ಸಿಂದಗಿ: ತಾಲೂಕಿನ ಮಲಘಾಣ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥವನ್ನು ಗ್ರಾಮದ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾತ ಸಿಂಗೆ ಮಾತನಾಡಿ, ರಾಜ್ಯ ಸರಕಾರ ಡಾ. ಅಂಬೇಡ್ಕರರು ರಚಿಸಿದ ಸಂವಿಧಾನದ ಮೂಲ ಆಶಯಗಳು ಸಾರ್ವಜನಿಕರಿಗೆ ಮನೆ ಮಾತಾಗಲಿ ಎಂದು ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಶ್ಲಾಘನೀಯ. ಅದು ಒಂದೇ ಕೋಮಿಗೆ ಸಿಮಿತವಾಗಿದೆ ಎಂದುಕೊಂಡಿರುವ ಜನರಿಗೆ ಇದೊಂದು ಮಾದರಿಯ ಜಾಥಾವಾಗಿದೆ. ಯಾವುದೇ ಜಾತಿಯಲ್ಲಿ ತುಳಿತಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಮ ಸಮ ಸಮಾಜ ನಿರ್ಮಾಣಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನದಲ್ಲಿ ಅಡಕಗಳನ್ನು ರಚಿಸಿ ನ್ಯಾಯ ಕೊಡಿಸಿದ್ದಾರೆ. ಆದರೆ ಕೆಲವು ಕುಹಕಿಗಳಿಂದ ಸಂವಿಧಾನಕ್ಕೆ ಅಪಮಾನ ಮತ್ತು ಅಪಪ್ರಚಾರಗೊಳ್ಳುತ್ತಿರುವ ಸನ್ನಿವೇಶಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸಂವಿಧಾನದ ಮೂಲ ಸಿದ್ದಾಂತಗಳು ಸಾರ್ವಜನಿಕರಿಗೆ ಅರಿವು ಮೂಡಿಸುವಂತ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಗ್ರಾಮದ ಮುಖಂಡ ಯಶವಂತ್ರಾಯಗೌಡ ರೂಗಿ ಮಾತನಾಡಿ, ಡಾ ಅಂಬೇಡ್ಕರರು ದೀನ ದಲಿತರಿಗೆ ಗುರಿಯಾಗಿಟ್ಟುಕೊಂಡು ಸಂವಿಧಾನ ಬರೆದಿಲ್ಲ ಎಲ್ಲ ಸಮ ಸಮ ಸಮಾಜಗಳ ನಿರ್ಮಾಣಕ್ಕೆ ಸಂವಿಧಾನ ರಚನೆಯಾಗಿದೆ ಅದು ಸರಿಯಾಗಿ ಪರಿಚಯವಾಗದ ಕಾರಣ ಕೆಲವು ಪ್ರಮಾದಗಳು ಜರುಗುತ್ತಿದ್ದು ಅದನ್ನು ತಿಳಿಸಿಕೊಡಬೇಕು ಎಂದು ರಾಜ್ಯ ಸರಕಾರ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು ಸ್ವಾಗತಾರ್ಹ ಡಾ. ಅಂಬೇಡ್ಕರರವರ ಆಶಯಗಳ ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ನಾವು ನೀವೆಲ್ಲ ತೊಡಗೋಣ ಎಂದರು.
ಈ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆ ಓದಿದರು.
ಗ್ರಾಪಂ ಅಧ್ಯಕ್ಷೆ ಶ್ರೀಮತಿ ಮಂಜುಳಾ ಕಾಂತಪ್ಪ ನಡುವಿನಕೇರಿ, ಉಪಾಧ್ಯಕ್ಷೆ ಸಂಗಮ್ಮ ದುದ್ದಣಗಿ, ಗ್ರಾಪಂ ಅಭಿವೃದ್ದಿ ಅಧಿಕಾರಿ ಬಸೀರ ಚಿಕ್ಕಲಗಿ, ಸಮಾಜ ಕಲ್ಯಾಣ ಇಲಾಖೆಯ ಶಿವಲಿಂಗ ಹಚಡದ, ಆರ್.ಎಸ್ ಬನ್ನೇಟ್ಟಿ, ಗ್ರಾಮದ ಮುಖಂಡ ಮಹಾದೇವಪ್ಪ ಬರಗಾಲ ಇದ್ದರು.