ಮೂಡಲಗಿ – ನೀವು ಟಿವಿಯಲ್ಲಿ ನೋಡಿರಬಹುದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಲ್ಲಿ ಗೂಂಡಾಗಿರಿ ಮಾಡಿದವರ ವಿರುದ್ಧ ಅತ್ಯಂತ ಕಠಿಣವಾಗಿ ಪ್ರಹಾರ ಮಾಡುತ್ತಾರೆ.
ಗಲಭೆಯ ನೆಪದಲ್ಲಿ ಸರ್ಕಾರಿ ಆಸ್ತಿ ಪಾಸ್ತಿ ನಷ್ಟ ಮಾಡಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಷ್ಟೇ ಅಲ್ಲದೆ ಅನಧಿಕೃತವಾಗಿ ಕಟ್ಟಲಾದ ಕಟ್ಟಡಗಳ ಮೇಲೆ ನಿರ್ದಯವಾಗಿ ಬುಲ್ಡೋಜರ್ ಹಾಯಿಸಿ ಕೆಡವೇ ಬಿಡುತ್ತಾರೆ.
ಇಂಥದೇ ಒಂದು ಆಡಳಿತ ನಮ್ಮ ಊರಲ್ಲಿ ಬರಬಹುದೇ ಎಂಬ ಒಂದು ಆಶಾವಾದ ಹಾಗೆಯೇ ಮನಸಿನಲ್ಲಿ ಬಂದು ಹೋಯಿತು. ಛೆ. ನಾನೇನು ಕನಸು ಕಾಣುತ್ತಿದ್ದೇನೆಯೇ ಎನಿಸಿತು. ದುಡ್ಡು ತಿಂದು ಬೇಕಾಬಿಟ್ಟಿಯಾಗಿ ಕಟ್ಟಡ ಕಟ್ಟಲು ಪರವಾನಿಗೆ ನೀಡುವ ಪುರಸಭೆ ಎಲ್ಲಿ, ಅನಧಿಕೃತ ಕಟ್ಟಡ ಕೆಡವಿ ಹಾಕುವ ಯೋಗಿ ಎಲ್ಲಿ… ಎಲ್ಲಿಯ ಗಂಗಾ ನದಿ ಎಲ್ಲಿಯ ಗಟಾರ ನೀರು ಎನಿಸಿತು.
ನಮ್ಮ ಊರಲ್ಲಿ ರಾಜಾರೋಷವಾಗಿ ಬೇರೆಯವರ ಜಾಗವನ್ನು ತಿಂದು ಹೊಟ್ಟೆ ಬೆಳೆಸಿಕೊಂಡು ಬದುಕಬಹುದು. ಮುಖ್ಯಾಧಿಕಾರಿಗೆ ಹೇಳಿಯೇ ಬೇರೆಯವರ ಜಾಗದಲ್ಲಿ ಮನೆ ಅಥವಾ ಅಂಗಡಿ ಕಟ್ಟಬಹುದು. ಅವರು ಎಲ್ಲವನ್ನೂ ಮುಚ್ಚಿಕೊಂಡು ತೆಪ್ಪಗೆ ಇದ್ದು ಬಿಡುತ್ತಾರೆ. ವಿಷಯ ಕೋರ್ಟಿಗೆ ಹೋದರೂ ಅಲ್ಲಿಗೆ ಬಂದು ಸುಳ್ಳು ಸಾಕ್ಷಿ ಹೇಳಿ ತಾನು ತಿಂದ ಅನ್ನದ ಋಣ ತೀರಿಸುತ್ತಾರೆ.
