ಮೂಡಲಗಿ – ಶತಮಾನ ಕಂಡು ಸಂಭ್ರಮಿಸಲು ಇನ್ನು ಕೆಲವೇ ದಿನಗಳು ಇರಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ವಿಕಾಸ ಯೋಜನೆಯ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಅಡುಗೆ ಕೋಣೆ ಬೀಳುವಂತಾಗಿದ್ದು ಮಕ್ಕಳಿಗಾಗಿ ಬಿಸಿಯೂಟ ಹೊರಗಡೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಶಾಲಾ ಕಟ್ಟಡ ಹಾಗೂ ಅಡುಗೆ ಮಾಡುವ ಕೋಣೆ ಗಳು ಶಿಥಿಲಗೊಂಡು ಯಾವಾಗ ಬೀಳುತ್ತವೆಯೋ ಎನ್ನುವಂತಾಗಿದ್ದು ಇಲ್ಲಿ ಅಡುಗೆ ಮಾಡುವ ಹೆಣ್ಮಕ್ಕಳು ಭಯದಿಂದ ಬಯಲಲ್ಲಿ ಕುಳಿತು ಅಡುಗೆ ಮಾಡುತ್ತಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲಿ ?
ಕಪ್ಪಲಗುದ್ದಿಯ ವಿಕಾಸ ಯೋಜನೆಯ ಕನ್ನಡ ಗಂಡುಮಕ್ಕಳ ಶಾಲೆಯನ್ನು ನೋಡಿದಾಗ ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ, ಡಿಡಿಪಿಐ ಆಗಲಿ ಅಥವಾ ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿಗಳು ಇತ್ತ ತಲೆ ಕೂಡ ಹಾಕಿದಂತಿಲ್ಲ ಅನಿಸುತ್ತದೆ. ಯಾಕೆಂದರೆ, ಶತಮಾನದ ಶಾಲಾ ಕಟ್ಟಡಗಳು ಶಿಥಿಲಗೊಳ್ಳುವುದು ಸಹಜವಾದರೂ ಮೇಲಿಂದ ಮೇಲೆ ನಿರ್ವಹಣೆ ಮಾಡುವುದರಿಂದ ಒಳ್ಳೆಯ ಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದಾಗಿದೆ ಆದರೆ ವಿಕಾಸ ಯೋಜನೆಯ ಈ ಶಾಲೆಯ ನಿರ್ವಹಣೆ ಆಗಿಯೇ ಇಲ್ಲ ಎನಿಸುವಂತಿದೆ. ಶಾಲೆಯ ಫಲಕದ ದಯನೀಯ ಸ್ಥಿತಿಯೇ ಶಾಲೆಯ ದುರವಸ್ಥೆಯನ್ನು ಬಿಂಬಿಸುವಂತಿದೆ 
ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯ ದಿವಾಕರ ಅವರನ್ನು ಪ್ರಶ್ನೆ ಮಾಡಿದಾಗ ಬಿಸಿಯೂಟದ ಕೋಣೆ ಕಟ್ಟಿಕೊಡಲು ಕಪ್ಪಲಗುದ್ದಿ ಗ್ರಾಮ ಪಂಚಾಯಿತಿಯವರಿಗೆ ೨-೩ ಸಲ ಅರ್ಜಿ ಹಾಕಿದ್ದರೂ ಪಂಚಾಯಿತಿಯವರು ಸ್ಪಂದಿಸುತ್ತಿಲ್ಲ. ಅಕ್ಷರ ದಾಸೋಹ ಸಮಿತಿಗೆ ಮನವಿ ಮಾಡಿದ್ದೇವೆ. ಕೋಣೆ ಮಂಜೂರಾಗಿದ್ದರೂ ಯಾರೂ ಕಟ್ಟಿಕೊಡುತ್ತಿಲ್ಲ ಎಂದು ಉತ್ತರಿಸಿದರು.
ಇನ್ನು ಕೆಲವೇ ದಿನಗಳಲ್ಲಿ ಶತಮಾನದ ಸಮಾರಂಭ ಕಾಣಬೇಕಾದ ಸರ್ಕಾರಿ ಶಾಲೆಗೆ ಬಂದ ಈ ದುಸ್ಥಿತಿಯನ್ನು ನೋಡಿದರೆ ಶಿಕ್ಷಣ ಇಲಾಖೆಗೆ ದುಷ್ಟ ಗ್ರಹಣವೇ ಹಿಡಿದಿದೆ ಎಂದು ಅನಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಉಮೇಶ ಬೆಳಕೂಡ
ಮೂಡಲಗಿ
೯೪೪೮೮೬೩೩೦೯



