ಮಂಡ್ಯ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಶ್ರೀ ರಂಗ ಪಟ್ಟಣದ ಶ್ರೀ ರಂಗನಾಥ ಮಂದಿರ ಪಕ್ಕದ ಕಾವೇರಿ ಸ್ನಾನ ಘಟ್ಟವು ಪವಿತ್ರವಾಗಿರಬೇಕಾದುದು ತೀರಾ ಅಪವಿತ್ರವಾಗಿ ಸನಾತನ ಭಕ್ತಿಗೆ ಅಪಚಾರವಾಗುತ್ತಿದೆ.
ಶ್ರೀ ರಂಗ ದೇವಸ್ಥಾನಕ್ಕೆ ಬರುವವರು ಪವಿತ್ರ ಕಾವೇರಿ ನದಿಯಲ್ಲಿ ಸ್ನಾನ ಮಾಡಬೇಕೆಂಬುದು ಪ್ರತೀತಿ. ಆದರೆ ನದಿಯ ತೀರವನ್ನು ನೋಡಿದರೆ ವಾಕರಿಕೆ ಬರುವಂತಾಗುತ್ತದೆ. ನದಿ ತೀರದಲ್ಲಿ ಶ್ರೀ ಗಣಪತಿ ನವಗ್ರಹ ಮೃತ್ಯುಂಜಯ ದೇವಾಲಯವಿದೆ, ಮಂಜುನಾಥ ದೇವಾಲಯವಿದೆ, ಕಾವೇರಿ ಶ್ರೀ ನಿವಾಸ ಸನ್ನಿಧಿ, ನಾಗ ದೇವತೆಗಳ ಸಮೂಹ ಸನ್ನಿಧಿ, ಗೌತಮ ಮಂಟಪ, ಶ್ರೀ ಮಹಾಗಣಪತಿ ಸನ್ನಿಧಿ, ಶ್ರೀ ಶಿವಲಿಂಗ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿವೆ. ದೇವಸ್ಥಾನಗಳ ಸುತ್ತಲೂ ಮರದ ಎಲೆಗಳು ಬಿದ್ದಿವೆ ಅದು ನೈಸರ್ಗಿಕ ಎನಿಸುತ್ತದೆ ಆದರೆ ಮಾನವರು ಮಾಡುವ ಹೊಲಸಿಗೆ ಏನು ಹೇಳುವುದು ?
ಇದು ದೇವರುಗಳ ಆವಾಸ ಸ್ಥಾನ ಎಂಬುದನ್ನೂ ಪರಿಗಣಿಸದೆ ಭಕ್ತರು (?) ತಾವು ಸ್ನಾನ ಮಾಡಿದ ನಂತರ ಒಳ ಉಡುಪುಗಳು, ಡ್ರೆಸ್ ಗಳು, ಸೀರೆಗಳನ್ನು ಸಿಕ್ಕಸಿಕ್ಕಲ್ಲಿ ಎಸೆದು ಹೋಗಿದ್ದು ಕಾವೇರಿ ತೀರವೆಂಬುದು ಹೊಲಬುಗೆದ್ದು ಹೋಗಿದೆ. ಇದರಿಂದ ದೂರದೂರುಗಳಿಂದ ಬಂದ ಆರಾಧಕರಿಗೆ ಮುಜುಗರವಾಗುವುದು ಖಂಡಿತ.
ದೇವರೆಂದರೆ ಎಷ್ಟು ಸದರವಾಗಿದೆಯೆಂದರೆ, ನದಿಯ ಕಟ್ಟೆಯ ಮೇಲೆ ಅಲ್ಲಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ ! ಅವುಗಳ ಸುತ್ತಲೇ ಎಲ್ಲಿ ನೋಡಿದರಲ್ಲಿ ಕಸ, ಪ್ಲಾಸ್ಟಿಕ್, ಚಪ್ಪಲಿಗಳು, ಕಸ ಕಡ್ಡಿ ಬಿದ್ದಿರುತ್ತದೆ. ಇದು ಸನಾತನಕ್ಕೆ ನಾವೇ ಮಾಡುವ ಘೋರ ಅಪಚಾರ. ಹೀಗೆ ಹೊಲಸು ಮಾಡುವುದರಿಂದ ದೇವರು ಖಂಡಿತವಾಗಿಯೂ ಒಲಿಯುವುದಿಲ್ಲವೆಂಬುದನ್ನು ಭಕ್ತರು ಅರಿತಿರಬೇಕು ಹಾಗಾದರೆ ನಮ್ಮ ನದಿಸ್ನಾನ, ದೇವರ ದರ್ಶನ ಎಲ್ಲವೂ ಪಾಖಂಡಿತನ ಎನಿಸಿಕೊಳ್ಳುವುದಿಲ್ಲವೆ ? ವಿಚಾರ ಮಾಡಬೇಕು.
