ಘಟಪ್ರಭಾ: ನಮ್ಮ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಆಧುನಿಕ ತಂತ್ರಜ್ಞಾನ ಮೂಲಕ ಶಿಕ್ಷಣ ಕಲಿತರೇ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶವಿದ್ದು, ವಿದ್ಯಾರ್ಥಿಗಳು ಇವುಗಳ ಉಪಯೋಗವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಂಗಳವಾರ ಆ 20 ರಂದು ಮಲ್ಲಾಪೂರ ಪಿ.ಜಿ ಪಟ್ಟಣದ ಪಿ.ಎಂ ಶ್ರೀ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಮಕ್ಕಳ ಭವಿಷ್ಯದಲ್ಲಿ ಶಿಕ್ಷಣ ಅನ್ನುವುದು ಮುಂದಿನ ದಿನಗಳಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಮೊದಲಿನ ಶಿಕ್ಷಣ ಪದ್ಧತಿಯಲ್ಲಿ ಹೊಸ ಬದಲಾವಣೆಯನ್ನು ತರಬೇಕು ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಕಲಿಬೇಕು ಎನ್ನುವ ಉದ್ದೇಶದಿಂದ ಸ್ಮಾರ್ಟ್ ಕ್ಲಾಸ್‌ನ್ನು ನೀಡಲಾಗಿದೆ ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧನೆ ಮಾಡಬೇಕಾದ ಅನಿರ್ವಾಯತೆ ಇದೆ. ಶಿಕ್ಷಣದಿಂದ ಮಾತ್ರ ನಮ್ಮ ಮಕ್ಕಳ ಭವಿಷ್ಯದ ಬದುಕು ಭದ್ರಪಡಿಸಲು ಸಾಧ್ಯ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಅಭ್ಯಾಸ ಮಾಡುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆ ಸವಾಲಾಗಿ ಪರಿಣಮಿಸಿದ್ದು, ಇಂತಹ ಸವಾಲನ್ನು ಸುಲಭವಾಗಿ ಎದುರಿಸಲು ಸ್ಮಾರ್ಟ್ ಕ್ಲಾಸ್ ಸಹಕಾರಿಯಾಗುತ್ತದೆ. ಈ ಸೌಲಭ್ಯವನ್ನು ಶಾಲೆಯ ಮಕ್ಕಳು ಸದುಪಯೋಗ ಪಡಿಸಿಕೊಳ್ಳಲು ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ.ಡಿ. ಎಂ. ಸಿ ಕಮೀಟಿ ಸದಸ್ಯರು, ಶಿಕ್ಷಕ ವರ್ಗದವರು ಸಂಸದ ಈರಣ್ಣ ಕಡಾಡಿ ಅವರನ್ನು ಸನ್ಮಾನಿಸಿದರು ಹಾಗೂ 100 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಶಾಲೆಯ ಮೈದಾನಕ್ಕೆ ಪೇವರ ಬ್ಲಾಕ ಹಾಕಿಸಿಕೊಡುವಂತೆ ವಿನಂತಿಸಿದರು. ಶಿಕ್ಷಕಿ ಗೀತಾ ಮಾಯನ್ನವರ ಸ್ವಾಗತಿಸಿದರು. ಶಿಕ್ಷಕಿ ಬಿ.ಬಿ ರುದ್ರಾಪೂರ ನಿರೂಪಿಸಿದರು ಹಾಗೂ ಶಿಕ್ಷಕಿ ಶುಭಾ ಕುಲಕರ್ಣಿ ವಂದಿಸಿದರು.
ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ದುಂಡಪ್ಪ ರಾಜಾಪುರೆ, ಪ್ರಮುಖರಾದ ಬಸವರಾಜ ಕತ್ತಿ, ರಾಮಣ್ಣ ಹುಕ್ಕೇರಿ, ಗಂಗಾಧರ ಬಡಕುಂದ್ರಿ, ಬಸವರಾಜ ಹತ್ತರವಾಟ, ಸುರೇಶ ಪಾಟೀಲ, ಜಿ ಎಸ ರಜಪೂತ, ಆರ್,ಎಸ್. ಗೊಡೇರ, ಹಾಲಪ್ಪ ಕರಿಗಾರ, ಶ್ರೀಶೈಲ ದಂಡಿನ, ಪ್ರಧಾನ ಗುರುಮಾತೆ ಶ್ರೀಮತಿ ಎಂ. ಎಂ. ಕಳಸನ್ನವರ, ಶಿಕ್ಷಕ ಮಹಾಂತೇಶ ಯರಗಟ್ಟಿ, ಸೇರಿದಂತೆ ಅನೇಕ ಎಸಡಿಎಂಸಿ ಸದಸ್ಯರು, ಶಿಕ್ಷಕ ವರ್ಗದವರು, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.