ಬಸವ ಜಯಂತಿ ನಿಮಿತ್ತ ಬಸವ ಭೂಷಣ ಪ್ರಶಸ್ತಿ, ಪುಸ್ತಕ ಬಿಡುಗಡೆ ಕಾರ್ಯಕ್ರಮ

ಬಸವಣ್ಣ ಜಗತ್ತಿನ ಬಹು ದೊಡ್ಡ ದಾರ್ಶನಿಕ

ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಮತ್ತು ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ – ಪುಣೆ ವತಿಯಿಂದ ಮೇ 4 ನೆಯ ತಾರೀಕು ರವಿವಾರ ಪುಣೆಯ ಅಕುರ್ಡಿ ಯಲ್ಲಿರುವ ಗಾ. ಡಿ. ಮಾಡಗುಳ್ಕರ ಸಭಾಭವನದಲ್ಲಿ ಬೆಳಿಗ್ಗೆ 10 ಘಂಟೆಯಿಂದ 3 ಘಂಟೆಯವರೆಗೆ ಬಸವ ಜಯಂತಿಯ ಕಾರ್ಯಕ್ರಮದ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು
ಸಮಾಜ ಸೇವೆ ಮಾಡಿದವರಿಗೆ ಸನ್ಮಾನ, ಬಸವ ಭೂಷಣ ಪ್ರಶಸ್ತಿ,ಶರಣರ ಪುಸ್ತಕ ಬಿಡುಗಡೆ, ವಧು -ವರ ಸಮ್ಮೇಳನಗಳೆಲ್ಲವೂ ಅತ್ಯಂತ ಯಶಸ್ವಿಯಾಗಿ ನಡೆದವು.

ಕಾರ್ಯಕ್ರಮದ ಉದ್ಘಾಟನೆ ಪರಮಪೂಜ್ಯ ಶಾಂತಲಿಂಗ ಸ್ವಾಮೀಜಿ ತೋoಟದಾರ್ಯ ಮಠ-ಶಿರೋಳ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.

ಶ್ರೀಗಳು ತಮ್ಮ ಆಶೀರ್ವಚನದಲ್ಲಿ ವಿಶ್ವಗುರು ಬಸವಣ್ಣನವರು ಅಮೋಘವಾದ ವಚನಸಾಹಿತ್ಯವನ್ನು ವಿಶ್ವಕ್ಕೆ ನೀಡಿದರು. ಆ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿದರು.ಶಿವಶರಣರು ದೇವರಿಗೇ ಕನ್ನಡ ಕಲಿಸಿದ ಮಹಾನ್ ದಾರ್ಶನಿಕರು. ಪುರುಷರದೇ ಮೇಲುಗೈ ಇದ್ದ ಸಮಾಜದಲ್ಲಿ ಮಹಿಳೆಯರಿಗೆ ಸಹ ಸಮಾನತೆ ಯನ್ನು ನೀಡಿ ವಚನ ಸಾಹಿತ್ಯ ರಚನೆಗೆ ಅನುವು ಮಾಡಿಕೊಟ್ಟ ಪುಣ್ಯಪುರುಷರು ಎಂದು ಒತ್ತಿ ಹೇಳಿದರು.

ಮಕ್ಕಳಿಗೆ ಲಿಂಗಧಾರಣೆ ಮಾಡಿಸಬೇಕು ಮತ್ತು ಎಲ್ಲರಿಗೂ ಬಸವತತ್ವ ಅರುಹಬೇಕು ಎನ್ನುವ ಕಿವಿಮಾತು ಹೇಳುತ್ತಾ, ” ಶರಣರ ನೆನೆದರ ಸರಗಿಯ ಇಟ್ಟಂಗ ” ಎನ್ನುವ ಜಾನಪದ ನುಡಿಯನ್ನು ಉಲ್ಲೇಖಿಸಿದರು.

