spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಅಲ್ಲಮಪ್ರಭುದೇವರು

ಹನ್ನೆರಡನೆಯ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಕ ಕ್ರಾಂತಿಯು ಮಹತ್ವಪೂರ್ಣವಾಗಿದ್ದು, ಅದರಲ್ಲಿ ಸಾವಿರಾರು ಶರಣರು ಸಮರ್ಪಣಭಾವದಿಂದ ಕಾರ್ಯ ಮಾಡಿದ್ದಾರೆ. ಅಂತಹ ಶರಣರಲ್ಲಿ ಅಲ್ಲಮಪ್ರಭು ದೇವರು ಅಗ್ರಗಣ್ಯರಾಗಿದ್ದಾರೆ. ಆದರೂ ಅಲ್ಲಮರ ಜೀವನದ ಬಗ್ಗೆ ಐತಿಹಾಸಿಕ ಮಾಹಿತಿಗಳು ಅಷ್ಟಾಗಿ ಲಭ್ಯವಿಲ್ಲ.

ಹರಿಹರನ “ಪ್ರಭುದೇವರ ರಗಳೆ”, ಚಾಮರಸನ “ಪ್ರಭುಲಿಂಗಲೀಲೆ”, ಏಳಂದೂರು ಹರೀಶ್ವರನ “ಪ್ರಭುದೇವರ ಪುರಾಣ”, ಪರ್ವತೇಶನ “ಪ್ರಭುದೇವರ ಸಾಂಗತ್ಯ” ಮುಂತಾದ ಕೃತಿಗಳಲ್ಲಿ ಅಲ್ಲಮರ ಜೀವನವೃತ್ತಾಂತ ನಿರೂಪಿತವಾಗಿದೆ. ಅಲ್ಲದೇ ಶೂನ್ಯಸಂಪಾದನೆ ಕೂಡ ಅವರ ವ್ಯಕ್ತಿತ್ವವನ್ನು ತಿಳಿದುಕೊಳ್ಳಲು ಬಹಳಷ್ಟು ನೆರವಾಗುತ್ತದೆ.ಜಗತ್ತಿನಲ್ಲಿಟಕದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಚಿಕ್ಕ ಹಳ್ಳಿಯಾಗಿ ಈಗ ಬೆಳೆದಿರುವ ಬಳ್ಳಿಗಾವೆ ಅಲ್ಲಮಪ್ರಭುಗಳ ಜನ್ಮಸ್ಥಳ. ರಮ್ಯವಾದ ಪ್ರಕೃತಿಸೌಂದರ್ಯವನ್ನು ಹೊಂದಿರುವ ಬಳ್ಳಿಗಾವೆ ಅಂದು “ಬನವಸೆ ಹನ್ನೆರಡು ಸಾಸಿರ”ದ ಒಂದು ದೊಡ್ಡ ಪಟ್ಟಣವಾಗಿತ್ತು. ಹಾಗೂ ಧಾರ್ಮಿಕ ಮತ್ತು ಶೈಕ್ಷಣಿಕ ಕೇಂದ್ರವೆಂದು ಪ್ರಸಿದ್ಧಿಯನ್ನೂ ಪಡೆದಿತ್ತು. ಇದೇ ಬಳ್ಳಿಗಾವಿಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರವಾಗಿತ್ತು.

