ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು

Must Read

ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡ ಸಮನ್ವಯ ಕವಿ ನವೋದಯ ನವ್ಯ ಬಂಡಾಯ ಸಾಹಿತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡ ಭಾವ ಗೀತೆಗಳ ಕವಿ ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು.

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ( ಜಿ. ಎಸ್. ಶಿವರುದ್ರಪ್ಪ )ಅಥವಾ ಜಿ.ಎಸ್.ಎಸ್ ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ನಂತರ ‘ರಾಷ್ಟ್ರಕವಿ’ ಗೌರವಕ್ಕೆ ಪಾತ್ರರಾದವರು. 1ನವೆಂಬರ್ , 2006 ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಅವರನ್ನು ಸಮನ್ವಯ ಕವಿ ಎಂದೇ ಗುರುತಿಸಲಾಗುತ್ತದೆ.

ಜಿ.ಎಸ್.ಶಿವರುದ್ರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತಾಲೂಕಿನ ಈಸೂರುಗ್ರಾಮದಲ್ಲಿ ಫೆಬ್ರವರಿ 7, 1926 ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ.

ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (1949) ಪದವಿ ಪಡೆದರು.
ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (1953) ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು.

1955 ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದುಕೊಂಡ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ.

ವೃತ್ತಿ ಜೀವನ/ನಿರ್ವಹಿಸಿರುವ ಜವಾಬ್ದಾರಿಗಳು

ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
1963 ರ ನವೆಂಬರ್‌ನಿಂದ 2 ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 1971 ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು “ಕನ್ನಡ ಅಧ್ಯಯನ ಕೇಂದ್ರ” ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು.
ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು 1971 ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ ವನ್ನು ಪ್ರಾರಂಭಿಸಿದರು. ಕೇವಲ 4 ವರ್ಷಗಳಲ್ಲಿ 3000 ಕ್ಕೂ ಹೆಚ್ಚು ಓಲೆಗರಿಯ ಹಾಗೂ 1000 ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ 1949 ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.

1963 ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ 1966 ರ ವರೆಗೂ ಅಲ್ಲಿ ಸೇವೆ ಸಲ್ಲಿಸಿದರು. 1966 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ 1987 ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.
ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನ ದ ಅಧ್ಯಕ್ಷರಾಗಿ, 1992 ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ.

*ಕೃತಿಗಳು*
*ಕವನ ಸಂಕಲನಗಳು*
ಸಾಮಗಾನ (1947)
ಚೆಲುವು-ಒಲವು (1951)
ದೇವಶಿಲ್ಪ (1953)
ದೀಪದ ಹೆಜ್ಜೆ (1956)
ಕಾರ್ತಿಕ (1959)
ಅನಾವರಣ (1961)
ತೆರೆದ ದಾರಿ (1963)
ಗೋಡೆ (1966)
ಕಾಡಿನ ಕತ್ತಲಲ್ಲಿ (1972)
ಪ್ರೀತಿ ಇಲ್ಲದ ಮೇಲೆ (1982)
ಚಕ್ರಗತಿ (1987)
ವ್ಯಕ್ತಮಧ್ಯ (1993)
ಅಗ್ನಿಪರ್ವ (2000)
ತೀರ್ಥವಾಣಿ (1953)
ಜಾರಿದ ಹೂವು
ಸಮಗ್ರ ಕಾವ್ಯ
ಎದೆತುಂಬಿ ಹಾಡಿದೆನು
ಮೇರಾ ದಿಯಾ ಮತ್ತು ಇತರ ಕವನಗಳು (ರಾಜಮಂಗಲ ಪಬ್ಲಿಕೇಷನ್ಸ್ 2022)

*ವಿಮರ್ಶೆ/ಗದ್ಯ*
ಪರಿಶೀಲನ
ವಿಮರ್ಶೆಯ ಪೂರ್ವ ಪಶ್ಚಿಮ
ಸೌಂದರ್ಯ ಸಮೀಕ್ಷೆ. (ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ)
ಕಾವ್ಯಾರ್ಥ ಚಿಂತನ
ಗತಿಬಿಂಬ
ಅನುರಣನ
ಪ್ರತಿಕ್ರಿಯೆ
ಕನ್ನಡ ಸಾಹಿತ್ಯ ಸಮೀಕ್ಷೆ
ಮಹಾಕಾವ್ಯ ಸ್ವರೂಪ
ಕನ್ನಡ ಕವಿಗಳ ಕಾವ್ಯ ಕಲ್ಪನೆ
ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ
ಕುವೆಂಪು : ಪುನರವಲೋಕನ
ಸಮಗ್ರ ಗದ್ಯ ಭಾಗ 1 2 ಮತ್ತು 3
ಬೆಡಗು
ನವೋದಯ –
ಕುವೆಂಪು-ಒಂದು ಪುನರ್ವಿಮರ್ಶೆ – ಕರ್ನಾಟಕ ಸರ್ಕಾರಕ್ಕೆ ಕುವೆಂಪು ಮೇಲೆ ಜೀವನಚರಿತ್ರೆಯ ಕೆಲಸ

*ಪ್ರವಾಸ ಕಥನ*
ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)
ಇಂಗ್ಲೆಂಡಿನಲ್ಲಿ ಚತುರ್ಮಾಸ
ಅಮೆರಿಕದಲ್ಲಿ ಕನ್ನಡಿಗ
ಗಂಗೆಯ ಶಿಖರಗಳಲ್ಲಿ

*ಜೀವನ ಚರಿತ್ರೆ*
ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ)

*ಪ್ರಮುಖ ಪ್ರಶಸ್ತಿಗಳು*

ಪಂಪ ಪ್ರಶಸ್ತಿ,
ಮಾಸ್ತಿ ಪ್ರಶಸ್ತಿ,
ಅನಕೃ ಪ್ರತಿಷ್ಠಾನ ಪ್ರಶಸ್ತಿ,
ನಾಡೋಜ ಪ್ರಶಸ್ತಿ,
ಸೋವಿಯತ್ ಲ್ಯಾಂಡ್ ಪ್ರಶಸ್ತಿ

ಜಿ.ಎಸ್.ಶಿವರುದ್ರಪ್ಪನವರು 1992 ರಲ್ಲಿ ದಾವಣಗೆರೆಯಲ್ಲಿ ಜರುಗಿದ 61 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಸ್ನೇಹ ಕಾರ್ತೀಕ,ಗೌರವ,ಹಣತೆ, ಇವು ಜಿ.ಎಸ್.ಎಸ್ ಅವರಿಗೆ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥಗಳು.

*ನಿಧನ*
ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ಸ್ವರ್ಗಸ್ಥರಾದರು.
ಜಿ.ಎಸ್. ಶಿವರುದ್ರಪ್ಪನವರ ಆಣತಿಯಂತೆಯೆ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಾದರಗಳೊಂದಿಗೆ 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು.

ಎದೆತುಂಬಿ ಹಾಡಿದ ಕನ್ನಡದ ಶ್ರೇಷ್ಠ ಕವಿ ಡಾ ಜಿ ಎಸ್ ಶಿವರುದ್ರಪ್ಪನವರ ಶತಮಾನೋತ್ಸವದ ಸಂಭ್ರಮದಲ್ಲಿ ನಮ್ಮ ಭಕ್ತಿಪೂರ್ವಕ ಶರಣಾರ್ಥಿಗಳು.
ಕನ್ನಡಕ್ಕೊಬ್ಬರೇ ಜಿ ಎಸ್ ಎಸ್ ಎನ್ನುವಂತೆ ಅವರ ಸಾಹಿತ್ಯ ಕೊಡುಗೆ ನಮ್ಮೆಲ್ಲರ ಆಸ್ತಿ.

ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಕಾಂಗ್ರೆಸ್ ಶಾಸಕರ ಮಾತುಗಳು ಹೇಸಿಗೆ ತರಿಸುತ್ತವೆ – ಭಗವಂತ ಖೂಬಾ

ಬೀದರ - ಪ್ರಸಕ್ತ ಮುಖ್ಯಮಂತ್ರಿ ಗಳು, ಮಂತ್ರಿಗಳು, ಶಾಸಕರು ಸದನದಲ್ಲಿ ಆಡುವ ಭಾಷೆ ಹೇಸಿಗೆ ತರುವಂತಿದೆ. ನನ್ನ ರಾಜಕೀಯ ಜೀವನದಲ್ಲಿ ಇಂಥಾ ಭಾಷೆಯನ್ನು ನೋಡಿಲ್ಲ. ಒಬ್ಬ...

More Articles Like This

error: Content is protected !!
Join WhatsApp Group