ದೇಶಸೇವೆಯೇ ಈಶಸೇವೆ

0
688

ದೇಶಸೇವೆ ಮಾಡಲು ಸರಳವಾಗಿರೋರಿಗೆ ಕಷ್ಟ.ಈಶಸೇವೆ ಮಾಡೋರಿಗೆ ಸರಳತೆ ಅಗತ್ಯ. ಕಲಿಯುಗದಲ್ಲಿ ಶೂದ್ರರಿಗೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ತಿಳಿಸಿದ್ದನಂತೆ. ಹಾಗೆಯೇ ಇಲ್ಲಿ ಸೇವಾ ಗುಣವಿರುವವರಿಂದಲೇ ದೇಶ ನಡೆದಿರೋದು. ಶೂದ್ರ ಎಂದರೆ ವರ್ಣದ ಪ್ರಕಾರ ಸೇವಕರು.

ಭೂಮಿ, ಸೇವೆ, ದೇಶಸೇವೆ, ದೇವರಸೇವೆ, ಗುರು ಸೇವೆ…. ಪ್ರಜಾಪ್ರಭುತ್ವದಲ್ಲಿ ಎಲ್ಲಾ ಸೇವಕರೆ. ಆದರೆ ಸೇವೆ ಯಾವ ಮಾರ್ಗದಲ್ಲಿ, ಯಾರ ಹಣ, ಅಧಿಕಾರ, ಜ್ಞಾನದಲ್ಲಿದೆ ಎಂಬುದು ಅಗತ್ಯ. ಭೂ ಸೇವೆಗೆ ರೈತರ ಹತ್ತಿರ ಭೂಮಿ ಇದೆ. ಆದರೆ, ರೈತ ದೇಶಸೇವೆಗಾಗಿ ಭೂಮಿ ಮಾರಿ ರಾಜಕಾರಣಿ ಆದರೆ ಸೇವೆ ಆಗೋದಿಲ್ಲ.

ಮೂಲ ಜ್ಞಾನ ಬಿಟ್ಟು ವಿಜ್ಞಾನbಹಿಡಿದರೆ ಕಷ್ಟ ನಷ್ಟ. ನಿಜವಾದ ರೈತನೆ ಸೇವಕ. ಹಾಗೆಯೇ ವೈದ್ಯರಿಗೂ ಸೇವಕರೆನ್ನುವರು. ವೈದ್ಯ ಮಾನವನ ಜೀವ ಉಳಿಸೋ ದೇವರು. ಆರೋಗ್ಯಕಾಪಾಡೋ ವೈದ್ಯರ ಕಡೆಗೆ ರೋಗಿಗಳು ಬರುತ್ತಾರೆ.ಅವರ ಸೇವೆ ಮಾಡೋದು ವೈದ್ಯರ ಧರ್ಮ. ರೈತ ಜೀವನ ನಡೆಸಲು ಮಾನವರಿಗೆ ಆಹಾರವನ್ನು ಬೆಳೆದು ಒದಗಿಸಿ ಜೀವಶಕ್ತಿ ಹೆಚ್ಚಿಸಿ ಪುಣ್ಯಪಡೆದರೆ, ಅತಿಯಾಗಿ ತಿಂದ ದೇಹಕ್ಕೆ ರೋಗ ಬಂದಾಗ ಚಿಕಿತ್ಸೆ ನೀಡಿ ಜೀವ ಉಳಿಸುವ ವೈದ್ಯರ ಸೇವೆ ಹೆಚ್ಚು ಸಮಾಜದಲ್ಲಿ ಕಾಣುತ್ತದೆ.

ವೈದ್ಯನಾಗೋದಕ್ಕೆ ಹಣದ ಅಗತ್ಯವಿದೆ.ರೈತನಾಗಲು ಸಾಮಾನ್ಯಜ್ಞಾನ ವಿದ್ದರೆ ಸಾಕು. ಸೇವೆ ಮಾಡುವವರೆಲ್ಲರೂ ಒಂದೇ ಭೂಮಿ, ದೇಶದಲ್ಲಿದ್ದರೂ ಒಂದೆ ಸಮನಾದ ಜೀವನ ನಡೆಸಲಾಗಿಲ್ಲ. ಕಾರಣ ಹೆಚ್ಚು ಹಣವಿರುವವರ ಸೇವೆ ಉತ್ತಮ. ಕಡಿಮೆ ಹಣ ಹೆಚ್ಚು ಜ್ಞಾನವಿದ್ದವರ ಸೇವೆ ಅಧಮವೆ? ಸೇವೆ ತೋರುಗಾಣಿಕೆಗಾದಾಗಲೆ ಋಣ ಕಳೆಯದೆ  ಜೀವನ ಕಷ್ಟವೆನಿಸುವುದು.

