ಬೀದರ– ಬಸವಣ್ಣನವರ ಕರ್ಮ ಭೂಮಿ ಬೀದರ್ ಗೆ ಸಿ ಎಮ್ ಬಸವರಾಜ ಬೊಮ್ಮಾಯಿ ಇಂದು 3:45 ಕ್ಕೆ ಆಗಮನ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ನಾಯಕರಲ್ಲಿ ಹುಮ್ಮಸ್ಸು ತುಂಬಿದೆ.
ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆ ಕಾವು ದಿನೇ ದಿನೇ ಏರುತ್ತಿದೆ. ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪದೇ ಪದೇ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ ಎಂದು ಹೇಳುತ್ತಿದ್ದರೆ ಅತ್ತ ಸಚಿವ ಭಗವಂತ ಖೂಬಾ ಕೂಡ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ವೈಯಕ್ತಿಕ ಟೀಕೆಗೆ ಇಳಿಯುವ ಮಟ್ಟಕ್ಕೆ ಹೋಗಿದೆ.
ಅಭ್ಯರ್ಥಿಯ ಸೋಲಿನ ಭೀತಿಯಿಂದ ಹತಾಶರಾಗಿ ಬಿಜೆಪಿ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಆರೋಪ ಮಾಡಿದ್ದರು.
ಈ ಎಲ್ಲದರ ಹಿನ್ನೆಲೆಯಲ್ಲಿ ಸಿ ಎಮ್ ಬೊಮ್ಮಾಯಿ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯ ಪ್ರಚಾರಕ್ಕಾಗಿ ಇಂದು ಖುದ್ದಾಗಿ ಆಖಾಡಕ್ಕೆ ಇಳಿದಿದ್ದು ಬೀದರ ಜಿಲ್ಲೆಯಲ್ಲಿ ಉತ್ಸಾಹ ಗರಿಗೆದರಿದೆ.
ಈುಖ್ಯಮಂತ್ರಿಯವರು ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:30ಕ್ಕೆ ವಿಶೇಷ ವಿಮಾನದ ಮೂಲಕ 3.45 ಕ್ಕೆ ಬೀದರ ಏರ್ ಬೇಸ್ ಗೆ ಬರಲಿದ್ದಾರೆ. ಬೀದರ ಜಿಲ್ಲಾ ಭಾರತೀಯ ಜನತಾ ಪಾರ್ಟಿಯಿಂದ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇಂದು ಬೀದರ್ ನಲ್ಲಿ ವಾಸ್ತವ್ಯ ಹೂಡಿ ಸ್ಥಳೀಯ ಬಿಜೆಪಿ ನಾಯಕರ ಜೊತೆ ಸಮಾಲೋಚನೆ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಲೆಕ್ಕಚಾರದೊಂದಿಗೆ ತಂತ್ರಗಾರಿಕೆ ಹಾಕಬಹುದು ಎಂದು ಮಾಹಿತಿ ಲಭ್ಯವಾಗಿದೆ.
ಡಿಸೆಂಬರ್ ೬ ರಂದು ಬೆಳಿಗ್ಗೆ ಡಾ.ಸಂವಿಧಾನ ಶಿಲ್ಪಿ ಭಾರತ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೬೫ನೇ ಪುಣ್ಯ ಸ್ಮರಣೆ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡುವರು.
ನಂತರ 9:30 ವಿಶೇಷ ವಿಮಾನ ಮೂಲಕ ಹುಬ್ಬಳ್ಳಿ ಪ್ರಯಾಣ ಮಾಡುವರು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