ಬೀದರ್– ಬರಲಿರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಪಕ್ಷದ ಟಿಕೆಟ್ ದೊರೆತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಬಾರ್ಡರ್‌ನ ಶಹಪೂರ್ ಗೇಟ್ ಬಳಿ ಭಗವಂತ ಖೂಬಾಗೆ ಕಾರ್ಯಕರ್ತರು ಹೂಮಾಲೆ ಹಾಕಿ, ಜೈಕಾರ ಕೂಗಿ ಅದ್ದೂರಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಖೂಬಾ ಅವರು, ಎಲ್ಲ ಹಾಲಿ – ಮಾಜಿ ಶಾಸಕರು, ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗು ವರಿಷ್ಠರಿಗೆ ಧನ್ಯವಾದ ಹೇಳುತ್ತೇನೆ. ಎಲ್ಲಾ ಆಕಾಂಕ್ಷಿಗಳು ಹಾಗೂ ಶಾಸಕರು, ಮುಖಂಡರು ಎಲ್ಲರಿಗೂ ಕರೆ ಮಾಡಿ ಮಾತನಾಡಿದ್ದೇನೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪಕ್ಷಕ್ಕೆ ಗೆಲುವು ತಂದುಕೊಡುತ್ತೇವೆ ಎಂದರು.
ಸ್ಥಳೀಯ ನಾಯಕರ ವಿರೋಧದ ನಡುವೆ ಟಿಕೆಟ್ ಪಡೆದ ವಿಚಾರದ ಬಗ್ಗೆ ಮಾಧ್ಯಮದ ಪ್ರಶ್ನೆ ಉತ್ತರಿಸಿದ ಅವರು, ಅದು ಮಾಧ್ಯಮಗಳ ಸೃಷ್ಡಿಯಾಗಿತ್ತು, ಆರು ತಿಂಗಳಿಂದ ನನಗೆ ವಿಶ್ವಾಸ ಇತ್ತು. ಬಿಜೆಪಿ ಪಕ್ಷ ನನ್ನ ಕೈ ಹಿಡಿಯುತ್ತೆ ಅನ್ನೋ ನಂಬಿಕೆ ಇತ್ತು. ಆರು ತಿಂಗಳ ವಿಶ್ವಾಸ ಇಂದು ಖಚಿತವಾಗಿದೆ.
ಎಲ್ಲಾ ಶಾಸಕರು,ಮುಖಂಡರ ಮನೆಗೆ ತೆರಳಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ನನ್ನಿಂದ ಏನಾದ್ರು ತಪ್ಪಾಗಿದ್ರೆ, ತಪ್ಪು ತಿಳಿವಳಿಕೆ ಆಗಿದ್ರೆ ಕ್ಷಮೆ ಕೇಳುತ್ತೇನೆ. ಅಭ್ಯರ್ಥಿಯಾಗಿ ನಾನು ಆಯ್ಕೆ ಆದಮೇಲೆ ಒಂದೆ ಒಂದು ನಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಇದೇ ನಮ್ಮಲ್ಲಿ ಒಗ್ಗಟ್ಟಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿ, ಭಗವಂತ ಖೂಬಾ ಆಯ್ಕೆ ಎಂದರೆ ಎಲ್ಲರ ಆಯ್ಕೆ ಎಂದು ನುಡಿದರು.
ವರದಿ: ನಂದಕುಮಾರ ಕರಂಜೆ, ಬೀದರ