ಇಂಥ ಬೆಳವಣಿಗೆಗಳು ನಮ್ಮ ಕ್ಷೇತ್ರದಲ್ಲಿ ಅಷ್ಟೇ ಯಾಕೆ ಮೂಡಲಗಿಯಂಥ ನಗರದಲ್ಲಿಯೇ ರಾಜಾರೋಷವಾಗಿ ನಡೆಯುತ್ತವೆ. ಪಕ್ಕದವರ ಜಾಗವನ್ನು ಕಬಳಿಸಿಕೊಂಡು ತಿಂದು ತೇಗಬಹುದು ಇದಕ್ಕೆ ಪುರಸಭೆಯ ಅಧಿಕಾರಿಗಳಾದಿಯಾಗಿ ಎಲ್ಲರೂ ಸಹಕಾರ ನೀಡುತ್ತಾರೆ. ನಿಮ್ಮ ಉತಾರದಲ್ಲಾಗಲಿ, ಬೇರೆ ದಾಖಲೆಗಳಲ್ಲಾಗಲಿ ಅದು ಎಷ್ಟೇ ಇರಲಿ ನಿಮಗೆ ಬೇಕಾದರೆ ಪಕ್ಕದ ಮನೆಯವರ ಜಾಗವನ್ನು ಅತಿಕ್ರಮಿಸಿಕೊಂಡು ಮನೆ ಅಥವಾ ಕಾಂಪ್ಲೆಕ್ಸ ಕಟ್ಟಬಹುದು. ಪಕ್ಕದವರು ಬಂದು ಕೇಳಿದರೆ ಮುಗುಮ್ಮಾಗಿ ಒಂದು ಕೋರ್ಟ್ ಕೇಸು ಹಾಕಿ ಸುಮ್ಮನೆ ಕುಳಿತರೆ ಅದು ಮುಗಿಯುವತನಕ ಜಾಗವನ್ನು ಅನುಭವಿಸಬಹುದು. ಇದಕ್ಕೆ ಉದಾಹರಣೆಯೆಂದರೆ, ನಮ್ಮದೇ ಒಂದು ಜಾಗ.
ದಾಖಲೆಗಳ ಪ್ರಕಾರ ನಮ್ಮ ಪಕ್ಕದವನ ಜಾಗ ಕೇವಲ ೨೨ ಅಡಿ ಅಗಲ ಇದೆ ಅದು ಪುರಸಭೆಯ ಮುಖ್ಯಾಧಿಕಾರಿಗೂ ಗೊತ್ತಿದೆ, ಇಂಜಿನೀಯರಿಗೂ ಗೊತ್ತಿದೆ ಅಷ್ಟೇ ಯಾಕೆ ಆ ವಾರ್ಡಿನ ಮಾನನೀಯ ಸದಸ್ಯನಿಗೂ ಗೊತ್ತಿದೆ. ಅವರ ಹತ್ತಿರ ನ್ಯಾಯ ಕೇಳಲು ಹೋದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ ಯಾಕೆಂದರೆ ಉರಿ ಹತ್ತಿದ್ದು ಅವರಿಗಲ್ಲ. ಅತಿಕ್ರಮಣ ಮಾಡಿದವನಿಗೆ ಹೇಳುವ ಕೆಲಸ ನನ್ನದಲ್ಲ ಎಂದು ನಿರ್ಲಕ್ಷ್ಯ ಧೋರಣೆ ತಾಳುತ್ತಾರೆ. ಭ್ರಷ್ಟತೆ ಎಲ್ಲೆಡೆಯೂ ಆಳ್ವಿಕೆ ಮಾಡುವಾಗ ಹೀಗೆ ಆಗುತ್ತದೆಯೋ ಏನೋ. ಆದರೆ ಕೋರ್ಟು ಕಚೇರಿ ಅಲೆದಾಡುವ ನೋವು ಈ ಭ್ರಷ್ಟ ಆಡಳಿತಶಾಹಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಹೇಗೆ ಅರ್ಥವಾದೀತು ?
