spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಪ್ರಸಾದಿಯ ಶರಣ ಬಿಬ್ಬಿ ಬಾಚರಸರು
________________________
ವಚನಕಾರರೆಂದರೆ ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಸಿದ್ದರಾಮ, ಅಲ್ಲಮಪ್ರಭು ಎಂದು ತಿಳಿದಿದ್ದವರಿಗೆ ನೂರಾರು ಅಜ್ಞಾತ ವಚನಕಾರಿರುವ ಸಂಗತಿ ನಿಜಕ್ಕೂ ಅಚ್ಚರಿ ತಂದೀತು. ಇಂದಿಗೂ ಅಪ್ರಕಟಿತ ವಚನಗಳು, ವಚನಕಾರರು ಬೆಳಕಿಗೆ ಬರುತ್ತಲೇ ಇದ್ದಾರೆ. ಇಂತಹ ಅಜ್ಞಾತ ವಚನಕಾರರಲ್ಲಿ ಬಿಬ್ಬಿ ಬಾಚಯ್ಯನವರು ಪ್ರಮುಖರು.

ಏಣಾಂಕಧರ ಸೋಮೇಶ್ವರ ಎಂಬ ಅಂಕಿತದಲ್ಲಿ ಅವರ 102 ವಚನಗಳು ಪ್ರಕಟವಾಗಿವೆ. ಸುಮಾರು 23 ವಚನಗಳು ಬೆಡಗಿನ ವಚನಗಳಾಗಿವೆ. ಉಳಿದ ವಚನಗಳು ಗಾತ್ರದಲ್ಲಿ ಚಿಕ್ಕದಾಗಿದ್ದು ಅಭಿವ್ಯಕ್ತಿಯಲ್ಲಿ ಸರಳವಾಗಿ ಕಂಡರೂ ಅರ್ಥವಂತಿಕೆ ಮತ್ತು ಪರಿಣಾಮಕಾರಿಯಾಗಿವೆ.

ಆಧಾರಗಳು
1150 ರ ಕಾಲಘಟ್ಟದ ಬಾಚಯ್ಯಯವರ ಬಗ್ಗೆ ತಿಳಿಯಲು ಸಮಕಾಲೀನ ಸಾಹಿತ್ಯ ಗ್ರಂಥಗಳು ಪ್ರಮುಖ ಆಕರಗಳಾಗಿವೆ. ಅವುಗಳಲ್ಲಿ 1190 ರಲ್ಲಿ ರಚಿತವಾಗಿರುವ ಪಾಲ್ಕುರಿಕೆ ಸೋಮನಾಥ ಕವಿಯ ತೆಲುಗು ಬಸವ ಪುರಾಣದಲ್ಲಿ ಮತ್ತು ಭೀಮಕವಿಯ ಬಸವ ಪುರಾಣದಲ್ಲಿ ಬಿಬ್ಬಿ ಬಾಚಯ್ಯನವರ ಕಥೆಯ ಉಲ್ಲೇಖ ಕಂಡುಬರುತ್ತದೆ. 1460 ರಲ್ಲಿ ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿ ಕೃತಿಯಲ್ಲಿ “ಗೊಬ್ಬೂರಿನೊಳು ಬಿಬ್ಬಿ ಬಾಚಯ್ಯನೆಂಬ ಭಕ್ತ ಪ್ರಸಾದಮಂ ಕೈಗೊಳ್ಳಲು” ಎಂಬ ವರ್ಣನೆ ಇದೆ. 1530ರಲ್ಲಿ ಗುಬ್ಬಿ ಮಲ್ಲಣಾರ್ಯರ ವೀರಶೈವಾಮೃತ ಪುರಾಣದಲ್ಲಿ ಮತ್ತು 1550 ನಂಜುಂಡ ಕವಿಯ ಭೈರವೇಶ್ವರ ಕಾವ್ಯದಲ್ಲಿ ಬಿಬ್ಬಿ ಬಾಚಯ್ಯನವರ ಬಗ್ಗೆ ಉಲ್ಲೇಖಗಳು ಕಂಡುಬರುತ್ತವೆ. 1600 ರಲ್ಲಿ ರಚಿತವಾದ ಬಸವೇಶ್ವರ ಪುರಾಣದಲ್ಲಿಯೂ ಬಾಚಯ್ಯನವರ ಮಾಹಿತಿ ಲಭ್ಯವಾಗುತ್ತದೆ.

