ಕೂಗಿನ ಮಾರಿತಂದೆ
ಬಸವಾದಿ ಶರಣರು ಕೈಗೊಂಡ ಸಾಮಾಜಿಕ ಮತ್ತು ಭಕ್ತಿ ಚಳವಳಿಯು ಸಮಾಜದಲ್ಲಿ ಸಮಾನತೆಯನ್ನು ತರಲು ಹೋರಾಡಿತು. ಬಹಳಷ್ಟು ಶರಣರು ಸಮಾಜದ ಕೆಳವರ್ಗಕ್ಕೆ ಸೇರಿದವರಾಗಿದ್ದರು. ಬಸವಣ್ಣನವರು ಮಾಡಿದ ಒಂದು ಕಾರ್ಯವೆಂದರೆ ಕೆಳವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದಾಗಿತ್ತು. ಸಮಾನ ಗೌರವ ಎಲ್ಲರಿಗೂ ಸಿಗಬೇಕು ಎನ್ನುವ ಅವರ ನಿಲುವು ಸ್ಪಷ್ಟವಾಗಿತ್ತು. ಭಿನ್ನ-ಭಿನ್ನ ಕಾಯಕದ ಭಿನ್ನ ಮನಸ್ಸಿನ ವಿಭಿನ್ನ ವಿಚಾರಗಳು ಅನುಭವಗಳು ಒಂದೆಡೆ ಅಭಿವ್ಯಕ್ತಗೊಳ್ಳಲು ವಚನಗಳು ಸಹಾಯಕವಾದವು. ಹೀಗೆ ಪರಸ್ಪರರು ತಮ್ಮ ಅನುಭವದ ನೆಲೆಯಲ್ಲಿ ಚರ್ಚಿಸಿದ ವಿಷಯಗಳನ್ನು ವಚನಗಳ ಮೂಲಕ ಅಭಿವ್ಯಕ್ತಗೊಳಿಸಿದರು. ಶತಶತಮಾನಗಳಿಂದಲೂ ದಾಸ್ಯ ಭಾವವನ್ನು ಬೆಳೆಸಿಕೊಂಡಿದ್ದ ಜನತೆಗೆ ಬಸವಣ್ಣನವರು ಬೆಳಕಾದರು. ಬಸವ ಬೆಳಕಿನಲ್ಲಿ ಅವರೆಲ್ಲರೂ ಮಿಂಚಿದರು. ಅವರಲ್ಲಿ ಒಬ್ಬನಾದ ಕೂಗಿನ ಮಾರಿತಂದೆ ಎಂಬ ಹೆಸರಿನ ವಚನಕಾರ. ಈತನು 12ನೇ ಶತಮಾನದ ಬಸವಣ್ಣನ ಸಮಕಾಲೀನನೆಂದು ಹೇಳಲಾಗುತ್ತದೆ.
ಪರ್ವತೇಶನ “ಚತುರಾಚಾರ್ಯ ಪುರಾಣ” ದ ಪ್ರಕಾರ ಪ್ರಸಿದ್ಧ ಶಿವಾನುಭವಿಯಾಗಿದ್ದ ಈತನು ಕಲ್ಯಾಣದಲ್ಲಿ ನಡೆಯುವ ಶಿವಾನುಭವದ ಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದನು ಎಂದು ಹೇಳಲಾಗಿದೆ.
ಯಾವತ್ತೂ ಅನುಭವ ಮಂಟಪದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದನು. ಅಲ್ಲಿ ನಡೆಯುವ ಕಾರ್ಯಕ್ರಮದ ಕುರಿತಾಗಿ ಊರಿನ ಜನರಿಗೆ ತಿಳಿಸುವ ಕಾಯಕದಲ್ಲಿ ನಿರತನಾಗಿದ್ದು, ಕೂಗು ಹಾಕುವುದರ ಮೂಲಕ ಅನುಭವ ಮಂಟಪದ ಕಾರ್ಯಕಲಾಪಗಳನ್ನ ಕುರಿತು ಜನರಿಗೆ ತಿಳಿಸುತ್ತಿದ್ದನು. ಕಾರಣ ಅವನಿಗೆ ಕೂಗಿನ ಮಾರಿ ತಂದೆ ಎಂಬ ಹೆಸರು ಬಂದಿರಬಹುದು ಎಂಬುದು ವಿದ್ವಾಂಸರ ಅಭಿಪ್ರಾಯ.
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಅತ್ಯಂತ ಮಹತ್ವದ ಕಾಯಕವನ್ನು ಕೈಗೊಂಡಿದ್ದನು. ಕಲ್ಯಾಣದಲ್ಲಿ ಬಿಜ್ಜಳನ ಸೈನ್ಯ ಮತ್ತು ಶರಣರ ಮಧ್ಯೆ ಕದನ ನಡೆದ ಸಂದರ್ಭದಲ್ಲಿ ಶರಣರು ಪ್ರಾಣಭಯದಿಂದ ಬೇರೆ ಬೇರೆ ಕಡೆಗೆ ಹೋಗಿ ಅಡಗಿಕೊಂಡರು. ಆಗ ಮಾರಿತಂದೆ ಕೂಡ ಚೆನ್ನಬಸವಣ್ಣನ ನೇತೃತ್ವದಲ್ಲಿ ಅವರೊಂದಿಗೆ ಉಳವಿಯ ಕಡೆಗೆ ನಡೆದನು. ಬಿಜ್ಜಳನ ಸೈನ್ಯ ಶರಣರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದರು. ಅಂತಹ ಸಂದರ್ಭದಲ್ಲಿ ಎತ್ತರದ ಧ್ವನಿಯಲ್ಲಿ ಕೂಗಿ ಶರಣರನ್ನು ಎಚ್ಚರಿಸುತ್ತಿದ್ದನು.
ಶರಣರು ಉಳುವಿಗೆ ಹೋಗುವ ಮಾರ್ಗದಲ್ಲಿ ಮುರುಗೋಡು ಗ್ರಾಮದ ಮೂಲಕ ಹೊರಟ ಸಂದರ್ಭದಲ್ಲಿ ಬಿಜ್ಜಳನ ಸೈನ್ಯ ಹಾಗೂ ಶರಣರ ಮಧ್ಯೆ ಭೀಕರ ಕಾಳಗ ನಡೆದು ಎಷ್ಟೋ ಜನ ಶರಣರು ಸಾವನ್ನಪ್ಪುತ್ತಾರೆ. ಅವರಲ್ಲಿ ಕೂಗಿನ ಮಾರಿತಂದೆ ಕೂಡ ಲಿಂಗೈಕ್ಯನಾಗುತ್ತಾನೆ. ಮುರುಗೋಡು, ಶರಣರು ಭೀಕರ ಸಾವು ನೋವನ್ನು ಅನುಭವಿಸಿದ ಒಂದು ಐತಿಹಾಸಿಕ ಯುದ್ಧ ಭೂಮಿಯಾಗಿ ಗುರುತಿಸಲಾಗುತ್ತಿದೆ. ಕೂಗಿನ ಮಾರಿತಂದೆಯ ಸಮಾಧಿ ಕೂಡ ಮುರುಗೋಡಿನಲ್ಲಿದೆ ಎಂದು ಸಂಶೋಧಕರು ಗುರುತಿಸಿದ್ದಾರೆ.
ಕೂಗಿನ ಮಾರಿತಂದೆಯು ರಚಿಸಿದ ವಚನಗಳು 11 ಮಾತ್ರ. ಕಡಿಮೆ ಸಂಖ್ಯೆಯ ವಚನಗಳು ಇದ್ದರೂ ಕೂಡ ಅತ್ಯಂತ ಅರ್ಥಪೂರ್ಣವಾದ ವಿಚಾರಗಳನ್ನು ಒಳಗೊಂಡಂತ ವಚನಗಳು. ಈತನ ವಚನಗಳ ಅಂಕಿತ “ಮಹಾಮಹಿಮ ಮಾರೇಶ್ವರ “ . ಈತನ ಎಲ್ಲ ವಚನಗಳಲ್ಲಿ ಷಟಸ್ಥಲದ ವಿವರಣೆ , ನಿಜ ಭಕ್ತನ ಲಕ್ಷಣ, ಭಕ್ತಿಯ ಮಹಿಮೆ ಮುಂತಾದ ವಿಷಯಗಳನ್ನು ಅರಿಯಬಹುದು. ಇಂತಹ ಒಂದೆರಡು ವಚನಗಳ ವಿಶ್ಲೇಷಣೆಯನ್ನು ಇಲ್ಲಿ ವಿವರಿಸಲಾಗಿದೆ.
ವಚನ ವಿಶ್ಲೇಷಣೆ
ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೇ?
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೇ?
ಮೃತ್ತಿಕೆಯ ಹರುಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೇ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ ನಿಜ ತತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ :
ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜ ನಿವಾಸದಂತೆ
ಆಯದ ಘಾಯದಂತೆ ಸುಘಾಯದ ಸುಖದಂತೆ
ಇಂತೀ ಭಾವರಹಿತನಾದ ಭಾವಜ್ಞನ ತೇರ ಕೂಗಿಂಗೆ ಹೊರಗು ಮಹಾಮಹಿಮ ಮಾರೇಶ್ವರ.
ಹಿಮದ ಶಿಲೆಯನ್ನು ಉಳಿಯಿಂದ ಕೆತ್ತಿ ಮೂರ್ತಿಯನ್ನು ಮಾಡಲಾಗದು. ಕಾರಣ ಹಿಮ ಕರಗಿ ನೀರಾಗುವದು ಅರಗಿನ ಮಡಿಕೆಯ ಮೇಲೆ ಉರಿಯಿಂದ ಅಕ್ಷರವನ್ನು ಬರೆಯಲಾಗದು ಕಾರಣ ಅರಗು ಉರಿಗೆ ಕರಗಿ ಹೋಗುವುದು. ಮಣ್ಣಿನ ದೋಣಿಯಲ್ಲಿ ಕುಳಿತು ನದಿಯಲ್ಲಿ ಹೋಗಲಾಗದು. ಅದು ನೀರಿನಲ್ಲಿ ಮುಳುಗಿ ಹೋಗುವುದು. ಹಾಗೆ ದೇವನನ್ನು ಅರಿಯದವನು ದೇವನ ಕುರಿತಾಗಿ ಮಾತಾಡುವುದಾಗಲಿ ಬರೆಯುವುದಾಗಲಿ ಮಾಡಿದರೆ ಅದು ವ್ಯರ್ಥ. ಕಾರಣ ನಿಜ ತತ್ವವನ್ನು ಅರಿತವನಿಗೆ ಭಕ್ತನೆಂಬ ಕುರುಹು ಇರುತ್ತದೆ ಆ ಕುರುಹು ಭಕ್ತಿಗೆ ಆಧಾರವಾಗುತ್ತದೆ ಇದನ್ನು ಸ್ಪಷ್ಟಪಡಿಸಲು ಮತ್ತೊಂದು ದೃಷ್ಟಾಂತವನ್ನು ಕೊಟ್ಟು ಹೇಳುತ್ತಾನೆ ಮಾರಿತಂದೆ
ಶಿಲೆಯೊಳಗಿನ ಸೌಂದರ್ಯ ಕಲಾಕಾರನಿಗೆ ಮಾತ್ರ ಕಾಣಿಸುವಂತೆ, ಲಿಂಗಾಂಗ ಸಾಮರಸ್ಯ ಹೊಂದಿದ ಭಕ್ತನಿಗೆ ಮಾತ್ರ ದೇವನ ಇರುವು ಕಾಣಿಸುವುದು. ಲೌಕಿಕ ಆಲಯವನ್ನು ತೊರೆದು ಅಲೌಕಿಕ ನಿವಾಸದತ್ತ ಎಂದರೆ ಬಯಲು ಬ್ರಹ್ಮಾಂಡದತ್ತ ಮುಖ ಮಾಡುವುದು. ಬ್ರಹ್ಮಾಂಡ ಮತ್ತು ಪಿಂಡಾಂಡ ವಿಶ್ವಾತ್ಮನಲ್ಲಿ ಒಂದಾಗುವುದು. ಪ್ರಳಯವಾದಾಗ ಎಲ್ಲವೂ ನಾಶವಾಗಿ ಕೊನೆಗೆ ಉಳಿಯುವುದು ಬಯಲು ಮಾತ್ರ. ಇಂಥ ನಿರಾಕಾರ ಭಾವಜ್ಞನ ತೇರು ಕೂಗಿಂಗೆ ಹೊರಗು ಎಂದರೆ ಇದ್ದು ಇಲ್ಲದಂತಾಗುವ ಭಾವವನ್ನು ವಚನಕಾರ ಇಲ್ಲಿ ವ್ಯಕ್ತಪಡಿಸಿದ್ದಾನೆ .ಕುರುಹು ಎಂದರೆ ಲಿಂಗ, ಕರಗುವ ಭಾವ ಎಂದರೆ ಅಂಗ ಲಿಂಗ ಉಭಯವೊಂದಾಗಿ
ಸಾಮರಸ್ಯವನ್ನು ಸಾಧಿಸುವುದು ಎಂದರ್ಥ.
ಮತ್ತೊಂದು ವಚನವನ್ನು ನೋಡೋಣ
ಬಯಲೊಳಗಣ ರೂಪು ,ರೂಪಿನೊಳಗಣ ಬಯಲು ಉಭಯವ ವಿಚಾರಿಸಿ ನೋಡುವಲ್ಲಿ
ಕುಂಭದೊಳಗೆ ನೀರ ತುಂಬಿ ಸಿಂಧುವಿನೊಳಗೆ ಮುಳುಗಿಸಲಾಗಿ
ಅದರೊಳಗೂ ನೀರು, ಹೊರಗೂ ನೀರು
ಹೊರಗಣ ನೀರು ಒಳಗಾಯಿತ್ತು
ಒಳಗಣ ನೀರು ಹೊರಗಾಯಿತ್ತು
ಕುಂಭದೊಳಗಣ ನೀರು ಅಂಗಕ್ಕೋ ಒಳಗೋ ಹೊರಗೋ ಎಂಬುದು ತಿಳಿಯದು
ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿದ ಅಂಗ
ಅರಿವಿನ ಕುರುಹಿಂಗೆ ಒಳಗೋ ಹೊರಗೊ ಎಂಬುದ ವಿಚಾರಿಸಿ
ಕರ್ಪೂರದ ಹಾಗೊಲೆಯಲಿ ಮೃತ್ತಿಕೆಯ ಕುಂಭವನಿರಿಸಿ ಕಿಚ್ಚಹಾಕಿ ಓಗರವನಿಡಲಿಕ್ಕಾಗಿ
ಒಲೆ ಉರಿಯದ ಮುನ್ನವೇ ಓಗರ ಬೆಂದು
ಕರ್ಪೂರದ ಹಾಗೆ ಒಲೆಯೊಳಗೆ ಉಭಯ ಬಯಲಾಗಿ ಮಡಕೆ ಉಳಿಯುತ್ತದೇತಕ್ಕೆ?
ಘಟ ಉಳಿದು ಆತ್ಮ ಬಯಲಾಯಿತದೇತಕ್ಕೆ
ಉಭಯ ನಿರತವಾದಲ್ಲಿ
ಉರಿಯಿಂದ ಕರ್ಪೂರ ನಷ್ಟವಾದ
ಕರ್ಪೂರದಿಂದ ಉರಿಯು ನಷ್ಟವಾದಂತೆ
ಇಂತೀ ಉಭಯಸ್ಥಲದೊಳಗು
ಅಂಗಲಿಂಗ ಪ್ರಾಣ ಲಿಂಗ ಉಭಯವನೊಂದು ಮಾಡಿ ತಿಳಿದು
ನಿಜದಲ್ಲಿ ನಿಂತ ಲಿಂಗಾಂಗಿಗೆ ಕೂಗಿನ ಕುಲವಿಲ್ಲ ಮಹಾಮಹಿಮ ಮಾರೇಶ್ವರ
ಇಲ್ಲಿ ಬಯಲು ಮತ್ತು ರೂಪ ಪದಗಳ ಅವಿನಾಭಾವ ಸಂಬಂಧವನ್ನು ಹೇಳಲಾಗಿದೆ. ಬಯಲು ಎಂಬ ಪದ ನಿರಾಕಾರ ನಿಶೂನ್ಯ ಎಂಬುದನ್ನು ಸೂಚಿಸುತ್ತದೆ.ಇದನ್ನು ಸಾಕಾರ ರೂಪದಲ್ಲಿ ನೋಡುವುದಾದರೆ ವಿಶ್ವಾತ್ಮಕ ರೂಪದಲ್ಲಿ ಅಂದರೆ ಲಿಂಗದಲ್ಲಿ ಕಂಡು ಲಿಂಗಾಂಗ ಸಾಮರಸ್ಯವನ್ನು ಮಾಡಿಕೊಳ್ಳುವಲ್ಲಿ ಭಕ್ತನ ಲಕ್ಷಣವನ್ನು ಹೇಳಿದ್ದಾರೆ. ಬ್ರಹ್ಮಾಂಡ ಮತ್ತು ಪಿಂಡಾಂಡದ ಕಲ್ಪನೆಯನ್ನು ಸಾಕಾರ ಮತ್ತು ನಿರಾಕಾರ ರೂಪದಲ್ಲಿ ನೋಡಿದ್ದಾರೆ ಶರಣರು. ಕುಂಭದೊಳಗೆ ನೀರು ತುಂಬಿ ಅದನ್ನು ಸಾಗರದಲ್ಲಿ ಮುಳುಗಿಸಿದಾಗ ಸಾಗರದ ನೀರು ಕುಂಭದಲ್ಲೋ, ಕುಂಭದ ನೀರು ಸಾಗರದಲ್ಲೋ ಎನ್ನುವ ಯಾವ ವ್ಯತ್ಯಾಸ ಇಲ್ಲದಂತೆ ಕಾಣುತ್ತದೆ. ಹಾಗೆಯೇ ಅಂಗದ ಮೇಲಿನ ಲಿಂಗ, ಲಿಂಗವ ಧರಿಸಿದ ಅಂಗ ಇಲ್ಲೂ ಕೂಡ ಯಾವ ವ್ಯತ್ಯಾಸ ಇಲ್ಲ. ಅಂದರೆ ಲಿಂಗವೆಂಬುದು ಅಂಗದ ಮೇಲೆ ಅರಿವಿನ ಕುರುಹಾಗಿ ನಿಲ್ಲುತ್ತದೆ ಎಂಬ ಸಾಂಕೇತಿಕ ಅರ್ಥದಲ್ಲಿ ಹೇಳಿದ್ದಾರೆ.ಅಂತರಂಗ ಬಹಿರಂಗದಲ್ಲಿ ಒಂದೇ ನಿಲುವು. ಇದು ಆತ್ಮದ ಅಂತರಂಗ ಮತ್ತು ಬಹಿರಂಗದ ನಿದರ್ಶನ. ಅರಿವಿನ ಕುರುಹಾದ ಇಷ್ಟಲಿಂಗ, ಅಂತರಂಗ ಮತ್ತು ಬಹಿರಂಗದ ಸಮಷ್ಟಿ ಸಾಕ್ಷಿ ಭಾವ. ಇಷ್ಟಲಿಂಗ ಮತ್ತು ಪ್ರಾಣ ಲಿಂಗ ಎರಡನ್ನು ಒಂದು ಮಾಡಿ ತಿಳಿದ ಶರಣರಿಗೆ ಒಲಿವನು ಮಹಾಮಹಿಮನಾದ ಮಾಹೇಶ್ವರ.
ಪ್ರತಿಮಾತ್ಮಕ ಸಾಲುಗಳಲ್ಲಿ ಲಿಂಗಾಂಗ ಸಾಮರಸ್ಯವನ್ನು ಅತ್ಯಂತ ಸ್ವಾರಸ್ಯವಾಗಿ ಹೇಳಿದ್ದಾನೆ.
ಕರ್ಪೂರದ ಒಲೆಯಲ್ಲಿ ಮಣ್ಣಿನ ಮಡಿಕೆಯನಿರಿಸಿ ಕಿಚ್ಚು ಹಾಕಿ ಆಹಾರವನ್ನು ಬೇಯಿಸಲು ಇಟ್ಟಾಗ ಒಲೆ ಉರಿಯುವ ಮುನ್ನವೇ ಆಹಾರ ಬೆಂದು ಕರ್ಪೂರ ಹಾಗೂ ಬೆಂಕಿ ಉಭಯಗಳು ಒಂದಾಗಿ ಘಟ ಮಾತ್ರ ಉಳಿಯುತ್ತದೆ. ಎಂದರೆ ಇಲ್ಲಿ ಘಟ ಎಂದರೆ ದೇಹ. ದೇಹದಲ್ಲಿನ ಆತ್ಮ ಬಯಲಾಗಿ ಉರಿಯಿಂದ ಕರ್ಪೂರ ನಷ್ಟವಾದಂತೆ ಕರ್ಪೂರದಿಂದ ಉರಿ ನಷ್ಟವಾದಂತೆ ಎರಡು ಒಂದಾಗಿ ಎಂದರೆ ಅಂಗಲಿಂಗ ಪ್ರಾಣ ಲಿಂಗ ಎರಡು ಒಂದಾಗಿ ನಿಜವ ನರಿದಲ್ಲಿ ಅಂತಹ ಭಕ್ತನಿಗೆ ಉಭಯವೆಂಬುದಿಲ್ಲ. ಎಂದು ಕೂಗಿನ ಮಾರಿತಂದೆ ಹೇಳಿದ್ದಾರೆ.
ಹೀಗೆ ಕೂಗಿನ ಮಾರಿತಂದೆ ತಮ್ಮ ಎಲ್ಲ ವಚನಗಳಲ್ಲೂ ಆಧ್ಯಾತ್ಮಿಕ ಅನುಭಾವದ ನೆಲೆಯಲ್ಲಿ ಲಿಂಗಾಂಗ ಸಾಮರಸ್ಯದ ಮಹತ್ವವನ್ನು ಕುರಿತು ಹಾಗೂ ಆತ್ಮ ವಿಮರ್ಶೆಯ ಒಳನೋಟವನ್ನು ಕುರಿತು ಹೇಳಿದ್ದಾರೆ.
(ಚಿತ್ರ ಕೃಪೆ ; ಅಂತರ್ಜಾಲ)
ಡಾ.ಮೀನಾಕ್ಷಿ ಪಾಟೀಲ,ಉಪನ್ಯಾಸಕರು
ವಿಜಯಪುರ
ವಚನ ಅಧ್ಯಯನ ವೇದಿಕೆ
ಅಕ್ಕನ ಅರಿವು
ಬಸವಾದಿ ಶರಣರ ಚಿಂತನಕೂಟ