ಡಾ. ಶಶಿಕಾಂತ ಪಟ್ಟಣ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಇಡೀ ಜಗತ್ತು ಈಗ ಬಸವಣ್ಣನ ಕಡೆಗೆ ನೋಡುತ್ತಿದೆ, ಬಸವಣ್ಣನವರ ಚಿಂತನೆಗಳನ್ನು ತಮ್ಮದನ್ನಾಗಿ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿವೆ ಎಂದು ಹೇಳುತ್ತಾ, ಮೂರು ವರ್ಷದಿಂದ ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಮತ್ತು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದಿಂದ ಈ ಕಾರ್ಯಕ್ರಮಗಳು ನಡೆಯುತ್ತಿವೆ ಮತ್ತು ಅಕ್ಕನ ಅರಿವು, ವಚನ ಅಧ್ಯಯನ ವೇದಿಕೆಯ ಮೂಲಕ ಪ್ರತಿ ಶನಿವಾರ ಮತ್ತು ರವಿವಾರ ಗೂಗಲ್ ಮೀಟ ನಡೆಯುತ್ತವೆ ಎನ್ನುವುದನ್ನು ಹಂಚಿಕೊಂಡರು.

ಮುಖ್ಯ ಅತಿಥಿಗಳಾದ ಡಾ. ಸರಸ್ವತಿ ಪಾಟೀಲ ಅವರು ” ಅನುಭವ ಮಂಟಪದಲ್ಲಿ ವಚನಕಾರ್ತಿಯರು ” ವಿಷಯದ ಬಗೆಗೆ ಎಲ್ಲ ಶರಣೆಯರ ಉದಾಹರಣೆಯೊಂದಿಗೆ ಅತ್ಯಂತ ಪ್ರಬುದ್ಧವಾಗಿ ಮಾತನಾಡಿದರು.

ಚೀಫ್ ಇಂಜಿನಿಯರ್  ಪ್ರಶಾಂತ ಆಟಿ ಅವರು ಬಸವಣ್ಣನವರು ಸಾಂಸ್ಕೃತಿಕ ನಾಯಕ ಮತ್ತು ಅನುಭವ ಮಂಟಪದ ರೂವಾರಿ ಬಸವಣ್ಣ ನವರು ಎಂದು ಹೆಮ್ಮೆಯಿಂದ ಹೇಳಿದರು. ಕೈಗಾರಿಕೋದ್ಯಮಿ ಮತ್ತು ಲಿಂಗಾಯತ ಸಂಘ ಟನೆಗಳ ಸಂಚಾಲಕರು ಅಣ್ಣಾರಾಯ್ ಬಿರಾದಾರ ಅವರು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆಯಾಗಬೇಕು ಎನ್ನುವ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಡಾ. ಶಶಿಕಾಂತ ಪಟ್ಟಣ ಮತ್ತು ಡಾ. ಜಯಶ್ರೀ ಪಟ್ಟಣ ಅವರು ಬರೆದ ” ಮಹಾರಾಷ್ಟ್ರದ ಮಹಾ ಸಂತರು ” ಪುಸ್ತಕ ಮತ್ತು ಬೆಳಗಾವಿಯ ಸುಧಾ ಪಾಟೀಲ ಅವರ ” ವಚನ ದಿವ್ಯ ” ಪುಸ್ತಕ ಬಿಡುಗಡೆಗೊಂಡವು. ಡಾ. ಶಶಿಕಾಂತ ಪಟ್ಟಣ ಅವರು ಕರ್ನಾಟಕ ಮತ್ತು ಮಹಾರಾಷ್ಟ್ರ ದ ಸಂಸ್ಕೃತಿ ಒಂದಕ್ಕೊಂದು ಹೇಗೆ ಪ್ರಭಾವ ಬೀರುತ್ತವೆ ಎಂದು ಹೇಳುತ್ತಾ, ” ಭಾಷೆ ಯಾವುದಾದರೇನು, ಭಾವ- ಭಕ್ತಿ ಒಂದಾಗಲಿ ” ” ಎಲ್ಲ ಸಂಕೋಲೆಗಳನ್ನು ದಾಟಿ ಮನುಷ್ಯತ್ವವನ್ನು ಸಾಧಿಸಬೇಕು ” ಎಂದು ಕಿವಿಮಾತು ಹೇಳಿದರು.