- Advertisement -

ಬಿಬ್ಬಿ ಬಾಚಯ್ಯನವರು ಗೊಬ್ಬೂರಿನ ಆದಿತ್ಯ ದೇವನೆಂಬ ವಿಪ್ರರ ಮಗ. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಮುಂದೆ ಬಸವಾದಿ ಶರಣರ ಪ್ರಭಾವದಿಂದ ಲಿಂಗಾಯತನದನು. ಇವರು ಶರಣನಾದ ಸಂಗತಿ ಅಮರ ಗಣಾಧೀಶ್ವರ ಚರಿತ್ರೆಯಲ್ಲಿ ತಿಳಿಯುತ್ತದೆ. ಇವರ ಕಾಲ  1150 ಎಂದು ತಿಳಿದುಬರುತ್ತದೆ. ಇನ್ನು ಬಾಚಯ್ಯನ ಹೆಸರಿಗೆ ಅಂಟಿಕೊಂಡಿರುವ ಬಿಬ್ಬಿ ಪದವು ಏನನ್ನು ಸೂಚಿಸುತ್ತದೆ ಎಂಬ ಜಿಜ್ಞಾಸೆ ವಿದ್ವಾಂಸರಲ್ಲಿ ಮೂಡಿದೆ ಬಹುಶಃ ಅದು ಭಾಚಯ್ಯನ ವೀರ ಗುಣವನ್ನು ಹೇಳುತ್ತಿರಬೇಕು.

ಮೂಲತಃ ಕಲ್ಬುರ್ಗಿ ಜಿಲ್ಲೆಯ ಗೊಬ್ಬೂರು ಎಂದು ಗುರುತಿಸಲಾಗಿದೆ ಫ.ಗು ಹಳಕಟ್ಟಿಯವರು ಇಂದಿನ ಗುಲ್ಬರ್ಗ ಜಿಲ್ಲೆಯ ಗೊಬ್ಬೂರು ಬಾಚಯ್ಯನವರ ಸ್ಥಳವೆಂದು ಗುರುತಿಸಿದ್ದರು. ಆದರೆ ಗೊಬ್ಬೂರಿನಲ್ಲಿ ಬಾಚಯ್ಯನ ಯಾವ ಅವಶೇಷಗಳು ಕಾಣುವುದಿಲ್ಲ. ಈಚೆಗೆ ನಡೆದ ಸಂಶೋಧನೆಗಳ ಆಧಾರದ ಮೇಲೆ ಡಾ. ಬಸವಲಿಂಗ ಸೊಪ್ಪಿಮಠರು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೊಬ್ಬೂರು ಗ್ರಾಮವೇ ಬಿಬ್ಬಿಬಾಚಯ್ಯನವರ ಕಾಲವೆಂದು ಆಧಾರ ಸಹಿತ ಖಚಿತಪಡಿಸಿದ್ದಾರೆ. ಗೊಬ್ಬೂರಿಗೆ ಹತ್ತಿರದಲ್ಲಿ ಬಾಚಯ್ಯನವರ ದಾಸೋಹ ಮಾಡುತ್ತಿದ್ದರೆಂದು ಹೇಳುವ ಅರ್ಪಣಾ ಕಟ್ಟೆ ಇದೆ. ಮುಂದೆ ಇಲ್ಲಿಯೇ ಆತನ ಸಮಾಧಿ ಮಾಡಿದ್ದಾರೆಂದು ಗೊಬ್ಬೂರು ಸ್ಥಳ ಪುರಾಣ ಹೇಳುತ್ತದೆ. ಈ ಅರ್ಪಣಾ ಕಟ್ಟೆಗೆ ಈಗಲೂ ನಿತ್ಯ ಪೂಜೆ ನಡೆಯುತ್ತದೆ. ಅರ್ಪಣಾ ಕಟ್ಟೆ ಇರುವ ಹೊಲದ ಬಗ್ಗೆ ಗೊಬ್ಬೂರಿನ ಜನರಿಗೆ ತುಂಬಾ ಗೌರವವಿದೆ.

