ಸಿಂದಗಿ– ಸಿಂದಗಿಯ ಯುವ ಉದ್ಯಮಿ ಮನೋಜ ರಾಚಪ್ಪ ವಾರದ ಅವರು ಕೇಂದ್ರ ಸರ್ಕಾರದ ಕೃಷಿ ಮತ್ತು ರಸಗೊಬ್ಬರ ಸಚಿವಾಲಯದ ಹೈದ್ರಾಬಾದಿನ ರಾಷ್ಟ್ರೀಯ ಕೃಷಿ ನಿರ್ವಹಣೆ ಮತ್ತು ವಿಸ್ತರಣೆ ಸಂಸ್ಥೆ (ಎಮ್‍ಎಎನ್‍ಎಜಿಇ) ಕೊಡಮಾಡುವ ರಾಷ್ಟ್ರಮಟ್ಟದ “ ಬೆಸ್ಟ್ ಅಗ್ರಿ ಫ್ರೇನರ್ “ ಪ್ರಶಸ್ತಿಗೆ ಭಾಜನರಾಗಿದ್ದಾರೆ ಪ್ರಶಸ್ತಿಯು ರೂ. 1 ಲಕ್ಷ ನಗದು ಬಹುಮಾನವನ್ನು ಹೊಂದಿದೆ.
ಈ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಮೊದಲ ವ್ಯಕ್ತಿ ಮನೋಜ ಅವರಾಗಿದ್ದಾರೆ. ಕೃಷಿ ವ್ಯಾಪಾರದಲ್ಲಿ ಅನೇಕ ಉದ್ಯೋಗಗಳನ್ನು ಸೃಷ್ಟಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸುಮಾರು 80 ಅಧಿಕ ಕೃಷಿ ಕಂಪನಿಗಳೊಂದಿಗೆ ಉತ್ತಮ ಒಡನಾಟ, ಉತ್ತಮ ವ್ಯಾಪಾರ ನಿರ್ವಹಣೆ, ಸುಮಾರು 200 ಹಳ್ಳಿಗಳ ಅಂದಾಜು 50 ಸಾವಿರರೈತರಿಗೆ ಕೃಷಿಗೆ ಸಂಬಂಧಿಸಿದ ಮಾರ್ಗದರ್ಶನ ರೈತರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭಗಳಿಸುವ ತಂತ್ರಗಾರಿಕೆ ಸೇರಿದಂತೆ ಇವರ ಅನೇಕ ಕೃಷಿ ಚಟುವಟಿಕೆಗಳನ್ನು ಗುರುತಿಸಿ ಕೇಂದ್ರ ಸರ್ಕಾರದ ಕೃಷಿ ಇಲಾಖೆ ಮನೋಜ ವಾರದ ಅವರನ್ನು ಆಯ್ಕೆ ಮಾಡಿದೆ.
ರಾಷ್ತ್ರೀಯ ಯುವ ದಿನವಾದ ಜನವರಿ 12 ರಂದು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರಸಗೊಬ್ಬರ ಸಚಿವ ನರೇಂದ್ರಸಿಂಗ್ ಥೋಮರ್ ಮತ್ತು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಸಚಿವರು ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಉದ್ಯಮಿ ರಾಚಪ್ಪ ಶಿವಪೂಜಪ್ಪ ವಾರದ ತಿಳಿಸಿದರು.