ದುಡಿದಿದೆ. ಆ ಶ್ರದ್ಧೆ ಧಾರ್ಮಿಕ ನಿಷ್ಠೆಯಿಂದ ಪ್ರೇರಿತವಾದದ್ದು. ಹೀಗಾಗಿ ಲಿಂಗಾಯತ ಧರ್ಮದ ತಾತ್ವಿಕ ಚೌಕಟ್ಟನ್ನು ಸ್ಪಷ್ಟಪಡಿಸುವುದರ ಜೊತೆಗೆ ಅದರ ನೀತಿ ಸಂಹಿತೆಯನ್ನು ರೂಪಿಸುವ ಉದ್ದೇಶ ಎದ್ದು ಕಾಣುತ್ತದೆ.’ ಈ ಮಾತುಗಳಲ್ಲಿ ಕೃತಿಯ ಒಟ್ಟು ನೋಟವನ್ನು ಗುರುತಿಸಬಹುದು. ಹೀಗೆ ಪ್ರತಿಯೊಂದು ಕೃತಿಯನ್ನು ತಲಸ್ಪರ್ಶಿಯಾಗಿ ತೂಗಿ ನೋಡಿ, ಅವುಗಳ ವೈಶಿಷ್ಟ್ಯವನ್ನು ಯುಕ್ತವಾದ ಶಬ್ದಗಳಲ್ಲಿ ಅಭಿವ್ಯಕ್ತಿಸಿರುವುದು ಡಾ. ಯೋಗೀಶ್ವರಪ್ಪ ಅವರ ವ್ಯಾಪಕ ಅಧ್ಯಯನಕ್ಕೆ ಸಾಕ್ಷಿಯಾಗಿದೆ.

ಕೃತಿಯಲ್ಲಿ ಸಂದರ್ಭಾನುಸಾರ ಕೋಷ್ಟಕಗಳನ್ನು ಕೊಟ್ಟಿರುವುದು ತುಂಬ ಔಚಿತ್ಯಪೂರ್ಣವಾಗಿದೆ. ಜಿಲ್ಲೆಯ ವಿವರ, ಆಯಾ ತಾಲೂಕಿನ ಸಾಹಿತಿಗಳ ವಿವರ, ಆಯಾ ಸಾಹಿತ್ಯ ಪ್ರಕಾರಗಳ ಕೋಷ್ಟಕಗಳನ್ನು ಕೊಟ್ಟಿರುವುದು ಅಧ್ಯಯನಾಸಕ್ತರಿಗೆ ತುಂಬ ಉಪಯುಕ್ತವಾಗಿದೆ. ಏಕವ್ಯಕ್ತಿ ನೆಲೆಯಲ್ಲಿ ಒಂದು ಸಾಹಿತ್ಯ ಚರಿತ್ರೆಯನ್ನು ಬರೆಯಲು ಹೊರಟಾಗ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗುವುದು. ಹೀಗಿದ್ದೂ ಕೃತಿಯ ಪರಿಪೂರ್ಣತೆಗೆ ಡಾ. ಯೋಗೀಶ್ವರಪ್ಪ ಅವರು ತುಂಬ ಶ್ರಮ-ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ‘ಓದುಗರು ಈ ಕೃತಿಯನ್ನು ಓದಿ ತಪ್ಪಿದ್ದಲ್ಲಿ ತಿದ್ದಿ ಮಣ್ಣಿನಲ್ಲಿ ಸೇರಿಹೋದ ಚಿನ್ನದ ರಜವನ್ನು ಪಾದರಸವು ಗ್ರಹಿಸಿ ಚಿನ್ನವನ್ನು ಪಡೆಯಲು ನೆರವಾಗುವಂತೆ ಓದುಗರು ನನ್ನ ಈ ಕೃತಿಯಲ್ಲಿನ ಒಳಿತನ್ನು ಸ್ವೀಕರಿಸಿ ತಪ್ಪಿದಲ್ಲಿ ಅದನ್ನು ತಿದ್ದಿ ಸಲಹೆ ನೀಡಬೇಕೆಂದು’ ಪ್ರಾಂಜಲ ಮನಸ್ಸಿನಿಂದ ಮನವಿ ಮಾಡಿಕೊಂಡಿದ್ದಾರೆ.

