spot_img
spot_img

ವಿಶ್ವಗುರು ಬಸವಣ್ಣನ ಕವಿತೆಗಳು

Must Read

- Advertisement -

ವಿಶ್ವಗುರು ಬಸವಣ್ಣ

ವಿಶ್ವಮಾನವ ಸಂದೇಶವ ಹೊತ್ತು
ಭುವಿಗೆ ಬಂದಿಳಿದ ಕರುಣಾಮೂರ್ತಿ
ಇವನಾರವ ಇವನಾರವ ಎಂದೆನ್ನದೆ
ಸಕಲ ಜೀವಾತ್ಮರಿಗೆ ಲೇಸಬಯಸಿದ ಚಿನ್ಮಯಮೂರ್ತಿ

ದಯೆ, ಪ್ರೀತಿ ಕಾಯಕದ ನಿಷ್ಠೆ
ಸದಾ ಇವರ ಜೊತೆಯಲ್ಲಿತ್ತು ಸತ್ಯದ ಪ್ರತಿಷ್ಠೆ
ಅಂತ್ಯಜರನ್ನು ಆತ್ಮಸ್ವರೂಪಿಗಳನ್ನಾಗಿಸಿ
ಬದುಕಲಿ ಹೊಂಗಿರಣ ಅರುಹಿದ ಜಗಜ್ಯೋತಿ

ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು
ಎನ್ನುವ ಸಮಾನತೆ ಇವರ ಮಂತ್ರ
ಸ್ತ್ರೀಯನ್ನು ಶರಣೆಯೆಂದು ಕರೆದು
ಪೂಜನೀಯ ಮಾಡಿದುದು ಇವರ ಆತ್ಮತಂತ್ರ

- Advertisement -

ಎನಗಿಂತ ಕಿರಿಯರಿಲ್ಲ ಎಂಬ ನುಡಿ
ಕಣ್ತೆರೆಸಿತು ನನ್ನ ಬಾಳಿನ ಗುಡಿ
ಜಗದ ಉದ್ಧಾರದ ಶಿಲ್ಪಿಗರು
ವಿಶ್ವವೇ ನಮಿಸುವ ಗಾರುಡಿಗರು

ಬಾಗೇವಾಡಿಯ ಭುವನದ ಬೆಳಕು
ಹಬ್ಬಿತು ಮೂಲೋಕದಲಿ ಚೆಂಬೆಳಕು
ಓ ಬಸವೇಶ ಎನ್ನ ಗುರುವರ್ಯ
ನಿನ್ನ ದಯೆಯಿರಲಿ ಸಕಲ ಪ್ರಾಣಿಗಳೆಲ್ಲರ ಮೇಲೆ

ವಂದಿಸುವೆ ನಿನಗೆ ಹರಸು ಎನಗೆ
ವಚನಗಳ ಭಾವಮಾರ್ಗದಲಿ ನೀ ನಡೆ ಎಂದು ನೀ ನಡೆ ಎಂದು

- Advertisement -

ಶಿವಕುಮಾರ ಕೋಡಿಹಾಳ
ಮೂಡಲಗಿ


ಗುರು ಬಸವ

ಪೀಠ-ಪಟ್ಟವೇರಲಿಲ್ಲ,
ಬಿರುದು-ಬಾವಲಿಗೆಳಸಲಿಲ್ಲ
ಸಗ್ಗದ ದೇವತೆಯಂತೂ ಅಲ್ಲ
ಪೂಜೆ-ಪರಾಕು ಬೇಕೇ ಇಲ್ಲ
ಜಗದ ಸೇವೆಗೊಲಿದು ಬಂದ
ಭಕ್ತನೀತ ಬಸವ….

