ಹನ್ನೆರಡನೇ ಶತಮಾನದ ಆದಿಯಲ್ಲಿ ಶ್ರೀ ಮಧ್ವಾಚಾರ್ಯರರು ದಾಸ ಸಾಹಿತ್ಯದ ಬೀಜ ಬಿತ್ತಿದರು. ಮುಂದೆ ಅವರ ನಾಲ್ವರ ಶಿಷ್ಯರಲ್ಲಿ ನರಹರಿ ತೀರ್ಥರಿಂದ ಮೊಳಕೆ ಒಡೆದು ಶ್ರೀಪಾದ ರಾಜರಿಂದ ಅಂಕುರಿಸಿ , ಪುರಂದರದಾಸರಾದಿಗಳಿಂದ ದಾಸ ಸಾಹಿತ್ಯ ಹೆಮ್ಮರವಾಗಿ ಬೆಳೆಯಿತು.
ಅಂತಹ ದಾಸ ಸಾಹಿತ್ಯ ಪರಂಪರೆಯಲ್ಲಿ ಬಂದಂತಹ ಮಹಾಮಹಿಮರಾದ ಶ್ರೀ ಮಹಿಮಪತಿದಾಸರು. ಇವರು ಅತ್ತ ಪುರಂದರ ದಾಸರ ಕಾಲ ಮುಗಿದು ಇತ್ತ ವಿಜಯದಾಸರ ಕಾಲ ಇನ್ನು ಆರಂಭವಾಗದಿದ್ದ ಅವಧಿಯಲ್ಲಿ ಮಹಿಪತಿದಾಸರು ಮತ್ತು ಇವರ ಮಗ ಕೃಷ್ಣದಾಸರು ಇದ್ದರು. ೧೭ ಶತಮಾನದಲ್ಲಿದ್ದರು.
ಮಹಿಪತಿ ದಾಸರು ಮತ್ತು ತಿರುಮಲಾ ಬಾಯಿಗೆ ಸಾರವಾಡದ ಗುರು ಭಾಸ್ಕರ ಸ್ವಾಮಿಗಳ ಆಶಿರ್ವಾದದ ಫಲವಾಗಿ ಇಬ್ಬರು ಮಕ್ಕಳು ಜನಿಸಿದರು.
- ದೇವರಾಯ
- ಕೃಷ್ಣರಾಯರು.
ಇವರ ಜೊತೆಗೆ ತಾಯಿಯಂತೆ ಇದ್ದ ಅತ್ತಿಗೆಯಾದ ತುಕ್ಕವ್ವಳು ಇರುತ್ತಿದ್ದರು.
ಮಹಿಪತಿದಾಸರು ಯೋಗ ಸಾಧನೆ ಮಾಡಿದ ನಂತರ ಸಂಸಾರದಲ್ಲಿ ಕಂಸಾರಿಯ ಸ್ಮರಣೆ ಜಪತಪ, ಅನುಷ್ಠಾನ ಮಾಡುತ್ತಾ ಕಾಲ ಕಳೆಯುತ್ತ , ಜಲದಲ್ಲಿನ ಕಮಲದಂತೆ ಭವದ ಹಂಗು ಇಟ್ಟುಕೊಳ್ಳದೆ ಭಗವಂತನಲ್ಲಿ ಚಿತ್ತವಿಟ್ಟು ನಿರ್ಲಿಪ್ತರಾಗಿದ್ದರು.
ಒಂದು ದಿನ ಇದ್ದಕ್ಕಿದಂತೆ ತಿರುಮಲಾಬಾಯಿ ವಿಷಮ ಜ್ವರದಿಂದ ಹರಿಪಾದ ಸೇರಿದರು.
ಮುಂದೆ ನೈಮಿತ್ತಿಕ ಕರ್ಮಗಳನ್ನು ಮಾಡಿ ಯಥಾಸ್ಥಿತಿಯಾಗಿ ಮತ್ತೇ ತಮ್ಮ ಕರ್ಮಗಳಾದ ಯೋಗ ಅನುಷ್ಟಾನ ಜಪತಪದಲ್ಲಿ ತೊಡಗಿಕೊಂಡರು.