- Advertisement -

ಹರಿಹರ ಕವಿಯು “ಅಲ್ಲಿರ್ಪ ನಾಗವಾಸಾಧಿಪತಿಯಪ್ಪ ಸಲ್ಲಿಲಿತ ನಾಯಕನ ಸತಿಯ ಬಸರೊಳ” ಎಂದು ಅಲ್ಲಮಪ್ರಭುಗಳ ಜನನದ ಬಗ್ಗೆ ಹೇಳಿರುವರು. ಆದರೆ ನಾಗವಾಸಾಧಿಪತಿಯ ಹೆಸರನ್ನಾಗಲಿ, ಅವನ ಮಡದಿಯ ಹೆಸರನ್ನಾಗಲೀ ಹೇಳಿರುವದಿಲ್ಲ. ಚಾಮರಸನು ಮಾತ್ರ ಅಲ್ಲಮರ ತಂದೆ-ತಾಯಿಯರು ನಿರಹಂಕಾರ-ಸುಜ್ಞಾನಿಯರೆಂದು ಹೇಳಿದ್ದಾನೆ. ಇವರಿಬ್ಬರಲ್ಲದೇ ಎಳಂದೂರು ಹರಿಹರೇಶ್ವರನೆಂಬ ಮತ್ತೊಬ್ಬ ಕವಿಯು ಅಲ್ಲಮರ ಬಗ್ಗೆ ಕಾವ್ಯರಚನೆ ಮಾಡಿದ್ದಾನೆ. ಈ ಮಹಾಕವಿಗಳಲ್ಲದೇ ಅಲ್ಲಮಪ್ರಭುಗಳ ಬಗ್ಗೆ ಪ್ರಾಸಂಗಿಕವಾಗಿ ಬರೆಯದ ಶರಣ ಸಾಹಿತ್ಯವೇ ಇಲ್ಲವೆನ್ನಬಹುದು.

ಇಪ್ಪತ್ತನೆಯ ಶತಮಾನದಲ್ಲಿ ಅಲ್ಲಮಪ್ರಭುವಿನ ಚಿತ್ರಣವನ್ನು ಪುನರೂಪಿಸುವಲ್ಲಿ ಎಚ್. ತಿಪ್ಪೇರುದ್ರಸ್ವಾಮಿಯವರು “ಪರಿಪೂರ್ಣದೆಡೆಗೆ” ಕಾದಂಬರಿಯ ಮೂಲಕ ಅನನ್ಯವಾಗಿ ಪ್ರಯತ್ನಿಸಿದ್ದಾರೆ. ಬಿ. ಪುಟ್ಟಸ್ವಾಮಯ್ಯನವರು ಅಲ್ಲಮಪ್ರಭುಗಳ ಬಗ್ಗೆ ಅದೇ ಹೆಸರಿನ ಆರು ಕಾದಂಬರಿಗಳಲ್ಲಿ ಹನ್ನೆರಡನೇ ಶತಮಾನದ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹೀಗೆ ಸಮಸ್ತಮುಖಗಳನ್ನೊಳಗೊಂಡ ಅಲ್ಲಮನನ್ನು ಅತ್ಯಂತ ವಿಶಿಷ್ಟ ವ್ಯಕ್ತಿಯಾಗಿ ಚಿತ್ರಿಸಿದ್ದಾರೆ. ಹೀಗೆ ಅನೇಕ ಮಹನೀಯರುಗಳಿಂದ ಪೂಜನೀತವಾದ ಅಲ್ಲಮ ಪ್ರಭುಗಳ ಜೀವನದ ವಿವರಗಳೂ ನಿಗೂಢವಾಗಿಯೇ ಇವೆ. ಅಲ್ಲಮರು ಗುರು ಅನಿಮಿಷದೇವ ಅವರಿಂದ ಲಿಂಗವನ್ನು ಪಡೆದುಕೊಂಡು, ಆ ಲಿಂಗದ ಅನುಸಂದಾನದ ಮೂಲಕ ತಮ್ಮ ನಿಜಸ್ವರೂಪವನ್ನು ಅರಿತು ಮಹಾನುಭಾವಿಗಳಾಗಿ, ಶಿವಯೋಗಿಗಳಾಗಿ ರೂಪುಗೊಳ್ಳುತ್ತಾರೆ. ದೀನದುರ್ಬಲರನ್ನು ಸಂತೈಸುವ, ಅಜ್ಞಾನಿಗಳನ್ನು ಎಚ್ಚರಿಸುವ, ಸಾಧಕರಿಗೆ ಮಾರ್ಗದರ್ಶನವನ್ನು ನೀಡುವ ಸಲುವಾಗಿ ಚರಲಿಂಗವಾಗಿ ಸಂಚರಿಸುತ್ತಾರೆ. ಗೊಗ್ಗಯ್ಯ, ಮುಕ್ತಾಯಕ್ಕ, ಸಿದ್ಧರಾಮ, ಗೋರಕ್ಷ ಮುಂತಾದವರು ಅಲ್ಲಮರಿಂದ ತಮ್ಮ ಗುರಿಯನ್ನು ಕಂಡುಕೊಂಡವರಲ್ಲಿ ಪ್ರಮುಖರು. ಸಿದ್ಧರಾಮರಂಥ ಕರ್ಮಯೋಗಿಯನ್ನು ಕಲ್ಯಾಣಕ್ಕೆ ಕರೆತಂದದು ಬಸವಣ್ಣನವರ ಕಾರ್ಯಕ್ಷೇತ್ರ ವ್ಯಾಪಕಗೊಳ್ಳಲು ಸಹಕಾರಿಯಾಗುತ್ತದೆ.