ಭುವಿಯ ಮೇಲೆ ಗುರುಗಳಿಲ್ಲ
ದೀವತೆಗಳಂತೂ ಸಾಧ್ಯವಿಲ್ಲ
ಎಲ್ಲ ಎಲ್ಲ ನಾವೇ ಎಲ್ಲ
ಎನುವ ಡೊಂಬರ
ನುಡಿಯನಳಿದು
ನೆಲದ ಮೇಲೆ ಭಕ್ತರಿಲ್ಲ
ಜಗವು ಜಂಗಮವಾಗಿಹುದಲ್ಲ
ಇದ್ದರಹುದು ನಾನೇ ಒಬ್ಬ
ಭಕ್ತನೆಂದ ಭೃತ್ಯನೀತ ಬಸವ…

ಜಗದ ಕುರುಹನರಿಯದೆಯೂ
ಜಗದ ಗುರು ತಾನೇ ಎಂದು
ಒರಲಿ ಒರಲಿ ತಮಟೆ ಹೊಡೆವ
ಕೂಗುಮಾರಿ ಕೂಟದಿ
ಗೊಡ್ಡುತನದ ಗಡ್ಡ ಬಿಸುಟು
ದೊಡ್ಡತನದ ಹಮ್ಮು ಹೊಸೆದು
ಕಿರಿಯ ತಾನು, ಹಿರಿಯರೆಲ್ಲರೆಂದು
ನಮಿಪ ಶಿವ ಭಕ್ತ ಪ್ರೇಮಿ ಬಸವ.

ಹೆಣ್ಣು,ಹೊನ್ನು,ಮಣ್ಣಿಗೆಳಸಿ
ಹಿರಿಯ ದೈವ ತಾವೇ ಎನಿಸಿ
ಗರುವದಿಂದ ಅಳಿದು ಹೋದ
ಹಿರಿಯನಲ್ಲ ಬಸವ.

ಮೂರನಳಿದು,ಆರು ತಿಳಿದು
ಅಂಗವಳಿದು ಲಿಂಗವಾಗಿ
ಎಲ್ಲರೊಳು ಜಂಗಮವ ಕಾಣ್ವ
ಸಂಗನ ನಿಲುವು ಬಸವ
ಸಕಲ ಜೀವದ ಕುಶಲ ಬಯಸಿ
ಅನ್ಯವನವನಳಿದು ತನ್ನತನಕೆ ಎಳಸಿ
ಇಹದ ಸುಖಕೆ ದಾಸೋಹಿಯಾದ
ಜಗದ ಗುರು ಬಸವ.

ದೇವಗಿಂತ ಭಕ್ತ ಮಿಗಿಲು
ಪದವಿಗಿಂತ ಸೇವೆ ಮಿಗಿಲು
ಓದಿ ಜಾಣನಾಗೋ ಬದಲು
ಅರಿದು ಶರಣನಾಗುವದೇ ಮೇಲು
ಎಂದು ಅರುಹಿ ಜಗವ ಪೊರೆದ
ಆದಿ ಗುರುವು ಬಸವ
ನಮಗೆ ಜಗದ ಗುರು ಬಸವ.

ಕೆ.ಶಶಿಕಾಂತ


ನಮ್ಮ ಬಸವ

ಮೇಲು-ಕೀಳುಗಳ
ಮೇಲಾಟದ ಈ ನೆಲದಲಿ,
ಬೆಳಕಿನಂತೆ ಭೇದವೆಣಿಸದ
ಅತ್ತಿತ್ತ ಹೊಯ್ದಾಡದ
ಸಮತಲದಲಿ ಸಂಧಿಸುವ
ಹನ್ನೆರಡರ ಕಾಲದಲಿ

ಏನೂ ಇಲ್ಲದ,ಏನನ್ನೂ ಬಯಸದ
ಆದಿಯಲಿ ಹುಟ್ಟಿದ ಆದಿತ್ಯನಂತೆ
ಮೈವೆತ್ತು ಬಂದವ ‘ಬಸವ’
ಹೊತ್ತು ತಂದನು
ಬಸವಳಿದ ಬದುಕಿಗೆ ಯಶವ.

