ಮೈಸೂರಿನ ಹಿರಿಯ ಸಾಹಿತಿ, ಪತ್ರಕರ್ತ, ಪರಿಸರ ಚಿಂತಕ ಹಾಗೂ ಕನ್ನಡ ಪರ ಚಿಂತಕ ಡಾ. ಭೇರ್ಯ ರಾಮಕುಮಾರ್ ಹಾಗೂ ಅವರ ಪತ್ನಿ ಶ್ರೀಮತಿ ಸವಿತಾ ರಾಮಕುಮಾರ್ ದಂಪತಿಗಳು ಮೈಸೂರಿನ ಮೆಡಿಕಲ್ ಕಾಲೇಜಿಗೆ ತಮ್ಮ ದೇಹ ದಾನ ಮಾಡಿದ್ದಾರೆ.
ಭೇರ್ಯ ರಾಮಕುಮಾರ್ ಅವರು ತಮ್ಮ ನೇತೃತ್ವದ ಗ್ರಾಮಾಂತರ ಬುದ್ದಿಜೀವಿಗಳ ಬಳಗದ ಮೂಲಕ 1985 ರಿಂದ ಇಲ್ಲಿಯವರೆಗೆ ಸುಮಾರು 356 ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿ ಸಿದ್ದಾರೆ. ಇದುವರೆಗೆ ಎಲ್ಲಾ ಸಾಹಿತ್ಯ ಕಾರ್ಯಕ್ರಮಗಳಲ್ಲೂ ಸುಮಾರು ಹತ್ತು ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ಒಪ್ಪಿಗೆ ಪತ್ರ ಕೊಡಲು ಮನವೊಲಿಸಿದ್ದಾರೆ. ಜೊತೆಗೆ ತಾವೂ ನೇತ್ರದಾನ ಮಾಡಿದ್ದಾರೆ.
ಐದು ನೂರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಕನ್ನಡ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಬಗ್ಗೆ, ಕನ್ನಡ ಭಾಷೆಯ ಮಹತ್ವದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ. ಕನ್ನಡ ಭಾಷೆ ಬಳಸದ ಕೇಂದ್ರ ಸರ್ಕಾರಿ ಕಚೇರಿಗಳು, ಕನ್ನಡ ಭಾಷೆ ಬಳಸದ ನಾಮಫಲಕಗಳ ವಿರುದ್ಧ ನಿರಂತರ ದೂರಗಳನ್ನು ನೀಡುತ್ತಾ ಕನ್ನಡ ನಾಡು ನುಡಿಯ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸಿದ್ದಾರೆ.
ಇವರ ಸಮಾಜ ಸೇವೆ, ಕನ್ನಡ ಪರ ಸೇವೆ, ಪರಿಸರ ಸೇವೆಗಳನ್ನು ಗೌರವಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿ, ಚಾಣಕ್ಯ ಇಂಟೆರ್ ನ್ಯಾಷನಲ್ ಅಕಾಡೆಮಿಯಿಂದ ಚಾಣಕ್ಯ ಅಂತರ ರಾಷ್ಟ್ರೀಯ ಪ್ರಶಸ್ತಿ, ಕೇಂದ್ರ ಸರ್ಕಾರದ ನೆಹರು ಯುವ ಪ್ರಶಸ್ತಿ, ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಗೌರವಗಳು ದೊರಕಿವೆ.
ತಮ್ಮ ಮರಣದ ನಂತರ ತಮ್ಮ ದೇಹದ ಅಂಗಗಳು ಬೇರೆಯವರಿಗೆ ಬೆಳಕಾಗಬೇಕು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಸಹಾಯಕವಾಗ ಬೇಕು ಎಂಬ ಮಹದುದ್ದೇಶದಿಂದ ತಾವು ಈಗಾಗಲೇ ನೇತ್ರ ದಾನ ಮಾಡಿದ್ದು, ಇದೀಗ ತಾವು ಹಾಗೂ ತಮ್ಮ ಪತ್ನಿ ತಮ್ಮ ದೇಹದಾನ ಮಾಡುತ್ತಿರುವುದಾಗಿ ಸಾಹಿತಿ ಭೇರ್ಯ ರಾಮಕುಮಾರ್ ಹಾಗೂ ಶ್ರೀಮತಿ ಸವಿತಾ ದಂಪತಿಗಳು ತಿಳಿಸಿದ್ದಾರೆ.