ಮಹಿಪತಿದಾಸರ ಆಶ್ರಯದಲ್ಲಿ ದೊಡ್ಡಮ್ಮಳಾದ ತುಕ್ಕವ್ವಳ ಆರೈಕೆಯಲ್ಲಿ ಮಕ್ಕಳು ಬೆಳೆಯ ತೊಡಗಿದರು. ಮಕ್ಕಳ ಸ್ವಭಾವ ತುಂಟತನ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು.
ಇದರಿಂದ ಬೇಸತ್ತ ತುಕ್ಕವ್ವ , ಒಂದು ದಿನ ಮಹಿಪತಿರಾಯರು ಅನುಷ್ಠಾನ ಮುಗಿಸಿ ಬಂದ ಮೇಲೆ ಮಕ್ಕಳ ತುಂಟತನದ ಬಗ್ಗೆ ಹೇಳಿದಾಗ..; ತಾಯಿಯಂತೆ ಇದ್ದ ಅತ್ತಿಗೆಯಾದ ತುಕ್ಕವ್ವಳಿಗೆ ‘ ಏನು! ಬೇಸರ ಪಡಬ್ಯಾಡರಿ ; ನಾಳೆ ನನ್ನ ಹತ್ತಿರ ಕರೆದುಕೊಂಡು ಬರ್ರಿ…ಎಂದು ಹೇಳಿದರು.
ಅದರಂತೆ ತುಕ್ಕವ್ವ ಮರುದಿನ ಇಬ್ಬರು ಮಕ್ಕಳಿಗೆ ಸ್ನಾನ ಮಾಡಿಸಿ,ನಿತ್ಯ ಕರ್ಮಗಳು ಸಂಧ್ಯಾವಂದನೆಯನ್ನು ಮಾಡಿಸಿ , ಮಹಿಪತಿರಾಯರ ಮುಂದೆ ಕರೆದುಕೊಂಡು ಹೋದರು.
ಆಗ ಮಹಿಪತಿರಾಯರು ಮಕ್ಕಳನ್ನು ಕೂಡಿಸಿಕೊಂಡು,ಅವರತ್ತ ನಗೆಬೀರಿ ತಮ್ಮ ವರದ ಹಸ್ತವಿಟ್ಟರು. ಕೂಡಲೇ ಮಕ್ಕಳಿಬ್ಬರ ದೇಹದೊಳಗೆ ಶಕ್ತಿಯ ಸಂಚಲನದ ಅನುಭವವಾಯಿತು.
ದಿವ್ಯ ದೃಷ್ಟಿ ಬೀರಿ ಆಶಿರ್ವದಿಸಿ ಬುದ್ಧಿಮಾತು ಹೇಳಿ ಕಳುಹಿಸಿದರು.
ಮುಂದೆ ಇವರಿಬ್ಬರಲ್ಲಿ ಮಹತ್ತರ ಬದಲಾವಣೆಗಳಾಯಿತು. ಓರಿಗೆಯವರ ಜೊತೆ ತುಂಟತನ ಬಿಟ್ಟರು. ಸ್ತೋತ್ರ, ವೇದಪಾಠ ಜಪತಪದಲ್ಲಿ ಕಾಲ ಕಳೆಯತೊಡಗಿದರು.
ಮುಂದೆ ಒಂದು ದಿನ ಕಲಬುರ್ಗಿಯಿಂದ ದೇಶಮುಖರು (ತಿಮ್ಮವ್ವಳ ತಂದೆತಾಯಿ)ಅಜ್ಜಾಅಜ್ಜಿ ಮೊಮ್ಮಕ್ಕಳನ್ನು ನೋಡಲು ಬಂದರು. ಆಗ ಅಜ್ಜ ಮಗಳ(ತಿಮ್ಮವ್ವ) ನೆನಪಿಗಾಗಿ ದೇವರಾಯರನ್ನು ಕರೆದುಕೊಂಡುಹೋಗಿ ಸಲಹುವುದಾಗಿ ಹೇಳಿದರು.
