spot_img
spot_img

ಆಧುನಿಕ ಮೈಸೂರಿನ ಸಂಸ್ಥಾನದ ಶಿಲ್ಪಿ ಚಾಮರಾಜ ಒಡೆಯರ್; ಇಂದು ಒಡೆಯರರ ಜನುಮದಿನ

Must Read

- Advertisement -

ಆಧುನಿಕ ಮೈಸೂರು ಸಂಸ್ಥಾನದ ಏಳ್ಗೆಗೆ ಭಾಷ್ಯ ಬರೆದುದೇ ಅಲ್ಲದೆ ಅದರ ಮುಂದಿನ ಮಹೋನ್ನತ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಿಕೊಟ್ಟವರು ಚಾಮರಾಜೆಂದ್ರ ಒಡೆಯರ್ ಅವರು. ವಿಶ್ವ ಸರ್ವಧರ್ಮ ಸಮಾವೇಶದಲ್ಲಿ ಪಾಲ್ಗೊಳ್ಳಲು ಸ್ವಾಮಿ ವಿವೇಕಾನಂದರಿಗೆ ಎಲ್ಲ ರೀತಿಯ ಬೆಂಬಲ ನೀಡಿದ ಕೀರ್ತಿ ಕೂಡ ಈ ಮಹಾಶಯರಿಗೆ ಸಂದಿದೆ.‍

ಚಾಮರಾಜೇಂದ್ರ ಒಡೆಯರ್ ಅವರು ಮೈಸೂರು ಸಂಸ್ಥಾನದ ಬೆಟ್ಟದ ಕೋಟೆ ಶಾಖೆಯ ಸರ್ದಾರ್ ಚಿಕ್ಕ ಕೃಷ್ಣರಾಜ ಅರಸ್‍ ಅವರ ಮೂರನೇ ಮಗನಾಗಿ 1863 ರ ಫೆಬ್ರವರಿ 22 ರಂದು ಜನಿಸಿದರು. ಮಗು ಜನಿಸಿದ ಒಂದು ವಾರಕ್ಕೆ ಮುಂಚೆಯೇ ತಂದೆ ನಿಧನರಾದರು. ತಾಯಿ ರಾಜಕುಮಾರಿ ಪುಟ್ಟ ಅಮ್ಮಣಿ ಅವರು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಹಿರಿಯ ಮಗಳು. ತಮಗೆ ಗಂಡು ಸಂತಾನವಿಲ್ಲದ ಕಾರಣ ಮುಮ್ಮಡಿ ಅವರು ತಮ್ಮ ಉತ್ತರಾಧಿಕಾರಿ ಪಟ್ಟಕ್ಕಾಗಿ ತಮ್ಮ ಮೊಮ್ಮಗ ಚಾಮರಾಜೇಂದ್ರರನ್ನು  1865 ಜೂನ್ 18 ರಂದು ದತ್ತು ಸ್ವೀಕಾರ ಮಾಡಿದರು. ಬ್ರಿಟಿಷ್ ಸರಕಾರ 1867 ರ ಏಪ್ರಿಲ್ 16 ರಂದು ಈ ದತ್ತು ಸ್ವೀಕಾರಕ್ಕೆ ಅಂಕಿತ ನೀಡಿತು.

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಮಾರ್ಚ್ 27 ರಂದು ನಿಧನರಾದರು. 1831 ರಿಂದ ಮೈಸೂರು ಆಡಳಿತವನ್ನು ತನ್ನ ವಶದಲ್ಲಿ ಇಟ್ಡುಕೊಂಡಿದ್ದ ಬ್ರಿಟಿಷ್ ಸರಕಾರ ಪುನಃ ಅದನ್ನು ಒಡೆಯರ್ ಕುಟುಂಬಕ್ಕೆ ನೀಡಲು ಒಪ್ಪಿಕೊಂಡಿತು. ಚಾಮರಾಜೆಂದ್ರರಿಗೆ ಒಂದು ರೀತಿಯಲ್ಲಿ ತನ್ನ ನಿರ್ದೇಶನದಲ್ಲಿ ತರಬೇತಿ ನೀಡಿದ ಬ್ರಿಟಿಷ್ ಆಡಳಿತ, 1881 ರಲ್ಲಿ ಮೈಸೂರು ಆಳ್ವಿಕೆಯನ್ನು ಅವರ ಕೈಗೊಪ್ಪಿಸಿತು.

- Advertisement -

ಚಾಮರಾಜೇಂದ್ರರು ತಾವು ರಾಜ್ಯಭಾರ ಮಾಡಿದ ಸೀಮಿತ ಅವಧಿಯಲ್ಲೆ ಮನೋಜ್ಞ ಕೆಲಸ ಮಾಡಿದವರು. ಸ್ವತಂತ್ರ ಪೂರ್ವ ಭಾರತದಲ್ಲಿ ಮೊದಲ ಪ್ರಜಾಪ್ರಭುತ್ವದ ಶಾಸನವಾದ, ಮೈಸೂರು ವಿಧಾನಸಭೆ ರಚನೆ ರಾಜ್ಯಭಾರ ಹಿಡಿದ ಅವರ ಮೊದಲ ಕಾರ್ಯವಾಗಿತ್ತು. ಈ ಕೆಲಸದ ಹಿನ್ನೆಲೆಯಲಿನ ಪ್ರಮುಖ ಪಾತ್ರಧಾರಿ ಮತ್ತು ಕಷ್ಟ ಕಾಲಗಳಲ್ಲಿ ಅಮೋಘ ಸೇವೆಗೆ ಹೆಸರಾದವರು ದಿವಾನ್ ರಂಗಾಚಾರ್ಲು ಅವರು.  

ರಂಗಾಚಾರ್ಲು ಅವರ ನಂತರದಲ್ಲಿ,  ಅವರಿಂದ ತರಬೇತಿಗೊಂಡ ಸರ್. ಕೆ ಶೇಷಾದ್ರಿ ಅಯ್ಯರ್ ಅವರನ್ನು 1883 ರಲ್ಲಿ ಮೈಸೂರಿನ ದಿವಾನರನ್ನಾಗಿ ನೇಮಿಸಲಾಯಿತು. ಶೇಷಾದ್ರಿ ಅಯ್ಯರ್ ಮತ್ತು ಚಾಮರಾಜೇಂದ್ರ ಒಡೆಯರ್ ಜೋಡಿ ಮೈಸೂರು ಸಂಸ್ಥಾನದ ಪುನರುತ್ಥಾನದ ಮಹತ್ವದ ಕೆಲಸಗಳಿಗೆ ಮೊದಲು ಮಾಡಿತು. ಅರ್ಥಿಕ ಸಂಕಷ್ಟದಲ್ಲಿದ್ದ ಮೈಸೂರು ಸಂಸ್ಥಾನವನ್ನು ಅನೇಕ ತೆರನಾದ ಅಭಿವೃದ್ಧಿಗಳತ್ತ ಬೆಳೆಯುವಂತೆ ಮಾಡಿದ ಕೀರ್ತಿ ಈ ಜೋಡಿಯದ್ದು.

ಆ ಕಾಲದಲ್ಲಿ ಮೈಸೂರು ಸಂಸ್ಥಾನದ ವಾರ್ಷಿಕ ಖರ್ಚು ವಾರ್ಷಿಕ ಆದಾಯಕ್ಕಿಂತ  8 – 9 ಲಕ್ಷ ರೂಪಾಯಿ ಹೆಚ್ಚಾಗಿತ್ತು. ಸಂಸ್ಥಾನಕ್ಕೆ ಬರದೆ ತಪ್ಪಿಹೋಗಿದ್ದ ಆದಾಯವನ್ನು ಹಿಂದಕ್ಕೆ ಪಡೆಯಲು ಮತ್ತು ಸಂಸ್ಥಾನ ಬ್ರಿಟಿಷ್ ಸರ್ಕಾರಕ್ಕೆ ಕೊಡಬೇಕಾಗಿದ್ದ ಪೊಗದಿಯ ಹೊರೆ ಏರದಂತೆ ನೋಡಿಕೊಳ್ಳಲು ಈ ಜೋಡಿ ಪ್ರಯತ್ನಿಸಿತು. ಬ್ರಿಟಿಷ್ ಸರ್ಕಾರ ಬೆಂಗಳೂರಿನ ದಂಡಿನ ಪ್ರದೇಶದ ಆಡಳಿತವನ್ನು ತಾನೇ ವಹಿಸಿಕೊಂಡಾಗ ಆ ಪ್ರದೇಶದಿಂದ ಸಂಸ್ಥಾನಕ್ಕೆ ಲಭ್ಯವಾಗುತ್ತಿದ್ದ ಉಳಿತಾಯವನ್ನು ಸರ್ಕಾರ ತುಂಬಿಕೊಡಬೇಕೆಂದು ಬ್ರಿಟಿಷ್ ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾಯಿತು. 

