ಬೀದರ – ಧರ್ಮಸ್ಥಳದ ಪ್ರಕರಣದ ಕುರಿತು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕ ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಶಿವಾಜಿ ಸರ್ಕಲ್‌ನಿಂದ ತಾಲ್ಲೂಕು ಪಂಚಾಯತಿವರೆಗೆ ಪ್ರತಿಭಟನಾ ರ್ಯಾಲಿ ನಡೆದು, ರ್ಯಾಲಿಯಲ್ಲಿ ಪಾಲ್ಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ರ್ಯಾಲಿಯುದ್ದಕ್ಕೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು
ಇದೇ ವೇಳೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಧರ್ಮಸ್ಥಳವು ಹಿಂದೂಗಳ ಶ್ರದ್ಧಾ ಮತ್ತು ಭಕ್ತಿ ಕೇಂದ್ರವಾಗಿದೆ. ಅನಾಮಿಕ ಮುಸುಕುದಾರಿಯ ದೂರು ಪಡೆದು ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದೆ. ಮುಸುಕುದಾರಿ ತಾಳಕ್ಕೆ ತಕ್ಕಂತೆ ಎಸ್‌ಐಟಿ ಕುಣಿದು ಎಲ್ಲೆಂದರಲ್ಲಿ ಗುಂಡಿ ಅಗೆದಿದೆ. 15 ಅಡಿ ಆಳ ಅಗೆದ್ರೂ ಯಾವುದೇ ಪುರಾವೆ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರದ ನಿರ್ಧಾರದ ಹಿಂದೆ ವಿದೇಶಿಗಳ ಕೈವಾಡ, ವಿದೇಶಿ ಹಣ, ರಾಷ್ಟ್ರೀಯ ಕಾಂಗ್ರೆಸ್ ಕೈವಾಡ ಮತ್ತು ಮುಸ್ಲಿಂವಾದಿಗಳಂತಹ ಎಸ್‌ಡಿಪಿಐ ಸಂಸ್ಥೆಗಳ ಕೈವಾಡವಿದೆ ಎಂದರು.
ಇದರಿಂದಲೇ ಬಿಜೆಪಿ ಧರ್ಮ, ಸತ್ಯ, ನ್ಯಾಯದ ಪರ ನಿಂತಿದೆ. ಈ ವಿಷಯದಲ್ಲಿ ಧರ್ಮಸ್ಥಳದ ಜೊತೆಗಿದ್ದೇವೆ. ಸರ್ಕಾರ ಈ ಪ್ರಕರಣವನ್ನ ಎನ್‌ಐಎ ತನಿಖೆ ಕೊಡಬೇಕು ಎಂದು ಎನ್‌ಐಎ ತನಿಖೆಗೆ ಒತ್ತಾಯಿಸಿದರು ಖೂಬಾ.
ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂಬ ಕಾಂಗ್ರೆಸ್ಸಿಗರ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಡಿಎನ್‌ಎದಲ್ಲಿ ಅತ್ಯಾಚಾರಿಗಳಿಗೆ, ಭ್ರಷ್ಟರಿಗೆ, ಹಿಂದೂ ಹಾಗೂ ಸನಾತನ ಧರ್ಮದ ವಿರೋಧಿಗಳನ್ನ ರಕ್ಷಿಸುವ ಇತಿಹಾಸವಿದೆ. ಹೀಗಾಗಿ, ಅಂಥವರನ್ನ ರಕ್ಷಿಸುತ್ತಾ ಅನಾವಶ್ಯಕ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.
ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿಚಾರ ಕುರಿತು ಮಾತನಾಡಿದ ಅವರು, ಹಿಂದೂ ಪರವಾಗಿ ಕೆಲಸ ಮಾಡಿದಾಗ ಅವನ ಹಿಂದೂ ಸಮಾಜ ನಿಂತಿದೆ. ಧರ್ಮಸ್ಥಳದ ವಿಚಾರದಲ್ಲಿ ಕುತಂತ್ರ ಬುದ್ಧಿಯಿಂದ ಸೃಷ್ಟಿಸಿ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾನೆ. ಅವನು ಸಚ್ಛ ಹಿಂದೂ ಅಲ್ಲ, ಕಲಬೆರಕೆ ಹಿಂದೂವಾಗಿದ್ದಾನೆ ಎಂದು ಖೂಬಾ ಆಕ್ರೋಶ ವ್ಯಕ್ತಪಡಿಸಿದರು.
ಈತನ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ವರದಿ : ನಂದಕುಮಾರ ಕರಂಜೆ, ಬೀದರ