ಮಹಾವೀರ ಲಲಿತ ಕಲಾ ಅಕಾಡೆಮಿ ಮತ್ತು ಸುಮೇರು ಟ್ರಸ್ಟ್ ನ ಸಂಯುಕ್ತಾಶ್ರಯದಲ್ಲಿ ಗುರು ವಿದುಷಿ ತನುಜಾ ಜೈನ್‌ರವರು ಶಿಷ್ಯೆ ಕುಮಾರಿ ಸುನಿಧಿ ಮಂಜುನಾಥ್‌ರವರ ರಂಗ ಪ್ರವೇಶ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಆಯೋಜಿಸಲಾಗಿತ್ತು .
ಡಾ. ರೂಪಾ ಮಂಜುನಾಥ್ ಹಾಗೂ ಡಾ. ಮಂಜುನಾಥ್ ಪಾಳ್ಯ ಇವರ ಏಕೈಕ ಪುತ್ರಿಯಾಗಿರುವ ಕುಮಾರಿ ಸುನಿಧಿಯು ಬಹಳ ಸೌಮ್ಯ ಹಾಗೂ ಶಾಂತ ಸ್ವಭಾವದ ಹುಡುಗಿ ತಂಧೆ ತಾಯಿಯರು ಉಪನ್ಯಾಸಕ ವೃತ್ತಿಯಲ್ಲಿರುವುದರಿಂದ ತಮ್ಮ ಅಜ್ಜ-ಅಜ್ಜಿಯ ಜೊತೆಗೆ ಹೆಚ್ಚು ಸಮಯ ಕಳೆಯುವುದರಿಂದ ಗುರುಹಿರಿಯರೊಂದಿಗೆ ವಿನಮ್ರ ಹಾಗೂ ಪ್ರೀತಿಯ ಸಂಬಂಧವನ್ನು ಹೊಂದಿರುವಳು.
ಕುಮಾರಿ ಸುನಿಧಿ 8ನೇ ವಯಸ್ಸಿಗೆ ಗುರುಗಳಲ್ಲಿ ನೃತ್ಯಾಭ್ಯಾಸ ಆರಂಭಿಸಿ, ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಐಸಿಎಸ್‌ಸಿ ಸಿಲಬಸ್‌ನಲ್ಲಿ 94% ಗೂ ಅಧಿಕ ಅಂಕಗಳೊಂದಿಗೆ ಉತ್ತೀರ್ಣಳಾಗಿದ್ದಾಳೆ. ಗುರುಗಳಾದ ವಿದುಷಿ ತನುಜಾರವರು ಆಗಸ್ಟ ಸೆಪ್ಟೆಂಬರ್ ಹೊತ್ತಿಗೆ ರಂಗ ಪ್ರವೇಶವನ್ನು ಮಾಡುವ ಉದ್ದೇಶ ಹೊಂದಿದ್ದರು. ಕುಮಾರಿ ಸುನಿಧಿ ತನ್ನ ಪಿಯುಸಿಯನ್ನು ಕಾರ್ಕಳದಲ್ಲಿ ಮುಂದುವರೆಸುವ ಉದ್ದೇಶವಿರುವುದರಿಂದ ಮೇ ತಿಂಗಳಿನಲ್ಲಿಯೇ ಅವಸರವಾಗಿ ನಿರ್ಧರಿಸಿದರು. ರಂಗ ಪ್ರವೇಶಕ್ಕೆ ಸುನಿಧಿಯ ತಯಾರಿ ಪರಿಶ್ರಮ ಶ್ರದ್ಧೆಯನ್ನು ಅವಳ ಗುರುಗಳು ಮುಕ್ತ ಕಂಠದಿಂದ ಹೊಗಳಿದರು. 2 ತಿಂಗಳಕಾಲದಲ್ಲಿ ಸುಮಾರು 5-6 ತಾಸುಗಳ ಸತತ ಅಭ್ಯಾಸದಿಂದ ಅದ್ಭುತವಾದ ನೃತ್ಯ ಪ್ರದರ್ಶನವನ್ನು ಸುನಿಧಿಯು ಮಾಡಿದಳು. ಅವಳ ಹಾವ ಭಾವ ನೃತ್ಯಭಿವ್ಯಕ್ತಿಯು ನುರಿತ ಕಲಾವಿದರಂತಿದ್ದು ವಿಶೇಷವಾಗಿತ್ತು.
ನೃತ್ಯದ ಸಲುವಾಗಿ ಅವಳ ಪ್ರೀತಿ ಹಾಗೂ ಶ್ರದ್ಧೆ ಶ್ಲಾಘನೀಯ. ನೃತ್ಯಗಾರ್ತಿಯರ ಜೀವನದಲ್ಲಿ ರಂಗ ಪ್ರವೇಶ ಬಹಳ ಪ್ರಮುಖವಾದ ಘಟ್ಟವಾಗಿದ್ದು ಅದು ಕೂಡ ಹಿರಿಯ ಗಣ್ಯ ಸಾಹಿತಿಗಳ ಮುಂದೆ ನಡೆದಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ಡಾ. ನರಹಳ್ಳಿ ಬಾಲಸುಬ್ರಮಣ್ಯ, ಮಹಾಬಲ ಮೂರ್ತಿ ಕೂಡ್ಲೇಕೆರೆ, ಡಾ.ಪ್ರಮೀಳಾ ಮಾಧವ್, ಡಾ. ಸುರೇಶ ಪಾಟೀಲ, ಡಾ. ಆಶಾದೇವಿ ಎಂ ಎಸ್, ಡಾ. ಕೆ. ಪಿ ಭಟ್, ಡಾ. ಸುಮಿತ್ರ ಎಂ, ಡಾ. ಸಿ.ಬಿ. ಹೊನ್ನುಸಿದ್ಧಾರ್ಥ, ಡಾ. ರಘುರಾಂ ಮೊದಲಾದ ಸಾಹಿತಿಗಳು, ಸುನಿಧಿಯ ಪೋಷಕರ ಗುರುಗಳು, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಹಾಗೂ ಬೆಂಗಳೂರಿನ ಹಲವಾರು ಕಾಲೇಜುಗಳ ಉಪನ್ಯಾಸಕರ ದೊಡ್ಡ ಬಳಗ, ಸಂಬಂಧಿಕರು ಉಪಸ್ಥಿತರಿದ್ದು ಹರಸಿದರು .
