ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನವೆಂದರೆ ಹತ್ತು ಹಲವು ದೃಷ್ಟಿಯಲ್ಲಿ ಪರ್ವಕಾಲ. ಬಸವಣ್ಣನವರ ಮುಖಂಡತ್ವದಲ್ಲಿ ಮನುಕುಲೋದ್ಧಾರದ ಒಂದು ಸಮಾಜದ ಧಾರ್ಮಿಕ ಆಂದೋಲನ ಆಗ ನಡೆಯಿತು. ಬಸವಾದಿ ಶರಣರು ಬದುಕಿನ ಮೌಲ್ಯಗಳನ್ನು ಗುರುತಿಸಿದರು.ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ನಡೆಸಿ ದೃಷ್ಟಾಂತವಾಗಿ ನಿಂತರು. ಕಾರಣ ಅಂದಿನ ಸಾಮಾಜಿಕ ಪರಿಸ್ಥಿತಿ ಹದಗೆಟ್ಟಿತ್ತು. ಬಡವ ಬಲ್ಲಿದರು ಎಂಬ ವರ್ಗ ಭೇದ, ಹೆಣ್ಣು ಗಂಡೆoಬ ಲಿಂಗ ಭೇದ, ಹುಚ್ಚ ನೀಚ ಎಂಬ ಜಾತಿ ಭೇದ ಆಳು ಅರಸ ಎಂಬ ಸ್ಥಾನಭೇದಗಳಿಂದ ಸಮಾಜ ಹರಿದು ಹಂಚಿಹೋಗಿತ್ತು. ಸಮಾಜದ ಈ ವಿಷಮತೆಯನ್ನು ತೊಡೆದು ಸರ್ವಸಮಾನತೆಯನ್ನು ಸಾಧಿಸುವ ಹಂಬಲ ಅವರದಾಯಿತು. ಉಚ್ಚ ಕುಲದವರು ಕೆಳ ವರ್ಗದವರನ್ನು ಶೋಷಣೆ ಮಾಡುತ್ತಿದ್ದರು. ಕೆಲವರಿಗೆ ಅಸ್ತಿತ್ವವೇ ಇರಲಿಲ್ಲ. ಅವರು ದನಿ ಇಲ್ಲದ ಮೂಕರಾಗಿ, ಜೀವವಿಲ್ಲದ ಶವವಾಗಿ ಬದುಕು ಸಾಗಿ ಸಿದ್ದರು. ಅಸ್ಪೃಶ್ಯತೆಯಂತೂ ಭಯಾನಕವಾಗಿತ್ತು ಈ ಇಡೀ ಸಮುದಾಯಕ್ಕೆ ಬಸವಾದಿ ಶರಣರು ದನಿ ಕೊಟ್ಟರು.ಎದೆ ಕೊಟ್ಟರು. ಅಭಿಮಾನ ನೀಡಿದರು. ಅವರ ಕೀಳರಿಮೆಯನ್ನು ನೀಗಿ ಆತ್ಮ ಗೌರವವನ್ನು ಜಾಗೃತಗೊಳಿಸಿದರು. ಬಸವಾದಿ ಶರಣರ ಸಂಪರ್ಕದಿಂದ ಅವರು ಪರುಷ ಸೋಂಕಿದ ಲೋಹದಂತೆ ಬಂಗಾರವಾದರು ಹಿಂದೆ ಕವಡೆ ಕಾಸಿನ ಕಿಮ್ಮತ್ತಿಲ್ಲದೆ ನೆಲಹತ್ತಿದ್ದ ದಲಿತರನ್ನು ಮೇಲೆತ್ತಿ ಗೌರವಯುತ ಬದುಕನ್ನು ನಡೆಸುವಂತೆ ಮಾಡಿದ್ದು ಅವರ ಬಹುದೊಡ್ಡ ಮಾನವೀಯ ಕಾರ್ಯ. ಅಂದಿನ ಸಮಾಜ ಸ್ತ್ರೀಯನ್ನು ಮಾಯೆ ಎಂದು ದೂರವಿಟ್ಟಿತ್ತು. ಆ ದೊಡ್ಡ ಸಮುದಾಯವನ್ನೇ ಅವಕಾಶ ವಂಚಿತರನ್ನಾಗಿ ಮಾಡಿ ಶೂದ್ರ ಸ್ಥಾನದಲ್ಲಿಡಿಸಲಾಗಿತ್ತು. ಹೀಗೆ ನೆಲದ ಮರೆಯ ನಿಧಾನದಂತಿದ್ದ ಮಾನವ ಶಕ್ತಿ ಸದುಪಯೋಗವಾಗದೆ ಹೋಗಿತ್ತು.
ಬದುಕು ಹಸನಾಗಲು ಜನರು ವಿದ್ಯಾವಂತರಾಗಿ ವಿವೇಕಿಗಳಾಗಬೇಕಾದದ್ದು ಅಗತ್ಯವೆಂದು ಮನಗಂಡ ಶರಣರು ಅತ್ತ ಗಮನಕೊಟ್ಟರು. ಅವಕಾಶ ತಪ್ಪಿದ್ದ ಎಲ್ಲಾ ಸ್ತ್ರೀ ಪುರುಷರಾದಿಯಾಗಿ ಶರಣರ ನವ ಜೀವನ ವಿಧಾನದಿಂದ ಅಕ್ಷರವಂತರಾದರು. ಅವರ ವ್ಯಕ್ತಿತ್ವ ವಿಕಾಸವಾಯಿತು. ಹೆಣ್ಣನ್ನು ಸಾಕ್ಷಾತ್ ದೇವಿ ಎಂದು ಆಧರಿಸಿದ್ದರಿಂದ ಮತ್ತು ಕೆಳವರ್ಗದವರನ್ನು ತಮಗೆ ಸಮಾನರೆಂದು ಗೌರವಾದರದಿಂದ ಕಂಡಿದ್ದರಿಂದ ಸಮಷ್ಟಿ ಚೇತನವನ್ನು ಮೇಲೆತ್ತಿ ಉದಾತ್ತಗೊಳಿಸಿದಂತಾಯಿತು. ನೋಡು ನೋಡುತ್ತಿದ್ದಂತೆ ಮಾನವ ಅಂತ:ಶಕ್ತಿಯ ಪ್ರಕಾಶ ಮತ್ತು ವಿಕಾಸದಿಂದಾಗಿ ಸಮಾಜವು ತೇಜೋಮಯವಾಯಿತು. ಶರಣರು ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು ಸ್ವರ್ಗ ನರಕಗಳ ಕಲ್ಪನೆಗೆ ಹೊಸ ಭಾಷೆ ಬರೆದರು. ಸತ್ತ ಮೇಲೆ ಸಿಕ್ಕುವುದೆಂದು ಹೇಳಲಾದ ಸ್ವರ್ಗವನ್ನು ಇಹದಲ್ಲೇ ಬದುಕಿರುವಾಗಲೇ ಅರಳಿಸುವ ಸಾರ್ಥಕ ಪ್ರಯತ್ನ ನಡೆಯಿತು.
