ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ಹೊನ್ನಕುಸುಮ ಸಾಹಿತ್ಯ ವೇದಿಕೆಯ “ತಿಂಗಳ ಬೆಳಕು -30 ನೇ ಕೃತಿ ಅವಲೋಕನ, ಸಂವಾದ, ಚರ್ಚೆ ಕಾರ್ಯಕ್ರಮ ನಡೆಯಿತು.
ಜಾಜಿಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟರ “ಬಟಾ ಬಯಲು” ಕವನ ಸಂಕಲನ ಕುರಿತು ಸುಧೀರ್ಘವಾಗಿ ಮಾತನಾಡಿದ ಎಂ. ಡಿ. ಚಿತ್ತರಗಿ ಅವರು ಸತ್ಯಾನಂದ ಪಾತ್ರೋಟರು ಎಂಬತ್ತರ ದಶಕದಿಂದ ಬಂಡಾಯ ಸಾಹಿತ್ಯ ಚಳವಳಿಯಲ್ಲಿ ಗುರುತಿಸಿಕೊಂಡ ತಾಕತ್ತಿನ ಕವಿ ಎಂದರು.
ಬಟಾ ಬಯಲು ಸಂಕಲನವು ಸಖಿಯೊಂದಿಗಿನ ಸಂಭಾಷಣೆಯ ರೀತಿಯಲ್ಲಿವೆ. ವಾಚ್ಯಾರ್ಥ, ಪ್ರತಿಮೆ, ಸಂಕೇತಗಳನ್ನೊಳಗೊಂಡ ಈ ಕೃತಿ ಗ್ರಾಮೀಣ ಬದುಕಿನ ಸೊಗಡು, ಉತ್ತರ ಕರ್ನಾಟಕ ಗ್ರಾಮೀಣ ಪರಂಪರೆಯ ರೀತಿಯಲ್ಲಿ ಮೂಡಿ ಬಂದಿದೆ ಎಂದರು.
ಬಂಡಾಯದ ಖಾರ ಇಲ್ಲದಿದ್ದರೂ, ಪ್ರತಿಭಟನೆಯ ತಣ್ಣನೆಯ ಗಾಳಿಯಿದೆ. ಕವಿ ಪಾತ್ರೋಟರು ಬಟಾ ಬಯಲಿನಲ್ಲಿ ನಿಂತು ದಮನಿತ ಲೋಕದ ಜಗತ್ತನ್ನು, ಉಳ್ಳವರ ಮತ್ತು ಇಲ್ಲದವರ ಸಂಕಟ, ತಲ್ಲಣಗಳನ್ನು ಸಮಾಜದ ಸಂಗತಿಗಳನ್ನು ಹಾಗೂ ಬುದ್ಧ, ಬಸವ, ಅಂಬೇಡ್ಕರ ಮೊದಲಾದವರ ಸಂದೇಶಗಳು ನೆಲದ ಮರೆಯಲ್ಲಿ ಅಡಗಿರುವ ಕುರಿತು ವಿಷಾದ ವ್ಯಕ್ತಪಡಿಸಿದರು.
ಹರಕು ಕೌದಿ, ಮಳೆ, ಬಿಸಿಲು, ಹಳ್ಳ-ಕೊಳ್ಳ, ಕೋಳಿ, ಕುರಿ, ನಾಯಿ, ಇರುವೆ, ಬೆಕ್ಕು ಮೊದಲಾದವು ಈ ನೆಲದ ಹಿಡಿಗಂಟು ಎಂಬಂತೆ ಸಂಕಲನದಲ್ಲಿ ಚಿತ್ರಿಸಲಾಗಿದೆ. ಈ ಮಣ್ಣಿನ ಸಂಸ್ಕೃತಿಯನ್ನು, ಬೆವರಿನ ನೆಲೆಯಲ್ಲಿ ಪರಿಚಯಿಸುವ ವೈವಿಧ್ಯಮಯ ಸಂಕಲನವಾಗಿದೆ ಎಂದರು.
