48ನೇ ವಾರ್ಷಿಕೋತ್ಸವ ಮತ್ತು ‘ಕೃಷ್ಣಂ ಕಲಯ ಸಖಿ’ ಹಂಸ ಗಾನ – ನಾಟ್ಯ ಸಂಭ್ರಮ
ನಾಡಿನ ಸಾಂಸ್ಕೃತಿಕ ಚಳವಳಿಯ ಸಂದರ್ಭದಲ್ಲಿ ಪ್ರಮುಖ ಸಂಸ್ಥೆಯಾದ ಹಂಸಜ್ಯೋತಿಯ 48ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಬೆಂಗಳೂರು ನಗರ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಛಯ ಭವನದಲ್ಲಿ ‘ಕೃಷ್ಣಂ ಕಲಯ ಸಖಿ’ ಹಂಸ ಗಾನ – ನಾಟ್ಯ ಸಂಭ್ರಮ ಮತ್ತು ‘ಹಂಸ ಸಮ್ಮಾನ್’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ. ಕೃಷ್ಣರವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ ಸಾಹಿತ್ಯ- ಸಂಗೀತ ಸಂಸ್ಕೃತಿಯ ಕುರಿತು ಅರಿವು ಮೂಡಿಸುವಂತೆ ನಮ್ಮ ಆಹಾರ ಪದ್ದತಿಯ ಕುರಿತು ಇಂದಿನ ಯುವ ಪೀಳಿಗೆಯವರಿಗೆ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬದಲಾದ ಜೀವನ ಶೈಲಿಯಲ್ಲಿ ಉತ್ತಮ ಗುಣಮಟ್ಟದ ಆಹಾರಸೇವನೆಯಿಂದ ಆರೋಗ್ಯಸುಧಾರಣೆಯಾಗುತ್ತದೆ ಎಂದು ತಿಳಿಸಿದರು.
ಬೆಂ. ನಗರ ಜಿಲ್ಲೆ ಅಬಕಾರಿ ಇಲಾಖೆ ಉಪ ಆಯುಕ್ತ ಡಾ.ಬಿ.ಆರ್.ಹಿರೇಮಠ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ನಾಡಿನ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಧಾರ್ಮಿಕ, ಸೇವಾ ವಲಯ 12 ಮಂದಿ ಸಾಧಕೋತ್ತಮರಾದ ವೇದ- ಜೋತಿಷ್ಯ – ವಾಸ್ತು ಶಾಸ್ತ್ರ ಪರಿಣತ ಟಿ.ವಿ.ವಿಶ್ವನಾಥ ಅಯ್ಯರ್, ಮೈಸೂರು ಸಾಂಪ್ರದಾಯಿಕ ಶೈಲಿಯ ಖ್ಯಾತ ಚಿತ್ರಕಲಾವಿದೆ ಡಾ. ಮೀರಾ ಕುಮಾರ್, ಸಾಮಾಜಿಕ , ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರ ಅಭಿವೃದ್ಧಿಯ ಹರಿಕಾರ ಎಸ್.ವೀರಭದ್ರಯ್ಯ, ಭಾರತೀಯ ಸಾರ್ವಜನಿಕ ಸಂರ್ಪಕ ಪರಿಷತ್ತು ರಾಷ್ಟ್ರೀಯ ಅಧ್ಯಕ್ಷೆ ಎಸ್.ಗೀತಾ ಶಂಕರ್, ವಿಕ್ಟೋರಿಯ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಆರ್.ಶ್ರೀನಿವಾಸ್, ಬೆಂಗಳೂರು ವಿವಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಡಾ.ಆರ್.ಸರ್ವಮಂಗಳ , ವಾಸ್ತು ಶಿಲ್ಪ ತಜ್ಞ ಬಿ.ಕೆ.ಮುರಳೀಧರ , ರಂಗ ಸಜ್ಜಿಕೆ , ಬೆಳಕು ಮತ್ತು ಧ್ವನಿ ತಜ್ಞ ಬಿ.ಕೆ.