ಪುಸ್ತಕ ಪರಿಚಯ : ಪ್ರಚಲಿತ ಸಮನ್ವಯ ನಿರೂಪಣಾ ಕೃತಿ ‘ಅಪೇಕ್ಷಾ’

Must Read

ಬೆಳಗಾವಿ ಜಿಲ್ಲೆಯ ಮಹಿಳಾ ಸಾಹಿತಿಗಳಲ್ಲಿ ಹೆಮ್ಮೆಯ ಸ್ಥಾನ ಹೊಂದಿದವರು ಡಾ. ಹೇಮಾವತಿ ಸೊನೊಳ್ಳಿ ಅವರು ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿ ಕವನ, ಕಥೆ, ಹರಟೆ, ಪ್ರಬಂಧ, ಆತ್ಮಚರಿತ್ರೆ ಕೃತಿಗಳನ್ನು ರಚಿಸಿ ಸಾಹಿತ್ಯ ವಲಯದಲ್ಲಿ ಹೆಸರು ಮಾಡಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಡಾ. ಹೇಮಾವತಿ ಅವರು ಕಾದಂಬರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಕಾದಂಬರಿಯು ಗದ್ಯ ಕಾಲ್ಪನಿಕ ಕಥೆಯ ಒಂದು ನಿರೂಪಣೆ ಕೃತಿಯಾಗಿದ್ದು ಅದು ನಿರ್ದಿಷ್ಟ ಅನುಭವಗಳನ್ನು ಪಾತ್ರಗಳ ಮೂಲಕ ಹೇಳುತ್ತದೆ. ಗದ್ಯಶೈಲಿ, ದೀರ್ಘ ಕಥಾನಕ, ಕಾಲ್ಪನಿಕ, ಅರೆ ಕಾಲ್ಪನಿಕ, ಸುತ್ತಲಿನ ಘಟನೆಗಳ ವಿಷಯವು ಕಾದಂಬರಿಯ ಗುಣಲಕ್ಷಣಗಳಾಗಿವೆ.

ಆಧುನಿಕ ಕಾಲದಲ್ಲಿ ಧಾರವಾಡದ ಹೆಣ್ಣು ಮಕ್ಕಳ ಟ್ರೈನಿಂಗ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಶಾಂತಾಬಾಯಿ ನೀಲಗಾರ್ ಅವರು ೧೯೦೮ರಲ್ಲಿ ಸದ್ಗುಣಿ ಕೃಷ್ಣಬಾಯಿ ಕಾದಂಬರಿ ಬರೆದರು. ಮಹಿಳೆ ಒಬ್ಬರು ಬರೆದ ಮೊಟ್ಟ ಮೊದಲ ಕಾದಂಬರಿ. ಗಂಗರ ಮರ್ಮಿನೀತ ಎಂಬ ಚಾರಿತ್ರಿಕ ಕಾದಂಬರಿ ಬರೆದ ಮೊದಲ ಕನ್ನಡ ಮಹಿಳೆ ಪಿ. ಎಸ್. ವಿಜಯಲಕ್ಷ್ಮಿದೇವಿ (೧೯೨೫-೯೫) ನಂತರ ತ್ರಿವೇಣಿ, ಎಂ. ಕೆ. ಇಂದಿರಾ, ಅನುಪಮಾ ನಿರಂಜನ, ವಾಣಿ, ಗೀತಾ ಕುಲಕರ್ಣಿ ಹೀಗೆ ಹಲವರು ಇದ್ದಾರೆ.

