ಮೂಡಲಗಿ – ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಇದೇ ದಿ. ೨೩ ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹೆಬ್ಬಾಳಕರ, ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ,ಸಚಿವ ಸತೀಶ ಜಾರಕಿಹೊಳಿ ಹಾಗೂ ಅರಭಾವಿ ಕಾಂಗ್ರೆಸ್ ಪದಾಧಿಕಾರಿಗಳೆಲ್ಲ ಅರಭಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಮೇಶ ಉಟಗಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಭಾವಿ ಕ್ಷೇತ್ರದಲ್ಲಿ ಬರುವ ರಾಜಾಪೂರ, ಶಿವಾಪೂರ, ಖಾನಟ್ಟಿ, ಧರ್ಮಟ್ಟಿ, ಪಟಗುಂದಿ, ಹೊನಕುಪ್ಪಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮುಗಿಸಿ ಮೂಡಲಗಿಯಲ್ಲಿ ಸಾಯಂಕಾಲ ರ್ಯಾಲಿ ಇರುತ್ತದೆ. ಆಮೇಲೆ ಪ್ರಚಾರ ಸಭೆ ಬಸವ ಮಂಟಪದಲ್ಲಿ ನಡೆಯಲಿದೆ. ಇದಕ್ಕೆ ಸಹಸ್ರಾರು ಜನ ಆಗಮಿಸಲಿದ್ದಾರೆ ಎಂದರು.
ವಿ ಪಿ ನಾಯಕ ಮಾತನಾಡಿ ಅವರು ಮಾತನಾಡಿ, ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಎಲ್ಲ ಹಳ್ಳಿಗಳಲ್ಲೂ ಒಳ್ಳೆಯ ಸ್ಪಂದನೆ ಸಿಕ್ಕಿದೆ ಗ್ಯಾರಂಟಿಗಳು ಕೆಲಸ ಮಾಡುತ್ತಿವೆ ಎಂದರು.
ಎಸ್ ಆರ್ ಸೋನವಾಲಕರ ಮಾತನಾಡಿ, ಪ್ರಚಾರ ಕಾರ್ಯ ದುರದುಂಡಿಯಿಂದ ಆರಂಭವಾಗುತ್ತದೆ. ನಾವು ನುಡಿದಂತೆ ನಡೆದಿದ್ದೇವೆ ಎಂಬುದನ್ನು ತೋರಿಸಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತೇವೆ. ಕಳೆದ ಸಲ ಸೋತಿದ್ದರೂ ಈ ಸಲ ಕಾಂಗ್ರೆಸ್ ಆಯ್ಕೆಯಾಗುವುದು ಖಂಡಿತ ಎಂದರು.
ಅನಿಲಕುಮಾರ ದಳವಾಯಿ ಮಾತನಾಡಿ, ಈಗಾಗಲೇ ಐದು ಗ್ಯಾರಂಟಿಗಳನ್ನು ಈಡೇರಿಸಿದಂತೆ ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮ ಹೊಸ ಪ್ರಣಾಳಿಕೆಗಳನ್ನು ಈಡೇರಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ ಅರಳಿ, ಮಾಳಪ್ಪ ಶಾಬನ್ನವರ, ಕೆ ಟಿ ಗಾಣಿಗೇರ, ಅರಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಮಗದುಮ್, ಅನಿಲಕುಮಾರ ದಳವಾಯಿ, ಬಿ ಕೆ ಶಿವುಕುಮಾರ, ಸಲೀಮ್ ಇನಾಮದಾರ, ಕೌಜಲಗಿ ಬ್ಲಾಕ್ ಎಸ್ ಸಿ ಘಟಕದ ಅಧ್ಯಕ್ಷ ಮಹಾದೇವ ಸಮಗಾರ, ಸುಭಾಸ ಪೂಜೇರಿ, ಬಿ ಬಿ ಹಂದಿಗುಂದ, ನಿಂಗಪ್ಪ ಫಿರೋಜಿ, ಮಲ್ಲಿಕಾರ್ಜುನ ಅರಭಾವಿ ಇದ್ದರು.