ಮೂಡಲಗಿ: ದೇಶದಲ್ಲಿ ದೂರಸಂಪರ್ಕ ಜಾಲವನ್ನು ಮತ್ತಷ್ಟು ಸುಧಾರಿಸಲು, ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಸುಮಾರು 55 ಸಾವಿರ ಗ್ರಾಮಗಳಿಗೆ 4 ಜಿ ಸಂಪರ್ಕವನ್ನು ಒದಗಿಸಲು 41,331 ಕೋಟಿ ರೂ.ಗಳ ವೆಚ್ಚದಲ್ಲಿ ಒಟ್ಟು 41,160 ಮೊಬೈಲ್ ಟವರ್ಗಳನ್ನು ಮಂಜೂರು ಮಾಡಲಾಗಿದೆ ಮತ್ತು 1.88 ಲಕ್ಷ ಕೋಟಿ ರೂ.ಗಳ ವೆಚ್ಚದಲ್ಲಿ ಎಲ್ಲಾ ಜನವಸತಿ ಗ್ರಾಮಗಳನ್ನು ಸಂಪರ್ಕಿಸಲು ಭಾರತ್ ನೆಟ್ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ದೇವುಸಿಂಹ ಚೌಹಾಣ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ರಾಜ್ಯಸಭೆಯ ಮಧ್ಯಂತರ ಬಜೆಟ್ ಅಧಿವೇಶನದಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ಸಂಚಾರ್ ಕಾರ್ಯಕ್ರಮದಡಿ ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಪ್ರಧಾನಮಂತ್ರಿ ಗತಿಶಕ್ತಿ ಸಂಚಾರ್ ಪೋರ್ಟಲ್ ದೂರಸಂಪರ್ಕ ಮೂಲಸೌಕರ್ಯವನ್ನು ತ್ವರಿತವಾಗಿ ಹೊರತರಲು ಅನುಕೂಲವಾಗುವಂತೆ ತರಲಾದ ಪ್ರಮುಖ ಸುಧಾರಣೆಯಾಗಿದೆ. ದೇಶದ 742 ಜಿಲ್ಲೆಗಳಲ್ಲಿ 4.15 ಲಕ್ಷಕ್ಕೂ ಹೆಚ್ಚು 5ಜಿ ಬೇಸ್ ಟ್ರಾನ್ಸ್ಸಿವರ್ ಸ್ಟೇಷನಗಳು (ಬಿಟಿಎಸ್) ಸಂಪರ್ಕವನ್ನು ಒದಗಿಸುತ್ತಿವೆ. 13 ಕೋಟಿಗೂ ಹೆಚ್ಚು ಚಂದಾದಾರರು 5ಜಿ ಸೇವೆಗಳನ್ನು ಬಳಸಲು ಪ್ರಾರಂಭಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಟೆಲಿಕಾಂ ಸಂಪರ್ಕವು ಗಮನಾರ್ಹವಾಗಿ ಸುಧಾರಿಸಿದೆ. ಮೇ 2014 ರಲ್ಲಿ ಬೇಸ್ ಟ್ರಾನ್ಸ್ಸಿವರ್ ಸ್ಟೇಷನ್ ಒಟ್ಟು 6.49 ಲಕ್ಷ ಇದ್ದವು. ಡಿಸೆಂಬರ್ 2023 ರವರೆಗೆ 28 ಲಕ್ಷ ಬೇಸ್ ಟ್ರಾನ್ಸ್ಸಿವರ್ ಸ್ಟೇಷನ್ಗಳನ್ನು ನಿರ್ಮಾಣ ಮಾಡಲಾಗಿದೆ. ಮೇ 2014 ರಲ್ಲಿ 10.62 ಲಕ್ಷ ಕಿ.ಮೀ. ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ. ಡಿಸೆಂಬರ್ 2023 ರಲ್ಲಿ 39 ಲಕ್ಷ ಕಿ.ಮೀ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲಾಗಿದೆ. ಮೇ 2014ರಲ್ಲಿ ಇಂಟರ್ನೆಟ್ ಬಳಕೆದಾರರು 25.15 ಕೋಟಿ ಇದ್ದರು, ಡಿಸೆಂಬರ್ 2023 ರಲ್ಲಿ 88.12 ಕೋಟಿ ಹೆಚ್ಚಿಗೆ ಆಗಿದೆ. ಮೇ 2014 ರಲ್ಲಿ ಡೇಟಾ ವೆಚ್ಚ ಪ್ರತಿ ಜಿಬಿಗೆ 269 ರೂ. ಇತ್ತು ಡಿಸೆಂಬರ್ 2023ರ ವರಗೆ ಪ್ರತಿ ಜಿಬಿಗೆ 9.94 ರೂ ಆಗಿದೆ. ಮೇ 2014ರಲ್ಲಿ 1.3 ಎಂ.ಬಿ.ಪಿ.ಎಸ್ ಇಂಟರ್ನೆಟ್ ವೇಗ ಇತ್ತು, ಡಿಸೆಂಬರ್ 2023 ರಲ್ಲಿ 75.8 ಎಂ.ಬಿ.ಪಿ.ಎಸ್ ಇಂಟರ್ನೆಟ್ ವೇಗ ಹೆಚ್ಚಿಗೆ ಆಗಿದೆ. ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ಮತ್ತು ಮೊಬೈಲ್ ಟವರ್ಗಳ ಸ್ಥಾಪನೆಗೆ 29.01.2024 ರವರೆಗೆ 1,19,154 ಅರ್ಜಿಗಳನ್ನು ಅನುಮೋದಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದ್ದಾರೆ.