ತಾವು ತಮ್ಮ ಶ್ರೀಮತಿಯವರ ಜೊತೆ ಗೂಡಿ ಮಹಾರಾಷ್ಟ್ರದ ಸಂತರ ಪುಸ್ತಕ ಹೇಗೆ ರೂಪುಗೊಂಡಿತು ಎನ್ನುವುದನ್ನು ಹಂಚಿಕೊಂಡರು. ಸುಧಾ ಪಾಟೀಲ ಅವರು ತಮ್ಮ ಪುಸ್ತಕ ದಲ್ಲಿ 101 ವಚನಗಳ ಸಂಕ್ಷಿಪ್ತ ವಚನ ವಿಶ್ಲೇಷಣೆಯನ್ನು ಡಾ.ಶಶಿಕಾಂತ ಪಟ್ಟಣ ಸರ್ ಮಾರ್ಗದರ್ಶನದಲ್ಲಿ ಬರೆದಿದ್ದೇನೆ ಎಂದು ಹೇಳುತ್ತಾ ಬಸವ ತಿಳಿವಳಿಕೆಯ ಸಂಘ ಟನೆಯ ಅಡಿಯಲ್ಲಿ ತನ್ನ ಕೆಲಸ ಕಾರ್ಯಗಳನ್ನು ನಡೆಸುವ “ಅಕ್ಕನ ಅರಿವು” ವೇದಿಕೆ ಯಾವುದೇ ಹೊಗಳಿಕೆಗೆ ಮತ್ತು ಹೋಲಿಕೆಗೆ ಮೀರಿದ ಸಂಸ್ಥೆ ಎನ್ನುವ ಅಭಿಪ್ರಾಯ ಪಟ್ಟರು.