ಮೂಡಲಗಿಯ ಮಟ್ಟಿಗೆ ಹೇಳಬೇಕಾದರೆ ಪರಿಸ್ಥಿತಿ ಹದಗೆಟ್ಟು ಹೈದರಾಬಾದ್ ಆಗಿದೆ ಇಲ್ಲಿ ಜನಸಾಮಾನ್ಯರನ್ನು ಕೇಳುವವರೇ ಇಲ್ಲ. ಪುರಸಭೆಯ ಅಧ್ಯಕ್ಷರಾದಿಯಾಗಿ ಸದಸ್ಯರು ಪರಸ್ಪರ ಕೆಸರೆರಚಾಟ ನಡೆಸಿದ್ದು ಅದು ಮೊನ್ನೆ ನಡೆದ ಸರ್ವ ಸಾಧಾರಣ ಸಭೆಯಲ್ಲಿ ಬಹಿರಂಗವಾಗಿದೆ. ಪುರಸಭೆಯವರು ಆಸ್ತಿ ತೆರಿಗೆಯನ್ನು ಮಾತ್ರ ತಪ್ಪದೆ ತುಂಬಿಕೊಳ್ಳುತ್ತಾರೆ. ಮನೆ ಕಟ್ಟಲು ದುಡ್ಡು ವಸೂಲು ಮಾಡಿ ಪರವಾನಿಗೆ ನೀಡುತ್ತಾರೆ ಆದರೆ ಆತ ಎಲ್ಲಿ ಮನೆ ಕಟ್ಟುತ್ತಿದ್ದಾನೆ ಪಕ್ಕದ ಜಾಗ ಅತಿಕ್ರಮಿಸಿದ್ದಾನೆಯೊ ಹೇಗೆ ಎಂಬುದನ್ನು ನೋಡುವುದಿಲ್ಲ. ಪಕ್ಕದ ನಿವೇಶನದವರು ಬೇರೆ ಊರಿನಲ್ಲಿ ಇದ್ದರೆ ಮುಗಿಯಿತು. ಅವರು ಬರುವಷ್ಟರಲ್ಲಿ ಅರ್ಧ ಜಾಗ ಪಕ್ಕದವನ ಪಾಲಾಗಿರುತ್ತದೆ ಅವನ ಜೊತೆ ಕೂಡಿ ಇವರು ಅಟ್ಟಹಾಸ ಮಾಡುತ್ತಾರೆ.
ಮೂಡಲಗಿ ಪುರಸಭೆಯ ಬೇಜವಾಬ್ದಾರಿತನದ ಬಗ್ಗೆ ಕಾದಂಬರಿಯನ್ನೇ ಬರೆಯಬಹುದು. ಭ್ರಷ್ಟಾಚಾರ ಮಾಡಿ ನನ್ನ ಜಾಗವನ್ನು ಪಕ್ಕದವನಿಗೆ ಧಾರೆಯೆರೆದುಕೊಟ್ಟ ಮುಖ್ಯಾಧಿಕಾರಿಯ ಕರಾಮತ್ತಿನಿಂದಾಗಿ, ಕೋರ್ಟಿಗೆ ಅಲೆದಾಡಿ ಸಾಕಾಗಿ ಕಡಿಮೆ ಬೆಲೆಗೆ ಜಾಗ ಮಾರಿ ಇನ್ನೂ ಹಳಹಳಿಕೆ ಮಾಡಿಕೊಳ್ಳುತ್ತಿರುವ ನನಗೆ ಯಾಕೋ ಅದೆಲ್ಲ ನೆನಪಾಗಿ ಇದನ್ನು ಬರೆಯಬೇಕೆನಿಸಿತು. ಪ್ರಾಮಾಣಿಕ ದಿಟ್ಟ ಅಧಿಕಾರಿಯಾಗಿದ್ದರೆ ಈ ಮುಖ್ಯಾಧಿಕಾರಿ ಅತಿಕ್ರಮಣ ಮಾಡಿದವರ ವಿರುದ್ಧ ಬುಲ್ ಡೋಜರ್ ಚಲಾಯಿಸಿ ಕ್ರಮ ಕೈಗೊಳ್ಳುತ್ತಿದ್ದರು. ಆದರೆ ಇಡೀ ಮೂಡಲಗಿಯೇ ದಿಟ್ಟ ಅಧಿಕಾರಿ ಹಾಗೂ ದಿಟ್ಟ ಪುರಸಭಾ ಸದಸ್ಯರ ಹುಡುಕಾಟದಲ್ಲಿದೆ !!
ಉಮೇಶ ಬೆಳಕೂಡ, ಮೂಡಲಗಿ