ಬೀದರ – ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಭಾರತೀಯ ಜನತಾ ಪಕ್ಷದ ನಾಯಕರು ಮರಾಠಾ ಹಾಗೂ ಸವಿತಾ ಸಮಾಜದವರ ವಿರೋಧ ಎದುರಿಸಬೇಕಾದ ಪರಿಸ್ಥಿತಿ ಬಂದಿದ್ದು ಉಪಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ ಎಂಬ ವಾತಾವರಣ ಕಂಡುಬರುತ್ತಿದೆ.
ಬಸವಕಲ್ಯಾಣದಲ್ಲಿ ನಡೆಯುತ್ತಿದ್ದ ಮರಾಠಾ ಸಮುದಾಯದ ಸಭೆಗೆ ಸಂಸದ ಭಗವಂತ ಖೂಬಾ ಮತ್ತು ಮರಾಠಾ ಸಮುದಾಯದ ನಾಯಕರು ವೇದಿಕೆಯತ್ತ ಆಗಮಿಸುತ್ತಲೆ ತೀವ್ರ ವಿರೋಧ ವ್ಯಕ್ತವಾಯಿತು.
ಇದು ರಾಜಕೀಯ ಸಭೆಯಲ್ಲ ಸಮುದಾಯದ ಸಭೆ ಇಲ್ಲಿ ರಾಜಕಾರಣಿಗಳಿಗೆ ಪ್ರವೇಶವಿಲ್ಲ ಎಂದು ಸಮಾಜದ ಜನರು ವೇದಿಕೆಯ ಮುಂಭಾಗದಲ್ಲಿಯೇ ಅವರನ್ನು ತಡೆದು ಬಿಜೆಪಿ ಪಕ್ಷವು ಮರಾಠಾ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮುಂಚೆ ಎರಡು ದಿನಗಳ ಹಿಂದೆ ಬೀದರ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಹಡಪದ ಸಮಾಜ ಕುರಿತಂತೆ ಅವಹೇಳನಕಾರಿ ಮಾತು ಆಡಿದ್ದಾರೆಂಬ ಕಾರಣದಿಂದ ಸವಿತಾ ಸಮಾಜದವರು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡಿದರು. ನಂತರ ಪ್ರಭು ಚವ್ಹಾಣ ಅವರು ಸವಿತಾ ಸಮಾಜದವರ ಕ್ಷಮೆ ಕೇಳಿದ್ದಾರಾದರೂ ಉಪಚುನಾವಣೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