ಬೀದರ: ಹೋಳಿ ಹಬ್ಬದ ನಿಮಿತ್ತ ಮದ್ಯ ನಿಷೇಧ ಮಾಡಿದ್ದರೂ ಹಬ್ಬದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ರೂ.೪.೬೮ ಲಕ್ಷ ಮೌಲ್ಯದ ಮದ್ಯವನ್ನು ಬೀದರ್ ಪೋಲಿಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ೪.೬೮ ಲಕ್ಷ ರೂ. ಮೌಲ್ಯದ ಮದ್ಯವನ್ನು ರೌಡಿ ನಿಗ್ರಹ ದಳದ ತಂಡ ಜಪ್ತಿ ಮಾಡಿದೆ.
ಜಿಲ್ಲಾ ವರಿಷ್ಠ ಪೊಲೀಸ ಅಧಿಕಾರಿ ಚನ್ನಬಸವ ಲಂಗೋಟಿ ಅವರ ಮಾರ್ಗದರ್ಶನದಲ್ಲಿ ಡಿವೈಸ್ ಪಿ ಸತೀಶ್ ಹಾಗು ನಿಗ್ರಹ ದಳದ ಅಧಿಕಾರಿ ಗಾಂಧಿ ಗಂಜ್ ಠಾಣೆ ಸಿಪಿಐ ಹನುಮರಡ್ಡೆಪ್ಪ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಲ್ಲಿನ ರಾಮನಗರದ ಮನೆಯಲ್ಲಿ ಸಂಗ್ರಹಿಸಿದ ೪,೬೮,೭೩೮ ರೂ. ಮೌಲ್ಯದ ವಿವಿಧ ಕಂಪನಿಯ ೭೫೦ ಎಂ.ಎಲ್‌ನ ೧೫೩ ಸಾರಾಯಿ ಬಾಟಲ್‌ಗಳನ್ನು ಜಪ್ತಿ ಮಾಡಿಕೊಂಡು, ರಾಜಕುಮಾರ ಎಂಬಾತನನ್ನು ಬಂಧಿಸಿದ್ದಾರೆ.
ಹೋಳಿ ನಿಮಿತ್ತ ಅಕ್ರಮವಾಗಿ ಮಾರಾಟಕ್ಕೆ ಮದ್ಯ ಸಂಗ್ರಹಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ತಂಡದ ಕಾರ್ಯಾಚರಣೆಗೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ. ತಂಡದಲ್ಲಿ ನವೀನ್, ಸಂಜುಕುಮಾರ, ರಾಜಕುಮಾರ, ದೀಪಕ ಇದ್ದರು. ಗಾಂಧಿ ಗಂಜ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