ಸಿಂದಗಿ: ನನ್ನ ಜೀವನದಲ್ಲಿ 5 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ ಸುಮಾರು 35 ವರ್ಷದ ರಾಜಕೀಯ ಜೀವನದಲ್ಲಿ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ತಿಳಿದಿದ್ದೇನೆ. ನನಗೆ ಶಿಕ್ಷಣ ಕ್ಷೇತ್ರ ಹೊಸದೇನು ಅಲ್ಲ ಬೆಳಿಗ್ಗೆ 9 ರಿಂದ ರಾತ್ರಿ 12ರ ಒಳಗೆ ಯಾವುದೇ ಸಮಸ್ಯೆ ಬಗ್ಗೆ ಕರೆ ಮಾಡಿದರೂ ಸ್ಪಂದಿಸಿ ಕೆಲಸ ಮಾಡುವೆ ಎಂದು ವಿಧಾನ ಪರಿಷತ್ತು ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಪಟ್ಟಣದ ಟಿಎಸ್‍ಪಿಎಸ್ ಮಂಡಳಿಯ ಎಚ್.ಜಿ.ಪ.ಪೂ ಕಾಲೆಜಿನ ಸಭಾ ಭವನದಲ್ಲಿ ಹಮ್ಮಿಕೊಂಡ ಸನ್ಮಾನ ಸಮರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಕಷ್ಟು ವಿರೋಧಗಳ ಮಧ್ಯೆ ಮೆಡಿಕಲ್ ಕಾಲೇಜು ಪ್ರಾರಂಭಿಸಿ ಬಹುದಿನಗಳಿಂದ ಬೆಳಗಾವಿಯ ವಿದ್ಯಾರ್ಥಿಗಳಿಗೆ ಜ್ವಲಂತ ಸಮಸ್ಯೆಯನ್ನು ನೀಗಿಸಿ ಬದುಕು ಸಾಗಿಸುವಂತೆ ಮಾಡಿದ್ದೇನೆ ಚುನಾವಣೆಯಲ್ಲಿ ಗೆಲ್ಲುವವರೆಗೆ ಮಾತ್ರ ಒಂದು ಪಕ್ಷದ ಅಭ್ಯರ್ಥಿ ಗೆದ್ದ ನಂತರ ಪಕ್ಷಾತೀತವಾಗಿ ಕೆಲಸ ಮಾಡುವವ ನಾನು. ಯಾರೇ ಸಮಸ್ಯೆ ಎಂದು ಬಂದವರಿಗೆ ಸಹಾಯಹಸ್ತ ನೀಡುವೆ. ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಮುಖ್ಯಮಂತ್ರಿಗಳ ಹಾಗೂ ಶಿಕ್ಷಣ ಸಚಿವರ ಜೊತೆ ಚರ್ಚಿಸಲು ಸಮಯ ಕೇಳಿದ್ದೇನೆ 1995ರ ವರೆಗಿನ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಅಲ್ಲದೆ ಶಿಕ್ಷಣ ವರ್ಗಾವಣೆ, ಹಳೇ ಪಿಂಚಣಿ ಮುಂದುವರೆಸುವಂತೆ ಹಲವಾರು ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದು ಕೂಡಲೇ ಆ ಸಮಸ್ಯೆಗೆ ತಿಲಾಂಜಲಿ ಇಡುವೆ. ಶಿಕ್ಷಕರ ಸಮಸ್ಯೆಗಳ ಆಲಿಕೆಗೆ 4 ಜನ ಆಪ್ತ ಸಹಾಯಕರನ್ನು ನೇಮಿಸಿದ್ದೇನೆ ದೂರವಾಣಿ ಕರೆಗೂ ಸದಾ ಸ್ಪಂದಿಸುವೆ ನಾನೇನು ಆಡಂಬರದ ರಾಜಕಾರಣಿಯಲ್ಲ ಸದಾ ಜನರ ಮಧ್ಯೆ ಬೆರೆತು ರಾಜಕೀಯ ಮಾಡಿದವ ಜನಸಾಮಾನ್ಯರ ಕಷ್ಟದ ಅರಿವು ನನಗಿದೆ. ಶಾಲು- ಸನ್ಮಾನಗಳಿಗೆ ಜೋತು ಬೀಳದೆ ಶಿಕ್ಷಕರ ಸಮಸ್ಯೆಗಳು ನೀಗಿದರೆ ಅದುವೆ ನನಗೆ ಸನ್ಮಾನ ಎಂದರು.
ಟಿಎಸ್‍ಪಿಎಸ್ ಮಂಡಳಿಯ ಚೇರಮನ್ ಅಶೋಕ ಮನಗೂಳಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳು ಬಹುದಿನಗಳಿಂದ ನೆನೆಗುದಿಗೆ ಬಿದ್ದಿವೆ ಶಿಕ್ಷಣ ಕ್ಷೇತ್ರದ ಜವಾಬ್ದಾರಿ ಇದ್ದವರಿಗೆ ಮಾತ್ರ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಆಲಿಸಲು ಸಾಧ್ಯ ಅದು ಪ್ರಕಾಶ ಹುಕ್ಕೇರಿ ಅವರು ಈ ಸಮಸ್ಯೆ ಬಹು ಬೇಗನೇ ಇತ್ಯರ್ಥಗೊಳಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಟಿಎಸ್‍ಪಿಎಸ್ ಮಂಡಳಿಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ, ಶಿರೂಗೌಡ ದೇವರಮನಿ, ಬಿ.ಜಿ.ನೆಲ್ಲಗಿ, ವಿಶ್ವನಾಥಗೌಡ ಪಾಟೀಲ, ಶಂಕರಗೌಡ ಪಾಟೀಲ, ಬಿ.ಎಲ್.ಡಿ ಸಂಸ್ಥೆಯ ನಿರ್ದೇಶಕ ಅಶೋಕ ವಾರದ, ಕಾಂಗ್ರೆಸ್ ಮುಖಂಡರಾದ ಮಲ್ಲಣ್ಣ ಸಾಲಿ, ಯೋಗಪ್ಪಗೌಡ ಪಾಟೀಲ ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರ ಸಂಘದಿಂದ ಮುತ್ತು ಮುಂಡೆವಾಡಗಿ, ಕಸಾಪದಿಂದ ರಾಜಶೇಖರ ಕೂಚಬಾಳ, ಎಸ್.ಸ್ಸಿ ಘಟಕದಿಂದ ಪ್ರಕಾಶ ಕಾಂಬಳೆ, ತಿರುಪತಿ ಬಂಡಿವಡ್ಡರ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಬುಳ್ಳಾ, ಗಡಂಚಿ ಶಿಕ್ಷಕರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಿ ಗೌರವಿಸಿದರು.
ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಸಿದ್ಧಲಿಂಗ ಕಿಣಗಿ ನಿರೂಪಿಸಿ, ವಂದಿಸಿದರು.