ಕನ್ನಡ ನಾಡಿನಲ್ಲಿ ಕನ್ನಡ ಶ್ರೇಷ್ಠ ಭಾಷೆ, ಕನ್ನಡ ಭಾಷೆ ಸೇರಿದಂತೆ ಕನ್ನಡ ಶಾಲೆಗಳು ಕನ್ನಡಿಗರಿಂದಲೇ ಇನ್ನೂ ಹೆಚ್ಚು ಅಭಿವೃದ್ಧಿ ಆಗಬೇಕಿದೆ. ನಮ್ಮ ನಾಡಿನ ಮತ್ತು ಭಾಷೆಯ ಶ್ರೇಷ್ಠತೆ ವಿದೇಶದಲ್ಲಿ ಪರಿಚಯಿಸಲು ಸರಕಾರ ಮತ್ತು ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸಬೇಕಿದೆ ಎಂದು ಬೆಳಗಾವಿ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಹೇಳಿದರು.
ಜಿಲ್ಲಾ ಲೇಖಕಿಯರ ಸಂಘ ಮತ್ತು ಗಡಿ ಪ್ರದೇಶ ಅಭಿವೃದ್ಧಿ ಅಧಿಕಾರದ ವತಿಯಿಂದ ಹುಕ್ಕೇರಿ ತಾಲೂಕಿನ ಚಿಕ್ಕಾಲಗುಡ್ಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ‘ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಪ್ರಾಧ್ಯಾಪಕಿ ಸಾಹಿತಿಗಳಾದ ಡಾ. ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ನಾಡಿನಲ್ಲಿ ಜನಪದ ಸತ್ವ ಇನ್ನೂ ಉಳಿದುಕೊಂಡಿದೆ. ಜಾನಪದ ಕನ್ನಡ ಸಾಹಿತ್ಯದ ಮೂಲ ತಾಯಿ ಬೇರಾಗಿದೆ. ಆ ನಿಟ್ಟಿನಲ್ಲಿ ಜನಪದ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕರ್ತವ್ಯ ಕನ್ನಡಿಗರದ್ದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷೆ ಆಶಾ ಕಡಪಟ್ಟಿ ಜಾನಪದ ಕವಿತೆಗಳನ್ನು ಹಾಡಿ ರಂಜಿಸಿದರು. ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಜಯಶೀಲಾ ಬ್ಯಾಕೋಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸುನಂದಾ ಎಮ್ಮಿ, ಶೈಲಜಾ ಬಿಂಗೆ,ರಜನಿ ಜೀರಗ್ಯಾಳ, ಸುಮಾ ಕಿತ್ತೂರ,ಹಮೀದಾ ದೇಸಾಯಿ ವಿವಿಧ ವಿಚಾರಗೋಷ್ಠಿಗಳಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ, ಹುಕ್ಕೇರಿ ತಾಲೂಕ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಹಂಚಿನಾಳ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಪಿಡಿಓ ಸೇರಿದಂತೆ ಗ್ರಾಮದ ಮಹಿಳಾ ಸಂಘಗಳ ಸದಸ್ಯರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸಮಾರಂಭದಲ್ಲಿ ಸ್ಥಳೀಯ ಕಲಾವಿದರಿಂದ ಜನಪದ ಹಾಡುಗಳು ಚೌಡಕಿ ಪದಗಳು, ವೀರಗಾಥೆ, ಭಜನಾ ಪದಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.