ಬಸವಾದಿ ಶರಣರು ನವ ಸಮಾಜ ನಿರ್ಮಾಣದ ಕಾಯಕ ಮತ್ತು ದಾಸೋಹ ತತ್ವಗಳನ್ನು ಜನತೆಯ ಮುಂದಿರಿಸಿದ್ದರು. ಜನರು ಮಾಡುವ ವೃತ್ತಿಯಲ್ಲಿ ಕಲೆಯಲ್ಲಿ ಮೇಲು-ಕೀಳು ಎಂಬುದು ಇಲ್ಲ ಶ್ರದ್ಧೆಯಿಂದ ಸತ್ಯ ಶುದ್ಧವಾಗಿ ಮಾಡುವ ಕೆಲಸವೆಲ್ಲವೂ ಪವಿತ್ರವೆನಿಸಿ ಅದನ್ನು ಕಾಯಕ ಎಂದು ಕರೆದರು.ಕೀಳು ಎಂದು ದೂರವಿಟ್ಟಿದ ಅನೇಕ ಕಸುಬುಗಳು ಕಲೆಗಳು ಅಭಿವೃದ್ಧಿ ಹೊಂದಿ ಸಮಾಜ ಸಂಪನ್ನವಾಯಿತು. ಸಮಾಜದಲ್ಲಿ ಪ್ರತಿಯೊಬ್ಬರೂ ದೇಹದಣಿಸಿ ದುಡಿದು ತಿನ್ನಬೇಕೆಂಬ ತತ್ವದಿಂದ ಸೋಮಾರಿತನ ತೊಲಗಿ ಸಮಾಜವು ಕ್ರಿಯಾಶೀಲವಾಯಿತು. ತನ್ನ ಸತ್ಯನಿಷ್ಠ ದುಡಿಮೆಯಿಂದ ಬಂದ ಆದಾಯ ತನ್ನೊಬ್ಬನದಲ್ಲ ಅದು ಸಮಾಜದ್ದು ಅದರಲ್ಲಿ ಕೆಲಭಾಗವನ್ನು ತನ್ನ ಸೀಮಿತ ಅಗತ್ಯಗಳಿಗೆ ಬಳಸಿ ಉಳಿದದ್ದನ್ನು ಸಮಾಜಕ್ಕೆ, ಅಶಕ್ತರು ಅಸಹಾಯಕರಿಗೆ ನೀಡಬೇಕು ನಾಳೆಗೆಂದು ಕೂಡಿಡಬಾರದು. ಸಂಗ್ರಹ ಬುದ್ಧಿ ಪಾಪಕ್ಕೆ ದಾರಿ. ಅಲ್ಲದೆ ತನ್ನದೆಂಬ ಅಹಂಕಾರವನ್ನು ಬಿಟ್ಟು ಹಂಚಿ ಉಣ್ಣುವುದೇ ದಾಸೋಹ. ಇದರಿಂದಾಗಿ ಸಮಾಜದಲ್ಲಿ ಉಳ್ಳವರು ಇಲ್ಲದವರು ಎಂಬ ಭೇದ ತೊಲಗಿ ಆರ್ಥಿಕ ಸಮತೋಲನವನ್ನು ಸಾಧಿಸಲು ಸಾಧ್ಯವಾಯಿತು. ಒಂದು ಪ್ರಾಮಾಣಿಕ ಗಳಿಕೆ ಇನ್ನೊಂದು ಸಾರ್ಥಕ ಬಳಕೆ. ಇದು ಶರಣರು ವಿಶ್ವದ ಅರ್ಥ ನೀತಿಗೆ ನೀಡಿದ ಬಹುದೊಡ್ಡ ಕಾಣಿಕೆ.
ಅಂದು ಧರ್ಮವನ್ನು ಜಾತಿ ಎಂದು ಅಪ ಮೌಲ್ಯಗೊಳಿಸಲಾಗಿತ್ತು.ಜನ ಜೀವನದಿಂದ ದೂರವಾಗಿ ಮೇಲ್ವರ್ಗದವರಿಗೆ ಮಾತ್ರವಿದ್ದು, ಪುರೋಹಿತ ವರ್ಗದವರ ಸ್ವತ್ತಾಗಿದ್ದ ಧರ್ಮವನ್ನು ಮುಕ್ತವಾಗಿಸಿದ್ದು, ಶರಣರ ಮತ್ತೊಂದು ಮಹತ್ಸಾಧನೆ. ದೇವರನ್ನು ದೇವಾಲಯದಿಂದ ದೇಹಾಲಯಕ್ಕೆ ವರ್ಗಾಯಿಸಿ, ದೇವರು ಎಲ್ಲರಿಗೂ ಯಾವಾಗ ಬೇಕಾದರೂ ಲಭ್ಯವಾಗುವಂತೆ ಮಾಡಿದರು. ಇಷ್ಟ ಲಿಂಗೋಪಾಸನೆಯನ್ನು ಜಾರಿಗೆ ತಂದರು.ಇದು ಏಕದೇವೋಪಾಸನೆಯನ್ನು ಎತ್ತಿ ಹಿಡಿದಿದ್ದಲ್ಲದೆ ಜನರಲ್ಲಿ ಸಮಾನತೆಯನ್ನು ತಂದಿತು. ತಾರತಮ್ಯವನ್ನು ಅಳಿಸಲು ನೆರವಾಯಿತು. ಹೀಗೆ ಶರಣರು ಆವಿಷ್ಕರಿಸಿದ ಮೌಲ್ಯಗಳು ಇಡೀ ಮನುಕುಲವನ್ನು ಉದ್ದರಿಸುವಂತಹುದಾಗಿತ್ತು. ಬಸವಾದಿ ಶರಣರು ಕಟ್ಟಿದ್ದು ಮರ್ತ್ಯ ಲೋಕವೆಂಬ ಮಹಾ ಮನೆಯನ್ನು. ಅಲ್ಲಿರುವವರೆಲ್ಲರೂ ಒಂದು ಕುಟುಂಬದವರು.ಅಲ್ಲಿ ತುಂಬಿರುವುದೆಲ್ಲವೂ ಪ್ರೀತಿ, ವಿಶ್ವ ಭ್ರಾತೃತ್ವ.ಅಂದಿನ ಶರಣ ಸಮಾಜದಲ್ಲಿ ಯಾರನ್ನು ಇವನಾರವ ಎಂದು ಪ್ರಶ್ನಿಸಲಿಲ್ಲ.ಇವ ನಮ್ಮವ ಎಂಬ ವಿಶ್ವ ಕುಟುಂಬ ಭಾವನೆಯಿಂದ ಆದರಿಸುತ್ತಿದ್ದರು. ಆ ನವ ಸಮಾಜದಲ್ಲಿ ಅಕ್ಕ ಅಣ್ಣ ತಂದೆ ಅವ್ವ ಮೊದಲಾದ ಸಂಬಂಧ ಸೂಚಕ ಪದಗಳು ಬರೀ ಯಾಂತ್ರಿಕವಾಗದೆ ಮಾನವ ಸಂಬಂಧದ ಬೆಸುಗೆಯಾಗಿ ಜೀವಿಗಳನ್ನು ಕೂಡಿಸಿದವು.ಒಬ್ಬನ ಯೋಗ್ಯತೆಯನ್ನು ಅಳೆಯುವ ಮಾನದಂಡ ಹುಟ್ಟಿದ ಜಾತಿಯಾಗಿರಲಿಲ್ಲ. ವ್ಯಕ್ತಿಯ ಗುಣವಾಗಿತ್ತು. ಸಹಜೀವಿಗಳಲ್ಲಿ ಕುಂದನರಸದೆ, ಅಂತ:ಸತ್ವವನ್ನು ಆಧರಿಸುವ ಸನ್ನಿವೇಶ ಅಲ್ಲಿತ್ತು. ಒಂದು ಹೆಜ್ಜೆ ಮುಂದೆ ಹೋಗಿ ಸಕಲರಲ್ಲಿಯೂ ದೇವರನ್ನು ಕಾಣುವ ಹೃದಯವಂತರು ಅಲ್ಲಿದ್ದರು. ಹೀಗಾಗಿ ಕಲ್ಯಾಣ ಪಟ್ಟಣವು ಮಾನವ ಕಲ್ಯಾಣದ ಕಾರ್ಯಾಗಾರವೆನಿಸಿತ್ತು.