- Advertisement -

1875 – 77 ರ ಮಹಾಕ್ಷಾಮದ ಕಾಲದಲ್ಲಿ ಸಂಸ್ಥಾನದ ಹೊರಗಿನಿಂದ ಆಹಾರ ಪದಾರ್ಥಗಳನ್ನು ತರಿಸಿಕೊಂಡರೂ ಅವನ್ನು ಶೀಘ್ರವಾಗಿ ಒಳನಾಡಿಗೆ ಸಾಗಿಸುವ ಸೌಕರ್ಯವಿರಲಿಲ್ಲ. ಇದರಿಂದಾಗಿ ಅನೇಕರು ಅಹಾರವಿಲ್ಲದೆ ಸತ್ತರು. ಇಂತಹ ದುರಂತವನ್ನು ತಪ್ಪಿಸಲು, ಸಂಸ್ಥಾನದ ವಿವಿಧ ಭಾಗಗಳಲ್ಲಿ ರೈಲು ಮಾರ್ಗ ನಿರ್ಮಿಸುವುದು ಅವಶ್ಯವಾಗಿತ್ತು. ಹೀಗಾಗಿ  ಅಂದು  ಬೆಂಗಳೂರು ಮಾರ್ಗವಾಗಿ ಮೈಸೂರಿನಿಂದ ತಿಪಟೂರಿನವರೆಗೆ ಇದ್ದ ರೈಲುಮಾರ್ಗವನ್ನು ಹರಿಹರದವರೆಗೆ ಮುಂದುವರಿಸುವುದು ಅವಶ್ಯಕವಾಗಿದ್ದನ್ನು ಮನಗಂಡ ಶೇಷಾದ್ರಿ ಅಯ್ಯರ್  – ಚಾಮರಾಜೇಂದ್ರ ಜೋಡಿ ಆ ಕೆಲಸವನ್ನು ಯಶಸ್ವಿಯಾಗಿ ರೂಪುಗೊಳಿಸಿದರು. ಇದು ಹಾಸನ, ಚಿತ್ರದುರ್ಗ ಜಿಲ್ಲೆಗಳ ಅಭಿವೃದ್ಧಿಗೆ ಮಾರ್ಗ ತೆರೆಯಿತು. ಭೂಕಂದಾಯ ಗಳಿಕೆ ಉತ್ತಮಗೊಂಡಿತು. ಮಾದಕ ವಸ್ತುಗಳ ತಯಾರಿಕೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ಬದಲಾವಣೆಗಳನ್ನು ಮಾಡಿ, ಅವುಗಳ ಮೇಲೆ ಸರ್ಕಾರದ ಹಿಡಿತವನ್ನು ಬಲಪಡಿಸಲಾಯಿತು. ಇದರಿಂದಾಗಿ ಈ  ನಿಟ್ಟಿನಲ್ಲಿ  ಮಧ್ಯವರ್ತಿಗಳು ಹಾಗೂ ತೆರಿಗೆಗಳ್ಳರ ಮೂಲಕ  ಸೋರಿಹೊಗುತ್ತಿದ್ದ ವರಮಾನ ಸಂಸ್ಥಾನಕ್ಕೆ ಲಭ್ಯವಾದಂತಾಯಿತು.  

ಕಾಡುಗಳಲ್ಲಿ ಮರಗಳನ್ನು ಮನಸೋ ಇಚ್ಛೆ ಕಡಿಯುತ್ತಿದ್ದುದನ್ನು ತಪ್ಪಿಸಲು ಅರಣ್ಯ ರಕ್ಷಣೆ ಮಾಡಿ, ಹೊಸ ಮರಗಳನ್ನು ಬೆಳೆಸಲು ತಕ್ಕ ವ್ಯವಸ್ಥೆ ಮಾಡಿದ್ದರಿಂದ ಅರಣ್ಯಗಳಿಂದ ಸರ್ಕಾರಕ್ಕೆ ಬರುತ್ತಿದ್ದ ಆದಾಯವೂ ಹೆಚ್ಚಿತು. ಬರಗಾಲದ ಹಾವಳಿಯಿಂದ ರಕ್ಷಿಸುವುದಕ್ಕಾಗಿ, ರೈತರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಕ್ಕಾಗಿ ನೀರಾವರಿ ಅಭಿವೃದ್ಧಿಗೆ ತುಂಬಾ ಗಮನಕೊಟ್ಟರು. ಕೆರೆಗಳನ್ನು ಕಟ್ಟಿಸಿದರು. ಏತದ ಬಾವಿಯಿಂದ ನೀರಾವರಿ  ಒದಗಿಸಿಕೊಳ್ಳುವವರಿಗೆ  ಉತ್ತೇಜನಕೊಟ್ಟರು. ರೈತರ ನೆರವಿಗಾಗಿ ವ್ಯವಸಾಯ ಬ್ಯಾಂಕುಗಳನ್ನು ಸ್ಥಾಪಿಸಿದರು.

ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕನ್ನಡ ಭಾಷೋಜ್ಜೀವಿನಿ ಶಾಲೆ ಆರಂಭಗೊಂಡಿತು. ಪ್ರಸಿದ್ಧ ಮಹಾರಾಜ ಕಾಲೇಜು 1889 ರಲ್ಲಿ ಆರಂಭಗೊಂಡಿತು. ಮೈಸೂರು ಸಂಸ್ಕೃತ ಪಾಠಶಾಲೆ ಜನ್ಮತಾಳಿತು. ಪೂರ್ವಕಾಲದ ದೇವಾಲಯಗಳು, ಇತರ ಕಟ್ಟಡಗಳ ರಕ್ಷಣೆ, ಶಾಸನಗಳ ಸಂಗ್ರಹಣೆ ಮತ್ತು ಪ್ರಕಟಣೆ, ಇತಿಹಾಸ ಸಂಶೋಧನೆ ಮುಂತಾದ ಕಾರ್ಯಗಳನ್ನು ನಡೆಸಲು ಪುರಾತತ್ವ ಶೋಧನೆ ಇಲಾಖೆ ಸ್ಥಾಪಿತಗೊಂಡಿತು. ಸಂಸ್ಕೃತ ಮತ್ತು ಕನ್ನಡ ಭಾಷೆಯ ಪ್ರಾಚೀನ ಗ್ರಂಥಗಳ ಹಸ್ತ ಪ್ರತಿಗಳನ್ನು ಸಂಗ್ರಹಿಸಿಡುವ ಪ್ರಕಟಿಸುವ ಉದ್ದೇಶದಿಂದ ಮೈಸೂರಿನಲ್ಲಿ ಓರಿಯಂಟಲ್ ಲೈಬ್ರರಿ ( ಈಗ ಇದರ ಹೆಸರು ಓರಿಯೆಂಟಲ್ ರಿಸರ್ಚ್ ಇನ್ ಸ್ಟಿಟ್ಯೂಟ್ ) 1891 ರಲ್ಲಿ ಸ್ಥಾಪಿತಗೊಂಡಿತು.

ಕೈಗಾರಿಕಾ ಅಭಿವೃದ್ಧಿಗಾಗಿ ಅನೇಕ ತಾಂತ್ರಿಕ ತರಬೇತಿ ಸಂಸ್ಥೆಗಳನ್ನು ನಿರ್ಮಿಸಲಾಯಿತು.  ಮೈಸೂರು ದಸರಾ ವಸ್ತುಪ್ರದರ್ಶನ ವ್ಯವಸ್ಥೆ ಜನ್ಮತಾಳಿತು.   ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸ್ಥಾಪಿತಗೊಂಡಿತು. ಮೈಸೂರು, ಬೆಂಗಳೂರು ನಗರಗಳಿಗೆ ಶುದ್ಧವಾದ ನೀರಿನ ಸರಬರಾಜು ಮತ್ತು ಚರಂಡಿ ವ್ಯವಸ್ಥೆಗಳನ್ನು ಮಾಡಿಸಲಾಯಿತು. ಬೆಂಗಳೂರಿನ ಚಾಮರಾಜಪೇಟೆ, ಬಸವನಗುಡಿ ಮತ್ತು ಮಲ್ಲೇಶ್ವರ ವಿಸ್ತರಣಗಳು ರೂಪುಗೊಂಡಿದ್ದು  ಈ ಕಾಲದಲ್ಲಿ. 

