Homeಸುದ್ದಿಗಳುರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಶಿಕ್ಷಕರಿಗಾಗಿ ಬೆಳಗಾವಿ ತಾಲೂಕ ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ

ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ಶಿಕ್ಷಕರಿಗಾಗಿ ಬೆಳಗಾವಿ ತಾಲೂಕ ಮಟ್ಟದ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ

ತಮ್ಮಲ್ಲಿಯ ಪ್ರತಿಭೆಗಳನ್ನು ಬೆಳೆಸಲು ಸೂಕ್ತ  ವೇದಿಕೆ – ಬಿಇಓ ಮೇದಾರ

ಮಕ್ಕಳಿಗೆ ಶಿಕ್ಷಣ ಹೇಳುವ ವೃತ್ತಿಯ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮತ್ತು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧಾ ವೇದಿಕೆಗಳಲ್ಲಿ ಶಿಕ್ಷಕರು ಭಾಗಿಯಾಗಬೇಕು ಎಂದು ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ಗ್ರಾಮೀಣ ವತಿಯಿಂದ ಬೆಳಗಾವಿ ಗ್ರಾಮೀಣ ವಲಯದ ಶಿಕ್ಷಕರಿಗಾಗಿ  ಗುರುವಾರ ದಿ 17 ರಂದು ಬೆಳಗಾವಿ ತಾಲೂಕಿನ ಬಿ. ಕೆ. ಕಂಗ್ರಾಳಿಯ ಸರಕಾರಿ  ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಹಪಠ್ಯ ಚಟುವಟಿಕೆ  ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಬೆಳಗಾವಿ ಗ್ರಾಮೀಣ ವಲಯದ ಪ್ರಭಾರಿ ಬಿಇಓ ಎಂ.ಎಸ್. ಮೇದಾರ  ಮಾತನಾಡಿದರು.

ಕಾರ್ಯಕ್ರಮದ ನೋಡಲ್ ಅಧಿಕಾರಿ ಅರುಣ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದೆರಡು ವರ್ಷಗಳಿಂದ ನಡೆಯದ ಈ ಸ್ಪರ್ಧೆಗಳು ಈ ವರ್ಷ ಇಲಾಖೆ ನಿರ್ದೇಶನದಂತೆ ಅತ್ಯಂತ ಪಾರದರ್ಶಕವಾಗಿ  ಆಯೋಜಿಸಲಾಗಿದೆ. ಅದರ        ಸದುಪಯೋಗಪಡಿಸಿಕೊಳ್ಳುವುದರ ಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಗೋನಿ ಮಾತನಾಡಿ ಮಕ್ಕಳನ್ನು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸರ್ವರೀತಿಯಲ್ಲೂ ತಯಾರಿಸುವ ನಮ್ಮ ಶಿಕ್ಷಕರಲ್ಲಿಯ ಪ್ರತಿಭೆ ನಿಜಕ್ಕೂ ಮಾದರಿಯಾದದ್ದು ಆ ನಿಟ್ಟಿನಲ್ಲಿ ಇಂತಹ ವೇದಿಕೆಗಳ ಮುಖಾಂತರ ಪ್ರೆರೇಪಿಸುವ ಕಾರ್ಯ ಆಗುತ್ತಿರುವುದು ನಿಜಕ್ಕೂ ಮೆಚ್ಚುವಂತಹುದು ಎಂದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿ ರಾಮು ಗುಗವಾಡ ಮಾತನಾಡಿ ಶಿಕ್ಷಕ ತನ್ನಲ್ಲಿರುವ ಜ್ಞಾನ ತನ್ನಲ್ಲಿಯೇ ಕಮರಿ ಹೋಗಲು ಬಿಡದೆ  ಪ್ರತಿಭೆ ಇತರರಿಗೆ ಮಾದರಿಯಾಗಲು ಸ್ಪರ್ಧೆಯಲ್ಲಿ ಭಾಗಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಅಧಿಕಾರಿ ಆರ್ ಸಿ ಮುದಕನಗೌಡರ,   ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ್ ಹೆಬ್ಳಿ, ತಾಲೂಕ ಸಂಘದ ಅಧ್ಯಕ್ಷ ಪ್ರಕಾಶ ದೇಯನ್ನವರ, ಬಸವರಾಜ ಸುಣಗಾರ, ಎಂ. ಎ. ಧಾಳೆ, ಎಸ್. ಎ. ಭಜಂತ್ರಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಪ್ರಭಾ  ಶೀಗಿಹಳ್ಳಿಕರ, ಸೇರಿದಂತೆ, ವಿವಿಧ ಪದಾಧಿಕಾರಿಗಳು, ಸ್ಪರ್ಧೆಯಲ್ಲಿ ಭಾಗವಹಿಸಲು ಬಂದ ಗ್ರಾಮೀಣ ವಲಯದ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಮೃತ್ಯುಂಜಯ ದೊಡವಾಡ ಸ್ವಾಗತಿಸಿದರು.

ಸಿ ಆರ್ ಪಿ. ಎಸ್ ಆರ್ ಕುಲಕರ್ಣಿ ನಿರೂಪಿಸಿದರು ಶಿವಾನಂದ ತಲ್ಲೂರ ವಂದಿಸಿದರು. ವೇದಿಕೆ ಕಾರ್ಯಕ್ರಮದ ನಂತರ ಶಿಕ್ಷಕರಿಗಾಗಿ ಭಕ್ತಿ ಗೀತೆ, ಆಶುಭಾಷಣ, ಪ್ರಬಂಧ ಸ್ಪರ್ಧೆ, ಚಿತ್ರಕಲೆ, ರಸಪ್ರಶ್ನೆ, ಸ್ಥಳದಲ್ಲಿ ಮಾದರಿ ತಯಾರಿಕೆ  ಸ್ಪರ್ಧೆಗಳನ್ನು ತೆಗೆದುಕೊಳ್ಳಲಾಯಿತು.

ಸುಮಾರು 140 ಕ್ಕಿಂತ ಹೆಚ್ಚಿನ ಶಿಕ್ಷಕರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಪ್ರತಿ ಸ್ಪರ್ಧೆಯನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಸಂಘಟಿಸಿ ಸ್ಪರ್ಧೆಯ ವಿಜೇತರನ್ನು ಆರಿಸಿ  ಶಿಕ್ಷಕರ ಕಲ್ಯಾಣ ನಿಧಿಯ ನಗದು ಬಹುಮಾನಗಳ ಜೊತೆಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಶಿಕ್ಷಕರನ್ನು ಗೌರವಿಸಲಾಯಿತು.

ದಿನವಿಡೀ ಕಾರ್ಯಕ್ರಮಗಳನ್ನು  ನುರಿತ ಅನುಭವಿ ನಿರ್ಣಾಯಕ ಶಿಕ್ಷಕರನ್ನು ತೆಗೆದುಕೊಂಡು ವ್ಯವಸ್ಥಿತವಾಗಿ ಸಂಘಟಿಸಿ ಕಾರ್ಯಕ್ರಮವನ್ನು ನೋಡಲ್ ಅಧಿಕಾರಿಗಳು ಮತ್ತು ಶಿಕ್ಷಣ ಸಂಯೋಜಕರಾದ ಎ. ಡಿ. ಕಾಂಬಳೆ ವ್ಯವಸ್ಥಿತವಾಗಿ ನಡೆಸಿಕೊಟ್ಟರು.

RELATED ARTICLES

Most Popular

error: Content is protected !!
Join WhatsApp Group