ಗಿಳಿಯೋದುವ ಪರಿಯಂತೆ
ವೇದವನೋದಿ ದೇವರಾದವರು
ಮಾನವರನೇ ಅತಿಗಳೆದಾಗ,
ವೇದದ ಭೇದವ ಸಾರಿ
ನಾದಬಿಂದುವಿನ ಕಳೆ ತೋರಿ
ಮಾನವನನೇ ಮಹಾದೇವನಾಗಿಸಿದ
ಬಸವ,ಈ ಲೋಕಕ್ಕೆ ತಂದಿತ್ತ
ಮೊದಲ ಜಸವ.

ಮುಕ್ಕೋಟಿ ದೇವರು
ಮುಪ್ಪುರಿಗೊಂಡರು ಕೂಡ
ಕೈಮುಗಿವ ಜೀವಕ್ಕೆ
ಹನಿ ನೀರನೀಯದೇ
ಭಕ್ತಿಯ ನೇಮದಲಿ
ರಕ್ತವನು ಕುಡಿವಾಗ
ಕಂಡಕಂಡವರನೆಲ್ಲ
ನನ್ನವರೆಂದೊರೆದು
ವಚನ ರಸವನೆರೆದು
ಬದುಕಿಸಿದವ ಬಸವ
ಜಗದ ಜೀವದಾತ
ನಮ್ಮ ಬಸವ.

ಕಲ್ಲುಕಟ್ಟಿಗೆ ಕಡಿವ
ಕರ್ಮಿಗಳಾದವರು,
ಸಂಭೋಳಿಯಂದೊದರುತ್ತ
ಮೈಮಾರಿ ಬದುಕುವವರು,
ಪ್ರಳಯದ ಕಸಕೆ ಸಿಲುಕಿ
ಸಸಿಯೊಡೆಯದೆ ಕಮರಿದವರು ,
ನೂರು ಜಾತಿಯಲಿ ತೋರಿ
ಹೊಟ್ಟೆ ಹೊರೆವವರನು ಕರೆದು
ಲಿಂಗಯ್ಯನ ನಿಲುವೇ
ಈ ಇಹವು ಎಂದರುಹಿ
ಕಾಯದ ಕಳವಳವ ಕಳೆದು
ಕಾಯಕಯೋಗಿಗಳೆನಿಸಿ
ಜಗಕೆ ಜಂಗಮ ದೀಕ್ಷೆಯನಿತ್ತವನು
ಬಸವ ..

ಹೊನ್ನಿಂಗೆ ಬಾರದೆ,
ಮಣ್ಣಿಂಗೆ ಬಾರದೆ,
ಕಣ್ಣು ಮನದಲ್ಲೂ
ಹೆಣ್ಣಿಂಗೆ ಎಳಸದೆ,
ಕಾಯಕದ ಕೂಲಿಯ ತಂದು
ಜಂಗಮ ದಾಸೋಹವ ಮಾಡಿ
ಶರಣ ಸತಿ,ಲಿಂಗ ಪತಿ
ಎಂಬ ನುಡಿಯ ಅನುಗೊಳಿಸಿ
ಅಂಗ-ಲಿಂಗ ಸಮಕಳೆಯ
ತೋರಿದ ಕೂಡಲಸಂಗ
ನಮ್ಮ ಬಸವ.

ಸಂಗಯ್ಯನು ಬಸವ,
ಲಿಂಗಯ್ಯನು ಬಸವ,
ಹೆಣ್ಣು-ಗಂಡು ಭಾವವಳಿದ
ಚಿನ್ಮಯನು ನಮ್ಮ ಬಸವ,
ಮರೆವನಳಿದು,ಅರಿವನೆರೆದು,
ಧರೆಯ ಕತ್ತಲೆಯನಳಿದ
ಲಿಂಗ ಕಳೆಯು ಬಸವ
ಜಗದ ಜ್ಯೋತಿ ಬಸವ

ಕೆ.ಶಶಿಕಾಂತ.