ಪರಮಾತ್ಮನ ಸೇವೆ ಮಾಡೋದರಿಂದ ಮುಕ್ತಿ ಸಿಗುತ್ತದೆನ್ನುವುದರ ಜೊತೆಗೆ ನಿಸ್ವಾರ್ಥ, ನಿರಹಂಕಾರ, ಸತ್ಯ ಧರ್ಮದಿಂದ ಪ್ರತಿಫಲಾಪೇಕ್ಷೆಯಿಂದ ಸೇವೆ ಮಾಡುವುದೂ ಅಗತ್ಯ ಎಂದಿದ್ದಾರೆ. ಆದರೆ, ಅಂತಹ ಸೇವಕರನ್ನು ಸಮಾಜ ತಿರಸ್ಕಾರದಿಂದ ನೋಡಿ ಜೀವನ ನರಕವಾಗಿಸಿರೋದನ್ನು ಹಿಂದಿನ ಕಥೆ,ಪುರಾಣವೇ ಬಿಚ್ಚಿಟ್ಟು ಈಗ ಪುರಾಣ ಕಥೆ ಹೇಳೋರೆ ಅವರಂತೆ ನಡೆಯಲಾಗದು ಎನ್ನುವ ಮಟ್ಟಿಗೆ ಬಂದಿರೋವಾಗ ಕೇಳಿದವರು ನಡೆಯುವರೆ? ರಾಮಾಯಣ, ಮಹಾಭಾರತ ಕಥೆಗಳಲ್ಲಿ ಧರ್ಮದ ಪರ ನಿಂತವರ ಜೀವನದಲ್ಲಿ ಕಷ್ಟ ನಷ್ಟವನ್ನೇ ಎತ್ತಿ ಹಿಡಿದಿದ್ದಾರೆ.

ಆದರೆ ಯುದ್ದ ಗೆದ್ದ ನಂತರದ ಸುಖದ ದಿನಗಳನ್ನು ಪ್ರಚಾರ ಮಾಡೋರು ವಿರಳ. ಸಾಮಾನ್ಯಜ್ಞಾನಿಗಳಿಗೆ ಬೌತಿಕದಲ್ಲಿ ಸುಖವಷ್ಟೆ ಕಾಣೋವಾಗ ಕಷ್ಟವನ್ನು ಇಷ್ಟಪಡದವರು ಸತ್ಯ ಅರ್ಥ ಮಾಡಿಕೊಳ್ಳುವುದೂ ಕಷ್ಟವೆ. ಹೀಗಾಗಿ ಕಥೆ ಪುರಾಣಗಳ ಕೇವಲ ರಾಜಕೀಯ ವೈರತ್ವ ಮಧ್ಯವರ್ತಿಗಳ ಮೂಲಕ ಮನೆ ಮನೆ ತಲುಪುತ್ತಿದೆ.

ಅದರೊಳಗೆ ಇರುವ ಧರ್ಮ ಸೂಕ್ಮ, ಅಂದಿನ ಸಾಮಾಜಿಕ ಸ್ಥಿತಿಗತಿ, ಸಾಮಾನ್ಯಸತ್ಯವನ್ನು ಅರ್ಥ ಮಾಡಿಕೊಳ್ಳಲು ನಮ್ಮಲ್ಲಿ ಸಾಮಾನ್ಯಜ್ಞಾನವಿರಬೇಕಷ್ಟೆ. ಅಂದಿನ ರಾಜರ ಆಡಳಿತ ಇಂದಿನ ಪ್ರಜಾಸರ್ಕಾರ ಎರಡೂ ಒಂದೇ ಆಗದಿರೋದಕ್ಕೆ ಕಾರಣವೆ ರಾಜಕೀಯವನ್ನು ರಾಜಯೋಗವೆಂದು ಧರ್ಮ ವೆಂದರಿತು ಜನರನ್ನು ಆಳೋದಕ್ಕೆ ಹೋಗಿರುವ ಅಜ್ಞಾನವಷ್ಟೆ.

ಇಲ್ಲಿ ಯಾರಿಂದ ಯಾರೂ ಇಲ್ಲ. ಆದರೂ ಎಲ್ಲರಿಂದಲೂ ಎಲ್ಲರೂ ಕಲಿಯಬಹುದು. ಅವರವರ ಜೀವನಾನುಭವವೇ ಅವರ ಗುರು,ಗುರಿ ಕಡೆಗೆ ನಡೆಸಿದೆ. ಇದನ್ನು ಸತ್ಯ ಧರ್ಮ ಮೂಲಕ ಸಾಧ್ಯವಾದಷ್ಟು ಸಮಾಜ ಸುಧಾರಣೆಗಾಗಿ ನಮಗಾಗಿ, ನಮ್ಮ ಆತ್ಮಸಾಕ್ಷಿಯಂತೆ ನಡೆಯುವುದು ಕಲಿತರೆ ಉತ್ತಮ.

ಮಕ್ಕಳೂ ನಮ್ಮ ಅಂಶವೇ ಆದ್ದರಿಂದ ಮುಂದೆ ಅವರಲ್ಲಿಯೂ ಬದಲಾವಣೆ ಸಾಧ್ಯವಾಗಬಹುದು. ಹಾಗಂತ ಮಕ್ಕಳೂ ನಮ್ಮ ದಾರಿ ಹಿಡಿಯುತ್ತಾರೆನ್ನುವ ಸ್ಪಷ್ಟತೆ ಇಲ್ಲ. ಅವರವರ ಕಾಲ ಮಾನ,ಪರಿಸ್ಥಿತಿ, ಮನಸ್ಥಿತಿ, ಆರ್ಥಿಕ ಸ್ಥಿತಿಗೆ ಅವರ ಹಿಂದಿನ ಜನ್ಮದ ಋಣ ಕರ್ಮವೂ ಸೇರಿರುವಾಗ ಗುರು ಹಿರಿಯರು ಸತ್ಯ ಧರ್ಮ ತಿಳಿಸಬಹುದಷ್ಟೆ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು