ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ

0
312

ಬೆಳಗಾವಿ – ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ೬೭ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕ.ಸಾ.ಪ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡಿಗರಿಗೆ ಉದ್ಯೋಗ ದೊರೆಯಲು ಪ್ರಾಂತೀಯವಾಗಿ ಕೈಗಾರಿಕೆಗಳು ಸ್ಥಾಪನೆ ಆಗಲಿ, ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ದೊರೆಯಬೇಕು. ಉತ್ತರ ಕರ್ನಾಟಕ ಅಭಿವೃದ್ಧಿ ದೃಷ್ಟಿಯಲ್ಲಿ ಹಿಂದುಳಿಯುತ್ತಿದೆ, ಕಾರಣ ರಾಜಕೀಯ ಇಚ್ಛಾಶಕ್ತಿಯ ಕೊರತೆಗಳು ಕಾಡುತ್ತಿವೆ ಎಂದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಿಜಯಕುಮಾರ ಮುಚಳಂಬಿಯವರು ಕನ್ನಡ ಕಟ್ಟುವ ಕೆಲಸ ಪ್ರತಿಯೊಬ್ಬರಿಂದ ನಡೆಯಲಿ ಎಂದು ಹೇಳಿದರು. ‘ಕರ್ನಾಟಕ ಏಕೀಕರಣ ಅಂದು -ಇಂದು ‘ಕುರಿತು ಮಾತನಾಡಿದ ಕನ್ನಡ ಉಪನ್ಯಾಸಕರಾದ ಬಿ.ಬಿ. ಮಠಪತಿಯವರು ಸವಿಸ್ತಾರವಾಗಿ ಕನ್ನಡ ಹೋರಾಟಗಾರರನ್ನು ಪರಿಚಯಿಸುತ್ತ ಏಕೀಕರಣದ ಗತವೈಭವವನ್ನು ಮತ್ತು ಏಕೀಕರಣ ಕ್ಕಾಗಿ ಆದ ತ್ಯಾಗ,ಹೋರಾಟ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ, ಜಯಶ್ರೀ ನಿರಾಕಾರಿ, ಸುಜಾತಾ ವಸ್ತ್ರದ, ಜಲತ್ ಕುಮಾರ ಪುನಜಗೌಡ, ಅಶೋಕ ಉಳ್ಳಾಗಡ್ಡಿ, ತವನಪ್ಪ ದೇಸಾಯಿ, ಡಾ.ಸಿ. ಎಸ್. ಕಟಾಪೂರಿ ಮಠ, ಡಾ. ಅಡಿವೆಪ್ಪ ಇಟಗಿ, ವೀರಭದ್ರ ಅಂಗಡಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸರಸ್ವತಿ ಕೋಡಿ , ಪ್ರತಿಭಾ ಕಳ್ಳಿಮಠ ನಾಡಗೀತೆ ಹಾಡಿದರು. ಶ್ರೀರಂಗ ಜೋಶಿ ನಾಡ ಕುರಿತಾದ ವಿವಿಧ ಜನಪ್ರಿಯ ಗೀತೆಗಳನ್ನು ಹಾಡಿದರು. ಪರಿಷತ್ತಿನ ಕಾರ್ಯದರ್ಶಿಗಳಾದ ಎಂ. ವೈ. ಮೆಣಸಿನಕಾಯಿ ನಿರೂಪಿಸಿದರು. ತಾಲೂಕ ಅಧ್ಯಕ್ಷರಾದ ಸುರೇಶ ಹಂಜಿ ವಂದಿಸಿದರು.