ನಂತರ ಪ್ರೊ. ಶಾರದಾ ಪಾಟೀಲ(ಮೇಟಿ) ಬಾದಾಮಿ ಮತ್ತು ಡಾ. ಲಕ್ಷ್ಮಿಕಾಂತ ದಾಮಾ- ಉಪಕುಲಪತಿಗಳು- ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳ್ಕರ -ಸೊಲ್ಲಾಪರ ಯೂನಿವರ್ಸಿಟಿ ಇವರಿಗೆ ” ಬಸವ ಭೂಷಣ ” ಪ್ರಶಸ್ತಿ ನೀಡಿ ಸನ್ಮಾನಿಸಲಾಯ್ತು. ಸನ್ಮಾನ ಸ್ವೀಕರಿಸಿದ ಡಾ. ಲಕ್ಷ್ಮಿಕಾಂತ ದಾಮಾ ಅವರು ಬಸವ ತಿಳಿವಳಿಕೆ ವೇದಿಕೆಯೊಂದಿಗೆ ತಮ್ಮ ವಿಶ್ವವಿದ್ಯಾಲಯದಲ್ಲಿ MOU ಕಾರ್ಯಕ್ರಮ ಮಾಡುವ ಉದ್ದೇಶವನ್ನು ಹಂಚಿಕೊಂಡರು
ಪ್ರೊ. ಶಾರದಾ ಪಾಟೀಲ ಅವರು ತಮಗೆ ಪ್ರಶಸ್ತಿ ಬಂದಿದ್ದಕ್ಕೆ ಹರ್ಷ ವ್ಯಕ್ತಪಡಿಸಿ, ಕೃತಜ್ಞತೆ ಅರ್ಪಿಸುತ್ತಾ, ಡಾ. ಪಟ್ಟಣ ಮತ್ತು ಶ್ರೀ ಶಾಂತಲಿಂಗ ಸ್ವಾಮೀಜಿ ಅವರ ಬಗೆಗೆ ಅಭಿಮಾನದ ನುಡಿಗಳನ್ನಾಡಿ ದರು.ಹಿಂದಿ ಭಾಷೆಯಲ್ಲಿ ತಮ್ಮಅದ್ಭುತವಾದ ಭಾಷಣ ಶುರು ಮಾಡಿ ವಾಜಪೇಯಿ ಅವರ ಕವನದೊಂದಿಗೆ ಮುಕ್ತಾಯ ಮಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಮಾಜ ಸೇವೆ ಮಾಡಿದವರಿಗೆ ಎಲ್ಲ ಕಮಿಟಿ ಸದಸ್ಯರು ಕೂಡಿಕೊಂಡು ಸನ್ಮಾನ ನಡೆಸಿಕೊಟ್ಟರು. ನಂತರ ಅನಿಕೇತ ಪಾಟೀಲ ಅವರು ಎಲ್ಲರಿಗೂ ಮನ ಮುಟ್ಟುವ ಹಾಗೆ ಬಸವ ಪೊವಡಾ ನಡೆಸಿಕೊಟ್ಟರು.ಕೊನೆಯಲ್ಲಿ ವಧು-ವರರ ಸಮಾವೇಶವನ್ನು ಪ್ರೊ. ರಾಜಶೇಖರ ನoದರಗಿ, ಡಾ. ಶಾಂತಾ ಅರಕೇರಿ, ಶ್ರೀ ರವಿ ಖೂಬಾ, ಅಡ್ವೋಕೇಟ್ ಮನಿಷಾ ಮಹಾಜನ ಮತ್ತು ನೀತಾ ಕಡೋಲೆ ಅವರು ನಡೆಸಿ ಕೊಟ್ಟರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಸವ ದಳದ ಸತೀಶಕುಮಾರ ಪಾಟೀಲ, ಸಿ. ಬಿ. ಗಾಣಿಗೇರ, ಡಾ. ಉಮಾಕಾಂತ ಶೇಟ್ಕರ, ಡಾ. ಎ. ವಿ. ಅರಕೇರಿ,  ಗುರುರಾಜ ಚರಂತಿಮಠ,  ಬಸವರಾಜ ಕುಲ್ಲೊಳ್ಳಿ, ಸಂಜಯ ಇoಡೆ,  ಬಸವರಾಜ ಪಟ್ಟಣಶೆಟ್ಟಿ,  ಬಸವರಾಜ ಆಮನೆ ,  ಶಿವಣ್ಣ ನರೂಣೆ, ಶ್ರೀಮತಿ ಸ್ವಾತಿ ಮಾನಾ, ಅವರು ಉಪಸ್ಥಿತರಿದ್ದರು. ಸಮಸ್ತ ಲಿಂಗಾಯತ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಜಯಶ್ರೀ ಪಟ್ಟಣ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಜಾಹ್ನವಿ ಮಾನಾ ಅವರು ಸುಂದರವಾಗಿ ವಚನ ಗಾಯನ ನಡೆಸಿ ಕೊಟ್ಟರು. ರವೀಂದ್ರ ಖೂಬಾ. ಮತ್ತು ಜಯಶ್ರೀ ಕೊಗನೂರ ಅವರು ಸಮರ್ಪಕವಾಗಿ ಕಾರ್ಯಕ್ರಮ ನಡೆಸಿಕೊಟ್ಟರು ಅವರು ವಂದನಾರ್ಪಣೆ ಮಾಡಿದರು. ಡಾ. ಶಶಿಕಾಂತ ಪಟ್ಟಣ ಮತ್ತು ಡಾ. ಜಯಶ್ರೀ ಪಟ್ಟಣ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಅತ್ಯಂತ ಶಿಸ್ತು ಬದ್ಧವಾಗಿ ನಡೆಯಿತು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

LEAVE A REPLY

Please enter your comment!
Please enter your name here