ಹುನಗುಂದ : ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಎಸ್ ಎಸ್ ಲಾಯದಗುಂದಿ ಮಾತನಾಡುತ್ತಾ, ನಮ್ಮೊಳಗಿನ ಒಗ್ಗಟ್ಟಿನ ಕೊರತೆಯಿಂದ ಬ್ರಿಟೀಷರು ಎರಡು ಶತಮಾನಗಳ ಕಾಲ ನಮ್ಮನ್ನಾಳಿದರು. ಆದ್ದರಿಂದ ನಾವೆಲ್ಲರೂ ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಯ ಮೇಲೆ ಅಭಿಮಾನ ತಾಳಬೇಕು. ಭಾಷಾಭಿಮಾನ, ದೇಶಾಭಿಮಾನದಿಂದ ಏಕತೆ ಸಾಧಿಸಲು ಸಾಧ್ಯ. ಏಕತೆಯು ಹೋರಾಟಕ್ಕೆ ಮುನ್ನುಡಿಯಾಗುತ್ತದೆ ಎಂದರು.
ಮಕ್ಕಳ ಸಾಹಿತಿ ಅಶೋಕ ಬಳ್ಳಾ ಮಾತನಾಡಿ, ಸಾಧಕರ, ಹೋರಾಟಗಾರರ ದಿನಾಚರಣೆಗಳು ಇತಿಹಾಸದ ಅರಿವು ಮೂಡಿಸುವುದರ ಜೊತೆಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಗಲು ಪ್ರೇರಣೆ ನೀಡುತ್ತವೆ. ಕಿತ್ತೂರು ಚೆನ್ನಮ್ಮಳ ಜೀವನಾದರ್ಶಗಳು ಮಕ್ಕಳಲ್ಲಿ ಧೈರ್ಯ, ಸ್ಥೈರ್ಯ, ವೀರಾವೇಶ, ಸ್ವಾಭಿಮಾನ ಪ್ರದರ್ಶನಕ್ಕೆ ಮುನ್ನುಡಿಯಾಗುತ್ತವೆ ಎಂದರು.
ಮುಖ್ಯಗುರು ಪ್ರಭು ಮಾಲಗಿತ್ತಿ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಬ್ರಿಟೀಷರ ಕುಟಿಲ ನೀತಿಗಳ ವಿರುದ್ಧ ಸಿಡಿದೆದ್ದ ಕರ್ನಾಟಕದ ಮೊದಲ ಮಹಿಳೆ ಕಿತ್ತೂರು ಚೆನ್ನಮ್ಮಳಾಗಿದ್ದು, ಬಳೆ ಧರಿಸಿದ ಕೈಯಲ್ಲಿ ಖಡ್ಗ ಹಿಡಿದು ಆಂಗ್ಲರ ವಿರುದ್ಧ ವೀರಾವೇಶ ತೋರಿ ದೇಶದಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದ ಕೀರ್ತಿ ಚೆನ್ನಮ್ಮಳಿಗೆ ಸಲ್ಲುತ್ತದೆ ಎಂದರು.
ಶಿಕ್ಷಕರಾದ ಎಂ ಜಿ ಬಡಿಗೇರ, ಮಹಾಂತೇಶ ವಂದಾಲಿ, ಸುಭಾಸ ಕಣಗಿ ಉಪಸ್ಥಿತರಿದ್ದರು.

