ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ
ಬಾಗಲಕೋಟೆ- ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉದ್ಘಾಟನೆ ಸಮಯದಲ್ಲಿ ವಿಜಯಪುರದ ಸಿದ್ಧೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿ ಅವರು, ಸಾರ್ವಜನಿಕರಲ್ಲಿ ವಿಶ್ವಾಸ, ಠೇವಣಿದಾರರ ಹಿತಾಸಕ್ತಿ ಕಾಯುವುದು, ಸಾಲಗಾರರನ್ನು ಗೌರವದಿಂದ ಕಾಣಬೇಕು ಅಂದಾಗ ಸಂಸ್ಥೆ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಹೇಳಿದ್ದರು. ಪೂಜ್ಯರ ಮಾತನ್ನು ಎಸ್. ಆರ್. ಪಾಟೀಲರು ಚಾಚುತಪ್ಪದೇ ಪಾಲಿಸಿದ್ದರಿಂದ ಬ್ಯಾಂಕ್ ಯಶಸ್ವಿಯಾಗಿ ೨೫ ವರ್ಷ ಪೂರೈಸಿ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಗದಗ-ಡಂಬಳದ ಎಡೆಯೂರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಜಿಲ್ಲೆಯ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ ಸಭಾಭವನದಲ್ಲಿ ಬ್ಯಾಂಕಿನ ರಜತ ಮಹೋತ್ಸವದ ಕಾರ್ಯಚಟುವಟಿಕೆಗಳ ಉದ್ಘಾಟನೆ, ಬಸವ ಜಯಂತಿ ಆಚರಣೆ, ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣಾ ಸಮಾರಂಭದ ದಿವ್ಯ ಸಾನ್ನಿದ್ಯವಹಿಸಿ ಮಾತನಾಡಿ, ಬ್ಯಾಂಕಿನ ಪದಾಧಿಕಾರಿಗಳು, ಸಿಬ್ಬಂದಿ ನಿರಂತರ ಪರಿಶ್ರಮದಿಂದ ಬ್ಯಾಂಕು ಉತ್ತಮ ಹೆಸರು ಸಂಪಾದನೆಯ ಜೊತೆಗೆ ಬೆಳ್ಳಿ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ರಜತ ಮಹೋತ್ಸವದ ಅಂಗವಾಗಿ ೨೫ ವಿಶೇಷ ವಿದಾಯಕ ಕಾರ್ಯಚಟುವಟಿಕೆಗಳನ್ನು ಹಾಕಿಕೊಂಡಿದ್ದು, ಮೂಢನಂಬಿಕೆ, ಅಂಧಶ್ರದ್ಧೆ ಹೋಗಲಾಡಿಸುವ ನಿಟ್ಟಿನಲ್ಲಿ ಹುಲಿಕಲ್ ನಟರಾಜ ಅವರಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಸೇರಿದಂತೆ ಮಹಿಳೆಯರಿಗೆ ಅನೇಕ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
೧೨ ನೇ ಶತಮಾನದಲ್ಲಿಯೇ ಬಸವಣ್ಣನವರು ಸಮ ಸಮಾಜ, ಸಮ ಅಭಿವೃದ್ಧಿ ಚಿಂತನೆಯೊಂದಿಗೆ ಎಲ್ಲರನ್ನೂ ಅನುಭವ ಮಂಟಪದಲ್ಲಿ ಸೇರಿಸುವ ಕಾಯಕವನ್ನು ಮಾಡಿ ಇಂದಿಗೂ ಅದು ಜನರಲ್ಲಿ ಉಳಿಯುವಂತೆ ಮಾಡಿದ್ದಾರೆ. ಹಾಗೇಯೆ ಎಸ್. ಆರ್. ಪಾಟೀಲ ಅವರು ೧೯೯೭ ರಲ್ಲಿ ಬೀಳಗಿ ಪಟ್ಟಣದಲ್ಲಿ ಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್ ಆರಂಭ ಮಾಡಿ ಬ್ಯಾಂಕಿನಿಂದ ಎಲ್ಲರಿಗೂ ಆರ್ಥಿಕ ಸಹಾಯ ಮಾಡಿ ಯಶಸ್ಸು ಕಂಡಿದ್ದಾರೆಂದು ಹೇಳಿದರು.
ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕು ಸಂಸ್ಥಾಪಕ ಅಧ್ಯಕ್ಷ ಎಸ್. ಆರ್. ಪಾಟೀಲ ಮಾತನಾಡಿ, ಕಳೆದ ೨೫ ವರ್ಷಗಳಿಂದ ಜಾತ್ಯತೀತ, ಪಕ್ಷಾತೀತ, ಧರ್ಮಾತೀತವಾಗಿ ಬ್ಯಾಂಕು ಜನರಿಗಾಗಿ ಕೆಲಸ ಮಾಡುತ್ತಿದ್ದು, ಗ್ರಾಹಕರ ವಿಶ್ವಾಸದಿಂದ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ನಮ್ಮ ಬ್ಯಾಂಕು ಕೇವಲ ಸಾಲ ಕೊಟ್ಟು ವಸೂಲಿ ಮಾಡದೇ, ಅನೇಕ ವಿದಾಯಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಧನ ಸಹಾಯ ಮಾಡಿದೆ ಎಂದು ಹೇಳಿದರು.
ಎಲ್ಲ ನಿರ್ದೇಶಕ ಮಂಡಳಿಯ ಸಲಹೆಯಂತೆ ರಜತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಸಮಾರಂಭ ಆಚರಿಸಬೇಕು ಎನ್ನುವ ಉದ್ದೇಶದಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೀಳಗಿ ಪಟ್ಟಣದಲ್ಲಿ ಯಾವುದೇ ವಾಣಿಜ್ಯ ಸಂಸ್ಥೆ ಇಲ್ಲದೆ ಇರುವಾಗ ೧೯೯೭ರಲ್ಲಿ ಕೇವಲ ೧೧ ಲಕ್ಷದಾ ೬೦೦ ರೂ ಶೇರು ಬಂಡವಾಳದೊಂದಿಗೆ ಸಂಸ್ಥೆ ಆರಂಭಗೊಂಡು, ಇಂದು ಶತಮಾನ ಕಂಡ ಬ್ಯಾಂಕುಗಳ ಸಾಲಿನಲ್ಲಿ ಕೇವಲ ೨೫ ವರ್ಷಗಳಲ್ಲಿ ೨ ನೇ ಸ್ಥಾನದಲ್ಲಿದೆ. ಅದಕ್ಕಾಗಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬದಾಮಿ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಡಾ. ಚಂದ್ರಶೇಖರ ಹೆಗಡೆ ವಿಶೇಷ ಉಪನ್ಯಾಸ ನೀಡಿ, ಕಲ್ಯಾಣ ಬಸವಣ್ಣನವರಿಗೆ ಪ್ರಯೋಗ ಶಾಲೆಯಾಗಿತ್ತೆಂದು ಹೇಳಿದರು. ಪ್ರದಾನ ವ್ಯವಸ್ಥಾಪಕ ಎಲ್. ಬಿ. ಕುರ್ತಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿ, ೧೪೦೦ ಕೋಟಿ ರೂ. ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆ ಸಂಗತಿ ಎಂದು ಹೇಳಿದರು.
ವಚನಗಾಯನ ಸ್ಪರ್ಧೆಯಲ್ಲಿ ಸ್ಥಾನ ಪಡೆದ ಮಕ್ಕಳು ಮತ್ತು ಮಹಿಳೆಯರಿಗೆ ಬಹುಮಾನ ನೀಡಲಾಯಿತು. ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಬಸವ ಬಳಗದ ಅಧ್ಯಕ್ಷ ಶಿವಾನಂದ ಸಾರಾವರಿ ಉಪಸ್ಥಿತರಿದ್ದರು.
ಗುರುರಾಜ ಲೂತಿ ನಿರೂಪಿಸಿದರು. ಎಂ. ಎಲ್. ಕೆಂಪಲಿಂಗಣ್ಣವರ ವಂದಿಸಿದರು.