‘ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿ ರೋಗಮುಕ್ತಗೊಳಿಸಬೇಕು’
ಮೂಡಲಗಿ: ‘ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆಯನ್ನು ಹಾಕಿಸಿ ರೋಗಮುಕ್ತಗೊಳಿಸಬೇಕು’ ಎಂದು ಮೂಡಲಗಿಯ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಮೋಹನ ಕಮತ ಅವರು ಹೇಳಿದರು.
ಇಲ್ಲಿಯ ಶ್ರೀ ಶಿವಬೋಧರಂಗ ಮಠದ ಗೋವು ಶಾಲೆಯ ಹಸುವಿಗೆ ಕಾಲುಬಾಯಿ ರೋಗ ಲಸಿಕೆಯನ್ನು ನೀಡುವುದರ ಮೂಲಕ ತಾಲ್ಲೂಕಿನಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೋಗಗಳಿಂದ ಪೂರ್ಣ ಸುರಕ್ಷತೆಗಾಗಿ ಮೂರು ತಿಂಗಳ ಮೇಲ್ಪಟ್ಟ ಎಲ್ಲಾ ಜಾನುವಾರುಗಳಿಗೆ ಲಸಿಕೆಯನ್ನು ಹಾಕಿಸಬೇಕು ಎಂದರು.
ಮೂಡಲಗಿ ತಾಲ್ಲೂಕಿನಲ್ಲಿ ಸದ್ಯ 88 ಸಾವಿರಾರು ಜಾನುವಾರುಗಳು ಇದ್ದು 90 ಸಾವಿರ ಲಸಿಕೆ ಸರಬುರಾಜು ಇದೆ. 60 ಲಸಿಕೆದಾರರ 12 ತಂಡಗಳ ಮೂಲಕ ಏ.30ರ ವರೆಗೆ ಲಸಿಕಾ ಅಭಿಯಾನ ಇರುವುದು. ಲಸಿಕೆದಾರರು ರೈತರ ಮನೆ, ಮನೆಗೆ ಭೇಟಿ ನೀಡಲಿದ್ದಾರೆ. ರೈತರು ಜಾನುವಾರಗಳಿಗೆ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಂಡು ಅಭಿಯಾನವನ್ನು ಯಶಸ್ಸಿಗೊಳಿಸಬೇಕು ಎಂದರು.
ಪಶು ಸಂಗೋಪನಾ ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಎಂ.ಬಿ. ವಿಭೂತಿ ಮಾತನಾಡಿ ಮೂಡಲಗಿಯಲ್ಲಿ ಪ್ರತಿ ಬಾರಿಯು ಲಸಿಕೆ ಅಭಿಯಾನವು ಶೇ. 95ರಷ್ಟು ಯಶಸ್ಸಿಯಾಗುತ್ತಿದ್ದು, ಈ ಬಾರಿ ಶೇ.100ರಷ್ಟು ಯಶಸ್ಸಿಗೊಳಿಸುವಲ್ಲಿ ರೈತರು ಜಾನುವಾರುಗಳಿಗೆ ಲಸಿಕೆಯನ್ನು ತಪ್ಪದೆ ಹಾಕಿಸಿಕೊಳ್ಳಬೇಕು ಎಂದರು.
ಶ್ರೀ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಧರಬೋಧ ಸ್ವಾಮಿಜಿ ಗೋವು ಪೂಜೆ ಸಲ್ಲಿಸಿ, ಹಣ್ಣು ತಿನ್ನಿಸಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಕೃಷಿಗೆ ಮೂಲ ಅವಶ್ಯವಾಗಿರುವ ಪಶು ಸಂಪತ್ತು ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಮನುಷ್ಯರು ತಮ್ಮ ಆರೋಗ್ಯವನ್ನು ಹೇಗೆ ಕಾಳಜಿ ಮಾಡಿಕೋಳ್ಳುತ್ತೇವೆ ಹಾಗೆಯೇ ಜಾನುವಾರುಗಳ ಆರೋಗ್ಯವನ್ನು ಕಾಳಜಿವಹಿಸಬೇಕು. ಜಾನುವಾರುಗಳ ಚಿಕಿತ್ಸೆಯಲ್ಲಿ ಮೂಡಲಗಿಯ ಪಶು ಆಸ್ಪತ್ರೆಯ ಸಿಬ್ಬಂದಿಯವರ ಸ್ಪಂದನೆಯು ಶ್ಲಾಘನೀಯವಾಗಿದೆ ಎಂದರು.
ಡಾ. ಮಹಾದೇವಪ್ಪ ಕೌಜಲಗಿ, ಸುರೇಶ ಆದಪ್ಪಗೋಳ, ಮಹಾಂತೇಶ ಹೊಸೂರ, ಶಿವಶಂಕರ ಶಾಬಣ್ಣವರ, ಸರಸ್ವತಿ ಮುರಗೋಡ, ಲಕ್ಷ್ಮಣ ಶಾಬಣ್ಣವರ, ಯಮನಪ್ಪ ಬಾವಿಮನಿ, ಮಂಜುನಾಥ ಶಿವಾಪುರ, ಜಡಯ್ಯ ಹಿರೇಮಠ, ಹುಕುಮಚಂದ ಬೇವಿನಕಟ್ಟಿ, ತುಕಾರಾಮ ದೊಡ್ಡಮನಿ, ಶ್ರೀಕಾಂತ ಕಂಠಿ, ಮಂಜುನಾಥ ಮಾಲಗಾರ, ರವಿ ಬಳಿಗಾರ, ಶಿವು ಕಮತಗಿ, ಬಸು ಹಳ್ಳೂರ, ಪಶುಸಖಿಯರಾದ ನಿರ್ಮಲಾ, ಪೂಜಾ, ಸಾವಿತ್ರಿ ಇದ್ದರು.