ಸತ್ಯಾನಂದ ಪಾತ್ರೋಟರು ಲೇಖಕರ ಮಾತುಗಳನ್ನಾಡುತ್ತ
ತಮ್ಮ ಬದುಕಿನ ನೋವು ನಲಿವುಗಳನ್ನು, ಸಾಹಿತ್ಯ ವಲಯದ ಸಂಗತಿಗಳನ್ನು ಹಂಚಿಕೊಂಡರು. ನಲವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ನನ್ನ ಸುಮಾರು ಹತ್ತು ಕವನ ಸಂಕಲನಗಳು, ಹಲವು ಕೃತಿಗಳು ಪ್ರಕಟಗೊಂಡವು. ಯಾರೂ ಈ ಸಂಕಲನಗಳನ್ನು ಚರ್ಚೆಗೆ ಎತ್ತಿಕೊಳ್ಳಲಿಲ್ಲ. ಹೊನ್ನ ಕುಸುಮ ಸಾಹಿತ್ಯ ವೇದಿಕೆ ಹುನಗುಂದ ಇವರು ವಿಶ್ವವಿದ್ಯಾಲಯ, ಸರಕಾರ ಹಾಗೂ ಸಾಹಿತ್ಯ ಅಕಾಡೆಮಿಗಳು ಮಾಡದೇ ಇರುವ ಕೆಲಸ ಮಾಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಾಹಿತ್ಯವು ರಾಜಧಾನಿ ಕೇಂದ್ರತವಾಗಿದೆ. ನಮ್ಮ ಉತ್ತರ ಕರ್ನಾಟಕದಲ್ಲಿ ಬರಹಗಾರರ ಕೊರತೆಯಿಲ್ಲ. ಆದರೂ ರಾಜಧಾನಿ ಸುತ್ತಮುತ್ತಲಿನವರಿಗೆ ಲೆಕ್ಕವಿಲ್ಲದಂತಾಗಿದೆ. ಸರಿಯಾದ ಸ್ಥಾನಮಾನ ಲಭಿಸಿಲ್ಲ ಎಂಬ ಅಳಲು ವ್ಯಕ್ತಪಡಿಸಿದರು. ಬಸವಾದಿ ಶರಣರು ಪ್ರಶ್ನಿಸುವ ಸಂಸ್ಕೃತಿಯಿಂದ ಬಂದವರು. ಅಂತಹ ಪರಂಪರೆಯನ್ನು ನಾವು ಮುಂದುವರಿಸಬೇಕು. ಮಾತು ಮತ್ತು ಬರಹ ಜೊತೆಗೆ ನಡತೆ ಬೇರೆಯಾಗಬಾರದು ಒಂದೇ ಆಗಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಎಸ್ ಎಸ್ ಮುಡಪಲದಿನ್ನಿ ಅವರು ಬಟಾಬಯಲು ಸಂಕಲನ ಹಾಗೂ ಪಾತ್ರೋಟರ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.
ಪಾತ್ರೋಟರ ಕಾವ್ಯಗಳಲ್ಲಿ ಜೀವಪರ ಕಾಳಜಿಯಿದೆ. ತಾಯಿ ಹಾಗೂ ತಾಯಿನಾಡು ಕುರಿತು ಕಾಳಜಿ, ಪ್ರೀತಿಯಿದೆ. ನಮ್ಮೆಲ್ಲರನ್ನು ಬೆಸೆಯುವುದು ಪ್ರೀತಿ. ಅದಕ್ಕಾಗಿಯೇ ನಾವೆಲ್ಲ ಇಲ್ಲಿ ಸೇರಿದ್ದೇವೆ. ಒಬ್ಬ ಒಳ್ಳೆಯ ಕವಿಯಲ್ಲಿ ವಸ್ತು ಸಿಕ್ಕರೆ ಸುಂದರವಾದ ಕಲಾಕೃತಿ ಮಾಡಬಹುದು ಎಂಬುದಕ್ಕೆ ಪಾತ್ರೋಟರೆ ಸಾಕ್ಷಿಯಾಗಿದ್ದಾರೆ ಎಂದರು.
ಶ್ರೀಮತಿ ಗೀತಾ ತಾರಿವಾಳ ಪ್ರಾರ್ಥಿಸಿದರು. ವಸ್ತ್ರದ ನಿರೂಪಿಸಿದರು.ಕೆ.ಎ.ಬನ್ನಟ್ಟಿ, ಜನಾದ್ರಿ ವಕೀಲರು, ಬಸಲಿಂಗಪ್ಪ ಕನ್ನೂರ್, ಡಾ.ಎಸ್.ಆರ್.ಗೋಲಗೊಂಡ, ಡಾ.ನಾಗರಾಜ್ ನಾಡಗೌಡ, ಶ್ರೀಮತಿ ಲಲಿತಾ ಹೊಸಪ್ಯಾಟಿ, ಶ್ರೀಮತಿ ಮುರ್ತುಜಾ ಬೇಗಂ ಕೊಡಗಲಿ, ಸುರೇಶ ಪಾಟೀಲ, ಜಗದೀಶ ಹಾದಿಮನಿ, ಡಾ. ಎಲ್. ಜಿ. ಗಗ್ಗರಿ, ಎ. ಎಂ. ಗೌಡರ ಸೇರಿದಂತೆ ಇನ್ನಿತರ ಲೇಖಕರು, ಸಹೃದಯರು, ಹೊನ್ನ ಕುಸುಮ ಸಾಹಿತ್ಯ ವೇದಿಕೆಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು.



