Homeಸುದ್ದಿಗಳುಬಿಲಕುಂದಿಗೆ ಅರಸು ವಸತಿ ಶಾಲೆ ; ಬಾಲಚಂದ್ರ ಜಾರಕಿಹೊಳಿ ಹರ್ಷ

ಬಿಲಕುಂದಿಗೆ ಅರಸು ವಸತಿ ಶಾಲೆ ; ಬಾಲಚಂದ್ರ ಜಾರಕಿಹೊಳಿ ಹರ್ಷ

ಮೂಡಲಗಿ- ರಾಜ್ಯದಲ್ಲಿರುವ ನಾಲ್ಕು ಕಂದಾಯ ವಿಭಾಗಗಳಿಗೆ ತಲಾ ಒಂದರಂತೆ ಮಂಜೂರಾಗಿರುವ ದೇವರಾಜ ಅರಸು ವಸತಿ ಶಾಲೆಯು ನನ್ನ ಕ್ಷೇತ್ರಕ್ಕೆ ಬಂದಿರುವುದು ಅತೀವ ಸಂತಸವಾಗಿದೆ. ಇದರಿಂದ 14 ವಿವಿಧ ವಸತಿ ಶಾಲೆಗಳನ್ನು ಹೊಂದಿರುವ ಅವಿಭಜಿತ ಗೋಕಾಕ ತಾಲ್ಲೂಕು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿರುವುದು ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದರು.

ಶನಿವಾರದಂದು ಕಲ್ಲೊಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಡಿ. ದೇವರಾಜ ಅರಸು ವಸತಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

ಬೆಳಗಾವಿ, ಕಲ್ಬುರ್ಗಿ, ಮೈಸೂರು, ಬೆಂಗಳೂರು ವಿಭಾಗಕ್ಕೊಂದು ದೇವರಾಜ ಅರಸು ವಸತಿ ಶಾಲೆಗಳನ್ನು ಸರ್ಕಾರ ಈ ವರ್ಷದಿಂದ ಆರಂಭಿಸಿದೆ. ಅದರಲ್ಲಿ ಬೆಳಗಾವಿ ವಿಭಾಗದಿಂದ ಅರಭಾವಿ ಕ್ಷೇತ್ರದ ಬಿಲಕುಂದಿ ಗ್ರಾಮಕ್ಕೆ ಮಂಜೂರಾಗಿರುವುದು ತುಂಬ ಖುಷಿಯಾಗಿದೆ. ಈ ಮೊದಲೇ ಮಂಜೂರಾಗಿ ರದ್ದಾಗಿದ್ದ ವಸತಿ ಶಾಲೆಯನ್ನು ಮತ್ತೇ ನಮ್ಮ ಕ್ಷೇತ್ರಕ್ಕೆ ಮಂಜೂರು ಮಾಡಿಸಲು ವಿಶೇಷ ಕಾಳಜಿಯನ್ನು ವಹಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮನದಾಳದಿಂದ ಕೃತಜ್ಞತೆಯನ್ನು ಅರ್ಪಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.

ಅಲೆಮಾರಿ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಮೊದಲೇ ಬಿಲಕುಂದಿಗೆ ಮಂಜೂರಾಗಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಇದು ಬೇರೇಡೆಗೆ ಸ್ಥಳಾಂತರಗೊಂಡಿತ್ತು. ಇದರಿಂದ ಅಲೆಮಾರಿ ಜನಾಂಗದವರು ತೀವ್ರ ನಿರಾಶೆಯನ್ನು ನನ್ನ ಬಳಿ ವ್ಯಕ್ತಪಡಿಸಿದ್ದರು. ನಂತರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರ ಮಧ್ಯ ಪ್ರವೇಶದಿಂದ ಬೇರೆಡೆಗೆ ಹೋಗಿದ್ದ ಈ ಶಾಲೆಯು ಮತ್ತೇ ನಮ್ಮ ಕ್ಷೇತ್ರಕ್ಕೆ ಮಂಜೂರಾಯಿತು. ಸತೀಶ ಜಾರಕಿಹೊಳಿಯವರ ವಿಶೇಷ ಕೋರಿಕೆಯನ್ನು ಮನ್ನಿಸಿ ಬಿಲಕುಂದಿಗೆ ಬರಲು ಕಾರಣೀಕರ್ತರಾದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮತ್ತು ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಮಕ್ಕಳಿಗೆ ಬಿಲಕುಂದಿ ಗ್ರಾಮಕ್ಕೆ ಮಂಜೂರಾಗಿರುವ ಇದು ಕಟ್ಟಡದ ಸಮಸ್ಯೆಯಿಂದ ಕಲ್ಲೋಳ್ಳಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈಗಾಗಲೇ ಬಿಲಕುಂದಿ ಗ್ರಾಮದಲ್ಲಿ 10 ಎಕರೆ ಜಮೀನನ್ನು ಗುರುತಿಸಲಾಗಿದೆ. 25 ಕೋಟಿ ರೂಪಾಯಿ ವೆಚ್ಚದ ಕಟ್ಟಡವು ಬಿಲಕುಂದಿ ಗ್ರಾಮದಲ್ಲಿ ಈ ವಸತಿ ಶಾಲೆಯು ಮುಂದಿನ ದಿನಗಳಲ್ಲಿ ತಲೆಯೆತ್ತಲಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸಗೌಡ ಪಾಟೀಲ, ಜಿ.ಪಂ.ಮಾಜಿ ಸದಸ್ಯ ವಿಠ್ಠಲ ಸವದತ್ತಿ, ಬಿ.ಬಿ. ದಾಸನವರ, ಅಲೆಮಾರಿ ಜನಾಂಗದ ಮುಖಂಡರಾದ ಅಮೃತ ದಪ್ಪಿನವರ, ಸದಾಶಿವ ಹೆಳವರ, ಉದ್ದಪ್ಪ ಹೆಳವರ, ಶಾನೂರ ಹೆಳವರ, ನಾಗರಾಜ ಹೆಳವರ, ರಾಜಶೇಖರ ವಾಕುಡಿ, ಗಣಪತಿ ಇಗಳೆ, ರುದ್ರಪ್ಪ ದೊಡಮನಿ, ವಸತಿ ಶಾಲೆಗಳ ಜಿಲ್ಲಾ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಬಿಸಿಎಂ ಅಧಿಕಾರಿ ಬಸವರಾಜ ಮಾಲದಿನ್ನಿ, ಮೂಡಲಗಿ ಬಿಇಓ ಎ.ಸಿ.ಮನ್ನಿಕೇರಿ, ಪ.ಪಂ.ಮುಖ್ಯಾಧಿಕಾರಿ ಚಿದಾನಂದ ಮುಗಳಖೋಡ, ಕಲ್ಲೊಳ್ಳಿ ಪ.ಪಂ. ಸದಸ್ಯರು, ಗೋಸಬಾಳ ಗ್ರಾ.ಪಂ. ವ್ಯಾಪ್ತಿಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group