      ಮೈಸೂರು ಸರ್ಕಾರಿ ಕಚೇರಿ, ಲ್ಯಾನ್ಸ್ ಡೌನ್ ಮಾರಾಟ ಮಳಿಗೆ ರೂಪುಗೊಂಡಿತು. ಇದಲ್ಲದೆ ಮೈಸೂರಿನ ಡಫರಿನ್ ಟವರ್ ಮತ್ತು ಉದಕಮಂಡಲದ ಫರ್ನ್ ಹಿಲ್ ಪ್ಯಾಲೇಸ್ ಕೂಡಾ ನಿರ್ಮಾಣಗೊಂಡವು.  ಬೆಂಗಳೂರು ಅರಮನೆ ತಲೆ ಎತ್ತಿತು.  ಪ್ರಸಿದ್ಧ ‘ಮೈಸೂರು ಝೂ’ ಎಂದೇ ಪ್ರಖ್ಯಾತವಾದ ಮೃಗಾಲಯ ಜನ್ಮತಾಳಿತು. ಪ್ರಖ್ಯಾತ ಲಾಲ್‍ಬಾಗಿನ ಗಾಜಿನಮನೆ  1889 ರಲ್ಲಿ ನಿರ್ಮಾಣಗೊಂಡಿತು.

      ಚಾಮರಾಜೇಂದ್ರ ಒಡೆಯರ್ ಅವರು ಸಂಗೀತದ ಮಹಾನ್ ಪೋಷಕರಾಗಿದ್ದರು. ಇವರ ಅಸ್ಥಾನವು ವೀಣಾ ಸುಬ್ಬಣ್ಣ, ವೀಣಾ ಶೇಷಣ್ಣ, ಕೆ. ವಾಸುದೇವಾಚಾರ್ಯ, ವೀಣಾ ಪದ್ಮನಾಭಯ್ಯ, ಮೈಸೂರು ಕರಿಗಿರಿರಾವ್, ಬಿಡಾರಂ ಕೃಷ್ಣಪ್ಪ ಮುಂತಾದ ಶ್ರೇಷ್ಠ ಸಂಗೀತ ವಿದ್ವಾಂಸರಿಂದ ಕಂಗೊಳಿಸಿತ್ತು. ಸ್ವಯಂ ಪಿಟೀಲು ವಾದಕರಾಗಿದ್ದ ಒಡೆಯರ್ ಪ್ರತಿದಿನ ವೀಣಾ ಸುಬ್ಬಣ್ಣನವರ ಗಾಯನ ಮತ್ತು ವೀಣಾ ಶೇಷಣ್ಣನವರ ಗಾಯನಕ್ಕೆ ಪಿಟೀಲು ನುಡಿಸಿ ಸಂಭ್ರಮಿಸುತ್ತಿದ್ದರಂತೆ. ಮಹಾನ್ ಕಲಾವಿದ ರವಿವರ್ಮ ಅವರನ್ನು ಮೈಸೂರಿಗೆ ಆಹ್ವಾನಿಸಿ ಅನೇಕ ಕಲಾತ್ಮಕ  ಚಿತ್ರಗಳ ರಚನೆಗೆ ಅನುವು ಮಾಡಿಕೊಟ್ಟು ಗೌರವಿಸಿದರು. ಸ್ವಾಮಿ ವಿವೇಕಾನಂದರಿಗೆ ಆತಿಥ್ಯ ನೀಡಿ ಅವರ ಮಹದೋದ್ದೇಶಗಳಿಗೆ ಬೆಂಬಲ ನೀಡಿದರು.

     ಇನ್ನೂ 31 ರ ಹರೆಯದ ಚಾಮರಾಜೇಂದ್ರ ಒಡೆಯರ್ 1894 ರ ಡಿಸೆಂಬರ್ 28 ರಂದು, ಡಿಪ್ತೀರಿಯಾ ಕಾಯಿಲೆಗೊಳಗಾಗಿ ಕೋಲ್ಕತ್ತದಲ್ಲಿರುವಾಗ ಅಕಾಲಿಕ ಮರಣಕ್ಕೆ ಈಡಾದರು. ಆಗ ಅವರ ಹತ್ತು ವರ್ಷದ ಮಗ ಮುಂದೆ ಪ್ರಖ್ಯಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು  ಪಟ್ಟದಲ್ಲಿ ಕೂರಿಸಿದ ಚಾಮರಾಜೇಂದ್ರ ಒಡೆಯರ್ ಅವರ ಪತ್ನಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಅವರು ರೀಜೆಂಟರಾಗಿ ಕಾರ್ಯನಿರ್ವಹಿಸಲಾರಂಭಿಸಿದರು.


ಹೇಮಂತ ಚಿನ್ನು

ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group