ಕಲ್ಯಾಣದಲ್ಲಿ ಅಲ್ಲಮರು ಮಾಡಿದ ಸಾಧನೆ ಅಪೂರ್ವ. ಶೂನ್ಯ ಸಿಂಹಾಸನದ ಅಧ್ಯಕ್ಷರಾಗಿ ಅನುಭವಮಂಟಪದ ಸಾಧಕರ ಮನೋಗತವನ್ನು ಅರಿತು ಅವರಿಗೆ ತಕ್ಕ ಮಾರ್ಗದರ್ಶನ ನೀಡಿದವರು ಅಲ್ಲಮ ಪ್ರಭುಗಳು. ಹೀಗೆ ಅನೇಕರ ಬಾಳಿಗೆ ಬೆಳಕನ್ನಿತ್ತ ಅಲ್ಲಮ ಪ್ರಭುಗಳು ಕಲ್ಯಾಣ ಕ್ರಾಂತಿಯ ನಂತರ ಎತ್ತ ಸಾಗಿದರು ಎಂಬುದು ನಿಚ್ಚಳವಾಗಿ ತಿಳಿಯದು. ಅವರು ಕಲ್ಯಾಣವನ್ನು ಬಿಟ್ಟು ಶ್ರೀಶೈಲಕ್ಕೆ ಸಾಗಿ ಅಲ್ಲಿಯ ನಿರ್ಜನವಾದ ಕದಳಿವನದಲ್ಲಿ ಐಕ್ಯರಾಗಿರಬಹುದು ಎಂಬುದೇ ವಿದ್ವಾಂಸರ ಅಭಿಪ್ರಾಯ.

