Bidar: ಅಕ್ರಮ ಆಸ್ತಿ ; ಅಭಿಯಂತರರ ಮನೆ ಮೇಲೆ ಎಸಿಬಿ ದಾಳಿ

0
443

ಬೀದರ – ಅಕ್ರಮ ಆಸ್ತಿ ಗಳಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ವಿಭಾಗದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಯೋಜನೆಯ ಕಿರಿಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುರೇಶ್ ಮೋರೆ ಮನೆ ಮೇಲೆ ಬೆಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ ದಾಳಿ ಮಾಡಿದೆ.

ಎಸಿಬಿ ಎಸ್ಪಿ ಮಹೇಶ್ ಮಘಣ್ಣನವರ್ ಮಾರ್ಗದರ್ಶನದಲ್ಲಿ ಎಸಿಬಿ ಪೊಲೀಸರು ಅಭಿಯಂತರರಿಗೆ ಸಂಬಂಧಿಸಿದ ಬಸವ ಕಲ್ಯಾಣದ ಶಿವಾಜಿ ನಗರದ ನಿವಾಸ, ಭಾಲ್ಕಿ ತಾಲೂಕಿನ ಮೇಹಕರ್ ನ ನಿವಾಸ ಹಾಗೂ ಮೇಹಕರ್ ಗ್ರಾಮದ ಪೆಟ್ರೋಲ್ ಪಂಪ್ ಸೇರಿದಂತೆ ಏಕ ಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದಾರೆ.

ಜಿಲ್ಲಾ ಪಂಚಾಯತ್ ಬಸವಕಲ್ಯಾಣ ವಿಭಾಗದಲ್ಲಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಯೋಜನೆಯ ಕಿರಿಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುರೇಶ ಮೋರೆಯವರು ಗಳಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಸಂಪತ್ತು ಸಂಗ್ರಹಿಸಿದ ಆರೋಪದಿಂದ ಈ ದಾಳಿ ನಡೆಸಲಾಗಿದ್ದು ಅಪಾರ ಪ್ರಮಾಣದ ಹಣ ಹಾಗೂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ಎಸಿಬಿ ಎಸ್ಪಿ ಮಹೇಶ್ ಮಘಣ್ಣನವರ್, ಡಿವೈಎಸ್ಪಿ ಹಣಮಂತರಾವ್, ಸಿಪಿಐ ವೆಂಕಟ ಯಡಹಳ್ಳಿ, ಯಾದಗಿರಿ ಹಾಗೂ ಕಲಬುರ್ಗಿ ಡಿವೈಎಸ್ಪಿ ಶರಣು ಕೊಡ್ಲಾ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