ಬೈಲಹೊಂಗಲ-ಬೈಲಹೊಂಗಲ ತಾಲೂಕಿನ ಸಮಗ್ರ ಇತಿಹಾಸವನ್ನು ಪುಸ್ತಕ ರೂಪದಲ್ಲಿ ನೀಡಿರುವ ಕೃತಿ ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಕೃತಿ ಬಹಳ ಮಹತ್ವಪೂರ್ಣವಾಗಿದೆ ಎಂದು ಚಾರಿತ್ರಿಕ ಕಾದಂಬರಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ ಹೇಳಿದರು.
ಬೈಲಹೊಂಗಲ ಪಟ್ಟಣದ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಕಚೇರಿಯಲ್ಲಿಂದು ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ ರಚಿಸಿದ ‘ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ’ ಚಾರಿತ್ರಿಕ ಪುಸ್ತಕವನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಪರಿಚಯಿಸಿ ಮಾತನಾಡಿ, ಇತಿಹಾಸ ಬರೆಯಲು ಸತ್ಯ ಇರುವಂತದ್ದು ಮಾತ್ರ ಬರೆಯಬೇಕಾಗುತ್ತದೆ. ಬೈಲಹೊಂಗಲ ತಾಲೂಕಿನ ಎಲ್ಲ ಸಮೃದ್ದಿಯನ್ನು ತುಂಬಿಕೊಂಡ ನಾಡಾಗಿದೆ. ಧಾರವಾಡದಲ್ಲಿ ಒಂದು ಕಲ್ಲು ಒಗೆದರೆ ಒಬ್ಬ ಸಾಹಿತಿಗಳ ಮನೆ ಮೇಲೆ ಬೀಳುತ್ತದೆ. ಬೈಲಹೊಂಗಲದಲ್ಲಿ ಒಂದು ಕಲ್ಲು ಒಗೆದರೆ ಶೂರರ ಮನೆಯ ಮೇಲೆ ಬೀಳುತ್ತದೆ ಎಂದು ಮಾರ್ಮಿಕವಾಗಿ ನುಡಿದ ಅವರು ಈ ನಾಡು ಶೂರರು, ಧೀರರನ್ನು ಹೊಂದಿದೆ. ಇಲ್ಲಿಯ ಮಠ ಪರಂಪರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಸಾಮಾಜಿಕ, ರಾಜಕೀಯ ಹೀಗೆ ಇಲ್ಲಿಯ ಪ್ರತಿಯೊಂದು ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸಂಪೂರ್ಣ ಮಾಹಿತಿಯನ್ನು ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇಂದಿಯ ಯುವಪೀಳಿಗೆ ಮೊಬೈಲ್ ಸಂಸ್ಕೃತಿ ಬದಿಗೊತ್ತಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ನಮ್ಮ ಸಂಸ್ಕೃತಿ ಮರೆಯಾಗದೆ ಇನ್ನೂ ಹೆಚ್ಚಿನ ದಿನ ಉಳಿಯಬಹುದೆಂದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಬೈಲಹೊಂಗಲ ನಾಡು ಶೂರರ ನಾಡಾಗಿದೆ. ಇಲ್ಲಿಯ ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಮೊದಲಾದವರು ನಮ್ಮ ದೇಶದ ಸ್ವಾತಂತ್ರ್ಯ ಕ್ಕೆ ಹೋರಾಟ ಮಾಡಿದ ಮಹನೀಯರು, ಸಾಹಿತ್ಯ ಸೇವೆ ಮಾಡಿದ ಇಲ್ಲಿಯವರೇ ಆದ ಸತ್ಯಾರ್ಥಿ, ಎಂ.ಆರ್.ಮುಲ್ಲಾ, ಕನ್ನಡಕ್ಕೆ ಹೋರಾಡಿದ ಸಿದ್ದನಗೌಡ ಪಾಟೀಲ, ಮೂರುಸಾವಿರಮಠ, ನಾಗನೂರ ಮಠ ಹೀಗೆ ಇನ್ನೂ ಅನೇಕ ವಿಷಯಗಳನ್ನು ಕ್ರೋಡಿಕರಿಸಿ ಪುಸ್ತಕದಲ್ಲಿ ನೀಡಿ ಬೈಲಹೊಂಗಲ ನಾಡಿನ ಪರಿಚಯವನ್ನು ನೀಡಲು ಪ್ರಯತ್ನಿಸಿದ ಲೇಖಕ ಸಿ.ವಾಯ್.ಮೆಣಸಿನಕಾಯಿಯವರ ಕಾರ್ಯ ಶ್ಲಾಘನೀಯವೆಂದರು.
ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ ಮಾತನಾಡಿ, ಕೇವಲ ಪತ್ರಕರ್ತರಾಗಿರದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿ ನಾಡಿನ ಇತಿಹಾಸವನ್ನು ಬರೆಯುವ ಸಾಹಸ ಮಾಡಿದ್ದಾರೆ. ಅವರ ಸಾಮಾಜಿಕ ಕಳಕಳಿ ಮೆಚ್ಚುವಂತಹುದಾಗಿದೆ. ನಮ್ಮ ತಾಲೂಕಿನ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ಕಲೆ ಪುಸ್ತಕ ರಚಿಸಿರುವದು ಶ್ಲಾಘನೀಯವೆಂದರು.
ಮಕ್ಕಳ ಸಾಹಿತಿ ಅಣ್ಣಪೂರ್ಣಾ ಕನೋಜ ಮಾತನಾಡಿ, ನಮ್ಮ ತಾಲೂಕಿನಲ್ಲಿ ಸಾಕಷ್ಟು ವಿಷಯಗಳು ಮಹತ್ವ ಪೂರ್ಣವಾಗಿದೆ. ಅವುಗಳನ್ನು ಸಿ.ವಾಯ್.ಮೆಣಸಿನಕಾಯಿಯವರು ಕಲೆ ಹಾಕಿ ಪುಸ್ತಕ ರಚನೆ ಮಾಡಿರುವುದು ಸಾಮಾನ್ಯದ ವಿಷಯವಲ್ಲ. ಅವರ ಸಾಹಿತ್ಯ ಕೃಷಿ ಇನ್ನಷ್ಟು ಪಸರಿಸಲಿ ಎಂದರು.
ಪುಸ್ತಕ ರಚಿಸಿದ ಸಿ.ವಾಯ್.ಮೆಣಸಿನಕಾಯಿ ಮಾತನಾಡಿ, ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಎನ್ನುವ ಕೃತಿಯನ್ನು ರಚಿಸಲು ನಾನು ಸಾಕಷ್ಟು ವಿಷಯಗಳನ್ನು ಕಲೆ ಪ್ರಕಟಿಸಿದ್ದು, ನಮ್ಮ ತಾಲೂಕಿನ ಅಡಗಿರುವ ಹಲವು ಸಮಗ್ರ ಇತಿಹಾಸ ಸಂಗ್ರಹಿಸಲು ಸಹಕಾರ ನೀಡಿದ ಎಲ್ಲರನ್ನು ನೆನೆಯುತ್ತಾ, ಪುಸ್ತಕವನ್ನು ಎಲ್ಲರೂ ಕೊಂಡು ಓದಬೇಕೆಂದು ವಿನಂತಿಸಿದರು.
ಇದೇ ವೇಳೆ ಕೃತಿ ರಚಿಸಿದ ಸಿ.ವಾಯ್.ಮೆಣಸಿನಕಾಯಿ, ಪಿಎಲ್ ಡಿ ಬ್ಯಾಂಕ್ ನೂತನ ಅಧ್ಯಕ್ಷ ಪರ್ವತಗೌಡ ಪಾಟೀಲರನ್ನು ಸತ್ಕರಿಸಲಾಯಿತು. ಬಿಜೆಪಿ ತಾಲೂಕ ಅಧ್ಯಕ್ಷ ಸುಭಾಸ ತುರಮರಿ, ಬಿಜೆಪಿ ಮುಖಂಡರಾದ ಮಡಿವಾಳಪ್ಪ ಹೋಟಿ, ಪುರಸಭೆ ಸದಸ್ಯರಾದ ವಾಣಿ ಪತ್ತಾರ, ಜಗದೀಶ ಜಂಬಗಿ, ನಿಂಗಪ್ಪ ಚೌಡನ್ನವರ, ಪಿಎಲ್ ಡಿ ಬ್ಯಾಂಕ ಅದ್ಯಕ್ಷ ಪರ್ವತಗೌಡ ಪಾಟೀಲ, ಶ್ರೀಶೈಲ ಯಡಳ್ಳಿ, ನಿವೃತ್ತ ಶಿಕ್ಷಕ ಮಹಾಬಳೇಶ್ವರ ಬೋಳನ್ನವರ, ಸಂಗನಗೌಡರ, ವೀರೇಶ ಹಲಕಿ, ಅಡಿವೆಪ್ಪ ಹೊಸಮನಿ, ಬಾಳಗೌಡ ಪಾಟೀಲ, ವಿಜಯ ಪತ್ತಾರ, ಮೊದಲಾದ ಗಣ್ಯರು ಪಾಲ್ಗೊಂಡಿದ್ದರು. ಸಿದ್ದಾರೂಡ ಹೊಂಡಪ್ಪನವರ ಸ್ವಾಗತಿಸಿ, ನಿರೂಪಿಸಿದರು.