ಈಗ ಡಾ. ಹೇಮಾವತಿ ಸೊನೊನಳ್ಳಿ ಅಪೇಕ್ಷಾ ಎಂಬ ಕಾದಂಬರಿ ರಚಿಸಿದ್ದಾರೆ. ಸಮಕಾಲೀನ ವಸ್ತು ವಿಷಯವನ್ನು ಒಳಗೊಂಡಿದೆ. ಇದರಲ್ಲಿ ಈಗಿನ ವಿದ್ಯಾರ್ಥಿನಿಯರು ಜೀವನ ಪಾಠವನ್ನು ಕಲಿಯುವ ಸಾಕಷ್ಟು ಅಂಶಗಳಿವೆ. ಯುವತಿಯರ ದೈಹಿಕ ಸೌಂದರ್ಯ ಹೇಗೆ ಅವರಿಗೇ ಮಾರಕವಾಗುತ್ತದೆ ಎಂಬುದನ್ನು ತಿಳಿಸುತ್ತಾ ಕೊನೆಗೆ ದೈಹಿಕ ಸೌಂದರ್ಯಕಿಂತ ಮನಸ್ಸಿನ ಸೌಂದರ್ಯ ಮುಖ್ಯ ಎಂಬುದನ್ನು ಕಾದಂಬರಿ ವಿಶದಪಡಿಸುತ್ತದೆ.

ಶ್ರೀಮಂತ ಕುಟುಂಬದ ಶಿವಪ್ಪ, ಕುಸುಮ ದಂಪತಿಗಳ ಏಕ ಮಾತ್ರ ಪುತ್ರಿ, ಸೌಂದರ್ಯದ ಖಣಿ ಅಪೇಕ್ಷಾ, ಈ ಕಾದಂಬರಿಯ ನಾಯಕಿ. ೧೬ ವರ್ಷದವಳಾದಾಗ ಅವಳ ಸೌಂದರ್ಯಕ್ಕೆ ಮನಸೊತು ಹಲವಾರು ಪಡ್ಡೆ ಹುಡುಗರು ಅವಳ ಹಿಂದೆ ಸುತ್ತಾಡಿದರು. ಕಾಲೇಜಿನ ಆವರಣದಲ್ಲಿ ಅವಳ ಆಕರ್ಷಕ ವ್ಯಕ್ತಿತ್ವಕ್ಕೆ ಹಲವರು ಮಾರು ಹೋದರು. ಭಾವಗೀತೆ ಸ್ಪರ್ಧೆಯಲ್ಲಿ ಇವಳ ಕಂಠ ಹಾಗೂ ಸೌಂದರ್ಯಕ್ಕೆ ಅರ್ಥಶಾಸ್ತ್ರ ಉಪನ್ಯಾಸಕರು ಇವಳ ಪ್ರೇಮಪಾಶದಲ್ಲಿ ಸಿಲುಕಿದರು. ಈ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಕಾರ್ಯಗಳನ್ನು ಮಾಡುವಾಗ ಅಪೇಕ್ಷಾಳ ಹತ್ತಿರವಾದನು.

ಅಪೇಕ್ಷಾಳಿಗೆ ಇದು ಇಷ್ಟವಾಗಲಿಲ್ಲ. ಗುರುಗಳ ಪ್ರೀತಿ ಪಾಶವಾದ ಬಲೆಯಲ್ಲಿ ಬೀಳುವುದು ಅವಳಿಗೆ ಅಕ್ಷಮ್ಯ ಅಪರಾಧವಾಗಿತ್ತು. ಪತ್ರದ ಮುಖೇನ ತಿಳಿಸಿದಾಗ ಅವರಿಬ್ಬರಲ್ಲಿ ಗುರು-ಶಿಷ್ಯೆ ಭಾವನೆ ಬೆಳೆಯಿತು. ಪರೀಕ್ಷೆ ಮುಗಿದು ಪದವಿ ಹಂತಕ್ಕೆ ಸೇರುವ ಮುನ್ನ ರಜೆಯಲ್ಲಿ ಪ್ರವಾಸ ಹೋಗುವ ಸಮಯದಲ್ಲಿ ಸೋದರ ಮಾವ ರೋಹಿತನ ಭೇಟಿ ಆಯಿತು. ರೋಹಿತ್ ಬಿ.ಎ. ಪದವಿ ಹೊಂದಿದ್ದರೂ ಅಪ್ಪಟ ರೈತನಾಗಿದ್ದ. ರೋಹಿತನ ಮೇಲೆ ಅಪೇಕ್ಷಾಳ ಮನಸ್ಸು ಕೇಂದ್ರೀಕೃತವಾಯಿತು. ಅವಳಿಗೆ ತಮ್ಮಿಬ್ಬರ ಬಾಲ್ಯದ ನೆನಪುಗಳು ಮರುಕಳಿಸಿದವು. ಆಕಸ್ಮಿಕವಾಗಿ ದೇವಸ್ಥಾನಕ್ಕೆ ಹೋದಾಗ ದೇವರ ಪ್ರಸಾದವು ಹೂವಿನ ಮುಖೇನ ಲಭಿಸಿತು.