ಶರಣರು ಜನತೆಯ ಮುಂದಿರಿಸಿದ ತತ್ವಗಳು ಬದುಕಿನಿಂದ ದೂರವಾದುವಲ್ಲ. ಅವು ನಿತ್ಯ ಜೀವನಕ್ಕೆ ನೇರವಾಗಿ ಸಂಬಂಧಿಸಿದವು ಮತ್ತು ಆಚರಣೆ ಸಾಧ್ಯವೂ,ಅನುಸರಣ ಯೋಗ್ಯವೂ, ಆಗಿದ್ದವು. ಇನ್ನೊಂದು ಮಹತ್ವದ ಸಂಗತಿ ಎಂದರೆ ಸಾಧನೆಯಿಂದ ಸಾಮಾನ್ಯ ಮನುಷ್ಯನೂ ದೈವತ್ವಕ್ಕೆ ಏರಬಲ್ಲ ಎಂಬುದನ್ನು ಶರಣರು ಸಾಧ್ಯ ಮಾಡಿ ತೋರಿದ್ದರಿಂದ ಎಲ್ಲರೂ ಆಕರ್ಷಿತರಾದರು. ನಿಜವಾಗಿ ನೋಡಿದರೆ ಮನುಷ್ಯನ ಬಾಳನ್ನು ಸುಂದರಗೊಳಿಸಲು ಬಸವಾದಿ ಶರಣರು ಹಾಕಿಕೊಟ್ಟ ತತ್ವಗಳು ಜೀವನ ವಿಧಾನ ಇಂದಿಗೂ ಎಂದೆಂದಿಗೂ ನವನೀನವಾಗಿವೆ. ಅವರು ತಿದ್ದ ಹೊರಟದ್ದು ತನ್ನ ಸುತ್ತಲಿನವರ ಜೀವನ ರೀತಿಯನ್ನು ಮಾತ್ರವಲ್ಲ,ಇಡೀ ಮಾನವ ಕೋಟಿಯ ಹಣೆಬರಹವನ್ನು. ದುರ್ದೈವ, ಅದು ನೆರವೇರುವ ಮುನ್ನವೇ ಕ್ರಾಂತಿಯಾಯಿತು. ಆ ತತ್ವಗಳು ಅನುಷ್ಠಾನಕ್ಕೆ ಬಂದಿದ್ದರೆ ಭಾರತದ ಇತಿಹಾಸವೇ ಬೇರೆಯಾಗಿರುತ್ತಿತ್ತು.
ಅಂದು ಚಾಲುಕ್ಯರ ರಾಜಧಾನಿ ಕಲ್ಯಾಣ ಪಟ್ಟಣವು ಜಗತ್ತಿನ ಶ್ರೇಷ್ಠ ನಗರಿಗಳಲ್ಲಿ ಒಂದಾಗಿತ್ತು. ಕರ್ನಾಟಕ ಮತ್ತು ಉತ್ತರ ಭಾರತದ ಸಂಬಂಧಗಳು ನಿಕಟವಾಗಿದ್ದವು. ಇಂದಿನಂತೆ ಪ್ರಚಾರ ಮಾಧ್ಯಮಗಳು ಸಂಪರ್ಕ ಸಾಧನೆಗಳು ಇಲ್ಲದ ಆ ಕಾಲದಲ್ಲೂ ಶರಣರ ಆಂದೋಲನದ ಕೀರ್ತಿವಾರ್ತೆ ಇಡೀ ಭರತ ಖಂಡದ ಮೂಲೆ ಮೂಲೆಗೂ ಮುಟ್ಟಿತ್ತು. ಅಷ್ಟೇ ಅಲ್ಲ ದೇಶದ ಹೊರಗೂ ಸಾಗಿತು. ಕಲ್ಯಾಣದ ಜನ ಧಾವಿಸಿ ಬಂದರು. ಆ ಕಾಲದ ಸವಾಲಕ್ಷ, ಕಾಂಬೋಜ, ಕುಂತಳ, ಕಳಿಂಗ,ಗುರ್ಜ್ಜರ ಗೊಲ್ಲ, ಲಾಳ,ಬರ್ಬರ ಮೊದಲಾದ ರಾಜ್ಯಗಳಿಂದ ಬಂದರು. ಹಾಗೆ ಬಂದವರಲ್ಲಿ ರಾಜ ಮಹಾರಾಜರು ಮಂತ್ರಿ ಮಹೋದಯರು, ಅಧಿಕಾರಿಗಳು, ಸಿರಿವಂತರು, ಪ್ರತಿಷ್ಠಿತರು, ವಿದ್ವಾಂಸರು, ನಾನಾ ವೃತ್ತಿಯವರು, ಕಲಾವಿದರು, ಕೆಲವರ್ಗದವರು ಮೇಲ್ವರ್ಗದವರು ಇದ್ದರು.ಸವಾಲಕ್ಷದಿಂದ ಮಹದೇವ ಭೂಪಾಲ ಮತ್ತು ರಾಣಿ ಮಹಾದೇವಿ ಸೌರಾಷ್ಟ್ರದಿಂದ ಆದಯ್ಯ ,ಸೊಡ್ಡಳ ಬಾಚರಸ, ಬರ್ಬರದಿಂದ ಮರುಳ ಶಂಕರ ದೇವ, ಗುರ್ಜ್ಜರದಿಂದ ಸುರಗಿ ಚೌಡಯ್ಯ, ಮಾಳವದಿಂದ ಡೋಹರ ಕಕ್ಕಯ್ಯ, ಕುಂತಳದಿಂದ ಏಕಾಂತರಾಮಯ್ಯ, ಆಂಧ್ರದಿಂದ ಮೈದುನ ರಾಮಯ್ಯ ,ಕಳಿಂಗದಿಂದ ಮಹಾದೇವ ಶೆಟ್ಟಿ, ಕಲ್ಲು ಕುರಿಕೆಯ ರಾಜ್ಯ ಸಲೇಶ ಮಾದರಸ, ಐಹೊಳೆಯ ರಾಜಮಲ್ಲರಸ, ಕೆಂಭಾವಿಯರಾಜ ಚಂದಿಮರಸ ಮೊದಲಾದವರು ಕರ್ನಾಟಕದ ಕಲ್ಯಾಣಕ್ಕೆ ಬಂದರು.