ಕಾರ್ಯಕ್ರಮವು ಗಣೇಶ ವಂದನೆ ಮತ್ತು ನಟೇಶನ ನಮನದೊಂದಿಗೆ ಆರಂಭವಾಯಿತು. ಮೈಸೂರು ವಾಸುದೇವಾಚಾರ್ಯರ ಕೃತಿ ಜತಿಗೆ ಸೊಗಸಾಗಿ ನರ್ತಿಸಿದಳು. ನಂತರ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಸಾರಸ್ವತ ಲೋಕದ ದಿಗ್ಗಜರಾದ ನಾಡೋಜ ಹಂಪನಾಗರಾಜಯ್ಯ, ಮತ್ತು ಪದ್ಮಶ್ರೀ ಪುರಸ್ಕೃತರಾದ ಪ್ರೊ.ದೊಡ್ಡ ರಂಗೇಗೌಡರು ಹಾಗೂ ಕಲಾ ನಿರ್ದೇಶಕರು ಶ್ರೀ ಜೆ.ಬಿ ಸರವಣನ್ ಪಿಳ್ಳೈ ಇವರುಗಳ ಉಪಸ್ಥಿತಿ ಮತ್ತು ವೇದಿಕೆಯ ಕಾರ್ಯಕ್ರಮ ಗುರುವಂದನೆ ನಡೆಯಿತು.
ನಾಡೋಜ ಹಂಪನಾ ಬ್ರಹ್ಮ ಮಾಡಿದ ಪ್ರಪಂಚವನ್ನು ಸರಸ್ವತಿ ಮಣಿ ಮಾಲೆ ಮಾಡಿ ಕೊಂಡು ಜಪ ಮಾಡುತ್ತಿದ್ದಾಳೆ ಆ ಸರಸ್ವತಿಯು ಮೊಮ್ಮಗಳ ಸಮಾನವಾಗಿರುವ ಕುಮಾರಿ ಸುನಿಧಿಗೆ ಒಳ್ಳೆಯದಾಗಲಿ ಎಂದು ಹರಸಿದರು. ಪದ್ಮಶ್ರೀ ಪುರಸ್ಕೃತ ನಾಡಿನ ಹೆಮ್ಮೆಯ ಕವಿ ಪ್ರೋ. ದೊಡ್ಡರಂಗೇಗೌಡರು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮಿಲನ ಆಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಮರೆಯದೆ ಮುನ್ನಡೆಸುವವರು ಯಶಸ್ಸು ಪಡೆದಿದ್ದಾರೆ.ದೊಡ್ಡ ಆಲದ ಮರಕ್ಕೆ ಸಾವಿರದ ಬೀಳಲು ಇರುವಂತೆ ನೃತ್ಯ ಸುನಿಧಿಗೆ ಉತ್ತಮ ಭವಿಷ್ಯ ಇದೆ ಎಂದರು. ಕುಮಾರಿ ಸುನಿಧಿಯ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದು ಹರಸಿದರು.
ರೂಪ ಮಧುಸೂದನ್ ನಿರೂಪಣೆ ಯ ಕಾರ್ಯಕ್ರಮದಲ್ಲಿ ತಮ್ಮ ಸುಮಧುರ ಗಾನದಿಂದ ನೃತ್ಯಕ್ಕೆ ನೆರವಾದ ಗಾಯಕ ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗ ನುಡಿಸಿದ ವಿದ್ವಾನ್ ಜಿ ಎಸ್ ನಾಗರಾಜ್, ಕೊಳಲು ನಾದದೊಂದಿಗೆ ಜೊತೆಯಾದ ವಿದ್ವಾನ್ ಮಹೇಶ ಸ್ವಾಮಿ, ವೀಣಾನಾದ ಮಾಡಿದ ವಿದ್ವಾನ್ ಪ್ರಶಾಂತ್ ರುದ್ರಪಟ್ಟಣ , ನಾದಲಯ ಪುಂಜದಿಂದ ಜೊತೆಗಿದ್ದ ವಿದ್ವಾನ್ ಶ್ರೀ ಪ್ರಸನ್ನ ಕುಮಾರ್ ಅವರಿಗೂ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಉತ್ತರಾರ್ಧದಲ್ಲಿ ಶಾರದಾ ಸ್ತುತಿ, ಪುರಂದರ ದಾಸರ ಕೀರ್ತನೆಗೆ ಪ್ರಿಯತಮನನ್ನು ಕಾಯುವ ನಾಯಕಿಯ ನೃತ್ಯ ಕೊನೆಗೆ ತಿಲ್ಲಾನ ಹಾಗೂ ಮಂಗಳ ಗೀತೆಯನ್ನು ಪ್ರಸ್ತುತಿ ಪಡಿಸಲಾಯಿತು. ಎಲ್ಲ ನೃತ್ಯ ಸಂಯೋಜನೆಯನ್ನು ಗುರು ವಿದುಷಿ ತನುಜಾ ಜೈನರವರೇ ಮಾಡಿದ್ದು ವಿಶೇಷವಾಗಿತ್ತು.