ಅಲ್ಲಲ್ಲಿ ಕೆಲವು ಸಣ್ಣ ಪುಟ್ಟ ತಪ್ಪುಗಳಿದ್ದರೂ ಕೃತಿಯ ಓದಿಗೆ ಯಾವುದೇ ಭಂಗ ಬರವುದಿಲ್ಲ. ಟಿ. ಜಿ. ಸಿದ್ಧಪ್ಪಾರಾಧ್ಯ ಅವರು ತುಮಕೂರಿನವರು. ಅವರು ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ, ಅವರು ಹುಟ್ಟಿದ್ದು ತುಮಕೂರಿನಲ್ಲಿ, ಆದರೆ ಸೇವೆ ಸಲ್ಲಿಸಿದ್ದು ಮೈಸೂರಿನಲ್ಲಿ ಹೀಗಾಗಿ ಅವರಂತಹ ನಾಲ್ಕಾರು ಜನರ ವಿವರಗಳು ಬಿಟ್ಟು ಹೋಗಿವೆ. ಮುಂದಿನ ಆವೃತ್ತಿಯಲ್ಲಿ ಅವುಗಳನ್ನು ಸೇರಿಸಿಕೊಂಡರೆ, ಕೃತಿ ಇನ್ನಷ್ಟು ಪರಿಪೂರ್ಣವಾಗುವುದರಲ್ಲಿ ಸಂದೇಹವಿಲ್ಲ. 

“೧೨ನೇ ಶತಮಾನದಿಂದ ಈ ಜಿಲ್ಲೆಯ ಸಾಹಿತ್ಯ ಆರಂಭವಾದರೂ ೧೬-೧೭ನೇ ಶತಮಾನದಲ್ಲಿ ಅದು ವಿಜೃಂಭಿಸಿದೆ. ಆರಂಭದಿಂದ ೧೯೪೭ರವರೆಗೆ ಇದರ ವ್ಯಾಪ್ತಿಯಿದೆ. ಒಟ್ಟಾರೆ ಒಂದು ಜಿಲ್ಲೆಯ ಸಮಗ್ರ ಸಾಹಿತ್ಯಾವಲೋಕನವನ್ನು ಮಾಡುವ ಈ ಕೃತಿ ಇತರೆ ಜಿಲ್ಲೆಯ ಸಾಹಿತಿಗಳಿಗೆ ಇಂಥ ಕೃತಿ ರಚಿಸಲು ಪ್ರೇರಣೆ ನೀಡುವುದರಲ್ಲಿ ಸಂದೇಹವಿಲ್ಲ” ಎಂದು ಈ ಕೃತಿಗೆ ಬೆನ್ನುಡಿ ಬರೆದ ಖ್ಯಾತ ವಿದ್ವಾಂಸರಾದ ಡಾ. ವೀರಣ್ಣ ರಾಜೂರ ಅವರು ಅಭಿಪ್ರಾಯ ಪಟ್ಟಿರುವುದು ಕೃತಿಯ ಮೌಲಿಕತೆಗೆ ನಿದರ್ಶನವಾಗಿದೆ. 

ಒಟ್ಟಾರೆ, ಡಾ. ಯೋಗೀಶ್ವರಪ್ಪ ಅವರ ಈ ಪ್ರಯತ್ನ ಒಂದು ಮಾದರಿಯಾಗಿದೆ. ಉಳಿದ ಜಿಲ್ಲೆಯವರು ಈ ಕೃತಿಯನ್ನು ಅನುಕರಿಸಿ ಸಾಹಿತ್ಯ ಚರಿತ್ರೆಗಳನ್ನು ಪ್ರಕಟಿಸಿದರೆ, ಕನ್ನಡ ಸಾಹಿತ್ಯದಲ್ಲಿ ಹೊಸ ಕ್ಷಿತಜವೊಂದು ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ. ಇಂತಹ ಮೊದಲ ಪ್ರಯತ್ನ ಮಾಡಿದ ಡಾ. ಯೋಗೀಶ್ವರಪ್ಪ ಅವರಿಗೆ ಸಕಲ ಕನ್ನಡಿಗರ ಪರವಾಗಿ ವಂದನೆ-ಅಭಿನಂದನೆಗಳು.


ಪ್ರಕಾಶ ಗಿರಿಮಲ್ಲನವರ

ಬೆಳಗಾವಿ

ಮೊ: ೯೯೦೨೧೩೦೦೪೧

 

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group