ರವಿಶಂಕರ್ , ಕ್ರೀಡಾ ಪಟು ಜಯರಾಂಶೆಟ್ಟಿ , ನೃತ್ಯ ತರಬೇತುದಾರೆ ವಿದುಷಿ ರೂಪಶ್ರೀ ಮಧುಸೂಧನ್ , ಸಂಸ್ಕೃತಿ ಚಿಂತಕ, ಅಂಕಣಕಾರ , ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ನಿರ್ದೇಶಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಮತ್ತು ವಚನ, ಜಾನಪದ ನೃತ್ಯ ಸಂಯೋಜಕಿ ಸ್ನೇಹ ಕಪ್ಪಣ್ಣ ರವರುಗಳಿಗೆ ಈ ಸಾಲಿನ ಪ್ರತಿಷ್ಠಿತ ‘ಹಂಸ ಸಮ್ಮಾನ್ ಪ್ರಶಸ್ತಿ – 2023’ ವೀಣಾಪಾಣಿ ಸರಸ್ವತಿಯ ಸ್ಮರಣಿಕೆ , ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ರಂಗ ಸಂಘಟಕ , ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ ಕಪ್ಪಣ್ಣ , ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ನಿರ್ದೇಶಕ ಜಿ.ಎಂ ಶಿರಹಟ್ಟಿ , ಕಿದ್ವಾಯಿ ಸ್ಮಾರಕ ಗ್ರ್ರಂಥಿ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ರಾಮಚಂದ್ರ ಹಾಗೂ ಎನ್.ಟಿ.ಪಿ.ಸಿ ಮುಖ್ಯ ಸಲಹೆಗಾರ ಎಂ.ಬಿ.ಜಯರಾಮ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಳೆದ 48 ವರ್ಷಗಳಿಂದ ಹಲವಾರು ವೈಶಿಷ್ಟಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಹಂಸಜ್ಯೋತಿಯು ಈ ಬಾರಿ ‘ಕೃಷ್ಣಂ ಕಲಯ ಸಖಿ’ ಎಂಬ ಶೀರ್ಷಿಕೆಯಡಿ ನಾಡಿನ ಸುಪ್ರಸಿದ್ಧ ಕಲಾವಿದರಾದ ವಿಜಯ ಹಾವನೂರು , ರವೀಂದ್ರ ಸೊರಗಾವಿ ,ಗಣೇಶ ದೇಸಾಯಿ, ದಿವಾಕರ ಕಶ್ಯಪ್ , ಹರೀಶ ನರಸಿಂಹ, ಗುರುರಾಜ ಹೊಳೆನರಸೀಪುರ, ಮಧುರ ರವಿಕುಮಾರ್ , ಶ್ರೀದೇವಿ ಗರ್ತಿಕೆರೆ , ಚಾಂದಿನಿ ಗರ್ತಿಕೆರೆ ಮತ್ತು ಹೆಚ್.ಕೆ .ಅನಘ ರವರು ಶ್ರೀಕೃಷ್ಣ ಸ್ಮರಣೆಯ ವೈವಿಧ್ಯಮಯ ಗಾಯನವನ್ನು ಪ್ರಸ್ತುತಪಡಿಸಿ ಗಾನಸುಧೆಯಿಂದ ರಂಜಿಸಿದರು.
ಡಾ.ಮಾಲಿನಿ ರವಿಶಂಕರ್ ನಿರ್ದೇಶನದ ಲಾಸ್ಯ ವರ್ಧನ ಟ್ರಸ್ಟ್ ನೃತ್ಯ ಶಾಲೆಯ ಕಲಾವಿದರು ಮತ್ತು ರೂಪಶ್ರೀ ಮಧುಸೂಧನ್ ನಿರ್ದೇಶನದ ನೃತ್ಯ ಗಂಗಾ ಪ್ರದರ್ಶನ ಕಲಾಕೇಂದ್ರದವರಿಂದ ಶ್ರೀಕೃಷ್ಣ ಸ್ಮರಣೆಯ ಶಾಸ್ತ್ರೀಯ ನೃತ್ಯ ಜನಮನಸೂರೆಗೊಂಡಿತು.
ಹಂಸಜ್ಯೋತಿ ಟ್ರಸ್ಟ್ ನ ಸಂಸ್ಥಾಪಕ – ವ್ಯವಸ್ಥಾಪಕ ಟ್ರಸ್ಟೀ ಎಂ.ಮುರಳೀಧರ ಮತ್ತು ಹಿರಿಯ ಟ್ರಸ್ಟೀ ಎಂ.ಆರ್.ನಾಗರಾಜ ನಾಯ್ಡು , ವಿರ್ಮಶಕ ಡಾ.ಮೊಳಕಾಲ್ಮೂರು ಶ್ರೀನಿವಾಸಮೂರ್ತಿ, ಹಿರಿಯ ಲೇಖಕಿ ಡಾ.ರಾಧಾ ಕುಲಕರ್ಣಿ, ಕೆಂಗೇರಿ ಎಸ್.ಎ.ಬಿ.ಎಸ್ ಕಾಲೇಜಿನ ಪ್ರಾಂಶುಪಾಲ ಪ್ರೋ.ಜಯರಾಮ ಮೊದಲಾದವರು ಉಪಸ್ಥಿತರಿದ್ದರು.
ವಿವರಗಳಿಗೆ: 94480 93409