- Advertisement -

ಅಲ್ಲಮ ಪ್ರಭುಗಳ ವಚನಚಂದ್ರಿಕೆಯಲ್ಲಿ ಸುಮಾರು ೧೨೯೪ ವಚನಗಳು ಇಲ್ಲಿಯವರೆಗೆ ಲಭ್ಯವಾಗಿವೆ. ಇವರ ವಚನಗಳು ಅನುಭಾವಿಕ ಪ್ರಪಂಚಕ್ಕೆ ದೊರೆತ ಅನರ್ಘ್ಯರತ್ನಗಳಂತಿವೆ. ಇವರ ವಚನಾಂಕಿತ ಯಾವ ಸ್ಥಾವರಲಿಂಗವನ್ನೂ ನಿರ್ದೇಶಿಸುವಂತಿಲ್ಲ. ಬದಲಾಗಿ ಅದು ಮಾನವನ ಹೃದಯದಲ್ಲಿ ಅಂತರ್ಯಾಮಿಯಾಗಿರುವ ಪರತತ್ವವನ್ನು ನಿರ್ದೇಶಿಸುವಂತಿರುವ “ಗುಹೇಶ್ವರ” ಎಂಬುದಾಗಿದೆ. ಶಬ್ದಕ್ಕೆ ನಿಲುಕದ ತಮ್ಮ ಆಧ್ಯಾತ್ಮಿಕ ಅನುಭವವನ್ನು ಅಭಿವ್ಯಕ್ತಿಸಲು ಶರಣರು ವಿನೂತನ ಶೈಲಿಯ ವಚನಗಳನ್ನು ಬಳಸಿದ್ದಾರೆ. ಅವೇ ಬೆಡಗಿನ ವಚನಗಳೆಂದು ಪ್ರಸಿದ್ಧಿಯಾಗಿವೆ. ಅಲ್ಲಮ ಪ್ರಭುಗಳು ರಚಿಸಿದಷ್ಟು ಬೆಡಗಿನ ವಚನಗಳನ್ನು ಬೇರೆ ಯಾರೂ ರಚಿಸಿದಂತಿಲ್ಲ. ಸಂಖ್ಯೆ ಮತ್ತು ಗುಣಮಟ್ಟದ ದೃಷ್ಠಿಯಿಂದಲೂ ಅಲ್ಲಮಪ್ರಭುಗಳ ವಚನಕ್ಕೆ ಮಹತ್ವವಿದ್ದು ಅವು ಜಿಜ್ಞಾಸುಗಳನ್ನು ಆಕರ್ಷಿಸಿವೆ. ಬೆಡಗಿನ ವಚನಗಳು ಕೇವಲ ಭೌದ್ಧಿಕ ಚಮತ್ಕಾರಗಳಾಗಿರದೇ ಆಧ್ಯಾತ್ಮಿಕ ಅನುಭಾವವನ್ನು ಗರ್ಭೀಕರಿಸಿಕೊಂಡ ಕಲಾತ್ಮಕ ಕಾವ್ಯಸೃಷ್ಟಿ ಗಳೆಂದು ಹೇಳಬಹುದು. ಅಲ್ಲಮಪ್ರಭುಗಳ ವಚನಗಳಲ್ಲಿ ಕಾವ್ಯಾಂಶವಿರುವದು ಬಹು ಸುಂದರವಾಗಿ ಸಹಜವಾಗಿ ಕಾಣಸಿಗುತ್ತವೆ. ಇದು ದರ್ಶನ, ಅನುಭಾವಗಳ ಸಂಹನೆಯ ಸಾಧನವಾಗಿದೆ. ಈ ಎಲ್ಲ ವಿಶಿಷ್ಟ ಗುಣಗಳಿಗೆ ಪೋಷಕವಾಗಿರುವ ಅಲ್ಲಮರ ಒಂದೆರಡು ವಚನಗಳನ್ನು ನಾವಿಲ್ಲಿ ನೋಡೋಣ.

ಅಗ್ನಿಗೆ ತಂಪುಂಟೆ? ವಿಷಕ್ಕೆ ರುಚಿಯುಂಟೆ ಹೇಳಾ?     ಕಂಗಳಿಗೆ ಮರೆಯುಂಟೆ ಹೇಳಾ ಲಿಂಗವೆ?
ದಾಳಿಕಾರಂಗೆ ಧರ್ಮವುಂಟೆ? ಕಂಗಳಿಗೆ ಕರುಳುಂಟೆ?
ಗುಹೇಶ್ವರಾ ನಿಮ್ಮ ಶರಣರು
ಮೂರುಲೋಕದರಿಯೆ ನಿಶ್ಚಟರಯ್ಯಾ

“ತಂಪು” ನೀರಿನ ಗುಣ. ಉಷ್ಣವಿರುವ ಅಗ್ನಿಯಲ್ಲಿ ಅದಕ್ಕೆ ಅವಕಾಶವಿಲ್ಲ. “ವಿಷ” ಅಂದರೆ ಕಹಿ. ಕಹಿ ಸರ್ವರಿಗೂ ಅಪ್ಯಾಯಮಾನವಾದ ಸಾಧು ಗುಣವಲ್ಲ. ವಸ್ತುಗಳನ್ನು ಆಸ್ವಾದಿಸುವ ಕಣ್ಣುಗಳಲ್ಲಿ ಕತ್ತಲೆ ಇಲ್ಲ. ನಿಷ್ಕರುಣೆಯಿಂದ ಹಿಂಸಾಕೃತ್ಯಗಳಲ್ಲಿ ತೊಡಗುವ ದಾಳಿಕೋರನಲ್ಲಿ ದಯಧರ್ಮಗಳಿಗೆ ಲವಲೇಶಮಾತ್ರವೂ ಅವಕಾಶವಿಲ್ಲ . ಕಣ್ಣು ರೂಪವನ್ನು ಗ್ರಹಿಸಲು ಬೇಕಾದ ಒಂದು ರಚನೆ. ಕರುಳು ಮನಸ್ಸಿನಲ್ಲಿ ಹೃದಯಾಂತರದಲ್ಲಿ ಗೋಚರಿಸುವ ಭಾವನೆಗಳು, ಯಾಂತ್ರಿಕವಾಗಿ ಕಾರ್ಯನಿರ್ವಹಿಸುವ ಕಣ್ಣುಗಳಲ್ಲಿ ಇರಲಾರವು. ಹಾಗೇ ಶರಣರಲ್ಲಿ ವಂಚನೆ, ಐಂದ್ರಿಕ ಚಾಪಲ್ಯ, ಹಾಗೂ ವಿಷಯಾಸಕ್ತಿ ಎಂಬ ಮೂರು ದುರ್ಗುಣಗಳು ಇರವು. ಆದ್ದರಿಂದ ಶರಣರು ಮಹಿಮಾತೀತರು, ಶರಣರು ನಿರ್ವ್ಯಸನಿಗಳು, ಚಟವಿಲ್ಲದವರು, ನಿರ್ವಿಷಯಿಗಳು, ಅವರು ಸಂಯಮಿಗಳು, ಸತ್ಯನಿಷ್ಠರು ಹಾಗೂ ದಯಾವಂತರು. ಈ ಮಾತು ಸ್ವರ್ಗಲೋಕ, ಭೂಲೋಕ ಮತ್ತು ಪಾತಾಳ ಲೋಕ ಎಂಬ ಮೂರುಲೋಕದವರಿಗೂ ಗೊತ್ತು. ಅಂದರೆ ಸರ್ವಸಮ್ಮತ ಎಂದು ಶರಣರ ಮಹಿಮೆಯನ್ನು ಕೊಂಡಾಡಿದ್ದಾರೆ.

ನಾನು ಘನ ತಾನು ಘನವೆಂಬ ಹಿರಿಯರುಂಟೆ ಜಗದೊಳಗೆ?ಹಿರಿಯರ ಹಿರಿತನದಿಂದೇನಾಯಿತ್ತು?           ಹಿರಿದು ಕಿರಿದೆಂಬ ಶಬ್ದವಡಗಿದಡೆ                               ಆತನೆ ಶರಣ ಗುಹೇಶ್ವರಾ

ಜಗತ್ತಿನಲ್ಲಿ ಸಾಮಾನ್ಯ ಜನರು ಆತ್ಮಶ್ಲಾಘಿಗಳು. ಯಾವಾಗಲೂ ತಾವು ಎಲ್ಲ ರೀತಿಯಿಂದ ಶ್ರೇಷ್ಠರು ಎಂದು ಹೇಳಿಕೊಳ್ಳುವದರಲ್ಲೇ ಅವರಿಗೆ ಸಂತಸ, ತೃಪ್ತಿ. ಅಂತಹವರು ವಯಸ್ಸಿನಲ್ಲಿ ದೊಡ್ಡವರಿದ್ದರೂ ಅವರಿಂದ ಜಗತ್ತಿಗೆ ಯಾವ ರೀತಿಯ ಲಾಭವೂ ಇಲ್ಲ. ಆದರೆ ಅನುಭವ ಮಂಟಪದಲ್ಲಿಯ ಅನುಭಾವಿ ಶರಣನೂ ಹಿರಿಯನೇ. ಅವನು ತಾನೇ ಶ್ರೇಷ್ಠ, ತಾನೇ ಹಿರಿಯ ಎಂಬ ಗುಂಪಿಗೆ ಸೇರಿದವನಲ್ಲ. ಶಿವಯೋಗದ ಅತ್ಯುನ್ನತ ಎತ್ತರಕ್ಕೇರಿ ಸ್ವ-ಪರ ಎಂಬ ಭಿನ್ನಪ್ರಜ್ಞೆಯನ್ನು ತೊರೆದು, ಅಖಂಡ ಶಿವಪ್ರಜ್ಞೆ, ಪಡೆದ ಹಿರಿಯ. ಇಂಥ ಶರಣರ ನಡೆ, ನುಡಿ, ಬದುಕು, ಎಲ್ಲವೂ ಬದುಕಿನಲ್ಲಿ ಬಳಲಿದವರಿಗೆ ತಂಪನ್ನೀಯುತ್ತವೆ, ಸಮಾಧಾನವನ್ನು ಕೊಡುತ್ತವೆ. ಇಂಥ ಶರಣರ ಜೀವನ ಸಮಾಜಕ್ಕೆ ಉಪಯೋಗಕರವಾಗಿರುತ್ತದೆ.

ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು,
ಬಯಲು ಬಯಲಾಗಿ ಬಯಲಾಯಿತ್ತಯ್ಯ,
ಬಯಲ ಜೀವನ, ಬಯಲ ಭಾವನೆ,
ಬಯಲು ಬಯಲಾಗಿ ಬಯಲಾಯಿತ್ತಯ್ಯ
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು
*ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ!

ಪರವಸ್ತು-ಅದು ಬಟ್ಟಬಯಲು. ಅಲ್ಲಿ ಕಾಲದೇಶಗಳಿಲ್ಲ. ಗುಣ-ಕ್ರಿಯೆಗಳಲ್ಲ. ಅದು ಆದಿ-ಮಧ್ಯ- ಅಂತ್ಯದ ಶೂನ್ಯ. ಈ ವಿಶ್ವಕ್ಕೆ ಕಾರಣವಾದ ಮಹಾಲಿಂಗ ಕಂಡುಬಂದುದು ಆ ಬಯಲಿನಿಂದಲೇ. ಕಾರ್ಯ-ಕಾರಣರೂಪವಾದ ಎಲ್ಲವೂ ಬಯಲಾಗುವುದು ಅಲ್ಲಿಯೇ. ಅದು ಘನ ಶಾಂತಿಯ ಅನಂತ ಇರವು. ಗುರುವು ಶಿಷ್ಯನಿಗೆ ಇಂತಹ ಬಯಲು ಬೀಜವನ್ನು ಬಿತ್ತುತ್ತಾನೆ. ಬಯಲ ಬೆಳೆಯ ಬೆಳೆದು ಬಯಲಾಗುವ ಕಲೆಯ ಅರುಹುತ್ತಾನೆ. ಶಿಷ್ಯನೂ ಸಮರ್ಥನಾಗಿ ಆ ಜ್ಞಾನವನ್ನು ಪೋಷಿಸುತ್ತಾನೆ. ಶ್ರದ್ಧೆ, ಭಕ್ತಿ, ನಿಷ್ಠೆಗಳಿಂದ ಬಗೆಬಗೆಯ ಭಕ್ತಿಗಳಿಂದ ಪೂಜಿಸುತ್ತಾನೆ. ಆ ಬಯಲು ಜ್ಞಾನ ಬೆಳೆದು, ವಿಶ್ವವನ್ನೆಲ್ಲಾ ವ್ಯಾಪಿಸುತ್ತದೆ. “ಬಟ್ಟಬಯಲೇ ನಾನು” ಎಂಬ ಮಹಾಪ್ರಜ್ಞಾಫಲವನ್ನು ದಯಪಾಲಿಸುತ್ತದೆ. ಅದನ್ನು ಸವಿದ ಶರಣ ಬಯಲಲ್ಲಿ ಬೆರೆತು ಬಯಲಾಗುತ್ತಾನೆ. ಅದು ಅವನ ನಿರ್ಬಯಲ ನಿಲುವು.

ಮೇರುವ ಸಾರಿದ ಕಾಗೆ ಹೊಂಬಣ್ಣವಾಗದಿದ್ದಡೆ
ಆ ಮೇರುವಿನಿಂದತ್ತಣ ಹುಲು ಮೊರಡಿಯೆ ಸಾಲದೇ?
ದೇವಾ, ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿಯೆ ಸಾಲದೆ?
ಗುಹೇಶ್ವರಾ, ನಿಮ್ಮ ಪೂಜಿಸಿ ಪಾವಡೆ
ನಿಮ್ಮಿಂದ ಹೊರಗಣ ಜವನೆ ಸಾಲದೆ?

ಸಾವಿರಗಾವುದ ಹಾರಿ ಮೇರುಗಿರಿಯ ಬಳಿ ಸಾರಿದ ಕಾಗೆ ಆ ಗಿರಿಯ ಪರಿಸರದಲ್ಲಿ ಹೊಂಬಣ್ಣವಾಗಬೇಕು. ಹಾಗೊಂದು ವೇಳೆ ಆಗದೇ ಇದ್ದರೆ ಅಷ್ಟು ದೂರದ ಬೆಟ್ಟಕ್ಕೆ ಹಾರಿ ಪ್ರಯೋಜನವೇನು? ಆ ಮೇರುಗಿರಿ (ಎತ್ತರದ ಪರ್ವತ) ಕ್ಕಿಂತ ಹುಲುಮೊರಡಿ (ಚಿಕ್ಕಬೆಟ್ಟವೇ) ಲೇಸಲ್ಲವೇ? ಅದೇ ರೀತಿ ಲಿಂಗದೇವನನ್ನು ಮನಸಾರೆ ಪೂಜಿಸಿದ ಬಳಿಕ ಪೂಜಕನಾದ ಶಿಷ್ಯ ಸಾವನ್ನು ಗೆಲ್ಲಬೇಕು. ಅಮರತ್ವವನ್ನು ಹೊಂದಬೇಕು. ಹಾಗಾಗದಿದ್ದರೆ ಎಷ್ಟು ಪೂಜಿಸಿದರೇನು ಫಲ? ಮಾಡಿಯೂ ಮರಣವನ್ನು ಗೆಲ್ಲಲಾಗದಿದ್ದರೆ, ಮಾಡದೇ ಸಹಜವಾಗಿ ಜೀವಿಸುವ ಮೊದಲಿನ ಬದುಕೇ ಲೇಸಲ್ಲವೇ? ಆದ್ದರಿಂದ ಅಲ್ಲಮಪ್ರಭುದೇವರು ಹೇಳುತ್ತಾರೆ, “ಗುಹೇಶ್ವರಾ ನಿಮ್ಮನ್ನು ಪೂಜಿಸಿದರೂ ಸಾವು ತಪ್ಪದೇ ಇದ್ದರೆ ನಿಮ್ಮಿಂದಿತರವಾದ ಮೃರ್ತ್ಯಲೋಕದ ಬದುಕೇ ಒಳ್ಳೆಯದಲ್ಲವೇ ಎಂದು.ಶ್ರದ್ಧೆ ಘನವಾಗಿ ದೇವನನ್ನು ಅರ್ಚಿಸಿದರೆ ನಿಶ್ಚಿತವಾಗಿಯೂ ಅಮರತ್ವ ಸಿಗುತ್ತದೆ ಎಂಬ ಭಾವ ಈ ವಚನದಲ್ಲಿದೆ. ಬಸವಣ್ಣನವರ “ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ” ಎಂಬ ಮಾತು ಅಲ್ಲಮರ ಭಾವವನ್ನು ಪುಷ್ಠೀಕರಿಸುತ್ತದೆ.

ಚಿತ್ರಕೃಪೆ : ಅಂತರ್ಜಾಲ

ಡಾ.ಸರಸ್ವತಿ ಪಾಟೀಲ, ವಿಜಯಪುರ.                         ವಚನ ಅಧ್ಯಯನ ವೇದಿಕೆ                                       ಅಕ್ಕನ ಅರಿವು ಬಸವಾದಿ ಶರಣರ ಚಿಂತನ ಕೂಟ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group