ಮಹಿಪತಿದಾಸರು ತಮ್ಮ ಅಪರೋಕ್ಷ ಜ್ಞಾನದಿಂದ ದೇವರಾಯರ ಎಲ್ಲ ಮುಂದಿನ ಜೀವನದ ಆಗುಹೊಇಗುಗಳ ಬಗ್ಗೆ ತಿಳಿದು , ದೇಶಮುಖರ ಜೊತೆ ಕಳುಹಿಸಿದರು. ಸಹೋದರಿಬ್ಬರಿಗೂ ಅಗಲುವಿಕೆಯ ನೋವು ಉಂಟು ಮಾಡಿತ್ತು. ಆದರೆ ಇಬ್ಬರು ಪ್ರಬುದ್ಧರಾಗಿದ್ದ ಕಾರಣ; ಕೆಲವೇ ದಿನಗಳಲ್ಲಿ ತಾವಿರುವ ಪರಿಸರಕ್ಕೆ ಹೊಂದಿಕೊಂಡರು.
ಒಂದು ದಿನ ಮಹಿಪತಿರಾಯರು ಕೃಷ್ಣದಾಸರನ್ನು ಕರೆದು ತಮ್ಮ ವರದ ಹಸ್ತವನ್ನಿಟ್ಟು ಬೀಜಾಕ್ಷರ ಮಂತ್ರವನ್ನು ಉಪದೇಶಿಸಿದರು. ಆಗ ಬಿಂಬ ಮೂರ್ತಿಯಲ್ಲಿ ಚಿನ್ಮಯನ ದರುಷನವಾಯಿತು. ಆಗ ಇವರೇ ನನ್ನ ಸ್ವರೂಪೋದ್ಧಾರಕ ಗುರುಗಳು ಎಂದು ಅರಿತು ಪಾದಕ್ಕೆರಗಿದರು.
ಹೀಗೆ ತಂದೆಯನ್ನೆ ಗುರುವನ್ನಾಗಿ ಮಾಡಿಕೊಂಡು ಅವರ ಹಾದಿಯಲ್ಲೆ ಜಪತಪ ಅನುಷ್ಟಾನ ಮಾಡುತ್ತ ದೇಶ ಈಶ ಸೇವೆ ಮಾಡುತ್ತಿದ್ದರು. ಕಠೋರ ಸಾಧನೆ ಮಾಡುತ್ತ , ಅಪರೋಕ್ಷ ಜ್ಞಾನವನ್ನು ಹೊಂದಿದರು. ಹಲವಾರು ಸಾಹಿತ್ಯಗಳನ್ನು ರಚಿಸತೊಡಗಿದರು.
ಒಂದು ದಿನ ಕೃಷ್ಣ ದಾಸರು ಸಾಹಿತ್ಯ ರಚಿಸ ತೊಡಗಿದಾಗ… ಮಹಿಪತಿರಾಯರಿಗೆ ಗೊತ್ತಾಯಿತು. ಕೂಡಲೆ ಮಗನಿಗೆ ಎಲ್ಲ ಸಾಹಿತ್ಯ ತೋರಿಸಲು ಹೇಳಿದರು. ಅದರಂತೆ ಕೃಷ್ಣದಾಸರು ತಾವು ರಚಿಸಿರುವ ಎಲ್ಲ ಸಾಹಿತ್ಯ ತೋರಿಸಿದಾಗ ಅವುಗಳನ್ನು ಪರೀಶಿಲಿಸಿ; ಮೊದಲು ಶ್ರೀ ಹರಿಯ ಮಂಗಳಾಚರಣೆ ಬರೆಯದ ಈ ಎಲ್ಲ ಸಾಹಿತ್ಯ ವ್ಯರ್ಥ , ನೀನು ಗಂಗೆಗೆ(ಕೃಷ್ಣಾನದಿ) ಸಮರ್ಪಿಸಿ… ಮತ್ತೇ ಶ್ರೀ ಹರಿಯ ಮಂಗಳಾಚರಣೆ ಬರೆಯುವುರೊಂದಿಗೆ ಪುನಃ ಪ್ರಾರಂಭಿಸು ಎಂದು ಹೇಳಿದರು.