ಬಸವ

ಬೆಳಕಿನ ಕಣ್ಣನು
ತೆರೆಯಿಸು ಬಸವಾ
ಮುಚ್ಚಿದ ಮನದೊಳಗೆ
ಜ್ಞಾನದ ಬೀಜವ
.ಬಿತ್ತು ಬಸವಾ
ಬರಡಾದ ಕಾಯದೊಳಗೆ.

ಆಧ್ಯಾತ್ಮದ ಅಲೆಗಳ
ಎಬ್ಬಿಸು ಬಸವಾ
ಶೂನ್ಯ ಜಗದೊಳಗೆ
ಬದುಕಿನ ಸೆಲೆಯನು
. ಹೊಮ್ಮಿಸು ಬಸವಾ
ನೃತ್ಯದ ಗತ್ತಿ ನೊಳಗೆ.

ಮಾತಲಿ ಮೃದುತನ
ಮೂಡಿಸು ಬಸವಾ
ನೆಲದಲ್ಲಿ ನೆಲೆಗೊಳಿಸು
ದೃಷ್ಟಿಯ ಬದಲಿಸಿ
ಒಳಿತನು ಅರಳಿಸು
ಭುವಿಯ ಭವದಲಿ.

.ಕವಿದ ಕತ್ತಲೆಯ
ಮುಸುಕನು ತೆರೆಯಿಸು
ಅಂತರಂಗವ ಬೆಳಗಿಸು
ಆಡಂಬರದಿ ಮರೆಯುವ
ಅಹಂಕಾರ ಅಡಗಿಸು
ಅಂತರಂಗವ ಆವರಿಸು.

ಶ್ರೀಮತಿ ಪುಷ್ಪ ಮುರುಗೋಡ ಗೋಕಾಕ್


ಬಸವ ಬಾಳಿನ ಬೆಳಕು

ಬಸವನೆಂಬ ಭಾವ ಬಿರಿಯೇ
ಭವದ ಭಯ ಹರಿಯುವುದು
ಬಸವನೆಂಬ ನಾಮ ನುಡಿಯೇ
ನಾಲಿಗೆ ಪಾವನವಾಗುವುದು//

ಬಸವನೆಂಬ ಭಕ್ತಿ ಬಿರಿಯೇ
ಭ್ರಮೆಯು ದೂರಸರಿಯುವುದು
ಬಸವನೆಂಬ ಬಯಕೆ ಮೂಡೆ
ಭವದ ಬಂಧನ ದೂರಾಗುವುದು//

ಬಸವನೆಂಬ ನಾಮ ನುಡಿಯೇ
ನಡೆ-ನುಡಿ ಹಸನಾಗುವುದು
ಬಸವನೆಂಬ ಹೂವ ಬಿರಿಯೇ
ಭಕ್ತಿ ಪರಿಮಳ ಎಲ್ಲೆಡೆ ಪಸರಿಸುವುದು//

ಬಸವನೆಂಬ ಸುಜ್ಞಾನ ಬೀಜ ಬಿತ್ತೆ
ಹೆಮ್ಮರವಾಗಿ ಸುವಿಚಾರ ಹೂವಾಗುವುದು
ಬಸವನೆಂಬ ಮಂತ್ರ ಭಜಿಸೆ
ಬಿರುನುಡಿಗಳು ದೂರ ಸರಿಯುವವು//

ಬಸವನೆಂಬ ನಾಮ ಆರಾಧಿಸೆ
ಜಿಜ್ಞಾಸೆ ಮನದಿ ಮೂಡುವುದು
ಬಸವನ ವಚನಗಳ ಅರಿತು ನಡೆಯೇ
ಜಗವೆಲ್ಲ ಒಂದೇ ಎಂಬ ಭಾವ ಬಲವಾಗುವುದು//

ಬಸವನ ಬಳಗ ಸೇರಿ ನಡೆಯೇ
ಜಾತಿ-ಮತ-ಪಂತ ದೂರ ಸರಿಯುವವು
ಬಸವ ಪಥ ಅನುಸರಿಸೆ
ನಿರುತ ಕಾಯಕದಿ ಮಾನವನಾಗುವೆ//

ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group