ಬಾಚಯ್ಯಯನವರು ತನ್ನ ಬದುಕಿನ ಬಹು ಭಾಗವನ್ನು ಕಲ್ಯಾಣದಲ್ಲಿ ಕಳೆದು ಮುಂದೆ ಕಲ್ಯಾಣ ಕ್ರಾಂತಿಯಾದ ಮೇಲೆ ಗೊಬ್ಬೂರಿಗೆ ಬಂದು ನೆಲೆಸಿದರು. ಈ ಹಿಂದೆಯೇ ಗೊಬ್ಬೂರಿನಲ್ಲಿ ಪ್ರಸಾದದ ಮಹಿಮೆಯನ್ನು ಮೆರೆದಿದ್ದರಿಂದ ಊರಿನ ಜನರು ತುಂಬಾ ಗೌರವದಿಂದ ಬಾಚಯ್ಯನವರನ್ನು ಕಂಡಿರಬೇಕು. ಮತ್ತೊಂದು ಕಥೆ ಪ್ರಚಲಿತವಿರುವಂತೆ ಬಿಬ್ಬಿ ಬಾಚಯ್ಯ ಕಲ್ಯಾಣದಿಂದ ಬರುವಾಗ ಚನ್ನವೀರ ಹೆಸರಿನ ಶರಣನನ್ನು ಮತ್ತು ಆತನ ಶಿಷ್ಯರನ್ನು ಗೊಬ್ಬೂರಿಗೆ ಕರೆದುಕೊಂಡು ಬಂದನಂತೆ. ಬಾಚಯ್ಯನು ಗೊಬ್ಬೂರಿನ ಬೆಟ್ಟದಲ್ಲಿ ವಾಸಿಸುತ್ತಿದ್ದನು. ಮುಂದೆ ಚನ್ನವೀರನು ದೇವಸೂಗೂರಿನಲ್ಲಿ ವೀರಭದ್ರ ಹೆಸರಿನಿಂದ ಪ್ರಸಿದ್ಧಿ ಪಡೆದವನೆಂದು ಸ್ಥಳ ಪುರಾಣ ಹೇಳುತ್ತದೆ. ಚೆನ್ನವೀರ ಶರಣ ಮತ್ತು ಬಾಚಯ್ಯ ಇಬ್ಬರು ಕೂಡಿ ಅರ್ಪಣಾ ಕಟ್ಟೆಯಲ್ಲಿ ಜಂಗಮದಾಸೋಹ ನಡೆಸುತ್ತಿದ್ದ ವಿಷಯ ಪ್ರಸ್ತಾಪವಾದರೂ ಸ್ಥಳ ಪುರಾಣದ ಮಾತನ್ನು ಒಪ್ಪುವುದು ಕಷ್ಟ. ಒಟ್ಟಿನಲ್ಲಿ ಬಾಚಯ್ಯನನ್ನು ಇಂದಿನ ರಾಯಚೂರು ಜಿಲ್ಲೆಯ ಗೊಬ್ಬೂರು ಗ್ರಾಮದವನು. ಈ ಗೊಬ್ಬೂರು 12ನೇ ಶತಮಾನದಲ್ಲಿ ಪ್ರಸಿದ್ಧ ಅಗ್ರಹಾರವಾಗಿತ್ತು. ಇಲ್ಲಿ ನೂರಾರು ಸಂಖ್ಯೆಯ ಬ್ರಾಹ್ಮಣರು ಯಜ್ಞ ಯಾಗಗಳಲ್ಲಿ ನಿರತರಾಗಿದ್ದು ಇದನ್ನು ಶಾಸನಗಳು ಬಣ್ಣಿಸಿವೆ. ಬಸವಾದಿ ಶರಣರ ಪರಿಸರದಲ್ಲಿ ತನ್ನ ಪ್ರಸಾದ ನಿಷ್ಠೆ, ವೀರಭಕ್ತಿಗಳಿಂದ ಬಾಚಯ್ಯನು ತುಂಬಾ ಗೌರವ ಪಡೆದಿದ್ದನು.

- Advertisement -

ವಚನಕಾರರು ಅನುಭಾವಿಗಳು ಆದ ಬಾಚಯ್ಯನವರು ತಮ್ಮ ವಿಶೇಷ ವ್ಯಕ್ತಿತ್ವದಿಂದ ಪ್ರಸಾದಿ ಎಂದು ಹೆಸರು ಪಡೆದಿದ್ದರು. ಬಸವಣ್ಣನವರ ಶರಣ ತತ್ವಗಳಿಂದ ಆಕರ್ಷಿತರಾದ ಬಾಚಯ್ಯನವರು ಪ್ರಸಾದವೇ ಭವರೋಗಕ್ಕೆ ಮದ್ದೆಂದು ನಂಬಿದವರು. ಅವರ ಬಯಕೆ ಭಕ್ತರ ಮನೆಯಲ್ಲಿ ನಡೆಯುವ ಗಣಪರ್ವಗಳಿಗೆ ಹೋಗಿ ಅಲ್ಲಿ ಮಿಕ್ಕ ಪ್ರಸಾದವನ್ನು ಬಂಡಿಗಳಲ್ಲಿ ಹೇರಿಕೊಂಡು ಬಂದು ಪ್ರಸಾದವನ್ನು ಹಂಚಿ ತಾವು ಸ್ವೀಕರಿಸುವುದು. ಶಿವಭಕ್ತರಿಗೆ ಈ ಪ್ರಸಾದ ಅಮೃತ ಸದೃಶ. ಇವರು ವಿರೋಧಿಗಳಿಗೆ ಪ್ರಸಾದ ಮಹಿಮೆಯನ್ನು ತಮ್ಮ ಪವಾಡಗಳ ಮೂಲಕ ತಿಳಿಯಪಡಿಸುತ್ತಾರೆ ಎಂದು ಪುರಾಣಗಳಲ್ಲಿ ವೀರಶೈವ ಕಾವ್ಯಗಳಲ್ಲಿ ಉಲ್ಲೇಖಿತವಾಗಿದೆ. ಒಂದು ಪವಾಡವನ್ನು ತಿಳಿಯುವುದಾದರೆ ಒಂದು ದಿನ ಬಂಡಿಯಲ್ಲಿ ಶರಣರ ಪ್ರಸಾದ ತೆಗೆದುಕೊಂಡು ಬರುತ್ತಿದ್ದಾಗ ಬ್ರಾಹ್ಮಣರು ಅದನ್ನು ಎಂಜಲು ಎಂದು ನಿಂದಿಸಿದರು. ಇದರಿಂದ ಕೋಪಗೊಂಡ ಬಾಚಯ್ಯನು ಶರಣರ ಪ್ರಸಾದವನ್ನು ಅವರ ಮನೆಗಳ ಮೇಲೆ ತೂರಿದನು. ಆಗ ಬೆಂಕಿ ಹತ್ತಿಕೊಂಡು ಮನೆಗಳೆಲ್ಲ ಉರಿಯ ತೊಡಗಿದವು. ಮುಂದೆ ವಿಪ್ರರು ತಮ್ಮ ತಪ್ಪನ್ನು ಅರಿತು ಬಾಚಯ್ಯನಲ್ಲಿ ಕ್ಷಮೆ ಕೋರಿದಾಗ ಅವರ ಮನೆಗಳೆಲ್ಲ ಮೊದಲಿನಂತೆ ಮಾಡಿದನು. ಕಾವ್ಯಗಳು ಈ ಪವಾಡಗಳನ್ನು ಕಟ್ಟಿಕೊಡುತ್ತವೆ.

ಇವರ ಕಾಯಕ ನಿಷ್ಠೆ, ಮಾಹೇಶ್ವರ ನಿಷ್ಠೆ ಅನುಪಮವಾದದ್ದು. ವಿಶೇಷವಾಗಿ ಬಾಚಯ್ಯನವರು ಶ್ರೇಷ್ಠ ಶರಣರೆಂಬುದನ್ನು ಚೆನ್ನಬಸವಣ್ಣನವರ ವಚನಗಳಿಂದ ತಿಳಿಯುತ್ತದೆ. ಲಿಂಗಪ್ರಸಾದಿ ಪ್ರಭುದೇವರು,
ಜಂಗಮಪ್ರಸಾದಿ ಬಸವಣ್ಣ
ಪ್ರಸಾದ ಪ್ರಸಾದಿ ಬಿಬ್ಬಿ ಬಾಚಯ್ಯ
ಮಿಕ್ಕಿನ ಪ್ರಸಾದಿಗಳೆಲ್ಲರೂ ಅಪ್ಯಾಯನ ಪ್ರಸಾದಿಗಳು ಎಂದಿದ್ದಾರೆ.
ಪ್ರಸಾದಿ ಸ್ಥಳದಲ್ಲಿ ಮೇಲುಗೈ ಪಡೆದಿದ್ದವರು ಬಿಬ್ಬಿ ಬಾಚಯ್ಯ. ಅವರ ಒಂದೆರಡು ವಚನಗಳ ಮೂಲಕ ಅವರ ಅಂತರಂಗ ತಿಳಿಯೋಣ.

ಹುತ್ತದೊಳಗಣ ಹಾವ, ಮಡುವಿನೊಳಗಣ ಮತ್ಸ್ಯವ,
ಮಹಾಕಾನನದ
ವಾನರವ, ಹಿಡಿವ ಪರಿಯಿನ್ನೆಂತೋ?
ಹುತ್ತವನಗೆದು, ಮಡುವ ಹೂಳಿ
ಕಾನನವ ತರಿದು ಇಂತಿವ ಹಿಡಿಯಬೇಕು
ಸಕಲೇಂದ್ರಿಯದೊಳಗಿರ್ದು ವಸ್ತುವನರಿದೆನೆಂಬ ಮಿಟ್ಟೆಯ ಭಂಡರನೊಪ್ನ ಏಣಾಂಕಧರ ಸೋಮೇಶ್ವರ ಲಿಂಗ

ಹುತ್ತದೊಳಗೆ ಹೊಕ್ಕ ಹಾವನ್ನಾಗಲಿ, ಮಡುವಿನೊಳಗೆ ಸೇರಿದ ಮತ್ಸ್ಯವನ್ನಾಗಲಿ, ಕಾನನದೊಳಗಿರುವ ವಾನರವನ್ನಾಗಲಿ, ಹಿಡಿಯುವುದು ಸುಲಭವಲ್ಲ. ಹುತ್ತವನ್ನು ಅಗೆದು, ಮಡುವನ್ನು ಹೂಳಿ, ಕಾಡನ್ನು ಕತ್ತರಿಸಿ ಹಾವನ್ನು, ಮೀನನ್ನು, ಮತ್ತು ಕೋತಿಯನ್ನು ಹಿಡಿಯಬೇಕಾಗುತ್ತದೆ. ಹಾಗೆಯೇ ಆಯಾ ಜೀವಿಗಳನ್ನು ಹಿಡಿಯಲು ಆಯಾ ಪರಿಸರಗಳನ್ನು ನಾಶ ಮಾಡಬೇಕಾಗುತ್ತದೆ. ಹಾಗೆಯೇ ಪರವಸ್ತುವಿನ ಗ್ರಹಿಕೆ ಪಂಚೇಂದ್ರಿಯ ಪರಿಸರದಲ್ಲಿ ಅದರ ಸಾಹಚರ್ಯದಲ್ಲಿ ಸಾಧ್ಯವಿಲ್ಲ. ಪಂಚೇಂದ್ರಿಯ ಆಕರ್ಷಣೆಯಲ್ಲಿ ಸಿಲುಕಿದ ಭಕ್ತ ಪರವಸ್ತುವನ್ನು ಗ್ರಹಿಸಿದನೆಂದು ಹೇಳಿಕೊಂಡರೆ ಅದು ಭಂಡತನವಾಗುತ್ತದೆಯೇ ಹೊರತು ಸತ್ಯಗ್ರಹಿಕೆ ಆಗುವುದಿಲ್ಲ. ಪಂಚೇಂದ್ರಿಯ ಪರಿಸರ ಪರವಸ್ತುವಿನ ಅರಿವಿಗೆ ಅಡ್ಡಿ ಬರುತ್ತದೆ. ಹಾಗಿದ್ದು ಪರವಸ್ತು ಗ್ರಹಿಕೆಯಾಗಿದೆ ಎಂದರೆ ಪರಮಾತ್ಮನು ಅಂತವರನ್ನು ಎಂದಿಗೂ ಒಪ್ಪುವುದಿಲ್ಲ ಎಂದಿದ್ದಾರೆ.

