ಉತ್ತರದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ದಕ್ಷಿಣಕ್ಕೆ ತಂದವರು, ಅರಮನೆಯ ಸಂಗೀತಕ್ಕೆ ಗುರು ಮನೆಯ ಗೌರವವನ್ನು ದೊರಕಿಸಿಕೊಟ್ಟವರು, ವಚನ ಸಾಹಿತ್ಯವನ್ನು ಸಂಗೀತಕ್ಕೆ ಅಳವಡಿಸಿ ಹಾಡಿದ ಮೊದಲಿಗರು, ಸಂತ ಶಿಶುನಾಳ ಶರೀಫ ಗೀತೆಗಳು ಗ್ರಾಮ ಫೋನುಗಳಿಗೆ ಧ್ವನಿಮುದ್ರಿಸಿದವರು ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳವರು.
ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಂದ ಗದಗು ಸಂಗೀತದ ಗದ್ದಿಗೆಯಾಗಿದೆ. ಪೂಜ್ಯರ ಅಂಧ-ಅನಾಥರ ಸೇವೆ ಶಬ್ದಕ್ಕೆ ನಿಲುಕದು. ಇಂತಹ ಶತಮಾನದ ಸಂತ ಪಂಡಿತ ಪಂಚಾಕ್ಷರಿ ಗವಾಯಿಗಳವರ ಜಯಂತ್ಯುತ್ಸವವು ಉತ್ತರ ಕರ್ನಾಟಕ ಕಲಾವಿದರ ಹಾಗೂ ಕಲಾಪೋಷಕರ ಸಂಘಟನೆಯಾದ ಕಲಾ ವಿಕಾಸ ಪರಿಷತ್ ಪ್ರತಿ ವರ್ಷ ಫೆಬ್ರವರಿ ೦೨ ರಂದು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ.
ಈ ಜಯಂತ್ಯುತ್ಸವದಲ್ಲಿ ಪಂಚಾಕ್ಷರಿ ಗವಾಯಿಗಳವರಿಗೆ ಮತ್ತು ಆ ಪರಂಪರೆಗೆ ಅನುಪಮ ಸೇವೆ ಸಲ್ಲಿಸುತ್ತಾ ಬಂದಿರುವ ಕಲಾವಿದ ಮತ್ತು ಕಲಾ ಪೋಷಕರನ್ನು ಗಾನಯೋಗಿ ಪಂಚಾಕ್ಷರಿ ಅನುಗ್ರಹ ಪ್ರಶಸ್ತಿ ಅರ್ಪಿಸಿ ಗೌರವಿಸುತ್ತಾ ಬಂದಿದೆ.
ಪ್ರಸ್ತುತ ೨೦೨೨-೨೩ ನೆಯ ಸಾಲಿನ ವಾರ್ಷಿಕ ಪ್ರಶಸ್ತಿಗೆ ಶ್ರೀಮತಿ ವಿದ್ಯಾ ಮಗದುಮ್, ತಾಲೂಕಾ ಅಧ್ಯಕ್ಷರು ಗಾನಯೋಗಿ ಸಂಗೀತ ಪರಿಷತ್ ಗೋಕಾಕ, ರಾಜಲಿಂಗಪ್ಪ ಸಜ್ಜನ ಚಂಡ್ರಕಿ, ತಾಲೂಕಾ ಅಧ್ಯಕ್ಷರು ಗಾನಯೋಗಿ ಸಂಗೀತ ಪರಿಷತ್ ಗುರುಮಠಕಲ್, ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಭಕ್ತರಾದ ಗದಗ-ಬೆಟಗೇರಿ ನಗರ ಸಭಾ ಮಾಜಿ ಅಧ್ಯಕ್ಷರಾದ ಪೀರ್ ಸಾಬ್ ಕೌತಾಳ್ ಇವರುಗಳು ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಕಲಾ ವಿಕಾಸ ಪರಿಷತ್ ಗದಗ ಮತ್ತು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಗದಗ ಸಂಯುಕ್ತ ಆಶ್ರಯದಲ್ಲಿ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸಹಕಾರದೊಂದಿಗೆ, ದಿನಾಂಕ ೨ ಫೆಬ್ರವರಿ ೨೦೨೩ ಬೆಳಿಗ್ಗೆ ೧೦.೩೦ಕ್ಕೆ ಮುಂಡರಗಿ ರಸ್ತೆಯಲ್ಲಿ ಇರುವ ಚಿಕ್ಕಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಹಮ್ಮಿಕೊಂಡಿರುವ ಪಂಚಾಕ್ಷರಿ ಗವಾಯಿಗಳವರ ೧೩೧ ನೆಯ ಜಯಂತ್ಯುತ್ಸವ ಅಮರ ಸ್ವರ ಸಮಾರೋಹ-೨೦೨೩ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಕಲಾ ವಿಕಾಸ ಪರಿಷತ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.