ಅದರಂತೆ ತಂದೆಯಲ್ಲಿನ ಗುರುವಾಜ್ಞನೆಯನ್ನು ಪಾಲಿಸಿದರು. ಮತ್ತೆ ಸಾಹಿತ್ಯವನ್ನು ಶ್ರೀಶನ ಶ್ರೀಕಾರದ ಮಂಗಳಾಚರಣೆಯಿಂದ ಪ್ರಾರಂಭಿಸಿದರು.
ಹೀಗೆ ಒಂದು ದಿನ ತಾಯಿಯಂತೆ ಇದ್ದ ತುಕ್ಕವ್ವಳು; ಜೀವನದ ಯಾತ್ರೆ ಮುಗಿಸಿದರು. ಮಹಿಪತಿರಾಯರು ಮತ್ತು ಇಬ್ಬರು ಮಕ್ಕಳು ಜೀವನದಲ್ಲಿ ಬಂದ ವಿಷಮ ಗಳಿಗೆಯನ್ನು ಸಮಾನ ಚಿತ್ತದಿಂದ ಸ್ವೀಕರಿಸಿದರು.
ಮುಂದೆ ಮಹಿಪತಿರಾಯರು ಮಗನು ತಾರುಣ್ಯಕ್ಕೆ ಕಾಲಿಟ್ಟಿದ್ದು ಅರಿತು; ಕೃಷ್ಣರಾಯರನ್ನು ಕರೆದು ಮದುವೆಯ ವಿಷಯ ಹೇಳಿ; ಇನ್ನು ನೀನು ಗೃಹಸ್ಥ ಜೀವನಕ್ಕೆ ಕಾಲಿಡಬೇಕು ಎಂದರು. ಆಗ ಕೃಷ್ಣರಾಯರು ನಿರ್ಭಾವದಿಂದ ಪ್ರತಿಕ್ರಿಯಿಸಿದಾಗ ;ಆಗ ಮಗನಿಗೆ ಸಂಪ್ರದಾಯದಂತೆ ಚತುರ ಆಶ್ರಮಗಳಲ್ಲಿನಡೆಯಬೇಕು. ನಡೆದು ಭವ ಸಾಗರದಲ್ಲಿ ಇದ್ದು ಜಯಿಸಬೇಕೆಂದು ಹೇಳಿದರು.
ಮುಂದೇ ಕೆಲವೆ ದಿನಗಳಲ್ಲಿ ಹೊನವಾಡ ಗ್ರಾಮದ ಪ್ರಸಿದ್ಧ ಮನೆತನದ ಕುಲಕರ್ಣಿ ದಂಪತಿಗಳ ಸದ್ಗುಣಿಯಾದ ಸುಪತ್ರಿ ರಾಧಾಬಾಯಿ ಜೊತೆ ಕೃಷ್ಣರಾಯರ ವಿವಾಹವಾಯಿತು. ಮಹಿಪತಿರಾಯರ ಸಮ್ಮುಖದಲ್ಲಿ ಹಿರಿಯ ಮಗ ದೇವರಾಯ ಮತ್ತು ಅವರ ಪತ್ನಿ ಲಕ್ಷ್ಮಿ ಬಾಯಿ ಅವರು ತಂದೆತಾಯಿ ಸ್ಥಾನದಲ್ಲಿ ನಿಂತು ಕೃಷ್ಣರಾಯರ ವಿವಾಹ ನೇರವೆರಿಸಿದರು.
ಹೀಗೆ ಮನೆಯಲ್ಲಿ ಅತಿಥಿ ಉಪಚಾರ, ಊಟ,ವಸತಿ ನಡೆದಿತ್ತು. ಆ ಊರಿನ ಕೋರಿ ಬಸಪ್ಪ ಎನ್ನುವ ಶೆಟ್ಟಿಯು ದಿನಸಿ ಸಾಮಾನುಗಳನ್ನು ಪೂರೈಸುತ್ತಿದ್ದನು.