ನಾಲಗೆಯ ಹಿಡಿದು ನುಡಿಯಬಹುದೇ ಅಯ್ಯಾ?
ಕೈ ಸಿಕ್ಕಿದಲ್ಲಿ ಓಡಬಹುದೇ ಅಯ್ಯಾ?
ಕ್ರಿಯೆ ಮರೆದು ಅರಿವನರಿಯಬಹುದೇ ಅಯ್ಯಾ?
ಕುಸುಮವ ಬಿಟ್ಟು ಗಂಧವ ಮುಡಿಯಬಹುದೇ ಅಯ್ಯಾ?
ಇಂತಿ ಉಭಯವನರಿತಡೆ ಪ್ರಾಣ ಲಿಂಗಯೋಗ, ಏಣಾಂಕಧರ ಸೋಮೇಶ್ವರ

ಲಿಂಗದಲ್ಲಿ ನಾಲಿಗೆಯನ್ನು ಸ್ಥಗಿತಗೊಳಿಸಿ ಹೇಗೆ ಭಾಷೆಯನ್ನು ಉಚ್ಚಾರ ಮಾಡಲು ಸಾಧ್ಯವಿಲ್ಲವೊ? ಕೈಗಳನ್ನು ಬಳಸಿ ಸಿಕ್ಕಿದಡೆ ಓಡಲು ಸಾಧ್ಯವಿಲ್ಲವೋ? ಹಾಗೆ ಕಟ್ಟಳೆಯ ಆಚರಣೆಯನ್ನು ಮರೆತು ಅರಿವನ್ನು ತಲುಪಲು ಸಾಧ್ಯವಿಲ್ಲ. ಹೇಗೆ ಮಾತು ನಾಲಿಗೆಯನ್ನು ಬಿಟ್ಟು ಇಲ್ಲ. ಕಾಲಲಲ್ಲದೆ ಕೈಯಲ್ಲಿ ಸಿಕ್ಕ ಕಡೆ ಓಡಲು ಸಾಧ್ಯವಿಲ್ಲ. ಹಾಗೆ ಹೂ ರಹಿತವಾಗಿ ಗಂಧ ಮುಡಿಯಲು ಸಾಧ್ಯವಿಲ್ಲ. ಕ್ರಮಬದ್ಧವಾದ ಆಚರಣೆಯ ಕಟ್ಟಳೆಯನ್ನು ಮರೆತು ಅರಿವನ್ನು ಗಳಿಸಲು ಸಾಧ್ಯವಿಲ್ಲ. ಅವು ಒಂದನ್ನು ಬಿಟ್ಟು ಇನ್ನೊಂದು ಕ್ರಿಯಾಶೀಲವಾಗುವುದಿಲ್ಲ. ಅವು ಪರಸ್ಪರ ಸಾಹಚರ್ಯದಲ್ಲಿ ಪ್ರಾಣ ಲಿಂಗಗಳ ಯೋಗ ಸಾಧ್ಯವೆಂದು ಮಾರ್ಮಿಕವಾಗಿ ಹೇಳಿದ್ದಾರೆ.