ಇಂಥ ಪರಿಸ್ಥಿತಿ ಎಲ್ಲಾ ದೊಡ್ಡ ದೇವಸ್ಥಾನಗಳಲ್ಲಿಯೂ ಇದೆ. ದೇವಸ್ಥಾನಗಳಿಗೆ ಭಕ್ತರಿಂದ, ಇಲಾಖೆಯಿಂದ ಸಾಕಷ್ಟು ಹಣ ಬರುತ್ತದೆ ಅದನ್ನು ದೇವಸ್ಥಾನ ಆಡಳಿತ ಮಂಡಳಿಯು ದೇವಸ್ಥಾನದ ಸುತ್ತಮುತ್ತಲೂ ಸ್ವಚ್ಛತೆಗೆ ಬಳಸಬೇಕು. ಕೆಲವು ದೇವಸ್ಥಾನಗಳಲ್ಲಿ ಒಳಗಿನ ಗೋಡೆಗಳಿಗೆ, ಮೇಲ್ಛಾವಣಿಗಳಿಗೆ ಜೇಡರ ಬಲೆ ಹೆಣೆದುಕೊಂಡಿದ್ದು ಅಲ್ಲಿಯೇ ಅಡ್ಡಾಡುತ್ತ ಭಕ್ತರನ್ನು ನಿಯಂತ್ರಿಸುವ ಸಿಬ್ಬಂದಿಗೆ ಅದು ಕಾಣುವುದೇ ಇಲ್ಲ !
ಪ್ರಸಕ್ತ ಕಾವೇರಿ ನದಿ ದಂಡೆಗೆ ಸಿಬ್ಬಂದಿಯನ್ನು ಕಾವಲಿಗಿಟ್ಟು ಜನರಿಗೆ ಸತತ ಎಚ್ಚರಿಕೆ ನೀಡುತ್ತ ಇರುವಂತೆ ಮಾಡಬಹುದು. ಅಲ್ಲಲ್ಲಿ ಫಲಕಗಳನ್ನು ಹಚ್ಚಿ ಜಾಗೃತಿ ಮೂಡಿಸಬೇಕು. ಹೊಲಸು ಮಾಡುವವರಿಗೆ, ಕಸ ಎಸೆಯುವವರಿಗೆ ದಂಡ ಹಾಕಬೇಕು. ಮುಖ್ಯವಾಗಿ ಉಚಿತ ಶೌಚಾಲಯಗಳನ್ನಿಟ್ಟು ಅವುಗಳನ್ನು ಬಳಸಲು ಪ್ರೇರೇಪಿಸಬೇಕು. ಶೌಚಾಲಯಗಳು ಸ್ವಚ್ಛವಾಗಿರಬೇಕು. ಸದ್ಯ ನಾನು ಕಂಡಂತೆ ಈ ರೀತಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಾತ್ರ ಇದೆ. ಸ್ವಚ್ಛತೆ ಇರುವುದರಿಂದ ದೇವರ ದರ್ಶನ ಮಾಡಿ ಪ್ರಸನ್ನತೆ ಮೂಡುತ್ತದೆ.
ಇನ್ನು ಸಾರ್ವಜನಿಕರು ಕೂಡ ಸ್ವಚ್ಛತೆಯ ಬಗ್ಗೆ ಗಮನ ನೀಡಬೇಕು. ನದಿಯಲ್ಲಿ ಸ್ನಾನ ಮಾಡಿ ಹಳೆಯ ಬಟ್ಟೆಗಳನ್ನು ನದಿಯಲ್ಲಿಯೇ ಎಸೆದು ಬರುವುದು ಬುದ್ಧಿಗೇಡಿತನವಲ್ಲದೆ ಮತ್ತೇನೂ ಅಲ್ಲ. ಇದು ಶುದ್ಧ ಭಕ್ತಿಯಲ್ಲ ಎಂಬುದನ್ನು ಅರಿತಿರಬೇಕು.
ಉಮೇಶ ಬೆಳಕೂಡ, ಮೂಡಲಗಿ