ಮೂಡಲಗಿ – ತಾಲೂಕಿನ ಹಳ್ಳೂರ ಗ್ರಾಮದ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯ ಒಳಗೆ ಕಸದ ಡಬ್ಬಿಯಲ್ಲಿ ಬೀಯರ್ ಸೇರಿದಂತೆ ವಿವಿಧ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಮೂಡಲಗಿ ವಲಯದ ಹಳ್ಳೂರ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಳಗೆ ಬೆಳ್ಳಂಬೆಳಿಗ್ಗೆ ಮದ್ಯದ ಬಾಟಲಿಗಳು ಇರುವ ಬಾಕ್ಸ್ ನೋಡಿದ ಕೆಲವರು ಅಚ್ಚರಿಗೊಂಡಿದ್ದಾರಲ್ಲದೆ ಶಿಕ್ಷಣ ಸಂಸ್ಥೆಯಲ್ಲಿ ಇದೆಂಥ ವಿಪರ್ಯಾಸ ಎಂದು ಹಣೆ ಚಚ್ಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿರುವ ಹಳ್ಳೂರಿನ ಹಿರಿಯರಾದ ಸಿದ್ದಪ್ಪ ಕುಲಗೋಡ, ದುಂಡಪ್ಪ ಕುಲಗೋಡ ಹಾಗೂ ಯಮನಪ್ಪ ಅವರು ಮಾತನಾಡಿ, ಇಂಥ ಪ್ರಕರಣಗಳು ಈ ಶಾಲೆಯಲ್ಲಿ ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತವೆ ಮೇಲಧಿಕಾರಿಗಳಿಗೆ ಈ ಬಗ್ಗೆ ಹೇಳಿದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎಚ್ ವಾಸನ್ ಅವರು ಈ ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ, ನಾನು ರಾತ್ರಿ ಒಂದೂವರೆಯವರೆಗೆ ಶಾಲೆಯಲ್ಲಿಯೇ ಇದ್ದು ಅನಂತರ ಮನೆಗೆ ಹೋಗಿದ್ದೆ. ಇದು ಯಾವಾಗ ನಡೆದಿದೆಯೋ ಒಂದೂ ತಿಳಿಯುತ್ತಿಲ್ಲ. ಬಹುಶಃ ಬೇರೆ ಕಡೆ ಕುಡಿದು ಇಲ್ಲಿ ಬಾಟಲಿಗಳ ಡಬ್ಬಿ ತಂದು ಇಟ್ಟಿರಬಹುದು ಎನ್ನುತ್ತಾರೆ.
ಏನೇ ಆಗಲಿ ದೇವಸ್ಥಾನವೆಂದು ಪರಿಗಣಿಸಲ್ಪಡುವ ಒಂದು ಶಾಲೆಯಲ್ಲಿ ಮದ್ಯ ಸೇವನೆಯಂಥ ಘಟನೆ ನಡೆದದ್ದು ತೀರಾ ಖಂಡನೀಯ. ಇಂಥ ಘಟನೆಗಳು ಮೇಲಿಂದ ಮೇಲೆ ನಡೆಯುತ್ತವೆ ಎಂದು ನಾಗರಿಕರು ಹೇಳುತ್ತಿರುವಾಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿಯವರನ್ನು ಸಂಪರ್ಕಿಸಿದಾಗ, ಶಾಲಾ ಕೊಠಡಿಯಲ್ಲಿ ಮದ್ಯದ ಬಾಟಲಿಗಳು ಇದ್ದ ಬಗ್ಗೆ ಸಾರ್ವಜನಿಕರಿಂದ ನನಗೆ ಮಾಹಿತಿ ಬಂದಿದ್ದು ಈ ಕೃತ್ಯ ಯಾರಿಂದ ಆಗಿದೆಯೆಂಬ ಬಗ್ಗೆ ನಾಳೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.
ಈ ಕೃತ್ಯಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಯಾವ ರೀತಿಯ ವಿಚಾರಣೆ ಹಾಗೂ ಕ್ರಮ ಜರುಗಿಸಲಾಗುತ್ತದೆಯೆಂಬುದನ್ನು ಕಾದು ನೋಡಬೇಕು.
ಉಮೇಶ ಬೆಳಕೂಡ, ಮೂಡಲಗಿ