ಭಕ್ತನ ಭಕ್ತಿಭಾವ, ಮಹೇಶ್ವರನ ಮಹೇಶ್ವರ ಭಾವ
ಪ್ರಸಾದಿಯ ಪ್ರಸಾದಿಭಾವ, ಪ್ರಾಣಲಿಂಗಿಯ ಪ್ರಾಣ ಲಿಂಗಭಾವ
ಶರಣನ ಸನ್ನರ್ದಭಾವ, ಐಕ್ಯನ ಐಕ್ಯಭಾವ
ಇಂತಿ ದ್ವಾದಶ ಸ್ತಲಂಗಳಲ್ಲಿ ಸಾಗಿಸಿ ನಿಂದ ಅನಾಗತಸಿದ್ದ
ಏಣಾಂಕಧರ ಸೋಮೇಶ್ವರ ಲಿಂಗದಲ್ಲಿ, ಉಭಯಭಾವ ಭಿನ್ನವಿಲ್ಲದ ಶರಣಂಗೆ.

ಈ ರೀತಿ 12 ಸ್ತಲಗಳನ್ನು ಸಾಧಿಸಿದ ಶರಣ ಭಿನ್ನಭಾವಗಳಿಂದ ದೂರನಾಗಿ ಸೋಮೇಶ್ವರ ಲಿಂಗದಲ್ಲಿ ಒಂದಾಗುತ್ತಾನೆ ಎಂದಿದ್ದಾರೆ. ಅವರ ಮತ್ತೊಂದು ವಚನದಲ್ಲಿ

ಅಂಗಕ್ಕೆ ಲಿಂಗಸಂಬಂಧ, ಆತ್ಮಂಗೆ ಅರಿವು ಸಂಬಂಧ,
ಅರಿವಿಂಗೆ ನಿಶ್ಚಯ ಸಂಬಂಧ, ನಿಶ್ಚಯ ನಿಜದಲ್ಲಿ ನಿಂದಲ್ಲಿ ಇಷ್ಟಲಿಂಗದ ತೃಷ್ಣೆ ಅಡಗಿತ್ತು
ಏಣಾಂಕಧರ ಸೋಮೇಶ್ವರ ಲಿಂಗವನರಿಯಲಾಗಿ

ಇಷ್ಟಲಿಂಗ ಕುರಿತು ಅನುಭವ ಮಂಟಪದಲ್ಲಿ ನಡೆದ ಗಂಭೀರ ಚರ್ಚೆಯಲ್ಲಿ ಹೊರಬಂದ ವಿಚಾರಗಳು ವಿಶೇಷವಾಗಿ ಅಂಗ-ಲಿಂಗ, ಲಿಂಗ ಸಂಬಂಧ, ಆತ್ಮ – ಅರಿವು, ಜ್ಞಾನ – ನಿಶ್ಚಯ, ಇಷ್ಟಲಿಂಗದ ದೃಷ್ಟಿ ಮುಂತಾದ ವಿಶ್ಲೇಷಣೆಯಲ್ಲಿ ಅನುಭಾವದ ಸವಿಯನ್ನು ಈ ವಚನದಲ್ಲಿ ಸವಿಯಬಹುದು.

ಎಲೆಯಿಲ್ಲದ ವೃಕ್ಷದಲ್ಲಿ ಹೂವಿಲ್ಲದ ಕಾಯಾಯಿತ್ತು. ಕಾಯಿ ಉದುರಿ ಹಣ್ಣುಬಲಿಯಿತ್ತು.
ಕಣ್ಣಿಗೆ ಹಣ್ಣಲ್ಲದೆ ಮೆಲುವುದಕ್ಕಲ್ಲ
ಏಣಾಂಕಧರ ಸೋಮೇಶ್ವರ ಲಿಂಗಕ್ಕೆ ಅರ್ಪಿತವಾಯಿತ್ತು.

