ಬೀದರ: ಬಸವಣ್ಣನವರ ಕರ್ಮಭೂಮಿ ಔರಾದ ಪಟ್ಟಣದಲ್ಲಿ ಗೋ ಮಾತೆಯ ವಿಷಯದಲ್ಲಿ ಎರಡು ಸಮಯದಾಯಗಳಲ್ಲಿ ಮಾರಾಮಾರಿ ನಡೆಸಿದ್ದು ಆರು ಜನರಿಗೆ ಗಾಯವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ವಿಷಯದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಂಧಾನ ನಡೆಸಿ ಎರಡು ಸಮುದಾಯದ ಹೇಳಿಕೆ ಮೇಲೆ ಪ್ರಕರಣ ದಾಖಲೆ ಮಾಡಿಕೊಂಡಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ.
ಔರಾದ ಪಟ್ಟಣದಲ್ಲಿ ಹಸು ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಟೆಂಪೊ ಚಾಲಕ ಸೇರಿದಂತೆ ಆರು ಜನ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಚಾಲಕ ಮುಜೀಬ್, ಖರೀದಿದಾರ ಅಬ್ದುಲ್ ಸಲೀಂ, ಬಸವಕುಮಾರ ಚೌಕನಪಳ್ಳೆ, ವಿಶಾಲ, ಪ್ರೇಮ ರಾಠೋಡ್ ಎಂಬ ಆರು ಜನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯಿಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಪಟ್ಟಣದಲ್ಲಿ ವಾಸ್ತವ್ಯ ಹೂಡಿ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ.
ಘಟನೆ ವಿವರ:
ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ವಾರದಂತೆ ಸೋಮವಾರವೂ ಜಾನುವಾರು ವಹಿವಾಟು ನಡೆಯುತ್ತಿತ್ತು. ಟೆಂಪೊದಲ್ಲಿ ಹತ್ತು ಹಸುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಸ್ಥಳ್ಕಕೆ ಬಂದ ಶ್ರೀರಾಮಸೇನೆಯ ಹತ್ತು ಕಾರ್ಯಕರ್ತರು ಟೆಂಪೊ ತಡೆದು, ‘ಹಸುಗಳನ್ನು ಅನಧಿಕೃತವಾಗಿ ಕಸಾಯಿ ಖಾನೆಗೆ ಕೊಂಡೊಯ್ಯುತ್ತಿದ್ದೀರಿ’ ಎಂದು ತಕರಾರು ತೆಗೆದು ಟೆಂಪೊ ಚಾಲಕ ಮುಜೀಬ್ ಹಾಗೂ ಖರೀದಿದಾರ ಅಬ್ದುಲ್ ಮೇಲೆ ಹಲ್ಲೆ ನಡೆಸಿದರು.
ವಿಷಯ ತಿಳಿದು ಮುಸ್ಲಿಂ ಯುವಕರ ಗುಂಪು ಸ್ಥಳಕ್ಕೆ ಬಂದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಹೊಡೆದಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಘಟನೆ ಸಂಬಂಧ ದೂರು-ಪ್ರತಿ ದೂರು ಬಂದಿದ್ದು, ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