ಮಹಿಪತಿರಾಯರು ತಾವು ಕೂಡುತ್ತಿದ್ದ ಕಂಬಳಿ ಕೆಳಗಿನಿಂದ ಹಣವನ್ನ ತಗೆದು ಕೊಡುತ್ತಿದ್ದರು. ಅದು ಅಂದಿನ ವೆಚ್ಚಕ್ಕೆ ಸರಿಹೋಗುತ್ತಿತ್ತು. ಕಂಬಳಿ ಎತ್ತಿ ನೋಡಲು ಅಲ್ಲಿ ಏನು ಇರುತ್ತಿರಲಿಲ್ಲ. ಇದೇ ಅಲ್ಲವೇ” ಅಪರೋಕ್ಷ ಜ್ಞಾನಿಗಳ ಮಹಿಮೆ ಬಲ್ಲವರು ಯಾರು? ಜಗದ ನಿಯಾಮಕನ ಹೊರತು. ಮುಂದೆ ಮಹಿಪತಿರಾಯರಿಗೆ ತಮ್ಮ ಅಪರೋಕ್ಷ ಜ್ಞಾನದಿಂದತಮ್ಮ ಕೊನೆಗಳಿಗೆ ಅರಿತು , ಜಾಲವಾದಿಯಲ್ಲಿದ್ದ ಹಿರಿಯ ಮಗ ಕಿರಿಯ ಮಗನ ಜೊತೆ , ಕೋಲ್ಹಾರಕ್ಕೆ ಹೋಗಿ ಕೃಷ್ಣ ನದಿಯ ದಂಡೆಯ ಮೇಲೆ ಕುಳಿತು ಛಟ್ಟಿ ಅಮಾವಾಸ್ಯೆಯಂದು ದೇಹವನ್ನು ತ್ಯಜಿಸಿ ವೈಕುಂಠಕ್ಕೆ ತೆರಳಿದರು. ಎಲ್ಲ ಕರ್ಮ ಮುಗಿಸಿ ಮಕ್ಕಳಿಬ್ಬರು ಕರ್ಮದ ಜೊತೆ ಧರ್ಮ ಅತಿಥಿ ಅಭಾಗ್ಯತರ ಸೇವೆ ನಿರಂತರ ನಡೆಸಿದರು.
ಕೃಷ್ಣರಾಯರಿಗೆ ಏಳು ಜನ ಮಕ್ಕಳಿದ್ದರು. ರಾಮಚಂದ್ರ, ಯಾದಪ್ಪ, ಗುರುಪ್ಪ, ಯತಿರಾಯ, ಶ್ರೀಪತಿ, ಗಿರೆಪ್ಪ ದೇವಪ್ಪ, ಇವರೆಲ್ಲರೂ ಮನೆತನದ ಸಂಸ್ಕಾರ ಮತ್ತು ಅಧ್ಯಾತ್ಮ ದ ಹಾದಿಯನ್ನು ಮುಂದುವರಿಸಿದರು. ಇವರಲ್ಲಿ ಹಿರಿಯ ಮಗನಾದ ರಾಮಚಂದ್ರ ಹಾಗೂ ನಾಲ್ಕನೇ ಮಗ ಯತಿರಾಯರು , ಇವರಿಬ್ಬರು ತಮ್ಮ ತಂದೆಯನ್ನೆಗುರುವನ್ನಾಗಿಸಿಕೊಂಡು , ಮಂತ್ರೋಪದೇಶ ಪಡೆದು ವೇದಶಾಸ್ತ್ರ ಓದುತ್ತ ; ಅಜ್ಜ ಮಹಿಪತಿರಾಯರು ಮತ್ತು ತಂದೆ ಕೃಷ್ಣರಾಯರ ಅಧ್ಯಾತ್ಮದ ಹಾದಿಯಲ್ಲಿ ನಡೆದರು.