ಶರಣನ ನಿಜ ಅಂತರಂಗದಲ್ಲಿ ಸದ್ವಿವೇಕವೆಂಬ ವೃಕ್ಷವಿದೆ. ಆ ವೃಕ್ಷದಲ್ಲಿ ಐದು ವಿಷಯಂಗಳ ತೋರಿಕೆಯಿಲ್ಲದ ಮುಕ್ತಿಫಲ. ಆ ಮುಕ್ತಿಫಲವನ್ನು ಸುಜ್ಞಾನ ಮುಖದಿಂದ ಗ್ರಹಿಸಿದ ಶರಣನಿಗೆ ಆ ಲಿಂಗವು ದೃಷ್ಟಿಗೆ ಗೋಚರಿಸುತ್ತದೆ. ಶರಣನಾದವನು ತನ್ನ ಸುಜ್ಞಾನವನ್ನು ಸಮರಸ ಪಾಕವ ಮಾಡಿ ಸೋಮೇಶ್ವರ ಲಿಂಗಕ್ಕೆ ಸಮರ್ಪಿತವಾಯಿತ್ತು. ಎಂದಿದ್ದಾರೆ. ಈ ಬೆಡಗಿನ ವಚನದಲ್ಲಿ ಕಂಡುಬರುವ ಭಾವ, ಭಾಷೆ, ರೂಪಕ, ಶಕ್ತಿ ವಿಸ್ಮಯವನ್ನುಂಟು ಮಾಡುತ್ತವೆ.
ಹೀಗೆ ಬಿಬ್ಬಿ ಬಾಚಯ್ಯನವರ ವಚನಗಳಲ್ಲಿ ಭಕ್ತಿಭಾವ, ಪ್ರಸಾದಿ ಭಾವ, ಐಕ್ಯ ಭಾವ ಅವರ ಬೆಡಗಿನ ವಚನಗಳಲ್ಲಿ ಕಂಡು ಬರುತ್ತದೆ. ಅರ್ಥವತ್ತಾದ ಸಾಂಕೇತಿಕತೆಯನ್ನು ರಮ್ಯತರವಾದ ಬೆಡಗನ್ನು ವಚನಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಅವರ ಅನುಭವದ ಸವಿಯನ್ನು ವಚನಗಳ ಮೂಲಕ ನಮಗೆಲ್ಲ ಉಣಬಡಿಸಿದ್ದಾರೆ. ಅವರು ತಾತ್ವಿಕ ವಿಷಯಗಳನ್ನು ಹೇಳುವಾಗಲೂ ಲೌಕಿಕ ಜೀವನದಿಂದ ಎತ್ತಿಕೊಂಡ ಹೋಲಿಕೆಗಳನ್ನು ಸಾಲು ಸಾಲಾಗಿ ಕೊಡುತ್ತಾರೆ. ಉಪಮೆ ಸದೃಶ್ಯಗಳನ್ನು ಸಮೃದ್ಧವಾಗಿ ಕೊಡುತ್ತ ತಾತ್ವಿಕ ವಿಷಯಗಳನ್ನು ಓದುಗರಿಗೆ ತಲುಪಿಸುವ ಬಾಚಯ್ಯನ ವಚನಗಳು, ರಚನಾ ವಿಧಾನ ಸಾಹಿತ್ಯದಲ್ಲಿ ಆಕರ್ಷಕ ಮಾತ್ರವಲ್ಲ ಅರ್ಥಪೂರ್ಣವಾಗಿವೆ.                                    ( ಚಿತ್ರ ಕೃಪೆ : ಫೇಸ್ ಬುಕ್ )

 

ಶ್ರೀಮತಿ ರೇಖಾ ಪಾಟೀಲ.                                    ಇತಿಹಾಸ ಉಪನ್ಯಾಸಕರು
ರಾಯಚೂರು
ಅಕ್ಕನ ಅರಿವು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ

- Advertisement -
- Advertisement -

Latest News

ಕಲ್ಲೋಳಿ ಸಾಯಿ ಮಂದಿರ ವಾರ್ಷಿಕೋತ್ಸವ

ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಸತ್ಯ ಸಾಯಿ ಸಮಿತಿ ಇದರ 39 ನೇ ವಾರ್ಷಿಕೋತ್ಸವ ಸಮಾರಂಭ ರವಿವಾರ ಅ-20 ರಂದು ಬೆಳಿಗ್ಗೆ 11-00 ಗಂಟೆಗೆ ಪ್ರಶಾಂತಿ ಕುಟೀರದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group