ಈ ನಡುವೆ ಶಿವಪ್ಪ ಆಕಸ್ಮಿಕವಾಗಿ ಅಗಲಿದಾಗ ರೋಹಿತ್ ಎಲ್ಲ ಜವಾಬ್ದಾರಿ ವಹಿಸಿಕೊಂಡನು. ಅಪೇಕ್ಷಾ ಎಂ.ಎ. ಓದಿ ಉಪನ್ಯಾಸಕಿ ಆದಳು. ಅಲ್ಲಿಯೂ ಇವಳ ಮಾತಿನ ಜಾಣ್ಮೆ ಸೌಂದರ್ಯ ಆಕರ್ಷಕವಾದವು. ಉಪನ್ಯಾಸಕ ಅರುಣನ ಅನುಚಿತ ವರ್ತನೆ ಅಪೇಕ್ಷಾಗೆ ಹಿಡಿಸಲಿಲ್ಲ. ಆದರೆ ಇವಳ ಸ್ನೇಹಿತೆಯೋರ್ವಳು ದ್ವಂದ್ವ ನಿಲುವಿನಿಂದ ಇಕ್ಕಟ್ಟಿಗೆ ಸಿಲುಕಿದಳು. ಕೊನೆಗೆ ಮನೆತನದ ಮೇಲೆ ಅಭಿಮಾನ ಇಟ್ಟುಕೊಂಡ ರೋಹಿತನನ್ನೇ ಮದುವೆಯಾಗಲು ನಿರ್ಧರಿಸಿದಳು. ಎರಡು ಹೃದಯಗಳು ಒಲುಮೆಯ ಶ್ರೀಮಂತಿಕೆಯಲ್ಲಿ ಸಾರ್ಥಕತೆ ಹೊಂದಿ ಜೀವನ ನಡೆಸಿದರು.

ಅಪರಿಮಿತ ಸೌಂದರ್ಯದ ಪರಿಣಾಮ ಅನೇಕರ ಕಣ್ಣುಗಳು ಆಕೆಯ ಸೌಂದರ್ಯದ ಮೇಲೆ, ಅದಕ್ಕೆ ಯುವತಿ ತೆಗೆದುಕೊಂಡ ನಿರ್ಧಾರ, ವಿಕೃತ ಮನಸ್ಸಿನ ಶಿಕ್ಷಕರು, ದ್ವಂದ್ವ ಮನಸ್ಸನ್ನು ತನ್ನ ಹತೋಟಿಗೆ ತೆಗೆದುಕೊಂಡ ಕಥಾನಾಯಕಿ, ಸೋದರ ಮಾವನ ಗುಣವನ್ನು ಮೆಚ್ಚಿ ವಿವಾಹ ಮಾಡಿಕೊಂಡದ್ದು, ಅಪೇಕ್ಷಾ ದೈಹಿಕ ಸೌಂದರ್ಯ ಹೊಂದಿದ್ದರೂ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಳ್ಳದೆ ನಿಶ್ಚಿತ ನಿಲುವನ್ನು ತನ್ನ ಜೀವನದಲ್ಲಿ ಹೊಂದಿದಳು.