ಮಕ್ಕಳು ತಾರುಣ್ಯಕ್ಕೆ ಕಾಲಿಡಲು, ಯೋಗ್ಯ ವಯಸ್ಸಿಗೆ ಅವರ ಮದುವೆ ಮಾಡಿ; ಕೃಷ್ಣರಾಯರು ತಮ್ಮ ಸಂಸಾರದ ಕರ್ತವ್ಯ ಮುಗಿಸಿದರು. ತಂದೆ ಮಹಿಪತಿರಾಯರ ವೃಂದಾವನ ದ ಅನತಿ ದೂರದಲ್ಲಿ ಇವರು ಜಪತಪ ಅನುಷ್ಠಾನ ಮಾಡುತ್ತಿದ್ದರು.
ಇವರು ಅನುಷ್ಠಾನ ಮಾಡುತ್ತಿದ್ದ ಜಾಗದ ಪಕ್ಕದಲ್ಲಿ ಬಾವಿ ತೋಡಿಸಿದಾಗ ,ದೊರೆತ ಲಿಂಗವನ್ನು “ರಾಮೇಶ್ವರ” ಎಂದು ಕರೆದರು. ಲಕ್ಷ್ಮಿ (ಇನ್ನೊಂದು ಹೆಸರು ಎಲ್ಲಮ್ಮ ಅನ್ನುವುದುಂಟು)ಗುಡಿಯನ್ನು ನಿರ್ಮಿಸಿದರು.
ಹೀಗೆ ಕೃಷ್ಣರಾಯರಿಗೆ ಒಂದು ದಿನ ತಮ್ಮ ಅವಸಾನದ ಕಾಲ ಹತ್ತಿರ ಬಂದಿತೆಂದು ಅಪರೋಕ್ಷ ಜ್ಞಾನದಿಂದ ತಿಳಿದು; ತಮ್ಮ ಮಕ್ಕಳೆಲ್ಲರನ್ನು ಕರೆಯಿಸಿದರು. ಎಲ್ಲರಿಗೂ ಮಹತ್ತರ ವಿಷಯ ಹೇಳಿದರು. ನಮ್ಮ ಗುರುಮಹಿಪತಿ ಸಂಸ್ಥಾನಕ್ಕೆ ಅನೇಕ ಫಲವತ್ತಾದ ಭೂಮಿಗಳು ಇವೆ.
ಅವುಗಳ ಮೇಲ್ವಿಚಾರಣೆ ಮಾಡುತ್ತ ಅಜ್ಜ ಗುರುಮಹಿಪತಿರಾಯರ ಆರಾಧನೆ ಕೊರತೆ ಬರದಂತೆ ಮಾಡಿಕೊಂಡು ಹೋಗಲು ಹೇಳಿದರು. ಹಾಗೇ ನಾನು ಮೂರು ದಿನಗಳವರೆಗೆ ಶ್ರೀ ಹರಿ ಧ್ಯಾನ ಮಾಡುತ್ತ ; ಭೌತಿಕ ಶರೀರ ತ್ಯಜಿಸುವೆ ಎಂದು ಹೇಳಿದರು. ಅಲ್ಲಿಯೇ ತೀರ್ಥಬಾವಿ ಹತ್ತಿರ ಸ್ಥಳ ಸಿದ್ಧಪಡಿಸಿದರು. ಮುಂದೆ ಕೃಷ್ಣರಾಯರು ತಾವು ಹೇಳಿದಂತೆ ಮೂರು ದಿನ ಅನುಷ್ಟಾನ ಮಾಡುತ್ತ ಉತ್ತರಾಯಣ ಮಾಘ ಶುದ್ಧ ಭೀಮದ್ವಾದಶಿ ಗುರುವಾರ ದಂದು ಹರಿಪಾದ ಸೇರಿದರು.
ಮುಂದೆ ಹಿರಿಯರ ಸಮ್ಮುಖದಲ್ಲಿ ದ್ವಾದಶ ಶಾಲಿಗ್ರಾಮಗಳಿಂದ ವೃಂದಾವನ ನಿರ್ಮಿಸಿ , ಆರಾಧನೆ ಮಾಡುತ್ತ ಬಂದಿದ್ದಾರೆ.
ಪ್ರಿಯಾ ಪ್ರಾಣೇಶ ಹರಿದಾಸ
(ಕವಿಯತ್ರಿ,ಲೇಖಕಿ)