ಹಾಗೆ ಬಂದ ಸಾವಿರಾರು ಮಂದಿ ಶರಣ ಸಂಸ್ಕೃತಿಗೆ ಒಗ್ಗಿಕೊಂಡರು . ಕಾಯಕ ನಿಷ್ಠರಾದರು. ದಾಸೋಹoಭಾವಿಗಳಾದರು. ಅವರೆಲ್ಲ ಒತ್ತಟ್ಟಿಗೆ ಕೂಡಿ ಸರ್ವೋದಯ ಕಾರ್ಯ ಕೈಗೊಂಡದ್ದು ಜಾಗತಿಕ ಇತಿಹಾಸದಲ್ಲಿ ಅಪರೂಪದ ಘಟನೆ. ಇಷ್ಟೊಂದು ಜನ ಸ್ತ್ರೀಯರು ಪುರುಷರು ಸಮಾಜದ ಎಲ್ಲಾ ಸ್ಥಳದ ಜನ ತಾರತಮ್ಯ ಭೇದವಿಲ್ಲದೆ ಕಲಿತು ಮುಕ್ತವಾಗಿ ಚರ್ಚೆ ಮಾಡಿ ಓರೆ ಕೋರೆಗಳನ್ನು ತಿದ್ದಿಕೊಂಡು ಸಮಾಜದ ಸಮಗ್ರ ಕ್ರಾಂತಿಗೆ ಕಾರಣರಾದರು.ಇವರೆಲ್ಲ ಮಾನವ ಪ್ರೇಮಿಗಳು. ಮನುಕುಲದ ಕಲ್ಯಾಣಕ್ಕೆ ಎಲ್ಲವನ್ನೂ ತೊರೆದು ಕರ್ನಾಟಕಕ್ಕೆ ಬಂದರು. ಎಲ್ಲರೊಳಗೊಂದಾದರು. ಅವರು ಕನ್ನಡ ಭಾಷೆ ಕಲಿತು ಕಾವ್ಯ ರಚನೆ ಮಾಡುವಷ್ಟು ಪ್ರಭುದ್ಧರಾದುದು ಕನ್ನಡದ ಪುಣ್ಯ ಬಸವಣ್ಣನಂತಹ ಅಸಾಧಾರಣ ಯುಗಪುರುಷನ ಅದ್ಭುತ ಯೋಜನೆಗಳು ಸಮಾನಮನಸ್ಕರಾದ ಇಂತಹ ಅನೇಕ ಶರಣ- ಶರಣೆಯರ ಸಹಭಾಗಿತ್ವದಿಂದ ನವ ಸಮಾಜ ನಿರ್ಮಾಣಕ್ಕೆ ಕಾರಣವಾದದನ್ನು ಇತಿಹಾಸ ದಾಖಲಿಸಿದೆ.
ವಚನಗಳಲ್ಲಿ ಉಲ್ಲೇಖವಾಗಿರುವ ಲಕ್ಷದ ಮೇಲೆ 96,000 ಅಸಂಖ್ಯಾತ ಗಣಗಳು ಮೊದಲಾದ ಮಾತುಗಳು ಅಂದು ಕಲ್ಯಾಣದಲ್ಲಿ ಸಮಾವೇಶಗೊಂಡಿದ್ದ ಶರಣರ ಸಂಖ್ಯೆ ಅಪರಿಮಿತವಾಗಿತ್ತು ಎಂಬುದನ್ನು ತಿಳಿಸುತ್ತದೆ. ಕಲ್ಯಾಣದಲ್ಲಿದ್ದ ಸಮಕಾಲಿನ ಶರಣರನ್ನು ಬಸವಣ್ಣನ ಬದುಕಿನಿಂದ ಪ್ರತ್ಯೇಕಿಸಲು ಸಾಧ್ಯವಾಗದಷ್ಟು ಅನನ್ಯತೆ ಬೆಸೆದು ಕೊಂಡಿದೆ. ಅವರ ಜೀವನ ಸಾಧನೆಗಳು ಪುರಾಣದ ಪುಣ್ಯ ಕಥೆಗಳಂತೆ ಕಾಣುತ್ತವೆ.ವಾಸ್ತವವಾಗಿ ಅವರೆಲ್ಲರೂ ಚಾರಿತ್ರಿಕ ವ್ಯಕ್ತಿಗಳು.ಅವರಲ್ಲಿ ಅನೇಕರು ತಮ್ಮದೇ ಆದ ವಚನಾಂಕಿತವನ್ನು ಇಟ್ಟುಕೊಂಡು ವಚನಗಳನ್ನು ರಚಿಸಿದ್ದಾರೆ.ಅಂತಹ ಲಕ್ಷಾಂತರ ವಚನಗಳಲ್ಲಿ ಕೆಲವಾರು ನಮಗೆ ದೊರಕಿವೆ ಎಂಬುದು ಸಮಾಧಾನದ ಸಂಗತಿ.ವಿವಿಧ ಕಾಯಕದ ಕಲೆಗಳಾದ ಶರಣರು ತಮ್ಮ ವೃತ್ತಿಪರ ಪದಗಳನ್ನು ಬಳಸಿ ತಮ್ಮ ಲೋಕ ಅನುಭವ ಹಾಗೂ ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ ವಿಶ್ವ ಸಾಹಿತ್ಯದಲ್ಲಿಯೇ ವಿಶಿಷ್ಟ ಮೌಲ್ಯಯುಳ್ಳದೆಂಬ ಅಗ್ಗಳಿಕೆಯನ್ನು ಪಡೆದಿದೆ.
ಬಸವೇಶ್ವರರು ಬಯಸಿದ ಉದಾತ್ತ ಸಮಾಜ ರಚನೆಯ ಕಾರ್ಯವನ್ನು ಮತ್ತು ಅವರು ಧಾರ್ಮಿಕ ಪ್ರಪಂಚದಲ್ಲಿ ಉಂಟುಮಾಡಿದ ಕ್ರಾಂತಿಯನ್ನು ಪುಷ್ಟೀಕರಿಸಲು ಅವರ ಸಮಕಾಲೀನ ಅನೇಕ ಶಿವಶರಣರು ಅವರಿಗೆ ಅನುವಾಗಿ ಬಂದದ್ದು ಬಸವೇಶ್ವರರ ಒಂದು ಸೌಭಾಗ್ಯ.ಬಸವೇಶ್ವರರ ವಿಚಾರ ಕ್ರಾಂತಿಗೆ ತಮ್ಮ ಜ್ಞಾನ ಮತ್ತು ವೈರಾಗ್ಯಗಳ ಬೆಂಬಲವನ್ನಿಟ್ಟು ಅದನ್ನು ಮುಂದುವರಿಸಿದರು. ವೈರಾಗ್ಯ ಚಕ್ರವರ್ತಿ ಎಂದು ಹೆಸರಾದ ಅಲ್ಲಮ ಪ್ರಭುಗಳವರು ಶುದ್ಧವೂ ಮತ್ತು ಸಮೃದ್ಧವೂ ಆದ ಸಮಾಜವನ್ನು ಕಟ್ಟುವ ಕಾರ್ಯದ ಕರ್ಣಧಾರತ್ವ ವನ್ನು ವಹಿಸಿದರು. ಶಟ್ ಸ್ಥಲ ಸಾರ್ವಭೌಮರಾದ ಚೆನ್ನಬಸವೇಶ್ವರರು ನಾಯಕರಾದ ಬಸವೇಶ್ವರರು ರಚಿಸಿದ ಜಾತ್ಯಾತೀತ ಮತ್ತು ದಯಾ ಪೂರ್ಣ ಸಮಾಜದ ಮುನ್ನಡೆಗೆ ಶ್ರಮಿಸಿದ ಮತ್ತೊಬ್ಬರೆಂದರೆ “ಶಿವ ಕೀರ್ತಿ ಶರಧಿ ಶಶಿ “ಎಂದು ಹೆಸರು ಗಳಿಸಿದ ಸಿದ್ದರಾಮೇಶ್ವರರು. ಕಾಯಕ ತತ್ವದ ವ್ಯಾಖ್ಯಾನ ವಾಗುವಂತೆ ತಮ್ಮ ಜೀವನವನ್ನು ಅಳವಡಿಸಿಕೊಂಡವರು. ವೀರ ಘಂಟೆಯ ಮಡಿವಾಳ ಮಾಚಿದೇವರು ಸರ್ವದಾ ಶಿವ ಪಂಚಾಕ್ಷರಿಯ ಮಂತ್ರೋಚ್ಚಾರದಲ್ಲಿ ನಿರತರಾದ ಅಜಗಣ್ಣನವರು ಸ್ವಪ್ರಕಾಶದ ಮಹಾಲಿಂಗವನ್ನು ಅಂತರಂಗದಲ್ಲಿ ಆರಾಧಿಸಲು ಸಾಧ್ಯವೆಂದು ಮಾನವರಿಗೆ ತೋರಿಸಿಕೊಟ್ಟರು. ಬಸವೇಶ್ವರರ ಚರಿತ್ರೆಯನ್ನು ಸ್ಫುಟಗೊಳಿಸಿಕೊಟ್ಟವರು ಆತನ ಮೈತ್ರಿಗೆ ಪಾತ್ರರೂ ಪ್ರಭುವೂ ಅದ ಬಿಜ್ಜಳ ರಾಯರು.ಕಲ್ಯಾಣದಲ್ಲಾದ ಕ್ರಾಂತಿಯಲ್ಲಿ ಚೆನ್ನಬಸವಣ್ಣ ಮತ್ತು ಮಡಿವಾಳಯ್ಯನವರಿಗೆ ಬೆಂಬಲವಾಗಿ ನಿಂತವರು ಘನಲಿಂಗಿ ರುದ್ರಮುನಿಗಳು. ಲಿಂಗಾಯತ ಧರ್ಮೋನ್ನತಿಗಾಗಿ ಅಸಾಧಾರಣವಾದ ಕೆಲಸ ಮಾಡಿದವರು “ಆಚಾರ್ಯ ಪಂಚಕ”ದಲ್ಲಿ ಒಬ್ಬರಾದ ಮರುಳಸಿದ್ದರು.ಇವರಲ್ಲದೆ ಲಿಂಗಾಯತ ಪಂಚಪೀಠಗಳಲ್ಲಿ ಒಂದಾದ ಕೇದಾರ ಪೀಠದ ಅಧಿಪತಿಯಾದ ಏಕೋರಾಮರು ಅನ್ಯ ಮತಗಳನ್ನು ಖಂಡಿಸಿ ಶಿವಾಧಿಕ್ಯವನ್ನು ಸ್ಥಾಪಿಸಿದರು. ಮಹಾಶರಣರಾದ ಏಕಾಂತದ ರಾಮಯ್ಯನವರು ಅಬಲೂರಿನ ಬ್ರಹ್ಮೇಶ್ವರ ಗುಡಿಯನ್ನು ಶುದ್ಧ ಮಾಡಿ ಲಿಂಗ ಪೂಜೆಗೆ ಅನುಕೂಲ ಮಾಡಿಕೊಟ್ಟವರು.
ಬಸವೇಶ್ವರರ ಧಾರ್ಮಿಕ ಸುಧಾರಣೆಗಳನ್ನು ಸಾರ್ಥಕ ಗೊಳಿಸುವ ಕಾರ್ಯದಲ್ಲಿ ಸ್ತ್ರೀಯರೂ ಸಹಾಯಕರಾಗಿ ನಿಂತರು.ಇವರಲ್ಲಿ ಮುಖ್ಯರಾದವರೆಂದರೆ ಎನ್ನ ದೇವ ಚನ್ನಮಲ್ಲಿಕಾರ್ಜುನನಲ್ಲದೆ ಅನ್ಯಕ್ಕೆಳಸುವುದೇ ಎನ್ನ ಮನ ಕೆಳದಿಯರಿರಾ ? ಎಂದು ನುಡಿದು ಚೆನ್ನ ಮಲ್ಲಿಕಾರ್ಜುನನನ್ನೇ ವರನನ್ನಾಗಿ ಆರಿಸಿದ ಅಕ್ಕಮಹಾದೇವಿ.ಬಸವೇಶ್ವರರ ಪತ್ನಿಯರಾದ ಗಂಗಾಂಬಿಕೆ -ನೀಲಾಂಬಿಕೆಯರು ಅವರ ಕಾರ್ಯಗಳಿಗೆ ಸ್ಪೂರ್ತಿಯನ್ನು ಕೊಟ್ಟರು. ಶಿವಶರಣೆ ಅಕ್ಕನಾಗಮನವರು ಬಸವೇಶ್ವರರ ಅಕ್ಕ. ಈಕೆಗೆ ಶಿವಯೋಗ ಸಾಧನೆ ಮುಖ್ಯ ಗುರಿಯಾಗಿತ್ತು. ಮತ್ತೊಬ್ಬ ಶಿವಶರಣೆ ಆದ ಮುಕ್ತಾಯಕ್ಕನ ಆಧ್ಯಾತ್ಮ ನಿಷ್ಠೆಯು ಸದ್ಭಕ್ತಿಯ ಚರಿತ್ರೆಯಲ್ಲಿ ಮುಖ್ಯಸ್ಥಳವನ್ನು ಗಳಿಸಿದೆ.
ಕರ್ನಾಟಕದವರಷ್ಟೇ ಸೇವೆಯನ್ನು ಲಿಂಗಾಯತ ಧರ್ಮಕ್ಕೆ ಮಾಡಿದವರು ಅನ್ಯ ದೇಶದವರು ಹಲವರಿದ್ದರು. ಇಂಥವರಲ್ಲಿ ಒಬ್ಬರಾದವರು ಆಂಧ್ರಪ್ರದೇಶದ ಮಲ್ಲಿಕಾರ್ಜುನ ಪಂಡಿತಾರಾಧ್ಯರು. ಪಂಡಿತತ್ರಯರಲ್ಲಿ ಒಬ್ಬರೆಂದು ಪರಿಗಣಿತರಾದ ಇವರು ವೆಲನಾಡು ಚೋಳನ ಆಸ್ಥಾನಕ್ಕೆ ತೆರಳಿ, ಅಲ್ಲಿ ಅನ್ಯ ಮತ ವಿದ್ವಾಂಸರನ್ನು ಪರಾಜಯಗೊಳಿಸಿ ಲಿಂಗಾಯತ ಆಚಾರವನ್ನು ಸ್ಥಾಪಿಸಿದರು. ಮತ್ತೊಬ್ಬರು ಮೋಳಿಗೆಯ ಮಾರಿ ತಂದೆ ಎಂಬುದಾಗಿ ಬಸವಣ್ಣನವರಿಂದಲೇ ಗೌರವಿಸಲ್ಪಟ್ಟ ಕಾಶ್ಮೀರದ ಮಾಂಡವ್ಯಪುರದ ರಾಜರಾದ ಮೋಳಿಗೆ ಮಾರಯ್ಯನವರು.ಈತ ಶರಣ ಜನರ ಸಹವಾಸಕ್ಕಾಗಿ ರಾಜ್ಯವನ್ನೇ ತ್ಯಾಗ ಮಾಡಿದನೆಂಬುದು ಸರ್ವವಿದಿತ. ಇಷ್ಟೆoದ ಮೇಲೆ ಬಸವೇಶ್ವರರ ವ್ಯಕ್ತಿತ್ವ ಮತ್ತು ಜೀವನವು ಮತ್ತು ಮೇಲೆ ನಿರೂಪಿಸಿರುವ ಶಿವಶರಣರ ವ್ಯಕ್ತಿತ್ವ ಮತ್ತು ಜೀವನವು ಹಾಸು ಹೊಕ್ಕಾಗಿ ನಿಂತಿವೆ.
12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಒಂದು ಮಹತ್ವವಾದ ಮಹಾ ಕಾರ್ಯವು ಬಸವೇಶ್ವರರಿಂದ ನಡೆಯಿತು. ಆಗ ಇದ್ದ ಸಾಮಾಜಿಕ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯಿಂದ ಮನನೊಂದ ಶ್ರೀ ಬಸವೇಶ್ವರರು ಲಿಂಗಾಯತ ಮತವನ್ನು ಉದ್ಧಾರ ಮಾಡಿ ಕಾಯಕಕ್ಕೆ ಮನ್ನಣೆ ಇತ್ತು ಏಕಮೇವ ಪೂಜೆಯನ್ನು ವಿಧಿಸಿ ಸರ್ವಸಮತೆ ಮತ್ತು ಸರ್ವಾದ್ಯ ತತ್ವಗಳ ಆಧಾರದ ಮೇಲೆ ಸಮಾಜವನ್ನು ಕಟ್ಟಲು ಶಮಿಸಿದರು. ಇಂತಹ ಮಹಾಪುರುಷರ ಜೀವನ ಸಿದ್ದಿ ಸಾಧನೆಗಳನ್ನು ನಾವೆಲ್ಲರೂ ಅರಿಯಲೇಬೇಕು.
ಮಹಾನುಭಾವ ಬಸವಣ್ಣನವರನ್ನು ಕನ್ನಡಿಗರಿಗೆ ಪರಿಚಯಿಸುವ ಅಗತ್ಯವೇ ಇಲ್ಲ. 12ನೇ ಶತಮಾನದಲ್ಲಿ ಜನಿಸಿದ ಬಸವಣ್ಣನವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ.ಮೂಲತಃ ಈಗಿನ ಬಿಜಾಪುರ ಜಿಲ್ಲೆಯ ಬಾಗೇವಾಡಿಯ ಅಗ್ರಹಾರದವರಾದರು. ಹುಟ್ಟಿದದು ತಾಯಿ ತವರು ಮನೆಯಾದ ಇಂಗಳೇಶ್ವರದಲ್ಲಿ.ಎಂಟನೆಯ ವಯಸ್ಸಿನಲ್ಲಿಯೇ ವೈದಿಕ ಕಂದಾಚಾರಗಳಿಂದ ರೋಸಿಕೊಂಡು ಪ್ರಖರ ವೈಚಾರಿಕತೆಯಿಂದ ಉಪನಯನವನ್ನು ಧಿಕ್ಕರಿಸಿದರು. ತಮ್ಮ 24ನೆಯ ಪ್ರಾಯದಲ್ಲಿ ಅಂದಿನ ಕಳಚೂರ್ಯ ಅರಸು ಬಿಜ್ಜಳ ರಾಜನ ರಾಜಧಾನಿ ಮಂಗಳವಾಡ ಪ್ರವೇಶಿಸಿದರು.
ಚಕ್ರವರ್ತಿ ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣನವರ ಸೋದರ ಮಾವಂದಿರಾದ ಸಿದ್ದರಸ ಮತ್ತು ಬಲ ದೇವರ ಹೆಸರು ಬಹಳ ಮುಖ್ಯ ಸ್ಥಾನದಲ್ಲಿದ್ದರು. ಒಂದಿಷ್ಟು ಪ್ರಭಾವದಿಂದಲೂ ತಮ್ಮ ಕತೃತ್ವ ಸಾಮರ್ಥ್ಯದಿಂದಲೂ ಬಿಜ್ಜಳ ರಾಜನ ಆಸ್ಥಾನದಲ್ಲಿ ಮೊದಲು ಕರಣಿಕರಾಗಿ ಸೇರಿದ ಬಸವಣ್ಣನವರು ತಮ್ಮ ಸತ್ಯ, ಶುದ್ಧ, ಪ್ರಾಮಾಣಿಕ ಜೀವನ ಕ್ರಮದಿಂದ ದಿನೇ ದಿನೇ ಉನ್ನತ ಸ್ಥಾನಗಳಿಗೆ ಏರಿ ಪ್ರಧಾನಿ ಪಟ್ಟದವರೆಗೆ ತಲುಪಿದರು. ಈ ಮಧ್ಯ ಹಲವು ಒತ್ತಡಗಳಲ್ಲಿ ಅವರು ಬಲದೇವರಸರ ಮಗಳು ಗಂಗಾಂಬಿಕೆಯನ್ನು ಸಿದ್ಧರಸರ ಮಗಳು ನೀಲಾಂಬಿಕೆಯನ್ನು ಮದುವೆಯಾಗಬೇಕಾಗಿ ಬಂದಿತು ಜೊತೆಗೆ ತಾಯಿಯ ಸ್ವರೂಪದಲ್ಲಿದ್ದ ಖಾಸಾ ಅಕ್ಕ ಅಕ್ಕನಾಗಮ್ಮನವರನ್ನು ಆಕೆಯ ಏಕ ಮಾತ್ರ ಮಗ ಚೆನ್ನಬಸವಣ್ಣನವರನ್ನು ಕಲ್ಯಾಣಕ್ಕೆ ಕರೆಸಿಕೊಂಡು ಆದರ್ಶಪ್ರಾಯವಾದ ಗೃಹಸ್ಥ ಜೀವನವನ್ನು ಬಾಳಿದರು. ತಾವು ಕಲ್ಯಾಣದಲ್ಲಿ ಬಾಳಿದ 12 ವರ್ಷಗಳಲ್ಲಿಯೇ ಮುಖ್ಯವಾದ ಧಾರ್ಮಿಕ, ಸಾಮಾಜಿಕ , ರಾಜಕೀಯ, ಆರ್ಥಿಕ, ಸಾಹಿತ್ತಿಕ, ಸಾಂಸ್ಕೃತಿಕ ರಂಗಗಳಲ್ಲಿ ಹಲವು ಉತ್ಕ್ರಾಂತಿಗಳನ್ನು ಮಾಡಲು ಅವರಿಗೆ ಸಾಧ್ಯವಾಯಿತು ಎಂಬುದು ಅತ್ಯದ್ಭುತವಾದ ಸಂಗತಿಯಾಗಿದೆ. ಈ ಒಂದು ಅಪೂರ್ವ ಸಂಘಟನಾ ಸಾಮರ್ಥ್ಯದಿಂದಾಗಿ ಅವರು ಅವತಾರ ಪುರುಷರು ಎನಿಸಿದರು, ಕಾರಣಿಕ ಪುರುಷರೂ ಎನಿಸಿದರು, ಅಷ್ಟೇ ಅಲ್ಲ ಲಿಂಗಾಯತ ಧರ್ಮದ ಮಂತ್ರ ಪುರುಷರೂ ಎನಿಸಿದರು.
ಮಹಾತ್ಮ ಬುದ್ಧನ ವೈಚಾರಿಕತೆ ಜಿನಮುನಿ ಮಹಾವೀರರ ದಯೆ ಅಹಿಂಸೆ, ಜೀಸಸ್ ಏಸುಕ್ರಿಸ್ತರ ಕ್ಷಮೆ, ಶಾಂತಿ, ಪ್ರವಾದಿ ಮಹಮ್ಮದ್ ಪೈಗಂಬರರ ಧೈರ್ಯ, ಸಾಹಸ ಮಹಾನುಭಾವ ಬಸವಣ್ಣನವರಲ್ಲಿ ಸತ್ಯವಾದ ಮಾತಾಗಿದೆ. ಅವರು ನುಡಿದಂತೆ ನಡೆದರು, ಮಾತ್ರವಲ್ಲ ಅಂಥ 770 ಅಮರ ಗಣoಗಳನ್ನು ಆ ಕಾಲದಲ್ಲಿ ಕಲ್ಯಾಣದಲ್ಲಿ ತಯಾರು ಮಾಡಿದುದು ಹಿಂದೆ ನಡೆಯಲಾರದ ಮುಂದೂ ಸಾಧ್ಯವಾಗದ ಅತ್ಯಗಾಧ ಸಂಗತಿಯಾಗಿದೆ.
ಉತ್ತಮ ಕುಲದಲ್ಲಿ ಹುಟ್ಟಿ ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಒಂದೇ ಎಂದು ನಂಬಿ ಬಾಳಿದವರು. ಪ್ರಧಾನಮಂತ್ರಿ ಆಗಿದ್ದು ತನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ನಿಲುವು ತೋರಿದವರು. ಕೂಡಲಸಂಗಮನೊಲಿಸ ಬಂದ ಕಾಯವ ಕೆಡಿಸಲಾಗದು ಎಂದು ಮನುಜ ದೇಹದ ಉತ್ಕೃಷ್ಟತೆಯನ್ನು ಎತ್ತಿ ಹಿಡಿದು ಗುರುಲಿಂಗ ಜಂಗಮ ಸೇವೆಯನ್ನು ಚಾಚೂ ತಪ್ಪದೇ ಮಾಡಿ ಬದುಕು ಸಾರ್ಥಕ ಪಡಿಸಿಕೊಂಡವರು. ಹೊನ್ನಿನೊಳಗೊಂದೊರೆಯ, ಅನ್ನದೊಳಗೊಂದ ಗುಳ, ಸೀರೆಯೊಳಗೊoದೆಳೆಯ, ಇಂದಿಂಗೆ ನಾಳಿoಗೆ ಬೇಕೆಂದೆನಾದಡೆ ನಿಮ್ಮಾಣೆ ನಿಮ್ಮ ಪುರಾತನರಾಣೆಯೆಂದು ಆಸೆಯನ್ನು ಅಳಿದು ಈಶನಾಗಿ ಮೆರೆದವರು. ಕುಲವವುದು ತಪ್ಪದು ಲಿಂಗ ಮುಟ್ಟಲೊಡನೆ, ಹೊನ್ನವುದು ತಪ್ಪದು ಪರುಶ ಮುಟ್ಟಲೊಡನೆ ಎಂದು ಸಾರಿ ಬ್ರಾಹ್ಮಣ ಕನ್ನೆಯನ್ನು ಸಮಗಾರರನಿಗೆ ಕೊಡಿಸಿ ಸಮಾನತೆಯ ಸಂಕೇತವಾಗಿ ಸಮಕ್ಷಮ ನಿಂತು ವಿವಾಹ ನೆರವೇರಿಸಿದವರು. ದೇವಸಹಿತ ಭಕ್ತ ಮನೆಗೆ ಬಂದಡೆ ಕಾಯಕವಾವುದೆಂದು ಬೆಸಗೊಂಡ ನಾದಡೆ ನಿಮ್ಮಾಣೆ ನಿಮ್ಮ ಪುರಾತನರಾಣೆ ತಲೆದಂಡ ತಲೆದಂಡ ಎಂದು ಸಾರಿ ಕಾಯ ಪರಿಶ್ರಮದ ಪ್ರತಿಯೊಂದು ಕಾಯಕವನ್ನು ಉದಾತ್ತೀಕರಿಸಿದರು. ಪರವದುವನ್ನು ಮಹಾ ದೇವಿಯಂತೆ ಎಂದು ಘೋಷಿಸಿ ಹೆಣ್ಣು ಗಂಡುಗಳ ಸಮಾನತೆಯನ್ನು ಪುರಸ್ಕರಿಸಿದವರು. ಆಚಾರವೇ ಸ್ವರ್ಗ ಅನಾಚಾರವೇ ನರಕ ಎಂದು ಹೇಳಿ ಈ ಮರ್ತ್ಯವನ್ನೇ ಮಹಾಲೋಕವನ್ನಾಗಿ ಪರಿವರ್ತಿಸಿದವರು.
ಮಹಾನುಭಾವ ಬಸವಣ್ಣನವರು ಈಗಿನ ಪಾರ್ಲಿಮೆಂಟಿನಂತಿದ್ದ ಅನುಭವ ಮಂಟಪ ಸ್ಥಾಪಿಸಿ ಅದರ ಮೂಲಕ ಹರಿಸಿದ ವಿಚಾರಧಾರೆಗಳು ಬಹಳ ಬಹಳ ಪ್ರಗತಿಪರವಾಗಿದ್ದವು. ಅವು ಎಷ್ಟು ದ್ರು ತಗತಿಯಲ್ಲಿ ಇದ್ದವೆಂದರೆ 800 ವರ್ಷ ಮುಂದಿದ್ದವು. ಇಂದು 20ನೇ ಶತಮಾನದಲ್ಲಿಯೂ ಕಾರ್ಯರೂಪಕ್ಕೆ ತರಲು ದುಸ್ಸಾಧ್ಯವಾದ ಆಚಾರ ವಿಚಾರಗಳನ್ನು ಅವರು ತಮ್ಮ ಹನ್ನೆರಡನೆಯ ಶತಮಾನದಲ್ಲಿ ಕಾರ್ಯಾನ್ವಯಗೊಳಿಸಿದರು.
ಬಸವಣ್ಣನವರ ವಚನಗಳು ಕುಸುಮದ ಕುಡಿಗಳು. ವೈಚಾರಿಕ ವಜ್ರದ ಕಿಡಿಗಳು.ಅವರ ವಚನ ರಚನೆಯ ಪ್ರಭಾವ ಎಷ್ಟೊಂದು ಆಯಿತೆಂದರೆ 770 ಅಮರ ಗಣಗಳು.ಅದರಲ್ಲಿ 70 ಜನ ಮಹಿಳೆಯರು ವಚನಗಳನ್ನು ಬರೆದವರು. ಈ ವಚನ ಸಾಹಿತ್ಯದ ಮಹಾಪೂರದ ನಂತರ ಕನ್ನಡ ಸಾಹಿತ್ಯದ ದಿಕ್ಕೇ ಬದಲಾಯಿತು. ಕನ್ನಡ ಭಾಷೆಯ ಸ್ವರೂಪ ಬೇರೆಯೇ ಆಯಿತು.ತಮ್ಮ ವ್ಯಕ್ತಿತ್ವದ ಪಡಿಯಚ್ಚನ್ನು ಭಾರತೀಯ ಇತಿಹಾಸದಲ್ಲಿ ಮೂಡಿಸಿ ಅವರು ಕೂಡಲಸಂಗಮನಲ್ಲಿ ಒಂದಾದರು. ಅವರ ವಚನಾಂಕಿತ ಕೂಡಲಸಂಗಮದೇವ.
ಬಸವ ಯುಗವನ್ನು ಸ್ವಾತಂತ್ರ್ಯಯುಗವೆಂದೂ ಕ್ರಾಂತಿ ಯುಗವೆಂದೂ ಅಂಧಶ್ರದ್ಧೆಯು ಹೋಗಿ ಸ್ವತಂತ್ರವಾಗಿ ಆಲೋಚಿಸುವುದು ಪ್ರಾರಂಭವಾಗುವುದರಿಂದ ಅದನ್ನು ಸ್ವಾತಂತ್ರ್ಯ ಯುಗ ಎನ್ನುವರು. ಧರ್ಮಾಧರ್ಮವೆಂಬುದನ್ನು ಅಂಧಶ್ರದ್ಧೆಯಿಂದ ನಿರ್ಧರಿಸದೆ ಅದರ ನಿರ್ಧಾರಕ್ಕೆ ಸ್ವತಂತ್ರ್ಯ ಪರ್ಯಾಲೋಚನೆಯ ಅವಕಾಶವೂ ಉಂಟಾದುದರಿಂದ ಧರ್ಮ ಕ್ರಾಂತಿಯಾಗಿ ಆ ಕಾಲವು ಕ್ರಾಂತಿ ಯುಗವೆನಿಸಿಕೊಂಡಿತು. ಬಸವೇಶ್ವರರು ಸಂಗಮದಿಂದ ಬಂದುದೇ ಜನರನ್ನು ತಿದ್ದುವ ಸಲುವಾಗಿ. ದೇವನೊಬ್ಬ ನಾಮ ಹಲವು, ಯಜ್ಞ ಯಾಗಾದಿಗಳು ಸಾತ್ಮಿಕವಾದವು, ನೀತಿ ಬಾಹಿರವಾದವು, ದಯವಿಲ್ಲದ ಧರ್ಮ ವಾವುದಯ್ಯ ಎಂದು ಬಸವೇಶ್ವರರು ಸಾರಿ, ಬ್ರಾಹ್ಮಣರು ಮಾತ್ರ ವೇದ ಮಂತ್ರದಿಂದ ಪೂಜಿಸಬಹುದು ಎಂಬ ವಿಧಿಯನ್ನು ತಪ್ಪಿಸಿ, ಜಾತಿ ತಾರತಮ್ಯವನ್ನು ತಡೆದು ಹಾಕಿದರು. ಕ್ರಿಯಾಸಾ ರದಲ್ಲಿ ಹೇಳಿದಂತೆ ಒಂದೊಂದು ಜಾತಿಗೆ ಒಂದೊಂದು ತರದ ಲಿಂಗವು, ವಿಧವೆ ಸಧವೆಯರುಗಳಿಗೆ ಬೇರೆ ಬೇರೆ ತರದ ಲಿಂಗಗಳು ಇರಬೇಕೆಂಬ ಪದ್ದತಿಯನ್ನು ತಪ್ಪಿಸಿ ಎಲ್ಲರೂ ಒಂದೇ ತರಹದ ಲಿಂಗವನ್ನು ಒಂದೇ ರೀತಿಯಲ್ಲಿ ಪೂಜಿಸುವ ಪದ್ಧತಿಯನ್ನು ಬಸವೇಶ್ವರ ರೂಢಿಗೆ ತಂದರು. ಕೆಲವೇ ಕೆಲವರಿಗೆ ಮಾತ್ರ ಮೋಕ್ಷ ಉಂಟೆಂಬ ಭಾವನೆ ಇದ್ದಿತು. ಆದುದರಿಂದ ಅವರು ಮಾತ್ರ ಕರದಲ್ಲಿ ಇಷ್ಟ ಲಿಂಗವನ್ನು ಪೂಜಿಸಿ ತಲೆಯಲ್ಲಿ ಧರಿಸಬಹುದಾಗಿದ್ದಿತು. ಸಂಸಾರಿಗಳು ಮೋಕ್ಷ ಪಡೆಯದಿರಲು ಕಾರಣವಿಲ್ಲದಾಗಿ ಎಲ್ಲರೂ ತಮ್ಮ ತಮ್ಮ ಇಷ್ಟಲಿಂಗಗಳನ್ನು ಕರದಲ್ಲಿ ಪೂಜಿಸಿ ಸದಾ ಧರಿಸಬಹುದು ಎಂಬುದು ನಿರ್ಧಾರವಾಯಿತು. ಸಂಸ್ಕೃತವೇ ಮಡಿಯ ಭಾಷೆ ಕನ್ನಡ ಮೈಲಿಗೆ ಎಂಬ ಅಭಿಪ್ರಾಯ ಹೋಯಿತು. ಒಟ್ಟಿನಲ್ಲಿ ಸ್ತ್ರೀ ಪುರುಷ ಬ್ರಾಹ್ಮಣ, ಶೂದ್ರ, ಅಂತ್ಯಜ ಮೊದಲಾದ ತಾರತಮ್ಯ ಭಾವನೆಗಳು ಹೋಗಿ ಭವದಲ್ಲಿ ತೊಳಲುವವನು ಭವಿ, ಗುರು ದೈವಭಕ್ತಿ ಉಳ್ಳವನು ಭಕ್ತ ಎಂಬುದರಿಂದ ಮೇಲು ಕೀಳು ಎಂಬುದು ನಿರ್ಧಾರವಾಗುವಂತಾಯ್ತು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