ಅಪೇಕ್ಷಾ ಕಾದಂಬರಿ ಬಹುಶಃ ನೈಜ ಘಟನೆಯನ್ನು ಆಧರಿಸಿದಂತಿದೆ. ಏಕೆಂದರೆ ಇಂಥ ಘಟನೆಗಳು ಈಗ ಸಹಜವಾಗಿವೆ. ಹೆಣ್ಣಿನ ಮನೋಸ್ಥೈರ್ಯ ಬಹಳ ಮುಖ್ಯವಾಗುವದು. ಅಪೇಕ್ಷಾಳ ಈ ಮಾತು “ಒಬ್ಬ ವ್ಯಕ್ತಿಯನ್ನು ಅವಶ್ಯಕತೆ ಇದ್ದಾಗ ಬಳಸಿಕೊಂಡು ಆಮೇಲೆ ದೂರ ಸರಿಸುವುದು ಮಾನವಿಯತೆ ಅಲ್ಲ. ಕಾಯಾ, ವಾಚಾ, ಮನಸಾ ನನ್ನ ಮೇಲೆ, ನಮ್ಮ ಮನೆತನದ ಮೇಲೆ ಅಭಿಮಾನವಿಟ್ಟುಕೊಂಡು ಹಗಲು ರಾತ್ರಿ ಶ್ರಮಿಸುತ್ತಾ ಎಲ್ಲ ರೀತಿಯ ಏಳಿಗೆ ಗೈದ ಅವನನ್ನು ಮರೆತು ಬೇರೊಬ್ಬ ವ್ಯಕ್ತಿಯನ್ನು ವರಿಸುವುದು ಧರ್ಮವಲ್ಲ.” ಇದು ಭಾರತೀಯ ಸಂಸ್ಕೃತಿಯ ಹಿರಿಮೆ.

ಡಾ. ಹೇಮಾವತಿ ಸೊನೊಳ್ಳಿ ಅವರು ಈಗಿನ ಸಾಮಾಜಿಕ ಶೈಕ್ಷಣಿಕ ಹಂತಗಳಲ್ಲಿ ನಡೆಯುವ ವೈರುಧ್ಯಗಳನ್ನು ಅಪೇಕ್ಷಾ ಕಾದಂಬರಿಯಲ್ಲಿ ನವಿರಾಗಿ ಚಿತ್ರಿಸಿದ್ದಾರೆ. ಸರಳ ನಿರೂಪಣೆಯೊಂದಿಗೆ ಕಥಾಹಂದರ ಸೃಜಿಸಿದ್ದರಿಂದ ಕುತೂಹಲ ಮೂಡಿಸುತ್ತದೆ. ಓದಿಸಿಕೊಂಡು ಹೋಗುತ್ತದೆ. ಕಾಲೇಜು ಶಿಕ್ಷಣ ಪಡೆಯುತ್ತಿರುವ ಯುವತಿಯರು ಅವಶ್ಯಕವಾಗಿ ಓದಲೇಬೇಕಾದ ಕಾದಂಬರಿ ಅಪೇಕ್ಷಾ. ಡಾ. ಹೇಮಾವತಿ ಸೊನೊಳ್ಳಿ ಅವರಿಂದ ಪ್ರಚಲಿತ ಸಮಸ್ಯಾತ್ಮಕ ಸನ್ನಿವೇಶಗಳ ಕಥಾಹಂದರವಿರುವ ಹೆಚ್ಚಿನ ಕೃತಿಗಳು ಲೋಕಾರ್ಪಣೆ ಆಗಲಿ ಎಂದು ಹಾರೈಸುವೆ.

ಯು. ಎನ್. ಸಂಗನಾಳಮಠ
ವಿಶ್ರಾಂತ ಪ್ರಾಚಾರ್ಯರು ಲೇಖಕರು
ಹೊನ್ನಾಳಿ ದಾವಣಗೆರೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group